ಸುದ್ದಿ ಸಂಕ್ಷೇಪ
ರಾಘವೇಂದ್ರಗೆ ಪಿಎಚ್.ಡಿ
ಮೈಸೂರು: ಪ್ರೊ. ಬಿ.ಪಿ. ಮಹೇಶ್ಚಂದ್ರ ಗುರು ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಆರ್. ರಾಘವೇಂದ್ರ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ, ಅವರಿಗೆ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ರಾಘವೇಂದ್ರ ಪ್ರಸ್ತುತ ಚಾಮರಾಜನಗರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆ
ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗಾಗಿ ನಡೆದ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕಾ ಸ್ಪರ್ಧೆಯ ಆಶುಭಾಷಣ ವಿಭಾಗದಲ್ಲಿ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ. ಸತೀಶ್ ಜವರೇಗೌಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಣಿಗಳ ದತ್ತು ಸ್ವೀಕಾರ
ಮೈಸೂರು: ಚಾಮರಾಜೇಂದ್ರ ಮೃಗಾಲಯದಿಂದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಹಲವು ಮಂದಿ ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ. ಬೆಂಗಳೂರಿನ ಸೃಜನಾ, ಪ್ರದ್ಯುಮ್ನ ಅವರು ನೀಳಕಾಯ ಬಾಲದ ಮೀರ್ಕಟ್, ದ್ರುಪದ್ ಉಪಾಧ್ಯಾ, ಮಿಕಿತ ಉಪಾಧ್ಯ, ಮಚಿಕೇತ್ ಅವರು ಕಾಳಿಂಗ ಸರ್ಪ, ಬ್ರೌನ್ ಲೆಮೂರ್, ನಕ್ಷತ್ರ ಆಮೆ, ದೆಹಲಿಯ ಮಿಯಾನ್, ಅನನ್ಯ, ಅರ್ವ್, ಶಾಲಿಮಾರ್ ಬಾಗ್ ಅವರು ಜಂಡಾಯ ಕೊನ್ಯುರ್, ಪುಣೆಯ ಸೊಹಾ, ಷಾನ್ ಅವರು ಲಯನ್ ಟೇಲ್ಡ್ ಮೆಕಾ, ಏಷಿಯನ್ ಗ್ರೇ ಹಾರ್ನ್ಬಿಲ್, ಬೆಂಗಳೂರಿನ ತೇಜಸ್ ಎಸ್. ದೇಶ್ಮುಖ್, ಸಾರಂಗ್ ಜಿ. ದೇಶ್ಮುಖ್ ಅವರು ವೆಸ್ಟರ್ನ್ ಗ್ರೇ ಪ್ಯಾರೇಟ್, ಮೈಸೂರಿನ ಶ್ರೀಕಾಂತ ಬಾಲಿಕಾ ಪ್ರೌಢಶಾಲೆಯು ರೇನ್ಬೋ ಲೋರಿಕೀಟ್, ಶಾನೌ ಜೊಅನಾ ಅವರು ಲವ್ ಬರ್ಡ್ ಅನ್ನು ದತ್ತು ಪಡೆದಿದ್ದಾರೆ.
ನಾಳೆ ಕೃತಕ ಕಾಲುಗಳ ವಿತರಣೆ
ಮೈಸೂರು: ರೋಟರಿ ಮೈಸೂರು ಮಹಾವೀರ್ ಕೃತಕಾಂಗ ಕೇಂದ್ರವು ರೋಟರಿ ಮೈಸು ಮತ್ತು ಜೈನ್ ಮೆಡಿಕಲ್ ರಿಲೀಫ್ ಸೊಸೈಟಿ ಸಹಯೋಗದೊಂದಿಗೆ ಜ. 7ರ ಬೆಳಗ್ಗೆ 11ಕ್ಕೆ ಕೆ.ಆರ್.ಎಸ್. ರಸ್ತೆಯ ರೋಟರಿ ಪ್ರೌಢಶಾಲೆಯಲ್ಲಿ ಕೃತಕ ಕಾಲುಗಳ ವಿತರಣೆ ಸಮಾರಂಭ ಏರ್ಪಡಿಸಿದ್ದು, ಡಾ.ಎಂ.ಎ. ಸಲೀಂ, ಸುಬ್ರಹ್ಮಣ್ಯಂ, ಮನೋಹರ್ ಭಾಗವಹಿಸುವರು.
ಕೃಷ್ಣ-ಬಲರಾಮ ರಥಯಾತ್ರೆ
ಮೈಸೂರು: ಇಸ್ಕಾನ್ ವತಿಯಿಂದ ಶ್ರೀಕೃಷ್ಣ-ಬಲರಾಮ ರಥಯಾತ್ರೆಯು ಶನಿವಾರ ನಡೆಯಿತು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ಕೃಷ್ಣ ಹಾಗೂ ಬಲರಾಮ ವಿಗ್ರಹ ಹೊತ್ತ ರಥಯಾತ್ರೆ ತೆರಳಿತು. ಭಕ್ತರು ಮಾರ್ಗದುದ್ದಕ್ಕೂ ಭಜನೆ ನಡೆಸಿಕೊಟ್ಟರು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಜಯನಗರದ ದೇವಸ್ಥಾನದಲ್ಲಿ ಅಂತ್ಯಗೊಂಡಿತು.
ಪರೀಕ್ಷಾ ತರಬೇತಿ
ಮೈಸೂರು: ರಾಜ್ಯ ಸರ್ಕಾರ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಸರ್ಕಾರಿ ನೌಕರರಿಗೆ 2013-14ನೇ ಸಾಲಿನ 2ನೇ ಅಧಿವೇಶನದ ಇಲಾಖಾ ಪರೀಕ್ಷೆಗಳ ತರಬೇತಿ ಶಿಬಿರವನ್ನು ಜ. 16 ರಿಂದ ಆರಂಭಿಸಲಿದ್ದು, ನೌಕರರು ಜ. 6 ರಿಂದಲೇ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧ್ಯಕ್ಷ ಎಚ್.ಕೆ. ರಾಮು ಕೋರಿದ್ದಾರೆ. ದೂ. 0821-2427890 ಇಲ್ಲಿಗೆ ಸಂಪರ್ಕಿಸಬಹುದು.
ಸಾಂಸ್ಕೃತಿಕ ಸ್ಪರ್ಧೆ
ಮೈಸೂರು: ವಿವೇಕಾನಂದ ಕೇಂದ್ರ ಕನ್ಯಾಕುಮಾರಿ ಶಾಖೆ ಮೈಸೂರು ಘಟಕವು ಜಯನಗರದಲ್ಲಿ ಜ.7 ರಿಂದ 11 ರವರೆಗೆ ಅಂತರ ಶಾಲಾ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿದ್ದು, ಪ್ರತಿದಿನ ಸಂಜೆ 5.30ಕ್ಕೆ ದೇಶಭಕ್ತಿ ಗೀತೆ, ಜಾನಪದ ಗೀತೆ,ದಾಸರಪದ, ಭಜನೆ, ರಂಗೋಲಿ ಸ್ಪರ್ಧೆಗಳು ನಡೆಯಲಿವೆ. ಮೊ. 94494-88228 ಸಂಪರ್ಕಿಸಬಹುದು.
ಬಸ್- ಬೈಕ್ ಡಿಕ್ಕಿ; ಒಬ್ಬನ ಸಾವು
ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿದೆ. ಬೇಲೂರು ತಾಲ್ಲೂಕಿನ ನೆಟ್ಟೆಕೆರೆ ಗ್ರಾಮದ ಸಂಗಮೇಶ (28) ಸಾವನ್ನಪ್ಪಿದ ದುರ್ದೈವಿ.
ಸಂಗಮೇಶ ಅವರು ಸುಜುಕಿ ಸುಮುರಾಯ್ ಬೈಕ್ನಲ್ಲಿ ಬೇಲೂರು- ಬಿಕ್ಕೋಡು ರಸ್ತೆ ಸನ್ಯಾಸಿಹಳ್ಳಿ ಗ್ರಾಮದ ಗ್ರಾಮಪಂಚಾಯ್ತಿ ಕಚೇರಿ ಮುಂದೆ ಹೋಗುತ್ತಿದ್ದಾಗ ಬೇಲೂರು ಕಡೆಯಿಂದ ಬಂದ ಕೆಎಸ್ಆರ್ಟಿಸಿ ಬಸ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯವಾಗಿದ್ದು, ಸಂಗಮೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಸಂಗಮೇಶ ಅವರ ತಮ್ಮ ಲೋಕೇಶ ಅವರು ಬೇಲೂರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಟ್ಕಾ ಜೂಜು: ಇಬ್ಬರ ಬಂಧನ
ಹಾಸನ: ಮಟ್ಕಾ ಜೂಜಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ರು. 19,793 ನಗದನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ನಗರದ ಕೆ.ಕೆ. ಮಾರ್ಕೆಟ್ನಲ್ಲಿ ಇರುವ ಸಾರ್ವಜನಿಕ ಶೌಚಾಲಯದ ಬಳಿ ಅಕ್ರಮವಾಗಿ ಮಟ್ಕಾ ಜೂಜಾಡುತ್ತಿದ್ದಾಗ ಹಾಸನ ನಗರ ಠಾಣೆಯ ಪಿಎಸ್ಐಜೆಇ ಮಹೇಶ್ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ, 1 ರು.ಗೆ 80 ರು. ಕೊಡುವುದಾಗಿ ಮಟ್ಕಾ ಬರೆಯುತ್ತಿದ್ದ ಪರಮೇಶ (35) ಮತ್ತು ಕರಿಯಪ್ಪ (45) ಎಂಬುವರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ರು. 19,793 ರು. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಗಳ್ಳನ ಬಂಧನ: ದಿಮ್ಮಿಗಳ ವಶ
ಹಾಸನ: ಮರಗಳ್ಳನೊಬ್ಬನನ್ನು ಬಂಧಿಸಲಾಗಿದ್ದು, ಆತನಿಂದ 15 ಸಾವಿರ ರು. ಬೆಲೆಯ 22 ಗರಿಗೆ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಬೇಲೂರು ಪೊಲೀಸ್ ಠಾಣೆಯ ಪೊಲೀಸರು ಪಟ್ಟಣದಲ್ಲಿ ಗಸ್ತಿನಲ್ಲಿ ಇದ್ದಾಗ ಪಟ್ಟಣದ ಹೊಳೆಬೀದಿಯ ಕಲ್ಪವೃಕ್ಷ ಬಾರ್ ಬಳಿ, ಟ್ರ್ಯಾಕ್ಟರ್ನಲ್ಲಿ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದನ್ನು ಹಿಡಿದಿದ್ದಾರೆ. ಈ ವೇಳೆ, ಸುರೇಶ್ (27) ಎಂಬಾತನನ್ನು ಬಂಧಿಸಿದ್ದು, ಸುಮಾರು ರು. 15,000 ಬೆಲೆಯ 22 ಗರಿಗೆ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

