ಕೃಷಿ ಅಧಿಕಾರಿ ವಿರುದ್ಧ ಹರಿಹಾಯ್ದ ಸದಸ್ಯರು
ಕ.ಪ್ರ.ವಾರ್ತೆ , ಅರಕಲಗೂಡು , ಜ.7.
ಸಭೆಗೆ ಮಾಹಿತಿ ಇಲ್ಲದೇ ಬಂದಿದ್ದ ಅಧಿಕಾರಿ ವಿರುದ್ಧ ಪಕ್ಷಬೇಧ ಮರೆತು ಅಧಿಕಾರಿ ವಿರುದ್ದ ಹರಿಹಾಯ್ದ ಪ್ರಸಂಗ ನಡೆಯಿತು.
ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಮಾಕ್ಷಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿ ಹಿಂದಿನ ಸಭೆಯ ನಡವಳಿಕೆ ಓದಿ, ರೆಕಾರ್ಡ್ (ದಾಖಲು) ಮಾಡುವ ಸಂಪ್ರದಾಯದಂತೆ ಸಭಾ ನಡಾವಳಿಯನ್ನು ಓದುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ತಾಲೂಕು ಪಂಚಾಯ್ತಿಯ ಹಿರಿಯ ಸದಸ್ಯ ಕೀರ್ತಿರಾಜ್ ಅವರು, ಹಿಂದಿನ ನಡಾವಳಿಯನ್ನು ಓದಿದರೆ ಸಾಲದು, ಸಭೆ ತೆಗೆದುಕೊಂಡ ನಿರ್ಣಯಗಳ ಅನುಷ್ಠಾನ ಯಾವ ಹಂತದಲ್ಲಿದೆ ಎಂಬುದನ್ನು ವಿವರಿಸುವಂತೆ ತಾಕೀತು ಮಾಡಿದರು. ಸಭಾ ನಡಾವಳಿಯ ನಿರ್ಣಯ ಪ್ರತಿಗಳನ್ನು ಸದಸ್ಯರಿಗೆ ಕಳುಹಿಸುವ ಪರಿಪಾಠ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಇಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಸದಸ್ಯರಿಗೆ ಕಳುಹಿಸುವ ಆಹ್ವಾನವನ್ನು ನಿರ್ದೇಶಿತ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೂ ಕಳುಹಿಸಿ. ಸಭೆಯ ಕೋರಂಗೆ ಅವರೂ ಅಗತ್ಯವಿದೆ. ಅವರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದರು.
ಭರವಸೆ: ಮುಂದಿನ ಸಭೆಗೆ ಅಪೇಕ್ಷಿತ ಗ್ರಾಮ ಪಂಚಾಯಿತಿ ಸದಸ್ಯರನ್ನೂ, ತಾಲೂಕು ಪಂಚಾಯಿತಿ ಸದಸ್ಯರನ್ನು ಆಹ್ವಾನಿಸುವಂತೆಯೇ ಆಹ್ವಾನಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಂ ತಿಳಿಸಿದರು.
ಪಶು ಸಂಗೋಪನಾ ಇಲಾಖೆ ಮೇಲಿನ ಚರ್ಚೆ ವೇಳೆ ಮಾಹಿತಿ ಒದಗಿಸಿದ ಪಶು ಇಲಾಖೆಯ ಸಹಾಯಕ ನಿರ್ದೇಶಕ ವೀರಭದ್ರಪ್ಪ ಅವರು, ಕಳೆದ ಡಿ. 20ರವರೆಗೆ ತಾಲೂಕಿನಲ್ಲಿ ಕಾಲುಬಾಯಿ ಜ್ವರಕ್ಕೆ 29 ರಾಸುಗಳು ಸಾವನ್ನಪ್ಪಿವೆ. ಪ್ರಸ್ತುತ ರೋಗ ನಿಯಂತ್ರಣದಲ್ಲಿದ್ದು, ಈ ಬಗ್ಗೆ ಸರ್ಕಾರಕ್ಕೆ ಎರಡು ಹಂತದಲ್ಲಿ ವರದಿ ಸಲ್ಲಿಸಿದ್ದು, ಮೊದಲ ಹಂತದಲ್ಲಿ 2 ಲಕ್ಷ ರು.ಗಳನ್ನು 13 ಜನರಿಗೆ ಪರಿಹಾರ ಧನದ ಚೆಕ್ ವಿತರಿಸಲಾಗಿದೆ. ಉಳಿಕೆ ಹಣ ಬಿಡುಗಡೆ ಆದ ಕೂಡಲೇ ಎರಡನೇ ಹಂತದ ಚೆಕ್ ವಿತರಿಸಲಾಗುವುದು ಎಂದು ತಿಳಿಸಿದರು.
ಫೆ. 15ರಿಂದ ಮಾ. 15ರವರೆಗೆ ತಾಲೂಕಿನಾದ್ಯಂತ ಏಕ ಕಾಲದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ತಡೆಗೆ ಲಸಿಕೆ ಹಾಕಲು ಸರ್ಕಾರ ಸೂಚಿಸಿದ್ದು, ಅದಕ್ಕೆ ಬೇಕಾದ ಎಲ್ಲಾ ಲಸಿಕೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಮಾಹಿತಿಯೇ ಇಲ್ಲದ ಕೃಷಿ ಅಧಿಕಾರಿ- ವರ್ಗಾವಣೆಗೆ ತಡೆ ಬಂದಿದ್ದರಿಂದ ತಾವು ಮತ್ತೆ ಇಲ್ಲಿಗೇ ಬಂದು ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಸಭೆಗೆ ತಿಳಿಸಿದ ಸಹಾಯಕ ಕೃಷಿ ನಿರ್ದೇಶಕರ ಮಾತಿಗೆ ವ್ಯಂಗ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಂತೋಷ್ ಗೌಡ ಅವರು ಸಭೆಯ ಉದ್ದಕ್ಕೂ ಅವರನ್ನು ತರಾಟೆಗೆ ತೆಗೆದುಕೊಂಡರು. ತಾವು ಇಲ್ಲಿಯೇ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ತಡೆಯಾಜ್ಞೆ ತಂದು ಬಂದಿದ್ದೀರಿ. ಒಂದಷ್ಟು ಚೈತನ್ಯದಿಂದ ಕೆಲಸ ಮಾಡಿ. ತಾಲೂಕಿನಲ್ಲಿ ಈ ಹಿಂದೆ ಆದ ಅತಿ ವೃಷ್ಟಿ ವೇಳೆ ಸ್ಥಳ ಪರಿಶೀಲನೆ ನಡೆಸದೆಯೇ ಡೆಸ್ಕ್ ರಿಪೋರ್ಟ್ ತಯಾರಿಸಿದ್ದೀರಿ ಎಂದರು.
ಹಿಂದಿನ ಅಧಿಕಾರಿಗಳೇ ಇದನ್ನು ಒಪ್ಪಿಕೊಂಡಿದ್ದರು ಎಂದು ಹೇಳಿದ ಅವರು, ತಾಲೂಕು ಪಂಚಾಯಿತಿ ಇ.ಓ ಅವರತ್ತ ತಮ್ಮ ಆಕ್ರೋಶ ತಿರುಗಿಸಿ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಹಿಂದಿನ ಸಭೆಯಲ್ಲಿ ಅಧಿಕಾರಿ ಹೇಳಿದ ಹೇಳಿಕೆಯನ್ನು ದಾಖಲಿಸಿಲ್ಲ ಎಂದು ಆರೋಪಿಸಿದರು. ಅಲ್ಲದೇ, ಇದಕ್ಕೆ ನೀವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದರು.
ವರದಿ ಬೋಗಸ್: ಅನುಷ್ಠಾನಗೊಳ್ಳದ ನಿರ್ಣಯಗಳಿಗೆ ಸಭೆಗಳನ್ನೇಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಸದಸ್ಯರನ್ನು ಅಪಮಾನಗೊಳಿಸುವ ಪ್ರವೃತ್ತಿ ಅಧಿಕಾರಿಗಳದ್ದಾಗಿದ್ದು, ಸರ್ಕಾರಕ್ಕೆ ಕೊಟ್ಟಿರುವ ವರದಿ ಬೋಗಸ್ ಎಂದು ವಾದಿಸಿದರು.
ತಾಕೀತು: ಅಧಿಕಾರಿಗಳ ತಪ್ಪು ವರದಿಯಿಂದಾಗಿ ತಾಲೂಕಿನಲ್ಲಿ ನೊಂದ ರೈತರಿಗೆ ನಷ್ಟ ಉಂಟಾಗುತ್ತಿದೆ.ಪರಿಹಾರ ದೊರಕುತ್ತಿಲ್ಲ ಎಂದು ಸದಸ್ಯ ಕೀರ್ತಿರಾಜಜ್ತಿಳಿಸಿದರು.ತಾವು ವರದಿ ನೀಡಿರುವ ಬಗೆಗೆ ಕೃಷಿ ಅಧಿಕಾರಿಯನ್ನು ಸಮರ್ಥಿಸಿಕೊಳ್ಳಲು ಮುಂದಾದ ಇ.ಓ ಅವರಿಗೆ ಪ್ರತಿಕ್ರಿಯಿಸಿದ ಸಂತೋಷ್ ಗೌಡ, ಅಧಿಕಾರಿಗಳಿಂದ ಸಮರ್ಪಕವಾಗಿ ಕೆಲಸ ಅನುಷ್ಠಾನಗೊಳಿಸಿ ಎಂದು ತಾಕೀತು ಮಾಡಿದರು.
ಆಕ್ಷೇಪ: ಸದಸ್ಯ ಎಂ.ಎಸ್. ಯೋಗೇಶ್, ಬೇಕಾಬಿಟ್ಟಿ ವರದಿ ಮಾಡದಿರುವಂತೆ ಆಗ್ರಹಿಸಿದರು. ಯೋಗೇಶ್ ಅವರ ಮಾತುಗಳನ್ನು ಸದಸ್ಯರಾದ ವೀರೇಶ್ ಮತ್ತು ಸತೀಶ್ ಬೆಂಬಲಿಸಿದರು. ಏತನ್ಮಧ್ಯೆ, ನಡುವೆ ಮಾತನಾಡಿದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ, ಅಧಿಕಾರಿಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಸರಾದ ಪಾರ್ವತಮ್ಮ, ಭಾಗ್ಯಮ್ಮ, ನಾಗಮಣಿ, ತಾಲೂಕು ಪಂಚಾಯಿತಿ ಸದಸ್ಯರಾದ ಪಾಂಡುರಂಗ, ನರಸೇಗೌಡ, ಆಶಾರಾಣಿ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

