ಹಾಸನ

ನಗರಕ್ಕೆ ತಟ್ಟಿದ 'ಆಟೋ ಗ್ಯಾಸ್‌' ಬಿಸಿ

Published On :

ಕ.ಪ್ರ.ವಾರ್ತೆ ,  ಹಾಸನ ,  ಜ. 8
ಕೇಂದ್ರ ಸರ್ಕಾರ ಆಟೋ ಗ್ಯಾಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಸಂಕಷ್ಟದಲ್ಲಿ ಚಾಲಕರು: ಕೇಂದ್ರ ಸರ್ಕಾರ ವಾರಕೊಮ್ಮೆ ಗ್ಯಾಸ್ ದರವನ್ನು ಏರಿಕೆ ಮಾಡುತ್ತಿದ್ದು, ಇತ್ತೀಚೆಗೆ ಏಕಾಏಕಿ ರು. 12 ಹೆಚ್ಚಿಸಿದೆ. ಇದರಿಂದ, ಆಟೋ ಚಾಲಕರಿಗೆ ತೊಂದರೆ ಉಂಟಾಗಿದ್ದು, ಪದೇಪದೇ ಹೀಗೆ ಗ್ಯಾಸ್ ದರ ಏರಿಸುವುದರಿಂದ, ಚಾಲಕರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
ಆರೋಪ: ಯುಪಿಎ ಸರ್ಕಾರದ ಅಸಮರ್ಪಕ ನೀತಿಗಳಿಂದಾಗಿ ಡಾಲರ್ ಬೆಲೆಯ ಎದುರು ರೂಪಾಯಿ ಮೌಲ್ಯ ಅಪಮೌಲ್ಯಕ್ಕೀಡಾಗಿದೆ. ಇದರಿಂದ ತೈಲ ಬೆಲೆಗಳು ಏರಿಕೆಯಾಗಿದ ಎಂಬ ಸಬೂಬನ್ನು ಹೇಳುವ ಕೇಂದ್ರದ ಯುಪಿಎ ಸರ್ಕಾರದ ರೂಪಾಯಿ ಮೌಲ್ಯ ಕುಸಿತದ ತಡೆಗೆ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸ್ವತಃ ಆರ್ಥಿಕ ತಜ್ಞರಾದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅನುಭವಿ ಹಣಕಾಸು ಮಂತ್ರಿ ಪಿ. ಚಿದಂಬರಂ, ದೇಶದ ಆರ್ಥಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆಕ್ರೋಶ: ಈ ರೀತಿ ದರವನ್ನು ಪದೇ ಪದೇ ಏರಿಕೆ ಮಾಡುವುದರಿಂದ ಆಟೋ ರಿಕ್ಷಾಗಳನ್ನು ಓಡಿಸುತ್ತಾ ಜೀವನ ಸಾಗಿಸುತ್ತಿರುವ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದ ಅವರು, ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಆಟೋಗಳ ಬಿಡಿ ಭಾಗಗಳ ದರಗಳೂ ಏರಿಕೆಯಾಗಿರುವುದರಿಂದ, ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏಕಾಏಕಿ ಗ್ಯಾಸ್ ದರವನ್ನೂ ಏರಿಕೆ ಮಾಡಿರುವುದು ಆಟೋ ಚಾಲಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ ಸಾಮಾನ್ಯರಿಗೂ ತೊಂದರೆ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಪ್ರಯಾಣ ದರ ಹೆಚ್ಚಳವಾಗಿದೆ. ಹಣದುಬ್ಬರ ಏರಿಕೆಯಾಗಿದೆ. ಇವೆಲ್ಲದರಿಂದ ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳ ಪರಿಣಾಮಗಳನ್ನು ಪರಿಣಾಮವನ್ನು ಸಾಮಾನ್ಯ ಜನರು ಅನುಭವಿಸುವಂತಾಗಿದೆ ಎಂದು ದೂರಿದರು.
ಸಂದಿಗ್ಧ ಪರಿಸ್ಥಿತಿ: ಕೇವಲ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿರುವ ಕೇಂದ್ರ ಯುಪಿಎ ಸರ್ಕಾರದ ನಾಯಕರು ಜನಸಾಮಾನ್ಯರ ಈ ಬವಣೆಯನ್ನು ಅರಿಯುವಲ್ಲಿ ಸಂಪೂರ್ಣವಾಗಿ ಎಡವಿದೆ. ಇಂತಹ ವಿರೋಧಿ ಸರ್ಕಾರ ಅಧಿಕಾರದಲ್ಲಿ ಇರಲು ಅನರ್ಹವಾಗಿದೆ. ಜನಸಾಮಾನ್ಯರ ಹಿತಕಾಯದ ಆಡಳಿತ, ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜೊತೆಗೆ ದೇಶವನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ ಎಂದು ಟೀಕಿಸಿದರು.
ಎಚ್ಚರಿಕೆ: ಕೇಂದ್ರ ಸರ್ಕಾರ ಕೂಡಲೇ ಏರಿಕೆ ಮಾಡಿರುವ ಆಟೋ ಗ್ಯಾಸ್ ದರ ಹಾಗೂ ಇತರೆ ಅಗತ್ಯ ವಸ್ತುಗಳ ದರವನ್ನು ಇಳಿಸಿಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಅಧ್ಯಕ್ಷ ವೈ.ಎಂ. ಅಬ್ಬಾಸ್, ಕಾರ್ಯದರ್ಶಿ ಸಮೀರ್ಖಾನ್, ಕಾರ್ತಿಕ್, ಗುಡೇಗೌಡ, ಲೋಕೇಶ್ ಕುಮಾರ್, ಹೇಮಂತ್ಕುಮಾರ್, ಹರೀಶ್ಕುಮಾರ್, ಟಿ.ಡಿ. ಲಕ್ಷ್ಮಣ್, ಯೋಗೇಶ್, ರವಿಶಂಕರ್, ಕುಮಾರ್, ಎಂ.ಎಸ್.ಗಿರೀಶ್, ಮಂಜುನಾಥ್, ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.