ಮಧುಮೇಹ ಕಾರ್ಯಕ್ರಮ
ಹಾಸನ: ಜಿಲ್ಲಾ ಪಂಚಾಯ್ತಿ, ಹಾಸನ, ಜಿಲ್ಲಾ ಆಯುಷ್ ಇಲಾಖೆ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಜ. 9ರಂದು ಕುವೆಂಪುನಗರದ ಲಯನ್ಸ್ ಸೆಂಟರ್ನಲ್ಲಿ ಉಚಿತ ಮಧುಮೇಹ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಭಾಗವಹಿಸುವ ಮಧುಮೇಹ ರೋಗಿಗಳಿಗೆ ಉಚಿತ ರಕ್ತ ತಪಾಸಣೆ ಮತ್ತು ಆಯುರ್ವೇದ ಔಷಧಿ ನೀಡಲಾಗುವುದು. ಶಿಬಿರ ಅಂದು ಬೆಳಗ್ಗೆ 11ಕ್ಕೆ ಪ್ರಾರಂಭವಾಗಲಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ಆಯುಷ್ ಅಧಿಕಾರಿ ಕೋರಿದ್ದಾರೆ.
ಅರ್ಜಿ ಆಹ್ವಾನ
ಹಾಸನ: ಅರಸೀಕೆರೆ ತಾಲೂಕಿನ ಮಾಡಾಳು, ಗೊಲ್ಲರಹಟ್ಟಿ, ಮೈಲನಹಳ್ಳಿ, ಬೆಳುವಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜ. 9 ಕಡೆಯ ದಿನ. ಹೆಚ್ಚಿನ ಮಾಹಿತಿಗೆ, ಅರಸೀಕೆರೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ಟ್ರ್ಯಾಕ್ಟರ್ ಡಿಕ್ಕಿ, ಪಾದಚಾರಿ ಸಾವು
ಹಾಸನ: ಟ್ರ್ಯಾಕ್ಟರ್ ಡಿಕ್ಕಿ ಮಾಡಿದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿದೆ. ಹೊಳೆನರಸೀಪುರ ತಾಲ್ಲೂಕಿನ ಗೋಹಳ್ಳಿ ಗ್ರಾಮದ ವಾಸಿ ಬಸವರಾಜಪ್ಪ (55) ಸಾನ್ನಪ್ಪಿದ ದುರ್ದೈವಿ. ಬಸವರಾಜಪ್ಪ ಜಮೀನಿನ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದ ಪರಿಣಾಮ ಬಸವರಾಜಪ್ಪಗೆ ತೀವ್ರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿ ವೀರಪ್ಪಾಜಿ ಅವರು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜೂಜು: ನಾಲ್ವರ ಬಂಧನ, ನಗದು ವಶ
ಹಾಸನ: ಜೂಜಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದು, ರು. 1600 ನಗದನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಬೇಲೂರು ತಾಲ್ಲೂಕಿನ ಅರೇಹಳ್ಳಿಯ ಅಂಬೇಡ್ಕರ್ ನಗರದ ಕಾಂತರಾಜು ಅವರು ಕೆಳಗೆ ಅಂದರ್ ಬಾಹರ್ ಜೂಜಾಟಾಡುತ್ತಿದ್ದಾಗ ಅರೇಹಳ್ಳಿ ಠಾಣೆಯ ಪಿಎಸ್ಐ ಆರೋಕಿಯಪ್ಪ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಜೂಜಾಡುತ್ತಿದ್ದ ಮಹೇಶ್ (27), ಅಜ್ಗರ್ ಅಹಮದ್ (28), ಮನ್ಸೂರ್ (27) ಮತ್ತು ಹೇಮಂತ್ ಕುಮಾರ್ ಅವರನ್ನು ಬಂಧಿಸಿದ್ದು, ಜೂಜಾಟಾದಲ್ಲಿ ಪಣಕ್ಕಿಟ್ಟದ್ದ ಸುಮಾರು ರು. 1,600 ನಗದನ್ನು ವಶಪಡಿಸಿಕೊಂಡು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳನ ಬಂಧನ, ಚಿನ್ನಾಭರಣ ವಶ
ಹಾಸನ: ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ಅವರ ಮಾರ್ಗದರ್ಶನದ ಮೇರೆಗೆ ಹಾಸನ ಉಪ-ವಿಭಾಗದ ಡಿವೈಎಸ್ಪಿ ಪರಮೇಶ ಎಚ್. ಭೀಮಕ್ಕನವರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ಹಾಸನ ತಾಲ್ಲೂಕಿನ ಪುರದಮ್ಮ ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ಹೀರೋಹೋಂಡಾ ಸೈಯನ್ ಬೈಕ್ನಲ್ಲಿ ಓಡಾಡುತ್ತಿದ್ದ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಬಾಗೀವಾಳು ಗ್ರಾಮದ ಬಿ.ಎಸ್. ಚಂದ್ರಶೇಖರ (30) ಎಂಬುವರನ್ನು ಬಂಧಿಸಿದ್ದು, ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ, ಸುಮಾರು ರು. 2,88,400 ಬೆಲೆಯ 103 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
'ಮನುಷ್ಯ ಚಿಂತನಶೀಲನಾಗಬೇಕು'
ಹಾಸನ: ಮನುಷ್ಯನಾದವನು ಚಿಂತನಾಶೀಲ ಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿ ಇತ್ತೀಚೆಗೆ ನಡೆದ ಆರಾಧನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷ ಕೂಡ ಆರಾಧನ ಮಹೋತ್ಸವ ನಡೆಸಲಾಗುತ್ತಿದ್ದು, ಈ ಭಾರಿ ಸರಳವಾಗಿ ಆಚರಿಸಲಾಗುತ್ತಿದೆ. ಬೇಡವಾದ ಚಿಂತನೆಗೆ ಹೆಚ್ಚು ಒತ್ತು ನೀಡಿ ಸಮಯ ವ್ಯರ್ಥ ಮಾಡುವ ಬದಲು ಸಮಾಜಮುಖಿಯ ಚಿಂತನೆಯತ್ತ ಒಲವು ತೋರಬೇಕು ಎಂದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿ, ಹಿರೆಮಠದ ಸ್ವಾಮಿಜಿ, ತಹಸೀಲ್ದಾರ್ ಮಂಜುನಾಥ್, ಪತ್ರಕರ್ತರಾದ ಎಚ್.ಬಿ. ಮದನ್ ಗೌಡ, ರವಿನಾಕಲಗೂಡು, ಸಂಗಂ, ಕಟ್ಟಾಯ ಶಿವಕುಮಾರ್ ಹಾಗೂ ಇತರರು ಇದ್ದರು.
ಚಿರತೆಗಳ ದಾಳಿಗೆ 5 ಕುರಿಗಳು ಬಲಿ
ಹಿರೀಸಾವೆ (ಚನ್ನರಾಯಪಟ್ಟಣ ತಾ.): ಹಿರೀಸಾವೆ ಹೋಬಳಿ ಕಬ್ಬಳಿ ಗ್ರಾಮದಲ್ಲಿ ಬ್ಯಾಟೆ ರಂಗಪ್ಪ ಎಂಬವರಿಗೆ ಸೇರಿದ ಕುರಿಗಳು ಕೆರೆಅಂಗಳದಲ್ಲಿ ಮೇಯುತ್ತಿದ್ದಾಗ ದಾಳಿ ನಡೆಸಿದ ಎರಡು ಚಿರತೆಗಳು ಐದು ಕುರಿಗಳನ್ನು ಕೊಂದು ತಿಂದು ಹಾಕಿರುವ ಘಟನೆ ನಡೆದಿದೆ. ಅಲ್ಲಿಯೇ, ಇದ್ದ ರಂಗಪ್ಪ ಎಂಬವರು ಕಿರುಚಿ, ಅಕ್ಕ ಪಕ್ಕದ ಜನ ಸೇರುವಂತೆ ಮಾಡಿದ್ದರಿಂದ ಚಿರತೆಗಳು ಓಡಿಹೋಗಿವೆ ಎನ್ನಲಾಗಿದೆ. ಸುದ್ದಿ ತಿಳಿದ ಗ್ರಾಮದಲ್ಲಿಯೇ ಇದ್ದ ಮಾಜಿ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಬ್ಬಳಿ ರಂಗೇಗೌಡ ರವರು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಮಾತನಾಡಿ, ಒಂದು ತಿಂಗಳಿಂದ ಈಚೆಗೆ ನಮ್ಮ ಹೋಬಳಿಯಲ್ಲಿ ಚಿರತೆ ದಾಳಿಯಿಂದ ಸುಮಾರು ಎಂಟತ್ತು ಎಮ್ಮೆ, ಐದಾರು ಹಸುವಿನ ಕರುಗಳು, ಇಪ್ಪತ್ತರಿಂದ ಇಪ್ಪತೈದು ಕುರಿಗಳನ್ನು, ಕೊಂದು ರೈತನಿಗೆ ನಷ್ಟ ಉಂಟಾಗಿ ರೈತರು ಹೊಲ ತೋಟಗಳಿಗೆ ಹೋಗಲು ಭಯ ಭೀತರಗಿದ್ದಾರೆ. ಕೂಡಲೇ ಕ್ರಮ ಕೈಗೊಂಡು, ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಇಂದು ಉಸ್ತುವಾರಿ ಸಚಿವರ ಭೇಟಿ
ಹಾಸನ: ರಾಜ್ಯ ಲೋಕೋಪಯೋಗಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಜ. 8ರಂದು ಸಂಜೆ 4ಕ್ಕೆ ಹಾಸನಕ್ಕೆ ಆಗಮಿಸಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಬರಗಾಲ ಪರಿಹಾರ ಕಾರ್ಯಪಡೆಯ ಸಭೆ ನಡೆಸುವರು.
ಬಾಲಕಿ ನಾಪತ್ತೆ
ಹಾಸನ: ಅರಲಗೂಡು ತಾಲ್ಲೂಕಿನ ಕೇಶವಪುರ ಗ್ರಾಮದ ಸಣ್ಣಯ್ಯ ರವರ ಪುತ್ರಿ ಪಾರ್ವತಿ(16) ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ.
ಚಹರೆ: 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ತೆಲಗು ಭಾಷೆ ಮಾತನಾಡುತ್ತಾಳೆ. ತಂದೆ ಸಣ್ಣಯ್ಯ ಅವರು ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
'ಕರ್ನಾಟಕದವರದ್ದೇ ಸಿಂಹಪಾಲು'
ಹಾಸನ: ಭಾರತದ ಛಾಯಾಚಿತ್ರ ಕ್ಷೇತ್ರದಲ್ಲಿ ಕರ್ನಾಟಕದ ಛಾಯಾಗ್ರಾಹಕರದ್ದೇ ಸಿಂಹಪಾಲು ಎಂದು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ಪರ್ಧೆ ಮತ್ತು ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೆಮ್ಮೆಯ ಸಂಗತಿ: ವಿಶ್ವದಲ್ಲಿ ಛಾಯಾಗ್ರಹಣ ಕ್ಷೇತ್ರ ಇಂದು ಬಹುದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. 15 ಬಾರಿ ನಡೆದಿರುವ ಅಂತಾರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಯಲ್ಲಿ ಭಾರತ 5 ಬಾರಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅದರಲ್ಲಿ ಕರ್ನಾಟಕ ಛಾಯಾಗ್ರಾಹಕರು ಶೇ. 90ರಷ್ಟು ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಹಾದಿ ಕಷ್ಟಕರ: ಕಪ್ಪುಬಿಳುಪು ಛಾಯಾಗ್ರಹಣದಿಂದ ಇಂದಿನ ಡಿಜಿಟಲ್ ಛಾಯಾಗ್ರಹಣದವರೆಗೆ ಕ್ಷೇತ್ರ ಬೆಳೆದು ಬಂದ ಹಾದಿ ಕಷ್ಟಕರವಾದದ್ದು ಎಂದರು.
ಬಹುಮಾನ ವಿತರಣೆ: ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮದುವೆ ಫೋಟೋ ವಿಭಾಗದಲ್ಲಿ ಶರತ್ ಪ್ರಥಮ ಸ್ಥಾನ ಪಡೆದರೆ, ರೋಹಿತ್ ದ್ವಿತೀಯ ಸ್ಥಾನ ಪಡೆದರು. ಪರಿಸರ ವಿಭಾಗದಲ್ಲಿ ಗಿರಿ (ಇಂದ್ರಕುಮಾರ್) ಪ್ರಥಮ ಸ್ಥಾನ ಪಡೆದರೆ, ಧರ್ಮಶೆಟ್ಟಿ ದ್ವಿತೀಯ ಸ್ಥಾನ ಪಡೆದರು.
ಜಿಲ್ಲಾ ಮಟ್ಟದ ಛಾಯಾಗ್ರಹಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರಕಲಗೂಡು ತಂಡ ಪ್ರಥಮ ಬಹುಮಾನ ಪಡೆದರೆ ಹಾಸನ ತಂಡ ದ್ವಿತೀಯ ಬಹುಮಾನ ಪಡೆಯಿತು.
ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಡಿ.ಬಿ. ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಶ ಶಿಧರ್, ವನ್ಯಜೀವಿ ಛಾಯಾಗ್ರಾಹಕ ಆರ್. ಸುಬ್ರಹ್ಮಣ್ಯ, ಸಂಘದ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣಗೌಡ, ಕಾರ್ಯದರ್ಶಿ ಬಿ.ಸಿ. ಆನಂದ್ ಹಾಗೂ ಇತರರು ಇದ್ದರು.
ಮನೋಜ್ಗೆ ಶೌರ್ಯ ಪ್ರಶಸ್ತಿ
ಮೈಸೂರು: ತಾಲೂಕಿನ ದೊಡ್ಡಮಾರಗೌಡನಹಳ್ಳಿಯ ನವೋದಯ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎಸ್.ಎಸ್. ಮನೋಜ್ಗೆ ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಲಭಿಸಿದೆ. ಸೆ.2, 2012 ರಲ್ಲಿ ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಗೆ ಕಾಲುಜಾರಿ ಬಿದ್ದ ಮಂಚಮ್ಮ ಎಂಬ ಅಂಗವಿಕಲೆಯನ್ನು ಪ್ರಾಣಾಪಾಯದಿಂದ ರಕ್ಷಿಸಿರುವ ಈತನ ಸಾಧನೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜ.26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪತ್ರ, ಚಿನ್ನದ ಪದಕ ಹಾಗೂ 1 ಲಕ್ಷ ನಗದು ಪುರಸ್ಕಾರ ನೀಡಿ ಗೌರವಿಸುವರು. ಈ ಹಿಂದೆ ಮನೋಜ್ ಸಾಧನೆ ಪರಿಗಣಿಸಿ ಹೊಯ್ಸಳ ಶೌರ್ಯಪ್ರಶಸ್ತಿ ನೀಡಿ ರಾಜ್ಯಪಾಲ ಡಾ.ಭಾರದ್ವಾಜ್ ಸನ್ಮಾನಿಸಿದ್ದರು. ಮನೋಜ್ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ ನಿವಾಸಿ ಎಸ್.ಟಿ. ರಾಜಶೇಖರ್ ಹಾಗೂ ಎಸ್.ಕೆ. ಆರತಿ ಅವರ ಪುತ್ರ.
ಸಮಾರಂಭ
ಮೈಸೂರು: ಮರಿಮಲ್ಲಪ್ಪನವರ ಪದವಿಪೂರ್ವ ಕಾಲೇಜಿನ 2013-14ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಯ ಸಮಾರೋಪ ಸಮಾರಂಭವು ಜ.9ರ ಬೆಳಗ್ಗೆ 9.30ಕ್ಕೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆಯಲಿದೆ. ಎಸ್. ಪರಮಶಿವಯ್ಯ ಅಧ್ಯಕ್ಷತೆ ವಹಿಸುವರು. ವೈ.ವಿ. ಗುಂಡೂರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರೊ.ಕೆ.ಎನ್. ಪಂಚಾಕ್ಷರಸ್ವಾಮಿ ಬಹುಮಾನ ವಿತರಿಸುವರು.
ಭಾಗವತ ಪ್ರವಚನ
ಮೈಸೂರು: ಬೆಂಗಳೂರಿನ ಶ್ರೀ ಹರಿದಾಸ ಸಂಘದ ವತಿಯಿಂದ ಜ.9ರ ಸಂಜೆ 5.30ಕ್ಕೆ ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಹ.ರಾ. ನಾಗರಾಜಾಚಾರ್ಯ ಅವರು ಗಜಂದ್ರ ಮೋಕ್ಷ ವಿಷಯ ಕುರಿತು ಭಾಗವತ ಪ್ರವಚನ ನೀಡುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

