'ಲೋಕೋಪಯೋಗ'ಕ್ಕೆ ಬಂಪರ್!
ಕ.ಪ್ರ. ವಾರ್ತೆ ಹಾಸನ ಜ. 6
ಲೋಕೋಪಯೋಗಿ ಇಲಾಖೆಯಲ್ಲಿನ ವಿವಿಧ ಯೋಜನೆಗಳಿಗೆ 607 ಕೋಟಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ್ದು, ಇತರೆ ಸರ್ಕಾರಗಳು ಜಿಲ್ಲೆಗೆ ಒಂದೇ ಸಲ ಇಷ್ಟೊಂದು ಅನುದಾನ ಬಿಡುಗಡೆ ಮಾಡಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಘಟಕ ಯೋಜನೆ(ಎಸ್ಸಿಪಿ)ಯಡಿ 138 ರಸ್ತೆ ಕಾಮಗಾರಿಗಳಿಗೆ 10.06 ಕೋಟಿ, ಗಿರಿಜನ ಉಪಯೋಜನೆ (ಟಿಎಸ್ಪಿ)ಯಡಿ 39 ಕಾಮಗಾರಿಗಳಿಗೆ 1.12 ಕೋಟಿ, ವಿಶೇಷ ಅಭಿವೃದ್ಧಿ ಯೋಜನೆ (ಎಸ್ಡಿಪಿ)ಯಡಿ 21 ಕಾಮಗಾರಿಗಳಿಗೆ 9.24 ಕೋಟಿ, 13ನೇ ಹಣಕಾಸು ಯೋಜನೆಯಡಿ 12 ಕಾಮಗಾರಿಗಳಿಗೆ 11.32 ಕೋಟಿ, ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ (ಸಿಎಂಜಿಆರ್ವೈ)ಯಡಿ 381 ಕಾಮಗಾರಿಗಳಿಗೆ 15.81 ಕೋಟಿ, ಅಪೆಂಡಿಕ್ಸ್-ಇ ಯೋಜನೆಯಡಿ 451.10 ಕಿಮೀ ರಸ್ತೆ ಕಾಮಗಾರಿಗೆ 222.40 ಕೋಟಿ, ಕೇಂದ್ರ ರಸ್ತೆ ನಿಧಿ ಹಂತ-1ರಡಿ 9 ಕಾಮಗಾರಿಗೆ 25 ಕೋಟಿ, ನಬಾರ್ಡ್ನಡಿ 12 ಕಾಮಗಾರಿಗೆ 9.85 ಕೋಟಿ, ಎಸ್ಎಚ್ಡಿಪಿ ಯೋಜನೆಯಡಿ 307.06 ಕಿಮೀ ರಸ್ತೆ ಕಾಮಗಾರಿಗೆ 174.62 ಕೋಟಿ, ಎನ್ಎಚ್ ಅಂಡರ್ ಅನ್ಯೂಯಲ್ ಪ್ಲ್ಯಾನ್ ಫಾರ್ 2013-14 ಅಡಿ 47.74 ಕಿಮೀ ರಸ್ತೆ ಕಾಮಗಾರಿಗೆ 98.59 ಕೋಟಿ, ಕೇಂದ್ರ ರಸ್ತೆ ನಿಧಿ ಹಂತ-2 ಅಡಿ 13 ಕಾಮಗಾರಿಗೆ 27 ಕೋಟಿ, ಕೆಆರ್ಡಿಸಿಎಲ್ ಚಿಕ್ಕನಾಯಕನಹಳ್ಳಿ-ತಿಪಟೂರು-ಹಾಸನ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ (ಭಾಗಶಃ ಜಿಲ್ಲಾ ಮುಖ್ಯ ರಸ್ತೆ ಮತ್ತು ರಾಜ್ಯ ಹೆದ್ದಾರಿ-71) 76.221 ಕಿಮೀ ರಸ್ತೆ ಕಾಮಗಾರಿಗೆ 2.21 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಅಷ್ಟೇ ಅಲ್ಲದೆ ಜಿಲ್ಲಾ ಪಂಚಾಯ್ತಿಗೆ 2013-14ನೇ ಸಾಲಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 14 ಕಾಮಗಾರಿಗಳಿಗೆ 41.26 ಕೋಟಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 128 ಕಾಮಗಾರಿಗೆ 84.85 ಕೋಟಿ, ಮಲೆನಾಡು ಅಭಿವೃದ್ಧಿ ಮಂಡಳಿಯಡಿ 6 ಕಾಮಗಾರಿಗೆ 45.40 ಲಕ್ಷ ಬಿಡುಗಡೆ ಮಾಡಿದೆ. ಆದರೆ ಈವರೆಗೂ ಜಿಲ್ಲೆಗೆ ಒಂದೇ ಸಲ ಇಷ್ಟೊಂದು ಅನುದಾನವನ್ನು ಒಟ್ಟಿಗೆ ಇತರೆ ಯಾವುದೇ ಸರ್ಕಾರಗಳು ಬಿಡುಗಡೆ ಮಾಡಿಲ್ಲ. ಆದರೂ ಸಹ ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇಷ್ಟೆಲ್ಲ ಅನುದಾನಗಳು ಬಿಡುಗಡೆಯಾಗುವುದಕ್ಕೆ ಮುಖ್ಯ ಕಾರಣ ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮ. ಆದರೆ ವಿರೋಧ ಪಕ್ಷದವರು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬರುವುದಿಲ್ಲ, ಜಿಲ್ಲೆಯ ಅಭಿವೃದ್ಧಿಯ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ದೂಷಿಸುತ್ತಿದ್ದಾರೆ. ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಗುಣಮಟ್ಟ ಪರಿಶೀಲಿಸಲು ಮುಂದಾದರೆ ಅದನ್ನೇ ಕಾಂಗ್ರೆಸ್ನವರು ರಸ್ತೆ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಾರೆ ಎಂದು ಜೆಡಿಎಸ್ನವರು ದೂರುತ್ತಾರೆ.
ಜತೆಗೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಮಾಡುವ ಮೂಲಕ ತಮ್ಮ ಗುತ್ತಿಗೆದಾರರ ಬಿಲ್ಗಳನ್ನು ಮಾಡಿಸಿಕೊಳ್ಳುವ ಮೂಲಕ ಬ್ಲಾಕ್ಮೇಲ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಖಂಡ ಪಟೇಲ್ ಶಿವಪ್ಪ ಮಾತನಾಡಿ, ಅರಸೀಕೆರೆಯಲ್ಲಿ 25.70 ಕೋಟಿಗಳಲ್ಲಿ 45 ಹಳ್ಳಿಗಳಿಗೆ 150ರಿಂದ 300 ಮೀಟರ್ವರೆಗೆ ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ಎಎಸ್ಐ ಕಂಪನಿಗೆ ವಹಿಸಿಕೊಟ್ಟಿದ್ದಾರೆ. ಆದರೆ ಈ ಕಾಂಕ್ರಿಟ್ ರಸ್ತೆಗಳ ಗುಣಮಟ್ಟ ಕಳಪೆಯಾಗಿರುವುದು ಬಯಲಾಗಿದ್ದು, ಅದನ್ನು ಪರಿಶೀಲಿಸಿ ವರದಿ ನೀಡಿದ್ದರಿಂದ ಮತ್ತೆ ಆ ಕಾಂಕ್ರಿಟ್ ರಸ್ತೆಗಳ ಉದ್ದ, ದಪ್ಪ ಮತ್ತು ಅಗಲ ಮಾಡುವಂತಹ ಕಾರ್ಯ ನಡೆಸಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಅಮಿರ್ ಜಾನ್ ಇತರರು ಇದ್ದರು.
ಸಮುದಾಯ ಭವನಕ್ಕೆ ಖಾತೆಯೇ ಇಲ್ಲ
ಅರಸೀಕೆರೆಯಲ್ಲಿ ಸಮುದಾಯ ಭವನ ನಿರ್ಮಾಣದ ಜಾಗ ಗ್ರಾಪಂ ಹೆಸರಿನಲ್ಲಿ ಇರಬೇಕು. ಆ ಜಾಗಕ್ಕೆ ಖಾತೆ ಆಗಿರಬೇಕು. ಆದರೆ ಅಲ್ಲಿನ ಶಾಸಕರು ನಿರ್ಮಿಸಿರುವಂಥ ಸಮುದಾಯ ಭವನಗಳಲ್ಲಿ 1ಕ್ಕೆ ಮಾತ್ರ ಖಾತೆ ಇದೆ. ಉಳಿದ ಯಾವುದಕ್ಕೂ ಖಾತೆ ಇಲ್ಲ. ಶಾಸಕರ ವಿರುದ್ಧ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಶಾಸಕರು ಮೊಕದ್ದಮೆ ಹೂಡಲಿ
ಟಿ ಬಿ.ಶಿವರಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

