ಅಂಗವಿಕಲರ ಅಭಿಮಾನಿ ಸಂಘ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಜ 7
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಅಂಗವಿಕಲರ ಅಭಿಮಾನಿಗಳ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಅಲೆದಾಟ: ಗ್ರಾಮೀಣ ಪುನರ್ವಸತಿ ಹುದ್ದೆಯ ವೇತನ ಹೆಚ್ಚಳ ಮತ್ತು ಕೆಲಸ ಖಾಯಂಗೊಳಿಸಬೇಕು. ವೈದ್ಯರ ಪ್ರಮಾಣಪತ್ರ ಹಿಂದೆ ಇದ್ದ ವಾರ್ಡ್‌ಗಳಲ್ಲಿ ಪುನಃ ಕಾರ್ಯಗತ ಮಾಡಬೇಕು. ದೈಹಿಕ ಅಂಗವಿಕಲರಿಗೆ ಗುರುತಿನ ಚೀಟಿ ಮಾಡಿಸಲು ಕಚೇರಿಯ ಕೊಠಡಿ ಸಂಖ್ಯೆ 1ರಿಂದ ಹೊರಟ ಅಂಗವಿಕಲರು ಕೊಠಡಿ ಸಂಖ್ಯೆ 23 ರವರೆಗೂ ಹೋಗಬೇಕು ಮತ್ತು ಅಲ್ಲಿಂದ ಕೊಠಡಿ ಸಂಖ್ಯೆ 7ಕ್ಕೆ ನಡೆಯಬೇಕು. ಪುನಃ ಕೊಠಡಿ ಸಂಖ್ಯೆ 10ಕ್ಕೆ ಹೋಗಬೇಕು. ಮತ್ತು ಅಲ್ಲಿಂದ 23ಕ್ಕೆ ಹೋಗಬೇಕು. ಅಂಗವಿಕಲರು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒತ್ತಾಯ: ಅಂಗವಿಕಲರಿಗೆ ಸಮಾನ ವೇತನ ನೀಡಿ ತಾರತಮ್ಯ ಹೋಗಲಾಡಿಸಬೇಕು. ಗ್ರಾಮ ಪಂಚಾಯ್ತಿ, ನಗರಸಭೆಗಳಿಂದ ಅಂಗವಿಕಲರಿಗೆ ನಿವೇಶನ ಮತ್ತು ಮನೆಯನ್ನು ನೀಡಬೇಕು. ಸ್ವಯಂ ಉದ್ಯೋಗಕ್ಕೆ ಸ್ಥಳಾವಕಾಶ ಕೊಡಬೇಕು. ಉಚಿತ ಬಸ್ ಪಾಸ್ ಜೀವನ ಪರ್ಯಂತ ನೀಡಬೇಕು. ಸುಳ್ಳು ಗುರುತಿನ ಚೀಟಿ ಪಡೆದುಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿರುವವರನ್ನು ಗುರುತಿಸಿ ಕಾನೂನಿನ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಪಟ್ಟು: ಲೋಕಸೇವಾ ಆಯೋ ಗದಲ್ಲಿ ಆದ ಕರ್ಮಕಾಂಡದಲ್ಲಿ ನಿಜವಾಗಿ ಟಿಸಿಎಚ್ ಆದವರಿಗೆ(ಅಂಗವಿಕಲರಿಗೆ) ಕೆಲಸ ಲಭ್ಯವಾಗಿಲ್ಲ. ಇದರ ನಡುವೆಯೇ, ಸುಳ್ಳು ಪ್ರಮಾಣ ಪತ್ರವನ್ನು ತೆಗೆದುಕೊಂಡು ಕೆಲಸ ಗಿಟ್ಟಿಸಿಕೊಂಡಿರುವಂತಹರನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸಬೇಕು.
ಅಂಗವಿಕಲರಿಗೆ ದೇವರಾಜ ಅರಸ್ ಹಿಂದುಳಿದ ವರ್ಗದ ನಿಗಮದಲ್ಲಿ ಶೇ.15ನ್ನು ಮೀಸಲಾತಿ ಕಡ್ಡಾಯಗೊಳಿಸಿ ಅಂಗವಿಕಲರಿಗೆ ಸಹಾಯ ಮಾಡಬೇಕು. ಸರ್ಕಾರದಿಂದ ಹಿರಿಯ ನಾಗರೀಕರಿಗೆ 65 ವರ್ಷದ ಮಿತಿಯನ್ನು 60 ವರ್ಷಕ್ಕೆ ಇಳಿಸಿ ಕ್ರಮವಾಗಿ ವೇತನವನ್ನು ನೀಡಬೇಕು ಎಂದು ಪಟ್ಟು ಹಿಡಿದರು.
ಮಂಜೂರಾತಿಗೆ ಅನುಮತಿ: ಸರ್ಕಾರದಿಂದ ನಾನಾ ಯೋಜನೆಗಳು ಜಾರಿಯಾಗಿದ್ದರೂ ಸಮರ್ಪಕವಾಗಿ ಅಂಗವಿಕಲರಿಗೆ ಲಭ್ಯವಾಗುತ್ತಿಲ್ಲ ಆದ್ದರಿಂದ, ಅಂಗವಿಕಲರಿಗೆ ಪ್ರತ್ಯೇಕವಾಗಿ ನಿಗಮ ಸ್ಥಾಪಿಸಿ, ನಿಗಮದ ಮೂಲಕ ಸಾಲ ಸಹಾಯಧನ ನೀಡಬೇಕು. ಅಂಗವಿಕಲರಿಗೆ ಸರ್ಕಾರಿ ಸವಲತ್ತನ್ನು ಪಡೆಯುವಾಗ ಆದಾಯದ ಮಿತಿಯನ್ನು ಕೈಬಿಡಬೇಕು. ಅಂಗವಿಕಲರ ಬಗ್ಗೆ ಶ್ರವಣದೋಷ ಇರುವ ಅಂಗವಿಕಲರಿಗೆ ಜಿಲ್ಲಾ ಮಟ್ಟದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಟಿಫಿಕೇಟ್ ನೀಡಿ ಅಂಗವಿಕಲರ ವೇತನ ಮಂಜೂರಾತಿಗೆ ಅನುಮತಿ ನೀಡಬೇಕು.
ಆಕ್ರೋಶ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಿದರೂ ಸಹ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಸರ್ಕಾರ ಅಂಗವಿಕಲರ ಬಗ್ಗೆ ಸೂಕ್ತ ಕಾಳಜಿಯನ್ನು ವಹಿಸದೇ ನಿರ್ಲಕ್ಷ್ಯ ಮನೋಭಾವವನ್ನು ತಾಳಿದೆ. ಸರ್ಕಾರ ಅಂಗವಿಕಲರಿಗೆ ನೀಡುವಂತಹ ಸೌಲಭ್ಯಗಳು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲ. ಈ ಸೌಲಭ್ಯಗಳು ಬಹಳಷ್ಟು ಸೋರಿಕೆಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ಗ್ರಾಮಾಂತರ ಪ್ರದೇಶದಲ್ಲಿ ಇರುವ ಹಿರಿಯ ಅಂಗವಿಕಲರಿಗೆ ಸರ್ಕಾರದ ಸೌಲಭ್ಯವನ್ನು ತಿಳಿಸುವಂತಹ ಕೆಲಸವನ್ನು ಮಾಡಬೇಕು. ಅಂಗವಿಕರ ಅನುದಾನಗಳು ಪ್ರಾಮಾಣಿಕವಾಗಿ ತಲುಪುತ್ತಿಲ್ಲ. ಈ ಬಗ್ಗೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅಂಗವಿಕಲರ ಸೌಲಭ್ಯಗಳು ಅನ್ಯರ ಪಾಲಾಗದೆ ಅರ್ಹರಿಗೆ ಲಭ್ಯವಾಗುವಂತಾಗಬೇಕು. ಸರ್ಕಾರ ಸೌಲಭ್ಯ ಒದಗಿಸಿದರೂ ಮಧ್ಯವರ್ತಿಗಳು ಅದನ್ನು ಅಂಗವಿಕಲರಿಗೆ ಸರಿಯಾಗಿ ತಲುಪಿಸುತ್ತಿಲ್ಲ ಎಂದು ಆರೋಪಿಸಿದರು. ಆದ್ದರಿಂದ, ಅಂಗವಿಕಲರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಗಮನ ಹರಿಸಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಅಂಗವಿಕಲರ ಅಭಿಮಾನಿಗಳ ಸಂಘದ ಅಧ್ಯಕ್ಷ ಸಣ್ಣಸ್ವಾಮಿ, ಕಾರ್ಯದರ್ಶಿ ಹೊನ್ನೇಗೌಡರು, ಖಜಾಂಚಿ ವಿಷ್ಣು, ಎಂ.ಡಿ. ವೆಂಕಟೇಶ್, ಎಂ.ಟಿ. ರಂಗೇಗೌಡ, ಗಿಡ್‌ಡೇಗೌಡ, ಮಂಜುನಾಥ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

