ಕ್ರಿಮಿನಲ್ ಮೊಕದ್ದಮೆ ಹೂಡುವೆ: ಶಾಸಕ ಶಿವಲಿಂಗೇಗೌಡ
ಕ.ಪ್ರ.ವಾರ್ತೆ , ಹಾಸನ , ಜ 8
ಹದಿಮೂರು ಸಮುದಾಯ ಭವನ ನಿರ್ಮಾಣದ ಹಣ ತಿಂದು ಹಾಕಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಸುಳ್ಳು ಆರೋಪದ ವಿರುದ್ಧ ಮಾನನಷ್ಟ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯ ಭವನದ ಹಣವನ್ನು ತಿಂದು ಹಾಕಿದ್ದಾರೆ ಎಂದು ಆರೋಪ ಮಾಡಿದ ಕಾಂಗ್ರೆಸ್ ಮುಖಂಡರು ಈಗ 1 ಸಮುದಾಯ ಭವನವನ್ನು ಹೊರತುಪಡಿಸಿ ಉಳಿದ ಸಮುದಾಯ ಭವನ ನಿರ್ಮಾಣವಾಗಿರುವ ಜಾಗದ ಖಾತೆಗಳು ಸರಿ ಇಲ್ಲ ಅಂತ ಹೇಳುತ್ತಿದ್ದಾರೆ. ಖಾತೆ ಸರಿ ಇಲ್ಲವಾದರೆ ಅದನ್ನು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಬೇಕು. ಅದನ್ನು ಬಿಟ್ಟು ನನ್ನ ವಿರೋಧ ಸುಳ್ಳು ಆರೋಪ ಮಾಡುವ ಮೂಲಕ ಕ್ಷೇತ್ರದಲ್ಲಿ ಅಪಪ್ರಚಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಸ್ಪಷ್ಟನೆ: ಸಮುದಾಯ ಭವನ ನಿಮಾರ್ಣಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಆಡಳಿತ ಅನುಮೋದನೆ ನೀಡಬೇಕು. ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಆಡಳಿತ ಅನುಮೋದನೆ ನೀಡಿದ್ದಾರೆ. ಆದಕ್ಕಾಗಿ ಕಣಕಟ್ಟೆ ಹೋಬಳಿ ನರಸೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸಮುದಾಯ ಭವನಗಳ ದೃಡೀಕರಣ ದಾಖಲಾತಿಯನ್ನು ಕೇಳಿದ್ದೆ. ಅದಕ್ಕೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಅವರು ಅಕ್ರಮ ನಡೆದಿಲ್ಲ ಎಂದು ದಾಖಲೆಯನ್ನು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನವರು ಉದ್ದೇಶ ಪೂರ್ವಕವಾಗಿ ಮಾನನಷ್ಟ ಮಾಡಲು ಈ ರೀತಿ ಕೃತ್ಯ ಎಸಗುವ ಮೂಲಕ ಕ್ಷೇತ್ರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಿಲ್ಲಿಸಬೇಕು ಅಂತ ಈ ರೀತಿ ಮಾಡುತ್ತಿದ್ದಾರೆ. 30 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಅವರನ್ನು ಸೋಲಿಸಿದೆ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ಸಹಿಸಲಾಗದೆ ರಾಜಕೀಯ ದ್ವೇಷ ಕಾರುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ನವರಿಗೆ ನಂಬಿಕೆ ಇಲ್ಲ: ಕೆಲ ಗ್ರಾಮಗಳಿಗೆ 25 ಕೋಟಿ ರು.ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯು ಎಎಸ್ಐಪಿ ಕಂಪನಿಗೆ ನಾನೇ ಕೊಡಿಸಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಮುಖಂಡರು ಲೋಕೋಪಯೋಗಿ ಇಲಾಖೆಯ ಸಚಿವರಿಗೆ ದೂರು ನೀಡಿದ್ದಾರೆ. ಅದರಂತೆ ಕಾಮಗಾರಿ ಉಸ್ತುವಾರಿ ಕೋಶದ ತಂಡವರು ಸ್ಥಳಕ್ಕೆ ಆಗಮಿಸಿ ರಸ್ತೆ ಕಾಮಗಾರಿ ಪರಿಶೀಲಿಸಿ ಇಲ್ಲಿ ಯಾವುದೇ ರೀತಿಯ ಕಳಪೆ ಕಾಮಗಾರಿಗಳು ನಡೆದಿಲ್ಲ ಎಂದು ವರದಿ ನೀಡಿದ್ದಾರೆ.
ಆದರೆ, ಕಾಂಗ್ರೆಸ್ ಮುಖಂಡರಿಗೆ ತಮ್ಮ ಸರ್ಕಾರದ ಕೋಶ ತಂಡವರ ತನಿಖೆಯ ಹಾಗೂ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಈಗ ಮತ್ತೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆ ತನಿಖೆಗೂ ನಾನು ಸಿದ್ದನಿದ್ದೇನೆ ಎಂದು ಹೇಳಿದರು.
ಸಾಬೀತಾದರೆ ನಿವೃತ್ತಿ: 13 ಸಮುದಾಯ ಭವನಗಳ ಹಣವನ್ನು ದುರಪಯೋಗಪಡಿಸಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರು ಆರೋಪ ಸತ್ಯಕ್ಕೆ ದೂರವಾಗಿದ್ದು, ಸಾಬೀತು ಪಡಿಸಿದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದು, ತನ್ನ ತಪ್ಪು ಇದ್ದಲ್ಲಿ ನಾನು ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ ಎಂದರು.
ಸಿಎ ಜಾಗದಲ್ಲಿ ಮನೆ ಕಟ್ಟಿಲ್ಲ: ನಾನು ಮನೆ ನಿರ್ಮಿಸಿರುವ ಜಾಗವನ್ನು ಸಿದ್ದರಾಮಶೆಟ್ಟಿ ಅವರಿಂದ ಖರೀದಿಸಿದ್ದೇನೆ. ಅವರು ಕ್ರಯ ಪತ್ರವನ್ನು ನನಗೆ ನೀಡಿದ್ದಾರೆ. ಜೊತೆಗೆ ಮುನಿಸಿಪಾಲಿಟಿಯಿಂದ ಅನುಮತಿಯನ್ನು ಪಡೆದಿದ್ದೇನೆ. ಹಿಂದೆ ಇದ್ದ ಸಿಎ ಸೈಟನ್ನು ಪರಿವರ್ತಿಸಲಾಗಿದೆ. ಆದರೆ ಈ ವಿರುದ್ಧ ಲೋಕಾಯುಕ್ತ ದೂರು ನೀಡಿದ್ದು, ಅದರಂತೆ ಲೋಕಾಯುಕ್ತರು ತನಿಖೆಗೆ ಬಂದು ಪರಿಶೀಲಿಸಿದ್ದಾರೆ. ನಾನು ಮನೆ ಕಟ್ಟಿರುವುದು ಕಾನೂನಿಗೆ ವಿರುದ್ಧವಾಗಿದ್ದರೆ ಅದಕ್ಕೆ ತಲೆ ಭಾಗುವುದಾಗಿ ಸ್ಪಷ್ಟಪಡಿಸಿದರು.
ಮೊದಲು ಅದನ್ನು ಸರಿಪಡಿಸಲಿ: ಜಿಲ್ಲಾ ಪಂಚಾಯ್ತಿ ಸದಸ್ಯ ಹುಚ್ಚೇಗೌಡ ಮಾತನಾಡಿ, ಕಾಂಗ್ರೆಸ್ನವರು ಇಷ್ಟೆಲ್ಲ ಸುಳ್ಳು ಆರೋಪ ಮಾಡುವವರು ವಿಮಲಾಗೌಡ ಪಾಟೀಲ್ ಅವರಿಗೆ ಗಂಡಸಿ ಹೋಬಳಿಯ ಚಿನ್ನೇನಹಳ್ಳಿಯಿಂದ ಮಲ್ಲಾಪುರಕ್ಕೆ ಹೋಗುವ ರಸ್ತೆಗೆ ಕಾಂಕ್ರಿಟ್ ಮಾಡಲು ರು. 50 ಲಕ್ಷ ರು. ಕಾಮಗಾರಿ ನೀಡಲಾಗಿದೆ. ಆದರೆ, ಈವರೆಗೂ ಆ ರಸ್ತೆ ಮಾಡದೇ ಕೇವಲ ಗ್ರಾವೆಲಲ್ಕೆಲಸವನ್ನು ಮಾಡಿ ತೆಪ್ಪಗಾಗಿದ್ದಾರೆ ಅದನ್ನು ಮೊದಲು ಸರಿಪಡಿಸಲಿ ಕಾಂಗ್ರೆಸ್ನವರು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

