ಸೆಮಿಸ್ಟರ್ ಪದ್ಧತಿ ಬೇಡವೇ ಬೇಡ
ಕ.ಪ್ರ.ವಾರ್ತೆ , ಹಾಸನ , ಜ. 8
ಐಟಿಐನಲ್ಲಿ ಸೆಮಿಸ್ಟರ್ ಪದ್ಧತಿಯನ್ನು ಕೈ ಬಿಡುವಂತೆ ಆಗ್ರಹಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ (ಎಐಡಿವೈಓ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತ, ಬಿ.ಎಂ. ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಐಟಿಐ ತರಬೇತಿಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ (ಡಿಇಟಿ)ಯು ಏಕಾಏಕಿ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿದೆ. ಪ್ರಸಕ್ತ ತರಬೇತಿಯ ಪಠ್ಯಕ್ರಮದ ಬಗ್ಗೆ ಶಿಕ್ಷಕರ ತರಬೇತಿಯ ಬಗ್ಗೆ ಯಾವುದೇ ಪೂರ್ವ ತಯಾರಿಯನ್ನು ನಡೆಸದೆ ಇದ್ದ ರಾಜ್ಯ ಡಿಇಟಿ ಈಗ ಜನವರಿ ಅಥವಾ ಫೆಬ್ರವರಿಯಲ್ಲಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿ, ರಾಜ್ಯಾದ್ಯಂತ ಐಟಿಐ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ ಎಂದರು.
ಭರವಸೆ: ಇದನ್ನು ಖಂಡಿಸಿ, ಕಳೆದ ಡಿ. 23ರಂದು ನಡೆದಿದ್ದ ಬೃಹತ್ ಹೋರಾಟ ಬೆಂಗಳೂರು ಚಲೋ ದಲ್ಲಿ ಪಾಲ್ಗೊಂಡಿದ್ದರು. ಆಗ ಹೋರಾಟದ ಸ್ಥಳಕ್ಕೆ ಆಗಮಿಸಿದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕರೊಬ್ಬರು ನಮ್ಮಿಂದ ಮನವಿ ಸ್ವೀಕರಿಸಿ, ಭಾರಿ ಸಂಖ್ಯೆಯಲ್ಲಿ ಸೇರಿದ್ದ ಐಟಿಐ ತರಬೇತುದಾರರನ್ನು ಉದ್ದೇಶಿಸಿ ಮಾತನಾಡಿ, ಸದ್ಯದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದರು.
ಆಕ್ರೋಶ: ಡಿ. 26ರಂದು ಭೇಟಿ ಮಾಡಿದ ನಿಯೋಗಕ್ಕೆ ಮುಂದಿನ ಒಂದು ವಾರದೊಳಗೆ ಅನುಕೂಲಕರ ಉತ್ತರವನ್ನು ಪಡೆಯುವ ಭರವಸೆ ಇದೆ ಎಂದು ಹೇಳಿದ್ದ ಡಿಇಟಿ ಯು ಎರಡು ವಾರವಾದರೂ ಸಹ ದೆಹಲಿಯ ಡೈರೆಕ್ಟರೇಟ್ ಜನರಲ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಟ್ರೈನಿಂಗ್ (ಡಿಜಿಇಟಿ) ಗೆ ಮನವಿ ಪತ್ರವನ್ನು ರವಾನಿಸಲಾಗಿದೆ ಎಂದು ಹೇಳುತ್ತಾ ಅತಂತ್ರ ಸ್ಥಿತಿಯನ್ನು ಮುಂದುವರೆಸಿಕೊಳ್ಳುತ್ತಾ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿ ನಿರ್ಧಾರ: ಪ್ರಸಕ್ತ ತರಬೇತಿಯ ಪಠ್ಯಕ್ರಮದ ಬಗ್ಗೆ ಶಿಕ್ಷಕರ ತರಬೇತಿಯ ಬಗ್ಗೆ ಯಾವುದೇ ಪೂರ್ವ ತಯಾರಿಯನ್ನೂ ನಡೆಸದೇ ಇದ್ದ ರಾಜ್ಯದ ಡಿಇಟಿಯು ಈಗ ಜನವರಿ ಅಥವಾ ಫೆಬ್ರವರಿಯಲ್ಲಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿ, ರಾಜ್ಯಾದ್ಯಂತ ಐಟಿಐ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ಐಟಿಐ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ ಸೆಮಿಸ್ಟರ್ ಪದ್ಧತಿಯ ವಿರುದ್ಧ ಹೋರಾಟವನ್ನು ಇನ್ನು ಉನ್ನತ ಹಂತಕ್ಕೆ ಕೊಂಡೊಯ್ದು, ಮುಂದುವರಿಸುವ ಉದ್ದೇಶದಿಂದ ನಾನಾ ರೀತಿಯ ಚಳವಳಿಗಳನ್ನು ನಡೆಸಲು ಎಐಡಿವೈಓ ರಾಜ್ಯ ಸಮಿತಿಯು ನಿರ್ಧರಿಸಿದೆ ಎಂದರು.
ಎಚ್ಚರಿಕೆ: ರಾಜ್ಯಾದ್ಯಂತ ಐಟಿಐ ತರಬೇತಿಯ ತರಗತಿ ಬಹಿಷ್ಕಾರ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಐಟಿಐ ವಿದ್ಯಾರ್ಥಿಗಳ ಆತಂಕಕ್ಕೆ ಸರ್ಕಾರವು ಸ್ಪಂದಿಸಿ, ಸೆಮಿಸ್ಟರ್ ಪದ್ಧತಿಯನ್ನು ಕೈ ಬಿಡದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನ, ಧರಣಿ ಕಾರ್ಯಕ್ರಮ, ಮಾನವ ಸರಪಳಿ, ಪ್ರತಿಭಟನಾ ಮೆರವಣಿಗೆ, ಅನಿರ್ದಿಷ್ಟಾವಧಿ ಚಳವಳಿ ಕಾರ್ಯಕ್ರಮ ಹೀಗೆ ಹೋರಾಟದ ನಾನಾ ಸ್ವರೂಪಗಳನ್ನೂ ಚಳವಳಿಗಳಲ್ಲಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಐಟಿಐ ವಿದ್ಯಾರ್ಥಿಗಳು ಎಚ್ಚರ ತಪ್ಪದೇ, ಹೋರಾಟಕ್ಕೆ ಸದಾ ಸನ್ನದ್ಧರಾಗಬೇಕು. ಐಟಿಐ ವಿದ್ಯಾರ್ಥಿ ವಿರೋಧಿ, ಅವೈಜ್ಞಾನಿಕ ಸೆಮಿಸ್ಟರ್ ಪದ್ಧತಿ ರದ್ದಾಗುವವರೆಗೂ ವಿಶ್ರಮಿಸಬಾರದು ಎಂದು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಐಡಿವೈಓ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ವಿದ್ಯಾರ್ಥಿಗಳಾದ ಸಂತೋಷ್, ಪ್ರವೀಣ್ ಕುಮಾರ್, ಮಂಜುನಾಥ್, ಸೋಮಶೇಖರ್, ರಾಜು, ಕಿರಣ್, ಪ್ರಸಾದ್, ನವೀನ್ ಕುಮಾರ್, ಶಿವಕುಮಾರ್, ಸುರೇಶ್, ಮಂಜು, ಸತೀಶ್, ಕುಮಾರ್ಹಾಗೂ ಇತರರು ಇದ್ದರು.
ಬೇಡಿಕೆಗಳು
1. ಐಟಿಐ ತರಬೇತಿಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ(ಡಿಇಟಿ) ಯು ಏಕಾಏಕಿ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿರುವುದನ್ನು ವಾಪಸ್ ಪಡೆಯಬೇಕು.
2. ಸೆಮಿಸ್ಟರ್ ಪದ್ಧತಿಯಿಂದ ಅತಂತಕ್ಕೆ ಒಳಗಾಗಿರುವ ಐಟಿಐ ವಿದ್ಯಾರ್ಥಿಗಳಿಗೆ ಸರ್ಕಾರವು ಸ್ಪಂದಿಸಬೇಕು.
3. ಪ್ರಸಕ್ತ ತರಬೇತಿಯ ಪಠ್ಯಕ್ರಮದ ಬಗ್ಗೆ ಶಿಕ್ಷಕರಿಗೆ ತರಬೇತಿಯನ್ನು ನೀಡಿ ನಂತರ ಈ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
4. ರಾಜ್ಯದ ಡಿಇಟಿ ಜನವರಿ ಅಥವಾ ಫೆಬ್ರವರಿಯಲ್ಲಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದು, ಅದನ್ನು ಕೈಬಿಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

