ಕ್ಷುಲ್ಲಕ ಕಾರಣಕ್ಕೆ ಇಬ್ಬರು ಶಿಕ್ಷಕರಿಗೆ ಥಳಿತ
ಕ.ಪ್ರ.ವಾರ್ತೆ , ಚನ್ನರಾಯಪಟ್ಟಣ , ಜ.10
ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಡೆಯುವುದು, ಅದು ವಿಕೋಪಕ್ಕೆ ಹೋಗುವುದನ್ನು ನಾವು ಆಗಾಗ ಕೇಳಿರುತ್ತೇವೆ. ಆದರೆ, ಇಲ್ಲೊಂದು ವಿಶೇಷ ಘಟನೆ ನಡೆದಿದೆ. 10ನೇ ತರಗತಿಯ ಹುಡುಗನೊಬ್ಬ, ಪುಂಡರ ಪಡೆಯೊಂದಿಗೆ ಸೇರಿಕೊಂಡು ತನ್ನ ಶಿಕ್ಷಕರನ್ನೇ ಹೊಡೆದಿರುವ ಘಟನೆ ನಡೆದಿದೆ.
ಪಟ್ಟಣದ ಪೇಟೆ ಪ್ರೌಢಶಾಲಾ ಆವರಣದಲ್ಲಿ ನಡೆದಿರುವ ಈ ಘಟನೆಯಲ್ಲಿ, ವಿದ್ಯಾರ್ಥಿ ಹಾಗೂ ಆತನ ಪೋಷಕರೊಂದಿಗೆ ಬಂದ ಪುಂಡರ ಗುಂಪು ಶಿಕ್ಷಕರಿಗೆ ಹಿಗ್ಗಾ ಮುಗ್ಗಾ ಥಳಿಸಿದೆ.
ವಿದ್ಯಾರ್ಥಿಯ ತಪ್ಪನ್ನು ಮುಖ್ಯ ಶಿಕ್ಷಕರಿಗೆ ತಿಳಿಸುವವರೆಗೆ ಶಾಲಾ ಕೊಠಡಿಯೊಳಗೆ ಕುಳಿತುಕೊಳ್ಳುವಂತೆ ಶಾಲೆಯ ಡಿ. ಗ್ರೂಪ್ ನೌಕರ ಹೇಳಿದ ಮಾತನ್ನು ಸಹಿಸದ ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಕರೆಸಿ ಎಲ್ಲರೂ ಒಟ್ಟಾಗಿ ಸೇರಿ ಡಿ. ಗ್ರೂಪ್ ನೌಕರ ಹಾಗೂ ಮೂವರು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಏನಿದು ಘಟನೆ: 10ನೇ ತರಗತಿ ವಿದ್ಯಾರ್ಥಿ ಅರವಿಂದ್ನನ್ನ ಸಹಪಾಠಿಗಳೊಂದಿಗೆ ಶಾಲಾ ಆವರಣದಲ್ಲಿದ್ದ ಶೌಚಾಲಯದ ನಲ್ಲಿ ಹಾಗೂ ನೀರು ಸರಬರಾಜಾಗುವ ಪೈಪ್ಗಳನ್ನು ಕಿತ್ತು ಹಾಕಿದ ವಿಚಾರ ಅತಿರೇಕಕ್ಕೇರಿ ಮೂವರು ಶಿಕ್ಷಕರು ವಿದ್ಯಾರ್ಥಿ ಹಾಗೂ ಅವರ ಪೋಷಕರಿಂದ ಗೂಸಾ ತಿಂದು ಆಸ್ಪತ್ರೆ ಸೇರಿದ್ದಾರೆ.
ಅರವಿಂದ್ ಮತ್ತು ಸ್ನೇಹಿತರು ಮಾಡಿದ ತಪ್ಪನ್ನು ರಾತ್ರಿ ಪಾಳೆಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಿ. ದರ್ಜೆ ನೌಕರ ಮಂಜುನಾಥ್ ಮುಖ್ಯ ಶಿಕ್ಷಕರಿಗೆ ತಿಳಿಸುವ ಸಲವಾಗಿ ಅರವಿಂದ್ ಮತ್ತು ಆತನ ಸ್ನೇಹಿತರನ್ನು ಶಾಲೆಯ ಕೊಠಡಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾನೆ.
ಡಿ. ಗ್ರೂಪ್ ನೌಕರ ಕೊಠಡಿಯಲ್ಲಿ ಕೂಡಿ ಹಾಕಿರುವ ವಿಷಯ ಅರವಿಂದ್ ತಂದೆ ತಿಮ್ಮೇಗೌಡ ಅವರಿಗೆ ತಿಳಿದಿದೆ. ತಕ್ಷಣವೇ ಆತ ಶಾಲಾ ಆವರಣಕ್ಕೆ 20ಕ್ಕೂ ಹೆಚ್ಚು ಪುಂಡರನ್ನು ಕರೆತಂದು ಯಾವ ವಿಚಾರಣೆಯನ್ನು ಮಾಡದೇ ಅಲ್ಲಿದ್ದ ಡಿ. ಗ್ರೂಪ್ ನೌಕರ ಮಂಜುನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಶಾಲಾ ಕೊಠಡಿಯಲ್ಲಿದ್ದ ಬೋಧಕ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಾರೆ.
10ನೇ ತರಗತಿಗೆ ವಿಶೇಷ ತರಗತಿ ತೆಗೆದುಕೊಳ್ಳಲು ಬಂದಿದ್ದ ಶಿಕ್ಷಕ ರವಿ, ದೈಹಿಕ ಶಿಕ್ಷಕ ಭೀಮೇಶ್ ಇದನ್ನು ತಡೆಯಲು ಬಂದ ಸಂದರ್ಭದಲ್ಲಿ ಅವರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೇ, ಹಲ್ಲೆ ತಡೆಯಲು ಆಗಮಿಸಿದ ಶಿಕ್ಷಕಿಯರನ್ನು ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿದ್ದ ವಿದ್ಯಾರ್ಥಿಗಳು, ಪುಂಡರಿಂದ ಶಿಕ್ಷಕಿಯರನ್ನು ರಕ್ಷಿಸಿ ಪೋಲಿಸರಿಗೆ ವಿಷಯ ಮುಟ್ಟಿಸಿದ್ದಾರೆ.
ದೈಹಿಕ ಶಿಕ್ಷಕ ಭೀಮೇಶ್ ಅವರ ಕಾರನ್ನು ತಿಮ್ಮೇಗೌಡ ಅವರ ಜತೆಯಲ್ಲಿ ಬಂದ ಗುಂಪು ಕಲ್ಲಿನಿಂದ ಗಾಜು ಒಡೆದು ಜಖಂಗೊಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಪಟ್ಟಣ ಪೊಲೀಸರು ಸ್ಥಳಕ್ಕೆ ಧಾವಿಸಿ, ತಿಮ್ಮೇಗೌಡನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದಂತೆ ವಿದ್ಯಾರ್ಥಿಗಳಾದ ಅರವಿಂದ್, ಅನಂತರಾಜು ಹಾಗೂ ಮನೋಜ್ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಶಾಸಕರ ಭೇಟಿ: ಶಾಲಾ ಆವರಣದಲ್ಲಿ ನಡೆದ ಘಟನೆಯನ್ನು ತಿಳಿಯಲು ಶಾಸಕ ಸಿ.ಎನ್. ಬಾಲಕೃಷ್ಣ ಸ್ಥಳಕ್ಕೆ ಬೇಟಿ ನೀಡಿ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಣ್ಯ ಕ್ರಮ ಜರುಗಿಸಬೇಕೆಂದು ಪೋಲಿಸರಿಗೆ ಸೂಚಿಸಿದರು.
ಮನವಿ: ವಿದ್ಯಾರ್ಥಿ, ಪೋಷಕರೊಂದಿಗೆ ಬಂದ ರೌಡಿಗಳು ನಡೆಸಿದ ಹಲ್ಲೆಯನ್ನು ಖಂಡಿಸಿ ಪಟ್ಟಣದ ಪೇಟೆ ಶಾಲೆಯ 1400 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತರಗತಿಯನ್ನು ಬಹಿಷ್ಕರಿಸಿ ಶಾಲಾ ಆವರಣದಲ್ಲಿ ಧರಣಿ ನಡೆಸಿದರು. ನಂತರ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಪೇಟೆ ಶಾಲಾ ಆವರಣದಿಂದ ತಪ್ಪಿತಸ್ಥರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದ ಸರ್ಕಾರಿ ನೌಕರರ ಸಂಘದ ಸದಸ್ಯರು ತಪ್ಪಿತಸ್ಥರನ್ನು ಬಂಧಿಸುವಂತೆ ಮನವಿ ಸಲ್ಲಿಸಿದರು.
ಶಿಕ್ಷಕರ ಸಂಘದ ವತಿಯಿಂದ ದಿಢೀರ್ ಪ್ರತಿಭಟನೆ
ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಅಮಾನುಷ್ಯವಾಗಿ ಹಲ್ಲೆ ಮಾಡಿದ್ದನ್ನು ಖಂಡಿಸಿ, ಶುಕ್ರವಾರ ತಾಲೂಕು ಕರ್ನಾಟಕ ನೌಕರರ ಸಂಘ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ದಿಢೀರ್ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಶಿಕ್ಷಕರು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಪೇಟೆ ಸರ್ಕಾರಿ ಪ್ರೌಢ ಶಾಲೆ ಆವರಣದಿಂದ ವಿದ್ಯಾರ್ಥಿಗಳನ್ನು ಬಂದಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಶಿಕ್ಷಕರು ಕಾರ್ಯ ನಿರ್ವಹಿಸಲು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಮನವಿ ಪತ್ರ ಸ್ವೀಕರಿಸಿದ ತಹಸಿಲ್ದಾರ್, ಬಿಓ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಇನಾಸಪ್ಪ, ಮಂಜಪ್ಪ, ಮುಖ್ಯಶಿಕ್ಷಕ ಚಂದ್ರಶೇಖರ್, ಕೃಷ್ಣೇಗೌಡ, ಸಿಆರ್ಪಿ ನಾಗರಾಜ್, ಭೀಮೇಶ್, ಜಯಣ್ಣ, ಅನಿಲ್, ಮಂಜುನಾಥ್ ಸೇರಿದಂತೆ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

