ಹಾಸನ

ಇಂದಿನಿಂದಲೇ ಕಾಡಾನೆಗಳ ವಿರುದ್ಧ ಕಾರ್ಯಾಚರಣೆ

Published On :

ಕ.ಪ್ರ.ವಾರ್ತೆ , ಆಲೂರು , ಜ.10
ತಾಲೂಕಿನ ಕೆ. ಹೊಸಕೋಟೆ ಕುಂದೂರು ಪಾಳ್ಯ ಹೋಬಳಿಯಲ್ಲಿ ಸೇರಿದಂತೆ  ಸಕಲೇಶಪುರ ತಾಲೂಕಿನ ನಾನಾ ಕಡೆಗಳಲ್ಲಿ ಹಾವಳಿ ನಡೆಸಿ ಬೆಳೆ ಹಾನಿ ಹಾಗೂ  ಪ್ರಾಣ ಹಾನಿ ಮಾಡುತ್ತಿರುವ ಕಾಡಾನೆಗಳನ್ನು  ಹಿಡಿಯುವ ಕಾರ್ಯಾಚರಣೆಯನ್ನು ಶನಿವಾರದಿಂದಲೇ  ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಅವರು ತಾಲೂಕಿನ ಪುರಭೈರವನಹಳ್ಳಿ ಗ್ರಾಮದಲ್ಲಿ ಗುರುವಾರ  ಕಾಡಾನೆ ದಾಳಿಯಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದ  ಪರಿಣಾಮ ಶುಕ್ರವಾರ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ  ಗ್ರಾಮಕ್ಕೆ ತೆರಳಿ ಸುತ್ತಮುತ್ತಲ 30ಕ್ಕೂ  ಹೆಚ್ಚು ಗ್ರಾಮಗಳ ಜನರೊಂದಿಗೆ ಸಮಾಲೋಚನಾ  ಸಭೆ ನಡೆಸಿ ಮಾತನಾಡಿದರು.
ಕಾಡಾನೆ ಹಾವಳಿಯಿಂದಾಗಿ ಈ ಭಾಗದ ಜನ ಅನುಭವಿಸುತ್ತಿರುವ ಸಂಕಷ್ಟಗಳ ಮಾಹಿತಿ ತಮಗಿದ್ದು ಇವುಗಳ  ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ನಂತರ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಅವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಭಾಗಶಃ ಎಲ್ಲಾ ಸಮಸ್ಯೆಗಳಿಗೂ ಸ್ಥಳದಲ್ಲೇ ಪರಿಹಾರ ನೀಡಿ ಜನರ ಮೆಚ್ಚುಗೆಗೆ ಪಾತ್ರರಾದರು.
ಸಮಸ್ಯೆಗಳ ಮಹಾಪೂರ: ಗ್ರಾಮಸ್ಥರು ಸರ್ಕಾರ ನೀಡುತ್ತಿರುವ ಪರಿಹಾರ ಅವೈಜ್ಞಾನಿಕವಾಗಿರುವುದಲ್ಲದೇ, ಕಳೆದ 2 ವರ್ಷಗಳಿಂದ ಪರಿಹಾರ ನೀಡಿಲ್ಲ. ಶೌಚಾಲಯಗಳು ಇಲ್ಲದ ಕಾರಣ ಬೆಳಗ್ಗೆ  ಹಾಗೂ ಸಂಜೆ ಕತ್ತಲಲ್ಲಿ ಬಹಿರ್ದೆಸೆಗೆ ಹೋಗುವಾಗಲೇ ಐವರು ಆನೆ ದಾಳಿಗಿಡಾಗಿ ಸಾವನ್ನಪ್ಪಿದ್ದಾರೆ.   ಶೌಚಾಲಯಕ್ಕೆ ಅರ್ಜಿ ಹಾಕಿ 2-3 ವರ್ಷಗಳಾದರೂ ಮಂಜೂರು ಮಾಡುವುದಿಲ್ಲ. ಬಸ್ಸುಗಳ ಸೌಕರ್ಯವಿಲ್ಲ. ರಸ್ತೆಗಳು ಹದಗೆಟ್ಟಿವೆ. ವಿದ್ಯುತ್ ಕಂಬಗಳು ಬೆಂಡಾಗಿದ್ದು, ತಂತಿಗಳು ಕೈಗೆಟಕುವಂತಿವೆ. ಮರಳು ದಂಧೆ ನಡೆಸುವವರು ಬಳಸುವ ಯಂತ್ರಗಳ ಸದ್ದಿಗೆ ಆನೆಗಳು ಗ್ರಾಮದೆಡೆಗೆ ಮುಖಮಾಡಿವೆ. ಇದರಿಂದ, ನಾವು ಭಯದಿಂದ ಜೀವನ ನಡೆಸುವಂತಾಗಿದೆ. ಪಡಿತರವನ್ನು ತಿಂಗಳಲ್ಲಿ ಒಂದೇ ದಿನ ನೀಡುತ್ತಿದ್ದು, ಹೆಚ್ಚು ದಿನ ನೀಡಬೇಕು. ಸೋಲಾರ್ ಬೇಲಿಗೆ ಸಬ್ಸಿಡಿ ನೀಡಬೇಕು. ಗನ್ ಪರವಾನಿಗೆ ನೀಡಬೇಕು. ಕೆಲವರು ರಸ್ತೆಗಳನ್ನೇ ಅಕ್ರಮಿಸಿಕೊಂಡಿದ್ದು ಅವುಗಳನ್ನು ಬಿಡಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಹೇಳಿದರು.
ಎಚ್ಚರಿಕೆ: ಕೊಡಗನ್ನು ಸಂರ್ಪರ್ಕಿಸುವ ಸೇತುವೆ ಹಲವು ವರ್ಷಗಳಿಂದ ಅಪೂರ್ಣವಾಗಿದೆ ಶೀಘ್ರ ಪೂರ್ಣಗೊಳಿಸಬೇಕು. ವೃದ್ಧಾಪ್ಯವೇತನ, ಅಂಗವಿಕಲ ವೇತನ ನೀಡಬೇಕು. ಜಮೀನಿನ ಕಿಮ್ಮತ್ತು, ಮಾಲಕಿ, ಸಾಗುವಳಿ ಚೀಟಿ ನೀಡಬೇಕು. ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು ಹಲವು ವರ್ಷಗಳಿಂದಲ್ಲೂ ದುರಸ್ತಿಯಾಗದೇ ಉಳಿದಿದ್ದ ಪುರಬೈರವನಹಳ್ಳಿ ಗ್ರಾಮದ ಸರ್ವೇ ನಂ. 1 ಅಂಜಳಿಗೆ ಗ್ರಾಮದ ಸರ್ವೇ ನಂ. 29, ಮಾಡಿಹಳ್ಳಿ ಗ್ರಾಮದ ಸರ್ವೆ ನಂ. 1, ಕಟ್ಟೆಹೊಸೂರು ಗ್ರಾಮದ ಸರ್ವೇ ನಂ. 59ರ ಇಡುವಳಿದಾರರ ಜಮೀನು ದುರಸ್ತಿ   ಮಾಡಬೇಕು. ಯಾವುದೇ ಕಾರಣಕ್ಕೂ  ಈ ಬಾರಿ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಂತರಿಸಿದ  ಹೊರತು ಕ್ಯಾಂಪ್ ತೆರವುಗೊಳಿಸಬಾರದು. ಆ ರೀತಿ ಏನಾದರೂ ಆದರೆ, ನಾವೆಲ್ಲರೂ ಸಾಮೂಹಿಕವಾಗಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಡಿಸಿ ಭರವಸೆ: ಗ್ರಾಮಸ್ಥರ ಎಲ್ಲಾ ಬೇಡಿಕೆಗಳನ್ನು ಸಾವಕಾಶದಿಂದ ಆಲಿಸಿದ ಜಿಲ್ಲಾಧಿಕಾರಿ, ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಅದೇಶ ನೀಡಿ ತಕ್ಷಣವೇ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಕೆ. ಚಂದ್ರೇಗೌಡ, ಜಿಲ್ಲಾ  ಕಾಫಿ ಬೆಳೆಗಾರರ ಸಂಘದ ಸಂಘಟಕ ಕೆ.ವಿ. ಚಂದ್ರಶೇಖರ್, ಹೆಮ್ಮಿಗೆ ಮೋಹನ್, ಜಿ.ಆರ್. ರಂಗನಾಥ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಣಗಾಲು ಮೂರ್ತಿ ಮತ್ತಿತರು ಇದ್ದರು.
ನಂತರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆನೆ ಹಾವಳಿ ಪೀಡಿತ ಪ್ರದೇಶಗಳ ಜನರ ಬೇಡಿಕೆಗಳನ್ನು ನಾನು ಇಂದು ಪುರಬೂರತವನಹಳ್ಳಿ ಗ್ರಾಮದಲ್ಲಿ ಆಲಿಸಿದ್ದು ಬೆಳೆ ಪರಿಹಾರ ರು. 46 ಲಕ್ಷ ಬಾಕಿ ಇದ್ದು ಶೀಘ್ರ ರಾಜ್ಯ ಸರ್ಕಾರದ ಗಮನ ಸೆಳೆದು ಪರಿಹಾರ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಇಲಾಖೆ ಅಧಿಕಾರಿಗಳ ಭರವಸೆ: ಈ ಭಾಗದ ಎಲ್ಲಾ ಗ್ರಾಮದ ಪ್ರತಿ ಮನೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಲು ತಾಲ್ಲೂಕು ಪಂಚಾಯ್ತಿ ಇ.ಒ ಅವರಿಗೆ ಆದೇಶಿಸಿದ್ದು ಆಂದೋಲನದ ರೀತಿ ಕ್ರಮಕೈಗೊಳ್ಳಬೇಕು. ಅರಣ್ಯ ಇಲಾಖೆಯವರು ಈ ಭಾಗದ ಹಲವಾರು ಪ್ರದೇಶಗಳಲ್ಲಿ ಕ್ಯಾಂಪ್‌ಗಳನ್ನು ನಿರ್ಮಿಸಿಕೊಂಡು ಆನೆಗಳು ಗ್ರಾಮಗಳಿಗೆ  ಬಾರದಂತೆ ಕಾಡಿಗಟ್ಟಲು ಹಾಗೂ ಆನೆಗಳ ಇರುವಿಕೆಯ ಬಗ್ಗೆ ಗ್ರಾಮಸ್ಥರಿಗೆ ಮೈಕ್‌ಗಳ ಮೂಲಕ  ಮುಂಜಾಗ್ರತೆ ವಹಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ವಲಯ ಅರಣ್ಯಾಧಿಕಾರಿಗಳಿಗೆ ಆದೇಶಿಸಲಾಗಿದೆ. ಈಗಾಗಲೇ ಎಲ್ಲಾ ಆನೆಗಳನ್ನು ಹಿಡಿಯಲು ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕ್ರಮ: ಶನಿವಾರವೇ 10 ಸಾಕಾನೆಗಳನ್ನು  ಇಲ್ಲಿಗೆ ಕರೆತರಲಾಗುತ್ತಿದೆ, ಕ್ಯಾಂಪ್ ನಿರ್ಮಾಣವಾದ ನಂತರ ಶೀಘ್ರ ಆನೆ ಹಿಡಿಯುವ ಕಾರ್ಯ ಪ್ರಾರಂಭಿಸಲಾಗುವುದು. ಬಂದೂಕು ಪರವಾನಗಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಹಾಗೂ ಈ ಭಾಗದ ಎಲ್ಲಾ  ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಆಲೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂತೆ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ದೊರೆತಿದ್ದು,  ಶೀಘ್ರ ಪಟ್ಟಣದಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.