ಆರ್ಟಿಐ ಅರ್ಜಿಗಳಿಗೆ ಪ್ರಥಮ ಆದ್ಯತೆ ನೀಡಿ
ಕ.ಪ್ರ.ವಾರ್ತೆ , ಹಾಸನ , ಜ. 7
ಮಾಹಿತಿ ಹಕ್ಕು ಅಧಿನಿಯಮ 2005ನ್ನು ಎಲ್ಲಾ ಅಧಿಕಾರಿಗಳು ಗೌರವಿಸುವುದರೊಂದಿಗೆ ಅರ್ಜಿಗಳನ್ನು ಶೀಘ್ರ ಪರಿಶೀಲಿಸಿ, ನಿಖರ ಮಾಹಿತಿಯನ್ನು ಅರ್ಜಿದಾರರಿಗೆ ಆದ್ಯತೆ ಮೇರೆಗೆ ಒದಗಿಸುವುದು ಎಲ್ಲರ ಕರ್ತವ್ಯ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಹಾಸನ ಜಿಲ್ಲೆಯ ಮಾಹಿತಿ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ 2 ದಿವಸಗಳ ಮಾಹಿತಿ ಹಕ್ಕು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧಿಕಾರಿಗಳು ಒತ್ತು ನೀಡಬೇಕು: ಸಾರ್ವಜನಿಕರಿಂದ ಮಾಹಿತಿ ಹಕ್ಕು ಅಧಿನಿಯಮದಡಿ ಬರುವ ಅರ್ಜಿಗಳಿಗೆ ಶೀಘ್ರ ಮಾಹಿತಿ ಒದಗಿಸಿ ಅನವಶ್ಯಕ ದಂಡ ತೆರುವುದನ್ನು ತಪ್ಪಿಸಬೇಕು. ಮಾಹಿತಿ ಹಕ್ಕು ಅಧಿನಿಯಮದ 4(ಎ) ಮತ್ತು 4(ಬಿ)ಯಲ್ಲಿನ ಎಲ್ಲಾ ಮಾಹಿತಿಯನ್ನು ಕಚೇರಿಯಲ್ಲಿ ಸಿದ್ಧಗೊಳಿಸಿ ಅಂತರ್ಜಾಲದಲ್ಲಿ ಅಳವಡಿಸುವುದರಿಂದ ಅನವಶ್ಯಕ ಅರ್ಜಿಗಳ ಆಹ್ವಾನವನ್ನು ಕಡಿಮೆ ಮಾಡಿದಂತಾಗುತ್ತದೆ. ಇದನ್ನು ಪೂರೈಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕೆಂದರು.
ದಂಡ ತಪ್ಪಿಸಬೇಕು: ಕಾರ್ಯಾಗಾರ ಉದ್ಘಾಟನೆಯಲ್ಲಿ ಹಾಜರಿದ್ದ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಕಚೇರಿಗಳಲ್ಲಿ ಹಲವು ವರ್ಷಗಳಿಂದ ಜಾರಿಯಲ್ಲಿರುವ ಈ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದ ಸಾರ್ವಜನಿಕರು, ಅಧಿಕಾರಿಗಳ ನಡುವೆ ಜಂಜಾಟಕ್ಕೆ ಅವಕಾಶ ಉಂಟಾಗಿದೆ. ಇದರಿಂದ ಆಡಳಿತದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಮಾಹಿತಿ ಹಕ್ಕು ಅಧಿನಿಯಮದಡಿ ಬರುವ ಅರ್ಜಿಯನ್ನು ಸರಿಯಾಗಿ ಅರ್ಥೈಸಿಕೊಂಡು ನಿಗದಿತ ಅವಧಿಯಲ್ಲಿ ಸಂಬಂಧಪಟ್ಟವರು ಸಿದ್ಧತೆ ನಡೆಸಿ ಅಗತ್ಯ ಮಾಹಿತಿ ಒದಗಿಸುವುದು ನಮ್ಮ ಕರ್ತವ್ಯವಾಗಬೇಕು. ಅನವಶ್ಯಕ ವಿಳಂಬ ಹಾಗೂ ಬೇಜವಾಬ್ದಾರಿ ನಿಲುವಿನಿಂದ ದಂಡ ತೆರುವುದನ್ನು ತಪ್ಪಿಸಬೇಕು ಎಂದರು.
ಸರಿಯಾದ ಅಧ್ಯಯನ: ಮಾಹಿತಿ ಹಕ್ಕುಗಳಡಿ ಕಚೇರಿಗೆ ಬರುವ ಅರ್ಜಿಗಳ ಇತ್ಯರ್ಥ್ಯಕ್ಕಾಗಿ ಮಾಹಿತಿ ಅಧಿಕಾರಿ ಕಚೇರಿಯಲ್ಲಿ ಸೂಕ್ತವಾದ ಒಂದು ವ್ಯವಸ್ಥೆ ಮಾಡಿಕೊಂಡು ನಿರ್ವಹಿಸಿದಲ್ಲಿ ಯಾವುದೇ ಬಗೆಯ ದಂಡಕ್ಕೆ ಅವಕಾಶವಿರುವುದಿಲ್ಲ. ಕಾಲಕಾಲಕ್ಕೆ ಮಾಹಿತಿ ಆಯೋಗದಿಂದ ಜಾರಿಯಾಗುವ ನಿಯಮಗಳನ್ನು ಸರಿಯಾಗಿ ಅಧ್ಯಯನ ಮಾಡಿ ಮನವರಿಕೆ ಮಾಡಿಕೊಳ್ಳುವುದರಿಂದ ಈ ಕೆಲಸವನ್ನು ಸುಗಮವಾಗಿ ನಿರ್ವಹಿಸಬಹುದಾಗಿದೆ ಎಂದು ಡಾ.ಹೆಚ್.ಎನ್. ಗೋಪಾಲಕೃಷ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವುದೇ ಈ ನಿಯಮದ ಮುಖ್ಯ ಉದ್ದೇಶವಾಗಿದೆ ಎಂದರು.
ವಂದನೆ: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸಂಯೋಜಕ ಯೋಗನಾಥಸಿಂಗ್ ಸ್ವಾಗತಿಸಿ, ಹಾಸನ ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಜಾವಗಲ್ ನಾಗರಾಜ್ ವಂದಿಸಿದರು.
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ದೇವೇಂದ್ರ ಪ್ರಭು ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

