ಹೆದ್ದಾರಿ ಅಪಘಾತ ತಡೆ ಸಂಬಂಧ ಡಿಸಿ, ಎಸ್ಪಿ ವರದಿ ನೀಡಿದರೆ ಸರ್ಕಾರದೊಂದಿಗೆ ಚರ್ಚೆ: ದೇವೇಗೌಡ
ಕ.ಪ್ರ.ವಾರ್ತೆ , ಹಾಸನ , ಜ. 9
ಜಿಲ್ಲೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಡಿಸಿ, ಎಸ್ಪಿ ಹಾಗೂ ಹೆದ್ದಾರಿ ಅಧಿಕಾರಿಗಳು ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಆ ಬಗ್ಗೆ ನಾನು ಸರ್ಕಾರದೊಂದಿಗೆ ಚರ್ಚಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಜಿಲ್ಲಾ ಪಂಚಾಯ್ತಿಯಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತ ತಡೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚು ಸಂಭವಿಸಿ ಸಾವು ನೋವು ಹೆಚ್ಚಾಗುತ್ತಿದೆ. ಆದ್ದರಿಂದ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಅಪಘಾತ ತಡೆಗಟ್ಟುವ ಬಗ್ಗೆ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಶಿರಾಡಿಘಾಟ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆ ಅಗಲೀಕರಣಕ್ಕೆ ಬಹಳ ಸಮಯ ಹಿಡಿಯುವುದರಿಂದ ಇರುವ ಜಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಬೇಕಾಗುವಷ್ಟು ಅರಣ್ಯ ಭೂಮಿ ಬಗ್ಗೆ ಮಾಹಿತಿ ವರದಿ ಸಿದ್ದ ಪಡಿಸಿ ನೀಡಿದರೆ ಆ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಭೆಯನ್ನು ನಡೆಸಿ ಅಪಘಾತ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ದ ಪಡಿಸಿ ಸರ್ಕಾರಕ್ಕೆ ನೀಡಿದರೆ ಆದನ್ನು ನಾನು ಸರ್ಕಾರದೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಈ ರಸ್ತೆಯಲ್ಲಿ 101 ಮಂದಿ ಸಾವನ್ನಪ್ಪಿದ್ದಾರೆ. 400 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬರಗೂರು, ಹಿರಿಸಾವೆ, ಶಾಂತಿಗ್ರಾಮದ ಸಮೀಪ ಅಪಘಾತಗಳು ಹೆಚ್ಚಾಗಿ ಆಗುತ್ತಿವೆ. ಬರಗೂರು ಬಳಿ ರಸ್ತೆ ಬದಿಯಲ್ಲಿ ಕಲ್ಲು ಹಾಗೂ ಬ್ಯಾರಿಕ್ಯಾಡ್ ಹಾಕಬೇಕಿದೆ. ಶೆಟ್ಟಿಹಳ್ಳಿ ಜಂಕ್ಷನ್ ಬಳಿ ಅಂಡರ್ಪಾಸ್ ನಿರ್ಮಾಣ ಆಗಬೇಕಿದೆ. ಜೊತೆಗೆ ಅಪಘಾತ ವಲಯದಲ್ಲಿ ಮಾಹಿತಿ, ಸೂಚನ ಫಲಕಗಳನ್ನು ಹಾಕಬೇಕಿದೆ ಎಂದು ಸಲಹೆ ನೀಡಿದರು.
ಮಾಹಿತಿ ಬೋರ್ಡ್ಗಳಲ್ಲಿ ಅಪಘಾತಕ್ಕೆ ಈಡಾದವರ ಅನುಕೂಲಕ್ಕೆ ಮಾಹಿತಿಯನ್ನು ದೊಡ್ಡದಾಗಿ ಹಾಕಬೇಕು. ವೇಗದ ಜೊತೆಗೆ ಸೇಫ್ಟಿಯನ್ನು ಸಹ ರಾಷ್ಟ್ರೀಯ ಹೆದ್ದಾರಿ ಮಾಡಬೇಕಾಗಿದೆ ಎಂದು ಹೇಳಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಅಪಘಾತ ಹೆಚ್ಚಾಗುತ್ತಿರುವುದರಿಂದ ಹಿರೀಸಾವೆ, ಬರಗೂರು, ಶಾಂತಿಗ್ರಾಮದ ಬಳಿ ಮೇಲ್ಸೆತುವೆಗಳು ಆಗಬೇಕಿದೆ. ಜೊತೆಗೆ ರಾಜ್ಯ ಹೆದ್ದಾರಿಗಳು ಹಾದು ಹೋಗಿರುವ ಕಡೆ ರಸ್ತೆ ಹುಬ್ಬುಗಳು ಆಗಬೇಕು. ನುಗ್ಗೇಹಳ್ಳಿ ಬಳಿಯು ಸಹ ಮೇಲ್ಸೆತುವ ಅವಶ್ಯಕತೆ ಇದೆ. ಬೆಳ್ಳೂರು ಕ್ರಾಸ್ನಲ್ಲಿ ನಿರ್ಮಿಸಿರುವಂತಹ ಮೇಲ್ಸೆತುವೆ ಮಾದರಿ ಆಗಬೇಕಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಶುಲ್ಕ ವಸೂಲಿ ಮಾಡುವುದು ಉತ್ತಮ ಸೇವೆ ನೀಡುವುದಕ್ಕೆ. ವಾಹನಗಳು ಅತೀ ಹೆಚ್ಚು ವೇಗವಾಗಿ ಚಲಾಯಿಸುವಂತೆ ಮಾಡುವುದರ ಜೊತೆಗೆ ಪ್ರಯಾಣಿಕರ ಸೇಫ್ಟಿಗೂ ಕೂಡ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಸುರೇಂದ್ರ ಕುಮಾರ್ ಮಾತನಾಡಿ, ಜ.11ರಿಂದ 17ರವೆರೆ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಜನರಿಗೆ ಉತ್ತಮ ಸೇವೆ ನೀಡುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಪಟೇಲ್ ಶಿವರಾಂ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕ ರಾಮಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

