ಕುಡಿಯುವ ನೀರಿನ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಮನವಿ
ಚನ್ನರಾಯಪಟ್ಟಣ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ತಾಲೂಕಿನ ಮಟ್ಟನವಿಲೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಸಕ ಬಾಲಕೃಷ್ಣ ಅವರಲ್ಲಿ ಮನವಿ ಮಾಡಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮಟ್ಟನವಿಲೆಗೆ ಆಗಮಿಸಿದ ಸಂದರ್ಭದಲ್ಲಿ ಪ್ರೌಢಶಾಲೆ ವಿದ್ಯಾರ್ಥಿ ಮುಖಂಡರುತಮಗೆ ಶಾಶ್ವತ ಕುಡಿಯುವ ನೀರು ನೀಡುವ ಯೋಜನೆಯನ್ನು ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿದರು.
ಶಾಲಾ ಆವರಣದಲ್ಲಿದ್ದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದ್ದು, ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅರ್ಧ ಕಿ.ಮೀ ನಿಂದ ನೀರು ತರಬೇಕಿದ್ದು, ಊಟದ ನಂತರ ಕೈ ಹಾಗೂ ತಟ್ಟೆಗಳನ್ನು ತೊಳೆಯಲು ಸಮಸ್ಯೆಯಾಗಿದ್ದು, ಗ್ರಾಮದ ಮಧ್ಯಭಾಗದಲ್ಲಿರುವ ಬೋರ್ವೆಲ್ ಬಳಿಗೆ ಬರಬೇಕಾಗಿದೆ.
ವಿದ್ಯಾರ್ಥಿಗಳ ಮನವಿಗೆ ಶಾಸಕರು ಸದ್ಯದಲ್ಲಿಯೇ ಶಾಲಾ ಅಕ್ಕಪಕ್ಕದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಶಾಶ್ವತ ಯೋಜನೆಯನ್ನು ಕಲ್ಪಿಸಲಾಗುವುದು.
ಅಲ್ಲಿಯವರಗೆ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ದಿನ ಒಂದು ಟ್ಯಾಂಕರ್ ನೀರನ್ನು ಶಾಲೆಗೆ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಕವನ ಗಾಯನ ಸ್ಪರ್ಧೆ
ಹಾಸನ: ತಾಲೂಕಿನ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಡಾ.ಜಿ.ಎಸ್.ಎಸ್ ನೆನಪು ಅಂಗವಾಗಿ ಬಿಜಿವಿಎಸ್ ಕಚೇರಿಯಲ್ಲಿ ಜ.11ರಂದು ಜಿ.ಎಸ್.ಎಸ್. ಕವನಗಳ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಬಿಜಿವಿಎಸ್ ಕಾರ್ಯದರ್ಶಿ ಎಚ್.ಎ. ಅಹಮ್ಮದ್ ಉದ್ಘಾಟಿಸುವರು. ತಾಲೂಕು ಘಟಕದ ಅಧ್ಯಕ್ಷೆ ಮಮತ ಶಿವು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಗೀತ ಶಿಕ್ಷಕಿಯರಾದ ಸುಧಾ ನಟರಾಜ್, ಸವಿತ, ಸಾಹಿತಿ ಎನ್.ಎಲ್. ಚನ್ನೇಗೌಡ, ಬಿಜಿವಿಎಸ್ ಖಜಾಂಚಿ ಬಿ.ಜಿ. ಗೋಪಾಲಕೃಷ್ಣ ಭಾಗವಹಿಸುವರು. ಬಿಜಿವಿಎಸ್ ಸಹ ಕಾರ್ಯದರ್ಶಿ ವೇದಶ್ರೀ ರಾಜ್ ಭಾಗವಹಿಸುವರು.
ಎಂಪಿಎಂಸಿ ಅಧ್ಯಕ್ಷರಾಗಿ ವೇಣುಗೋಪಾಲ್ ಆಯ್ಕೆ
ಹಾಸನ: ಸದಸ್ಯರು ಮತ್ತು ವರ್ತಕರು ಜತೆ ಚರ್ಚಿಸಿ, ಕೃಷಿ ಮಾರುಕಟ್ಟೆ ಸಮಿತಿಯ ಪ್ರಾಂಗಣಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ನೂತನ ಅಧ್ಯಕ್ಷ ಹೆರಗು ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಶುಕ್ರವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಕೃಷಿ ಮಾರುಕಟ್ಟೆ ಪ್ರಾಂಗಣಕ್ಕೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಹಾಗೂ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಪಿಎಂಸಿಯಲ್ಲಿ ಹೆಚ್ಚಿನ ಆದಾಯ ಕ್ರೋಢೀಕರಣ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಲಾಗುವುದು ಎಂದು ಹೇಳಿದರು. ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷನಾಗಿ ಮಾಡಿದ ಜೆಡಿಎಸ್ ಪರಮೋಚ್ಛ ನಾಯಕ ಎಚ್.ಡಿ. ದೇವೇಗೌಡ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕರಾದ ಎಚ್.ಎಸ್.ಪ್ರಕಾಶ್, ಪಟೇಲ್ ಶಿವರಾಂ ಹಾಗೂ ತಾಲೂಕಿನ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಯುವ ಜೆಡಿಎಸ್ ಕಾರ್ಯದರ್ಶಿ ಹೊಂಗೆರೆ ರಘು, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಮಂಜುನಾಥ್, ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣಗೌಡ, ಎಪಿಎಂಸಿ ಸದಸ್ಯರು, ಜೆಡಿಎಸ್ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಇದ್ದು, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
11ರಂದು ಸಾಂಸ್ಕೃತಿಕ ಸಂವಹನ ಚಟುವಟಿಕೆ
ಹಾಸನ: ಹಾಸನ ನಗರದ ಉತ್ತರ ಬಡಾವಣೆ ಬಿಜಿವಿಎಸ್ ಘಟಕವು ಉತ್ತರ ಬಡಾವಣೆಯಲ್ಲಿರುವ ಎಸ್.ಜಿ.ಆರ್. ಶಾಲಾ ಆವರಣದಲ್ಲಿ ಜ.11ರಂದು ಸಾಂಸ್ಕತಿಕ-ಸಂವಹನ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ಅತಿಥಿ ಗಣ್ಯರಿಲ್ಲ. ನಾವು- ನಾವೇ ನಮ್ಮಗಳ ಅನಿಸಿಕೆಗಳಿಗೆ ಸಾಂಸ್ಕತಿಕ ರೂಪದಲ್ಲಿ ಅಭಿವ್ಯಕ್ತಿಗೊಳಿಸಿ ಚರ್ಚಿಸಿ ಮುನ್ನಡೆಯುವ, ಹಾಗೂ ಜನರೊಳಗಿನ ಭಾವನೆಯನ್ನು ಸಾಂಸ್ಕೃತಿಕ ಪ್ರಾಕಾರದಲ್ಲಿ ಹೊರಹೊಮ್ಮಿಸುವ ಚರ್ಚಾ ಚಟುವಟಿಕೆ ಇದಾಗಿದೆ ಎಂದು ಬಿಜಿವಿಎಸ್ ಸಂಚಾಲಕಿ ರೇಖಾ ತಿಳಿಸಿದ್ದಾರೆ. 4ನೇ ಸಾಂಸ್ಕಂತಿಕ- ಸಂವಹನದ ಚಟುವಟಿಕೆಯನ್ನು ಸಂಜೆ 6ರಿಂದ 7ರವರೆಗೆ ಆಯೋಜಿಸಲಾಗಿದೆ. ಹಾಸನ ನಗರದ ಜನತೆಗೆ ಮುಕ್ತವಾಗಿ ಸ್ವಾಗತಿಸಲಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಗಿರೀಶ್ ಕಾರ್ಯದರ್ಶಿ- 9900735212 ಹಾಗೂ ರೇಕ ಸಂಚಾಲಕಿ-9008417994 ಸಂಪರ್ಕಿಸಬಹುದು.
ಅಪಘಾತ: ಅಪರಿಚಿತ ವ್ಯಕ್ತಿ ಸಾವು
ಕ.ಪ್ರ.ವಾರ್ತೆ , ಹಾಸನ , ಜ.10
ಅಪರಿಚಿತ ವ್ಯಕ್ತಿಯೊಬ್ಬ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ನಗರದ ಹೊಳೆನರಸೀಪುರ ರಸ್ತೆಯಲ್ಲಿ ಇತ್ತೀಚೆಗೆ ನಡೆದಿದೆ.
ಅಪರಿಚಿತ ವ್ಯಕ್ತಿ ರಸ್ತೆಯ ಬದಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಅವರು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಯ ಶವವನ್ನು ಹಾಸನದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. 30ರಿಂದ 35 ವರ್ಷ ವಯಸ್ಸಾಗಿದ್ದು, 170 ಸೆಂ.ಮೀ. ಎತ್ತರ, ಫ್ರೆಂಚ್ ಮೀಸೆ, ಗಡ್ಡ ಬಿಟ್ಟಿದ್ದಾರೆ ಗೋಧಿ ಮೈಬಣ್ಣ, ಬಿಳಿ, ತೆಳು ನೀಲಿ ಗೆರೆಗಳಿರುವ ತುಂಬು ತೋಳಿನ ರೆಡಿಮೇಡ್ ಶರ್ಟು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಹಸಿರು ಬಣ್ಣದ ಕಾಚ, ಕೆಂಪು ಉಡಿದಾರ, ಮಾಸಲು ಬಣ್ಣದ ಎಲೆಸ್ಟಿಕ್ ಬೆಲ್ಟ್ ಧರಿಸಿದ್ದಾರೆ. ಎಡ ತೋಳಿನ ಮೇಲೆ ಅನುಪಮ ಎಂಬ ಅಚ್ಚೆ ಗುರುತಿದ್ದು, ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಸಂಬಂಧಪಟ್ಟವರು ಗೊರೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ದೂರವಾಣಿ ಸಂಖ್ಯೆ. 08172-268845 ಮತ್ತು 08172-33980, 9480804737, 08172-2224575, ಮೊ. 9480804750 ಸಂಪರ್ಕಿಸಬಹುದು.
ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ
ಬೇಲೂರು: ತಾಲೂಕಿನ ಅರೇಹಳ್ಳಿ ಮಲ್ನಾಡ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸಿರುಗುರ ಗ್ರಾಮದ ಭೂಮಿಕ (14) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಅರೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಗಣೇಶ್, ಪಿಎಸ್ಐ ಆರೋಗ್ಯಪ್ಪ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲಾ ದಾಖಲಾತಿಗೆ ಫೆ. 8 ಕಡೇ ದಿನ
ಹಾಸನ: ಶಿಕ್ಷಣ ಹಕ್ಕು ಅಧಿನಿಯಮ ಕಾಯ್ದೆ ಜಾರಿಯಲ್ಲಿರುವುದರಿಂದ ಈ ಸಂಬಂಧ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗ, ಪ.ಜಾತಿ ಮತ್ತು ಪ.ಪಂಗಡ ಹಾಗೂ ಪ್ರ ವರ್ಗದ ಮಕ್ಕಳಿಗೆ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ನಿಗದಿಪಡಿಸಲಾಗಿದೆ. 2014-15ನೇ ಸಾಲಿಗೆ ಮಕ್ಕಳ ದಾಖಲಾತಿಗೆ ನಿಗಧಿಪಡಿಸಿರುವ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಈ ಸಂಬಂಧ ಹಾಸನ ತಾಲೂಕಿನ ಎಲ್ಲಾ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಾರ್ವಜನಿಕರು ಅರ್ಜಿಗಳನ್ನು ಶಾಲೆಗಳಿಗೆ ನೀಡಬಹುದು. ಅರ್ಜಿಗಳನ್ನು ಸಲ್ಲಿಸಲು ಫೆ. 8 ಕಡೇ ದಿನ. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಸನ (ದೂ.08172 267174 ) ಇಲ್ಲಿ ಸಂಪರ್ಕಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಕ್ರಿಕೆಟ್ ಕಪ್
ಹಾಸನ: ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಆಡಳಿತದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಪತ್ರಿಕಾ ಮಾಧ್ಯಮ ಮತ್ತು ನ್ಯಾಯಾಂಗ ಇಲಾಖೆಯೊಡನೆ ಸಮನ್ವಯ ಸಾಧಿಸುವ ಉದ್ದೇಶದಿಂದ ಗಣರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಜ.11 ಮತ್ತು 12ರಂದು ನಗರದ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ. ಸೆಮಿಫೈನಲ್ ಪಂದ್ಯವನ್ನು ಜ.19ರಂದು ಮತ್ತು ಫೈನಲ್ ಪಂದ್ಯವನ್ನು ಜ. 26ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎನ್. ಗೋಪಾಲ ಕೃಷ್ಣ ತಿಳಿಸಿದ್ದಾರೆ. ಈ ಸಂಬಂಧ ಒಟ್ಟು 12 ತಂಡಗಳನ್ನು ರಚಿಸಲಾಗಿದ್ದು, ಕಂದಾಯ ಇಲಾಖೆ,, ಚುನಾಯಿತ ಪ್ರತಿನಿಧಿಗಳು, ಅರೆ ಸರ್ಕಾರಿ ಇಲಾಖೆಗಳು, ಗ್ರೂಪ್ ಎ ತಂಡದಲ್ಲಿ ಇರುತ್ತವೆ. ಗ್ರೂಪ್ ಬಿ ತಂಡದಲ್ಲಿ ಜಿಲ್ಲಾ ಪತ್ರಕರ್ತರು, ಹಾಸನ ಜಿಲ್ಲಾ ಪಂಚಾಯತ್, ರಾಜ್ಯ ಸರ್ಕಾರ (ಇತರೆ) ಸಿಬ್ಬಂದಿ ಇರುತ್ತಾರೆ.
26ರಂದು ಫೈನಲ್: ಈ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಾವಳಿಗಳು ಜ.11 ಹಾಗೂ 12 ರಂದು ಹಾಸನ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದ್ದು, ಸೆಮಿಫೈನಲ್ ಪಂದ್ಯವನ್ನು ಜ.19 ರಂದು ಮತ್ತು ಫೈನಲ್ ಪಂದ್ಯವನ್ನು ಜ.26ರಂದು ಆಯೋಜಿಸಲಾಗಿದೆ. ಪಂದ್ಯಾವಳಿಗಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಾಗಿ ಪಂದ್ಯಾವಳಿ ಯಶಸ್ಸಿಗೆ ಸಹಕರಿಸುವಂತೆ ಅಪರ ಜಿಲ್ಲಾಧಿಕಾರಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

