ಒಂದು ನೀತಿಯಡಿ ಪ್ರಾದೇಶಿಕ ಪಕ್ಷಗಳ ಸಮ್ಮಿಲನ: ದೇವೇಗೌಡ
ಕ.ಪ್ರ.ವಾರ್ತೆ , ಹಾಸನ , ಜ.9
ಭ್ರಷ್ಟಾಚಾರ, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ಹೋರಾಟ ಮಾಡಲು ದೇಶದ ಪ್ರಾದೇಶಿಕ ಪಕ್ಷಗಳು ಒಂದು ನೀತಿಯಡಿ ಬರುವ ಲೋಕಸಭೆ ಚುನಾವಣೆ ಎದುರಿಸುವ ಸನ್ನಿವೇಶ ಕೂಡಿ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ಕಾಂಗ್ರೆಸ್ ಬಗ್ಗೆ ದೇಶದ ಜನರಲ್ಲಿ ಎಂಥ ಅಭಿಪ್ರಾಯ ಇದೆ ಎಂಬುದು ಇತ್ತೀಚೆಗೆ 5 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಸಾಬೀತಾಗಿದೆ. ಇದೇ ಕಾಲಕ್ಕೆ ದೇಶದ ಅನೇಕ ಸಮಸ್ಯೆಗಳಿಗೆ ಬಿಜೆಪಿಯೂ ಪ್ರಮುಖ ಕಾರಣವಾಗಿದೆ.
ಹಾಗಾಗಿ ಜನತೆ ಮೋದಿಯನ್ನಾಗಲಿ, ಮತ್ತೊಬ್ಬರನ್ನಾಗಿ ಸ್ವೀಕರಿಸಲು ಸಿದ್ದರಿಲ್ಲ. ಈ ಹಿನ್ನೆಲೆಯಲ್ಲಿ ತೃತೀಯ ರಂಗದಡಿ ಅನ್ನುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್, ಬಿಜೆಪಿ ವಿರುದ್ಧ ಸೆಣಸಲು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದು ನೀತಿ, ನಿಯಮದಡಿ ಲೋಕಸಭೆ ಚುನಾವಣೆ ಎದುರಿಸಲು ವಾತಾವರಣ ನಿರ್ಮಾಣವಾಗಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಗೌಡರು ವಿಶ್ಲೇಷಿಸಿದರು.
ಒಬ್ಬ ಕ್ರೇಜಿವಾಲ....: 15 ವರ್ಷಗಳವರೆಗೆ ದೇಶದ ರಾಜಧಾನಿ ದೆಹಲಿ ಆಳಿದ ಕಾಂಗ್ರೆಸ್ ಅನ್ನು ಒಬ್ಬ ಯುವಕ ಕ್ರೇಜಿವಾಲ ಹೊಡೆದು ಹಾಕಿದ. ಪ್ರಾದೇಶಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸಲು ಎರಡು ರಾಷ್ಟ್ರೀಯ ಪಕ್ಷಗಳು ಬೇಕು ಎಂದು ಹೇಳುವ ಕಾಲ ಮುಗಿದಿದೆ. ಆಂಧ್ರದ ವಿಚಾರದಲ್ಲಿ ಕಾಂಗ್ರೆಸ್ ವಿಫಲವಾಯಿತು. ವಿದೇಶ ನೀತಿಯಲ್ಲೂ ಯಶಸ್ಸಿಯಾಗಿಲ್ಲ.
ತಮಿಳುನಾಡು, ಪಶ್ಚಿಮಬಂಗಾಲ, ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರ, ಬಿಹಾರ ಮತ್ತಿತರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಾಢ್ಯವಾಗಿವೆ. ಗಡಿ ಮತ್ತು ನೀರಿನ ಹಂಚಿಕೆ ವಿಚಾರಗಳಲ್ಲಿ ಪ್ರಾದೇಶಿಕ ಪಕ್ಷಗಳ ಚಿಂತನೆ ಬೇರೆ ಇರಬಹುದು. ಆದರೂ ಅವೆಲ್ಲಾ ಪಕ್ಷಗಳು ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಹೋರಾಟ ನಡೆಸಲಿವೆ ಎಂದು ತಿಳಿಸಿದರು.
ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ: ಮೋದಿನೂ ಅಧಿಕಾರಕ್ಕೆ ಬರಲ್ಲ. ಮತ್ತೊಬ್ಬರು ಅಧಿಕಾರಕ್ಕೆ ಬರಲ್ಲ ಎಂಬುದು ನಿರ್ವಿವಾದ. ದೇಶದ 130 ಕೋಟಿ ಜನರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಚುನಾವಣೆಯಲ್ಲಿ ಸೂಕ್ತ ರೀತಿಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಜನರ ತೆರಿಗೆ ಹಣದಲ್ಲಿ ಜನಪ್ರತಿನಿಧಿಗಳು ವಿದೇಶಕ್ಕೆ ಹೋಗಿ ಮೋಜು ಮಾಡಿ ಬರುವುದು ಸರಿಯಲ್ಲ. ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ಮಾಡಿ ಬರಬೇಕು ಎಂದು ಗೌಡರು ಹೇಳಿದರು.
ಬಿಜೆಪಿಯಿಂದ ಆರಂಭವಾದ ವಿಧಾನಸೌಧ ಒಡೆಯುವ ಕೆಲಸ ಕಾಂಗ್ರೆಸ್ ಆಡಳಿತದಲ್ಲಿ ಮುಗಿಯಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಆಳಲಿಕ್ಕೆ ಆಗದು ಎಂಬುದನ್ನು ತಿಳಿಯಬೇಕು. ದಿನಕ್ಕೊಂದು ಜಾತಿ ಆಧಾರಿತ ಸಮಾವೇಶ ಯಾವ ಸಮಾಜದ ಉದ್ಧಾರಕ್ಕೆ ಎಂಬುದು ತಿಳಿಯುತ್ತಿಲ್ಲ. ಬಡತನ, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಂಥ ಬೃಹತ್ ಸಮಸ್ಯೆಗಳನ್ನು ತೊಡೆದು ಹಾಕುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ ಎಂದು ಗೌಡರು ವಿಷಾದಿಸಿದರು. ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

