ಹಾಸನ

ಒಕ್ಕಲಿಗರ ಸಂಘಕ್ಕೆ ಮಂಜೇಗೌಡ, ಬಾಲಕೃಷ್ಣ, ರಾಮಚಂದ್ರ ಆಯ್ಕೆ

Published On :

ಹಾಸನ: ರಾಜ್ಯ ಒಕ್ಕಲಿಗರ ಸಂಘದ ಜಿಲ್ಲೆಯ 3 ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಬಾಗೂರು ಮಂಜೇಗೌಡ, ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಜತ್ತೇನಹಳ್ಳಿ ರಾಮಚಂದ್ರ ಜಯ ಗಳಿಸಿದ್ದಾರೆ.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಮತ ಎಣಿಕೆ ನಡೆಯಿತು. ಈ ಸಂದರ್ಭದಲ್ಲಿ ತಮ್ಮ ಅಭ್ಯರ್ಥಿಗಳು ಜಯ ಗಳಿಸಿದ್ದರಿಂದ ಕಾರ್ಯಕರ್ತರು, ಅಭಿಮಾನಿಗಳು ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಭ್ಯರ್ಥಿಗಳಾದ ಬಾಗೂರು ಮಂಜೇಗೌಡ 13,871, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ 12,950 ಮತ್ತು ಜತ್ತೇನಹಳ್ಳಿ ರಾಮಚಂದ್ರ 11,862 ಮತಗಳನ್ನು ಪಡೆಯುವ ಮೂಲಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬಿಟ್ಟಗೋಡನಹಳ್ಳಿ ಮಂಜೇಗೌಡ 6,904, ಕೆ.ಎಚ್.ಅಣ್ಣೇಗೌಡ 6703, ಕಾರ್ಲೆ ಇಂದ್ರೇಶ್ 3899 ಮತ್ತು ಎಚ್.ಎಂ.ಸುರೇಶ್ಕುಮಾರ್ 3400 ಮತಗಳನ್ನು ಪಡೆದಿದ್ದಾರೆ.
ಜಿಲ್ಲೆಯಲ್ಲಿ ಶೇ.88,97ರಷ್ಟು ಮತದಾನ ಭಾನುವಾರ ನಡೆದಿತ್ತು. ಜಿಲ್ಲೆಯ 25,944 ಮತಗಳ ಪೈಕಿ 23,081 ಮತಗಳು ಚಲಾವಣೆಯಾಗಿದ್ದವು. ಹಾಸನ ತಾಲೂಕಿನಲ್ಲಿ 10,499 ಮತದಾರರ ಪೈಕಿ 8,936 ಮತಗಳು ಚಲಾವಣೆಯಾಗುವ ಮೂಲಕ ಶೇ.85.25ರಷ್ಟು, ಹೊಳೆನರಸೀಪುರ ತಾಲೂಕಿನಲ್ಲಿ 1,111 ಮತಗಳ ಪೈಕಿ 966 ಮತ ಚಲಾವಣೆಯಾಗುವ ಮೂಲಕ ಶೇ.86.95ರಷ್ಟು, ಚನ್ನರಾಯಪಟ್ಟಣ ತಾಲೂಕಿನಲ್ಲಿ 7,408 ಮತಗಳ ಪೈಕಿ 6,953 ಮತ ಚನಾವಣೆಯಾಗುವ ಮೂಲಕ 83.6ರಷ್ಟು, ಅರಸೀಕೆರೆ ತಾಲೂಕಿನಲ್ಲಿ 2,149 ಮತಗಳ ಪೈಕಿ 2,020 ಮತಗಳು ಚಲಾವಣೆಯಾಗುವ ಮೂಲಕ ಶೇ.94ರಷ್ಟು ಹಕ್ಕು ಚಲಾವಣೆಯಾಗಿದ್ದವು.
ಬೇಲೂರು ತಾಲೂಕಿನಲ್ಲಿ 1,664 ಮತಗಳ ಪೈಕಿ 1,448 ಮತಗಳು ಚಲಾವಣೆಯಾಗುವ ಮೂಲಕ 87.02ರಷ್ಟು, ಸಕಲೇಶಪುರ ತಾಲೂಕಿನಲ್ಲಿ 1,666 ಮತಗಳ ಪೈಕಿ 1450 ಮತಗಳು ಚಲಾವಣೆಯಾಗುವ ಮೂಲಕ 87.03ರಷ್ಟು, ಆಲೂರು ತಾಲೂಕಿನಲ್ಲಿ 645 ಮತಗಳ ಪೈಕಿ 585 ಮತಗಳು ಚಲಾವಣೆಯಾಗುವ ಮೂಲಕ ಶೇ.90.70ರಷ್ಟು ಮತ್ತು ಅರಕಲಗೂಡು ತಾಲೂಕಿನಲ್ಲಿ 802 ಮತಗಳ ಪೈಕಿ 723 ಮತಗಳು ಚಲಾವಣೆಯಾಗುವ ಮೂಲಕ ಶೇ.95.5ರಷ್ಟು ಮತದಾನವಾಗಿತ್ತು.
ಬೆಳಗ್ಗೆ ಮತ ಎಣಿಕೆ ಕೇಂದ್ರದತ್ತ ಅಭ್ಯರ್ಥಿಗಳು, ಬೆಂಬಲಿಗರು ಬಿಸಿಲು ನೆತ್ತಿ ಮೇಲೆ ಏರುತ್ತಿದ್ದಂತೆ ಧಾವಿಸಿ ಜಮಾಯಿಸಿದರು. ಕೆಲವು ಅಭ್ಯರ್ಥಿಗಳು ಬೆಳಗ್ಗೆ ಬೇಗ ಎದ್ದು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಮತ ಎಣಿಗೆ ಕೇಂದ್ರದತ್ತ ಧಾವಿಸಿದರು. ಬಿಸಿಲು ಏರುತ್ತಿದ್ದಂತೆ ಫಲಿತಾಂಶಕ್ಕಾಗಿ ಜನ ಸಾಗರೋಪಾದಿಯಲ್ಲಿ ಬರಲು ಆರಂಭಿಸಿದರು. ಅಭ್ಯರ್ಥಿಗಳು, ಬೆಂಬಲಿಗರು, ಅಭಿಮಾನಿಗಳು ವಾಹನಗಳಲ್ಲಿ ಕರೆ ತರುವಂತಿಲ್ಲ ಹಾಗೂ ಮತಗಟ್ಟೆಯಿಂದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲವಾದರೂ ಸಹ ಮತಗಟ್ಟೆಯ ಸಮೀಪವೇ ವಾಹನಗಳನ್ನು ನಿಲ್ಲಿಸಿಕೊಂಡಿದ್ದರು.
ಮತ ಎಣಿಕೆ ಕಾರ್ಯವು ಬೆಳಗ್ಗೆಯಿಂದ ಆರಂಭವಾಗಿ ಸಂಜೆ 6 ಗಂಟೆಯವರೆಗೂ ನಡೆಯಿತು. ಹಾಸನ ಜಿಲ್ಲೆಯಿಂದ ಮೂವರು ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದ್ದು, 21 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಮತ ಎಣಿಕೆ ಸಮಯಕ್ಕೆ ಒಬ್ಬ ಅಭ್ಯರ್ಥಿಗೆ ತಾಲೂಕಿಗೆ ಒಬ್ಬ ಏಜೆಂಟರಂತೆ ನೇಮಕ ಮಾಡಲು ಅವಕಾಶ ನೀಡಲಾಗಿತ್ತು.
ಲಘು ಲಾಠಿ ಪ್ರಹಾರ: ಮತ ಎಣಿಕೆ ಕೇಂದ್ರದ ಮುಂದೆ ಅಭ್ಯರ್ಥಿಗಳು ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳು ಜಯ ಗಳಿಸಲಿ ಎಂದು ಗುಂಪು ಕಟ್ಟಿಕೊಂಡು ಘೋಷಣೆ ಕೂಗುತ್ತಿದ್ದರಿಂದ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ನಂತರ ಇದನ್ನು ಖಂಡಿಸಿ ಬೆಂಬಲಿಗರು, ಅಭಿಮಾನಿಗಳು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.
ಪಟಾಕಿ ಸಿಡಿಸಿ ಸಂಭ್ರಮ
ಚುನಾವಣೆಯ ಫಲಿತಾಂಶ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊರ ಬೀಳುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಇತರರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಸಂತಸ ವ್ಯಕ್ತಪಡಿಸಿದರು. ಅಭ್ಯರ್ಥಿಗಳು ಜಯಗಳಿಸಿದ್ದನ್ನು ಚುನಾವಣಾ ಅಧಿಕಾರಿಗಳು ಘೋಷಿಸುತ್ತಿದ್ದಂತೆ ಹೊರಗಿದ್ದ ಅಭ್ಯರ್ಥಿಗಳ ಅಭಿಮಾನಿಗಳು ಹೋಳಿ ಬಣ್ಣ ಎರಚಿಕೊಂಡು ಕುಣಿದು ಕಪ್ಪಳಿಸಿದರು. ಮತ ಎಣಿಕೆ ಕೇಂದ್ರದಿಂದ ಗೆದ್ದು ಹೊರ ಬಂದ ಅಭ್ಯರ್ಥಿಗಳನ್ನು ಅಪ್ಪಿಕೊಂಡು ಪುಷ್ಪ ಮಾಲೆ ಹಾಕಿ ಅಭ್ಯರ್ಥಿಗಳನ್ನು ಮೇಲಕ್ಕೆತ್ತಿ ಕುಣಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.