ಕಾಡಾನೆ ದಾಳಿ: ಸ್ಥಳದಲ್ಲೇ ಮಹಿಳೆ ಸಾವು
ಕ.ಪ್ರ.ವಾರ್ತೆ , ಆಲೂರು , ಜ. 9
ತಾಲೂಕಿನ ಕೆ.ಹೊಸಕೋಟೆ ಹೋಬಳಿ ಪುರಬೈರವನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಗುರುವಾರ ಮುಂಜಾನೆ ನಡೆದಿದೆ. ಮಧ್ಯಾಹ್ನವಾದರೂ ಸ್ಥಳಕ್ಕೆ ಜಿಲ್ಲಾಧಿಕಾರಿ ಬಾರದ ಕಾರಣ ರೊಚ್ಚಿಗೆದ್ದ ಗ್ರಾಮಸ್ಥರು ಶವಸಂಸ್ಕಾರಕ್ಕೆ ಬಿಡದೇ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಸರೋಜಮ್ಮ (54) ಮೃತಪಟ್ಟ ಮಹಿಳೆ. ಮನೆಯಿಂದ ಬಹಿರ್ದೆಸೆಗೆ ಪಕ್ಕದ ಹಿತ್ತಲಿಗೆ ಹೋಗುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಮಕ್ನಾ ಆನೆ ಆಕೆಯನ್ನು ಕಾಲಿನಿಂದ ಒಸಕಿ ಹಾಕಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸರೋಜಮ್ಮ ಎದುರಿಗೆ ಪಕ್ಕದ ತೋಟದಿಂದ ಬಂದ ಆನೆ ಅವರನ್ನು ಮನೆಯವರೆಗೂ ಅಟ್ಟಿಸಿಕೊಂಡು ಬಂತು. ಈ ಸಂದರ್ಭದಲ್ಲಿ ಗಾಬರಿಯಿಂದ ಓಡುವ ರಭಸದಲ್ಲಿ ಮನೆ ಬದಿಯ ಮೋರಿಯ ಬಳಿ ಎಡವಿ ಬಿದ್ದ ಆಕೆಯನ್ನು ಆನೆ ತನ್ನ ಕಾಲಿನಿಂದ ಮೂರು ಬಾರಿ ತುಳಿದು ಕೊಂದುಹಾಕಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ಗ್ರಾಮಸ್ಥರು, ಶಾಸಕ ಎಚ್.ಕೆ. ಕುಮಾರಸ್ವಾಮಿ, ಸಕಲೇಶಪುರ ಉಪ ವಿಭಾಗಾಧಿಕಾರಿ, ಡಿಎಫ್ಓ, ಆರ್ಎಫ್ಓ, ತಹಸೀಲ್ದಾರ್ ಸೇರಿದಂತೆ ಎಲ್ಲಾ ಅಧಿಕಾರಿ ವರ್ಗ ಸಾಂತ್ವನ ಹೇಳಿ ಸಮಾಧಾನ ಮಾಡಿದರೂ ಒಪ್ಪದೇ ಸ್ಥಳಕ್ಕೆ ಅರಣ್ಯ ಸಚಿವರೇ ಬರಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.
20 ವರ್ಷಗಳಿಂದಲೂ ನರಕಯಾತನೆ: ಕಳೆದ ವರ್ಷ ಅರಣ್ಯ ಸಚಿವರು ಈ ಭಾಗದ ಪ್ರದೇಶಗಳಿಗೆ ಭೇಟಿ ನೀಡಿ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು. ಇದಾದ ಸ್ವಲ್ಪ ದಿನಗಳಲ್ಲೇ ಆನೆ ಹಿಡಿಯುವ ಕಾರ್ಯಾಚರಣೆಗೆ ಚಾಲನೆ ದೊರೆತಿತ್ತು. ಆಗ ಈ ಭಾಗದ ಜನರೆಲ್ಲರು ಕಳೆದ 20 ವರ್ಷಗಳಿಂದಲೂ ಅನುಭವಿಸುತ್ತಿದ್ದ ನರಕ ಯಾತನೆಗೆ ಪೂರ್ಣ ವಿರಾಮ ದೊರೆಯುತ್ತದೆಂದು ನಿಟ್ಟುಸಿರು ಬಿಟ್ಟಿದ್ದರು.
ಆದರೆ ಅರಣ್ಯ ಇಲಾಖೆಯವರು ನರಹಂತಕ ದೊಡ್ಡ ಆನೆಯನ್ನು ಹಿಡಿಯಲಾಗದೇ ಯಾರಿಗೂ ತೊಂದರೆ ನೀಡದೆ ದೇವರ ಆನೆಯೆಂದೇ ಜನ ಗುರುತಿಸಿದ್ದ ಮರಿ ಆನೆಯನ್ನು 5 ದಿನ ಸರ್ಕಸ್ ನಡೆಸಿ ಸಕಲೇಶಪುರ ತಾಲೂಕಿನ ಕೆರೋಡಿ ಬಳಿ ಹಿಡಿದು ರಾತ್ರೋರಾತ್ರಿ ಕ್ಯಾಂಪನ್ನು ಖಾಲಿ ಮಾಡಿ ಜನರ ಕಣ್ಣಿಗೆ ಮಣ್ಣೆರೆಚಿದ್ದರು.
ಆಗಲೇ ಈ ಆನೆಯನ್ನು ಹಿಡಿದಿದ್ದರೆ ಇನ್ನೊಂದು ಜೀವ ಬಲಿಯಾಗುತ್ತಿರಲಿಲ್ಲ ನಾವು ಯಾವುದೇ ಕಾರಣಕ್ಕೂ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರಿಸುವ ಆದೇಶ ಬರುವವರೆಗೂ ಶವವನ್ನು ತೆಗೆಯಲು ಬಿಡುವುದಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಅಧಿಕಾರಿಗಳಿಗೆ ಧಿಕ್ಕಾರ: ಪರಿಸ್ಥಿತಿ ವಿಕೋಪಕ್ಕೆ ಹೋಗಿ ರೊಚ್ಚಿಗೆದ್ದ ಗ್ರಾಮಸ್ಥರನ್ನು ಸಮಾಧಾನ ಮಾಡಲು ಮುಂದಾದ ಉಪ ವಿಭಾಗಾಧಿಕಾರಿ ಡಾ.ಮಧುಕೇಶ್ವರ್ ಮೇಲೆ ರೈತ ಸಂಘದ ತಾಲೂಕು ಅಧ್ಯಕ್ಷ ಕಣಗಾಲ್ ಮೂರ್ತಿ ಹರಿಹಾಯ್ದು ಮಹಿಳಾ ಶವವನ್ನು ಬೈರಾಪುರಕ್ಕೆ ತೆಗೆದುಕೊಂಡು ಹೋಗಿ ಹೆದ್ದಾರಿಯಲ್ಲಿಟ್ಟು ರಸ್ತೆ ತಡೆ ನಡೆಸಿ ಪ್ರತಿಭಟಿಸುವುದಾಗಿ ಪಟ್ಟು ಹಿಡಿದು ಶವ ತೆಗೆದುಕೊಂಡು ಹೋಗಲು ಸ್ಥಳಕ್ಕೆ ಟ್ರ್ಯಾಕ್ಟರ್ ತರಿಸಿದರು.
ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥರು ಸರ್ಕಾರ ಹಾಗೂ ಎಲ್ಲಾ ಅಧಿಕಾರಿಗಳಿಗೂ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಇದೇ ವೇಳೆ ಶಾಸಕ ಎಚ್.ಕೆ.ಕುಮಾರಸ್ವಾಮಿ ಗ್ರಾಮಸ್ಥರ ಮನವೊಲಿಸಿ ಡಿ.ಸಿ.ಯವರನ್ನು ಸ್ಥಳಕ್ಕೆ ಕರೆಸುವುದಾಗಿ ತಿಳಿಸಿ ಸಮಾಧಾನಗೊಳಿಸಿದರು.
ಸುಮಾರು 2 ಗಂಟೆಗೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಅನ್ಬುಕುಮಾರ್, ಗ್ರಾಮಸ್ಥರೊಂದಿಗೆ ಮಾತನಾಡಿ ಅನಿವಾರ್ಯ ಕಾರಣದಿಂದಾಗಿ ಸ್ಥಳಕ್ಕೆ ಬರಲು ತಡವಾದುದಕ್ಕೆ ಕ್ಷಮೆಯಾಚಿಸಿದರು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದು ನರಹಂತಕ ಮಕ್ನಾ ಆನೆಯನ್ನು ಹಿಡಿಯಲು ಅನುಮತಿ ದೊರೆತಿದೆ. ನಾಳೆಯೇ ಸಾಕಾನೆಗಳನ್ನು ಇಲ್ಲಿಗೆ ಕರೆಸಲಾಗುತ್ತಿದ್ದು, ಈ ಭಾಗದಲ್ಲಿ ಕ್ಯಾಂಪ್ ನಿರ್ಮಿಸಿ ಶೀಘ್ರವಾಗಿ ಈ ಆನೆಯನ್ನು ಸೆರೆ ಹಿಡಿಯಲಾಗುವುದು ಎಂದು ತಿಳಿಸಿದರು.
ಇಂದು ಸ್ಥಳದಲ್ಲೇ ಮೊಕ್ಕಾಂ - ಡಿಸಿ: ಡಿಎಫ್ಓ ಗೆ ಈಗಾಗಲೇ ಆನೆಯಿರುವ ಸ್ಥಳದ ಬಗ್ಗೆ ಮಾಹಿತಿ ಅಕ್ಕ ಪಕ್ಕದ ಗ್ರಾಮಸ್ಥರಿಗೆ ತಿಳಿಸಿ ಮುಂಜಾಗ್ರತೆ ವಹಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಆನೆಗಳು ಸುತ್ತ ಮುತ್ತಲ ಗ್ರಾಮಗಳಿಗೆ ಬಾರದಂತೆ ಕಾಡಿಗೆ ಅಟ್ಟಲು ನಾಲ್ಕೈದು ತಂಡಗಳನ್ನು ಹಗಲು ರಾತ್ರಿ ನಿಯೋಜಿಸುವಂತೆ ಸೂಚಿಸಿರುವುದಾಗಿ ಹೇಳಿದರು.
ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಇಡೀ ದಿನ ಈ ಭಾಗದ ಆನೆ ಹಾವಳಿ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ತಾವು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ನಂತರ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಅನುವು ಮಾಡಿ ಕೊಟ್ಟರು.
ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು ಕಳೆದ ಬಾರಿಯೇ ಮಕ್ನಾ ಸೇರಿದಂತೆ 3 ಒಂಟಿ ಸಲಗಗಳನ್ನು ಹಿಡಿದು ಸ್ಥಳಾಂತರಿಸಿದ್ದರೆ ಈ ರೀತಿಯ ನಾವು ನೋವು ಸಂಭವಿಸುತ್ತಿರಲಿಲ್ಲ. ಇದಕ್ಕೆಲ್ಲ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದರು.
ಈಗ ಕೇವಲ ಒಂದು ಮಕ್ನಾ ಆನೆಯನ್ನು ಹಿಡಿಯಲು ಅನುಮತಿ ದೊರೆತಿದೆಯೆಂದು ಅಧಿಕಾರಿಗಳು ತಿಳಿಸಿದ್ದು ಇದರಿಂದ ಯಾವುದೇ ಪ್ರಯೋಜನವಿಲ್ಲ. ಜನರ ಜೀವಕ್ಕೆ ಕುತ್ತಾಗಿರುವ ಈ 3 ಆನೆಗಳನ್ನು ಶೀಘ್ರ ಹಿಡಿಯಬೇಕು. ಹಿಂಡಿನಲ್ಲಿರುವ ಉಳಿದ ಆನೆಗಳನ್ನು ಕ್ಯಾಂಪ್ ತೆರವುಗೊಳಿಸದೆ ಹಿಡಿದು ಸ್ಥಳಾಂತರಿಸಬೇಕು. ಯಾವುದೇ ಕಾರಣಕ್ಕೂ ಈ ಬಾರಿ ಎಲ್ಲಾ ಆನೆಗಳನ್ನು ಹಿಡಿಯದ ಹೊರತು ಕ್ಯಾಂಪ್ ತೆರವುಗೊಳಿಸಲು ಬಿಡುವುದಿಲ್ಲವೆಂದರು.
ಡಿಎಫ್ಓ ಅಪ್ಪುರಾವ್ ಮಾತನಾಡಿ, ಸರ್ಕಾರ ಈಗಾಗಲೇ ಮಕ್ನಾ ಆನೆ ಹಿಡಿಯಲು ಅನುಮತಿ ನೀಡಿದ್ದು ಈ ಆನೆ ಹಿಡಿಯುವ ಕಾರ್ಯ ನಾಳೆಯಿಂದಲೇ ಆರಂಭವಾಗಲಿದೆ. ಕ್ಯಾಂಪನ್ನು ಯಾವುದೇ ಕಾರಣಕ್ಕೂ ತೆರವು ಗೊಳಿಸುವುದಿಲ್ಲ. ಕೇವಲ ಆನೆಗಳನ್ನು ಹಿಡಿದು 4 ಆನೆ ಪುನರ್ವಸತಿ ಕೇಂದ್ರಗಳಲ್ಲಿ ಪಳಗಿಸಲಷ್ಟೇ ಅನುಮತಿ ದೊರೆಯಬೇಕಿದ್ದು ಮಕ್ನಾ ಆನೆಯನ್ನು ಹಿಡಿಯುವುದರೊಳಗಾಗಿ ಆದೇಶ ಬರುವ ಭರವಸೆಯಿದ್ದು ಆದೇಶ ಬಂದ ತಕ್ಷಣ ಎಲ್ಲಾ ಆನೆಗಳನ್ನು ಹಿಡಿಯಲಾಗುವುದೆಂದರು.
ಮಂಜು ಮುಸುಕಿದ ವಾತಾವರಣದಲ್ಲಿ: ಗ್ರಾಮದ ಹರೀಶ್ ಮಾತನಾಡಿ ಈ ಭಾಗದಲ್ಲಿ ಬಡ ಜನರೇ ಆನೆ ಧಾಳಿಗೆ ತುತಾಗುತ್ತಿದ್ದು ಇದಕ್ಕೆಲ್ಲ ಪ್ರತಿ ಮನೆಯಲ್ಲೂ ಶೌಚಾಲಯ ಇಲ್ಲದಿರುವುದು ಕಾರಣವಾಗಿದೆ. ಬಹಿರ್ದೆಸೆಗೆ ಬಯಲಿಗೆ ಹೋಗುವ ಸಂದರ್ಭದಲ್ಲೆ ಐವರು ಮೃತಪಟ್ಟಿದ್ದು ಬೆಳಗಿನ ಸಮಯದಲ್ಲಿ ಮಂಜು ಮುಸುಕಿದ ವಾತಾವರಣವಿರುವುದರಿಂದ ಆನೆಗಳ ಇರುವಿಕೆ ಕಾಣುವುದಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮ ಪಂಚಾಯ್ತಿಯಲ್ಲಿ ಅರ್ಜಿ ಸಲ್ಲಿಸಿದರೆ ಮೂರ್ನಾಲ್ಕು ವರ್ಷವಾದರೂ ಮಂಜೂರಾಗುತ್ತಿಲ್ಲವೆಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

