ಹಾಸನ

ವಧು ತಂದೆ ಮನೆಗೆ, ವರ 'ಮಾವ'ನ ಮನೆಗೆ!

Published On :

ಕ.ಪ್ರ.ವಾರ್ತೆ , ಹೊಳೆನರಸೀಪುರ , ಜ. 10
ಇದೊಂದು ಅಪ್ಪಟ ಮೊಬೈಲ್ ಸ್ಟೋರಿ.... ಸಿನಿಮಾಕ್ಕೆ ಕಥಾವಸ್ತುವಾಗಬಹುದಾದ ಸ್ಟೋರಿ. ಮೊಬೈಲ್‌ನಲ್ಲಿ ಆರಂಭಗೊಂಡ ಸಂಭಾಷಣೆ, ಪ್ರೀತಿ- ಪ್ರೇಮದೊಂದಿಗೆ ಊರೂರು ಅಲೆದು, ಮದುವೆ ಆಗಿ ಬಂದ ನಂತರ, ಬಲವಂತದಿಂದ ಮದುವೆ ಮಾಡಲಾಗಿದೆ ಎಂದು ನವವಧು ಉಲ್ಟಾ ಹೊಡೆದಿದ್ದಾಳೆ. ಹೀಗಂತ ಪೊಲೀಸರಿಗೂ ದೂರು ನೀಡಿದ್ದಾಳೆ. ಅದು ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಈಗಂತೂ ಈ ಪ್ರಕರಣ, ಪೊಲೀಸ್ ಠಾಣೆ ಮೆಟ್ಟಲೇರಿದೆ.
ಪ್ರಕರಣ ನಡೆದಿದ್ದು ಹೀಗೆ: ಅಂದಹಾಗೆ, ಈ ಪ್ರಕರಣ ನಡೆದಿರುವುದು ಜೋಡಿಗುಬ್ಬಿ ಗ್ರಾಮದಲ್ಲಿ. ತಾಲೂಕಿನ ಜೋಡಿಗುಬ್ಬಿ ಗ್ರಾಮದ ಹದನೇಳರ ಪ್ರಾಯದ ಶೃತಿ ಮೊಬೈಲ್‌ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಮೈಸೂರಿನ ನಾಡಹಳ್ಳಿ ಗ್ರಾಮದ ಲಾರಿ ಚಾಲಕ ಕುಮಾರ (22) ಎಂಬಾತನಿಗೆ ಸಂಪರ್ಕವಾಗಿದೆ. ಆ ಸಂಪರ್ಕ ಅವರಿಬ್ಬರ ಮಾತುಕತೆಗೆ ನಾಂದಿಯಾಗಿದೆ. ಆನಂತರ, ಈ ಮಾತುಕತೆ ತಿಂಗಳಾನುಗಟ್ಟಲೆ ನಡೆದು, ಅದು ಪ್ರೇಮಕ್ಕೆ ತಿರುಗಿದೆ. ಈ ಪ್ರೇಮಿಗಳ ನಡುವಣ ಈ ಪ್ರೀತಿ ಪ್ರೇಮ ಎಷ್ಟರ ಮಟ್ಟಿಗೆ ಮುಂದುವರಿಯಿತು ಎಂದರೆ, ಮನೆ ಬಿಟ್ಟು ಇಬ್ಬರು ಓಡಿ ಹೋಗುವಷ್ಟರ ಮಟ್ಟಿಗೆ ನಡೆದಿದೆ.
ಅ. 9ರಂದು ಇಬ್ಬರೂ ಒಂದೆಡೆ ಸೇರಿ, ಪರಾರಿ ಆಗಲು ತೀರ್ಮಾನಿಸಿದ್ದರ ಫಲವಾಗಿ, ಶೃತಿ ತನ್ನ ಮನೆಯಲ್ಲಿದ್ದ ಅಲ್ಪಸ್ವಲ್ಪ, ಹಣ ಬಟ್ಟೆಗಳ ಸಮೇತ ಜೋಡಿಗುಬ್ಬಿ ಗ್ರಾಮದಿಂದ ಹೊಳೆನರಸೀಪುರ ಪಟ್ಟಣಕ್ಕೆ ಆಗಮಿಸಿ ಆಲ್ಲಿಂದ ಬಸ್ಸಿನಲ್ಲಿ ಪ್ರಿಯಕರ ಕುಮಾರ ನೀಡಿದ ವಿಳಾಸ ಹಿಡಿದು ಮೈಸೂರಿಗೆ ತಲುಪಿದ್ದಾಳೆ. ಇತ್ತ ಮೈಸೂರಿನಲ್ಲಿ ಶೃತಿಗಾಗಿ ಕಾದು ನಿಂತಿದ್ದ ಕುಮಾರ, ಶೃತಿ ಬರುತ್ತಿದ್ದಂತೆ ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ದೇವಾಲಯದಲ್ಲಿ ತಾಳಿ ಸಹ ಕಟ್ಟಿದ್ದಾನೆ. ತಾಳಿ ಕಟ್ಟಿದ ನಂತರ ಶೃತಿಯೊಂದಿಗೆ ನೇರ ಧರ್ಮಸ್ಥಳಕ್ಕೆ ತೆರಳಿ ಸುಮಾರು ಹದಿನೈದು ದಿನಗಳ ಕಾಲ ದೇವರ ಪ್ರಸಾದ ತಿಂದು ಕಾಲ ತಳ್ಳಿದ್ದಾರೆ.
ಹದಿನೈದು ದಿನಗಳ ನಂತರ ಧರ್ಮಸ್ಥಳದಲ್ಲಿ ಇರುವುದು ಸೂಕ್ತ ಅಲ್ಲವೆಂದು ಇಬ್ಬರೂ ತೀರ್ಮಾನಿಸಿ, ನೇರ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿ, ಅಲ್ಲಿಯೂ ಹದಿನೈದು ದಿನಗಳ ಕಾಲ ದೇವಾಲಯ ಛತ್ರವೊಂದರಲ್ಲಿ ಕಾಲ ತಳ್ಳಿದ ನಂತರ ನೇರವಾಗಿ ಮೈಸೂರಿಗೆ ಹಿಂತಿರುಗಿದ್ದಾರೆ.
ಇವರಿಬ್ಬರು ಶ್ರೀರಂಗಪಟ್ಟಣ, ಧರ್ಮಸ್ಥಳ ಮತ್ತು ತಿರುಪತಿ ಪ್ರವಾಸ ಮುಗಿಸಿ ಹಿಂದಿರುಗುವ ವೇಳೆಗೆ ಶೃತಿಯ ತಂದೆ ಸ್ವಾಮಿಗೌಡ ಪಟ್ಟಣದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿ ತಮ್ಮ ಮಗಳು ಶೃತಿ ಏಕಾಏಕಿ ಕಾಣೆಯಾಗಿದ್ದು ಆಕೆಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಇತ್ತ, ಶೃತಿ ಮೈಸೂರಿಗೆ ಬರುತ್ತಿದ್ದಂತೆ ಮೈಸೂರಿನ ಪೊಲೀಸ್ ಇಲಾಖೆಗೆ ಸೇರಿದ ಸಹಾಯವಾಣಿ ಕಚೇರಿಗೆ ಭೇಟಿ ನೀಡಿ, ತಾವು ಪ್ರೇಮಿಗಳಾಗಿದ್ದು, ನಮಗೆ ಕಾನೂನು ಬದ್ಧ ಮದುವೆಗೆ ಅವಕಾಶ ಮಾಡಿಕೊಡುವಂತೆ ಲಿಖಿತ ದಾಖಲೆ ನೀಡಿದ್ದಾರೆ.
ಇಬ್ಬರೂ ನೀಡಿದ ಮಾಹಿತಿ ಮೇಲೆ ಶೃತಿಯ ತಂದೆ ಸ್ವಾಮಿಗೌಡ, ಪೋಷಕರು ಮತ್ತು ಗ್ರಾಮಾಂತರ ಠಾಣೆ ಪೊಲೀಸ್ ಅಧಿಕಾರಿಗಳನ್ನು ಮೈಸೂರಿಗೆ ಕರೆಯಿಸಿ ಮಾತು ಕತೆ ಮಾಡಿದ್ದಾರೆ. ಆದರೆ ಮಾತು ಕತೆ ನಂತರ ಶೃತಿಗೆ ಇದೀಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ವರ್ತಿಸಿ, ತನ್ನನ್ನು ಕುಮಾರ್ ಮೈಸೂರಿಗೆ ಬರುವಂತೆ ಪುಸಲಾಯಿಸಿ, ಅಲ್ಲಿಂದ ತನ್ನನ್ನು ಶ್ರೀರಂಗಪಟ್ಟಣದ ದೇವಾಲಯವೊಂದರಲ್ಲಿ ತಾಳಿ ಕಟ್ಟಿದ್ದಲ್ಲದೆ, ಬಲವಂತದಿಂದ ತನ್ನನ್ನು ಧರ್ಮಸ್ಥಳ ಮತ್ತು ತಿರುಪತಿಗೆ ಕರೆದುಕೊಂಡು ಹೋದ. ಅಲ್ಲಿ ತನ್ನ ಮೇಲೆ ಅತ್ಯಾಚಾರ ಸಹ ಮಾಡಿ ಮೋಸ ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಇದರ ಫಲದಿಂದೀಗ ಕುಮಾರನ ಮೇಲೆ ಗ್ರಾಮಾಂತರ ಠಾಣೆ ಪೋಲಿಸರು ಅತ್ಯಾಚಾರ ಪ್ರಕರಣ ದಾಖಸಿ ಬಂಧಿಸಿದ್ದಾರೆ.
ಅತ್ಯಾಚಾರ ಎಸಗಿದನೆಂಬ ಆರೋಪಕ್ಕೆ ಒಳಗಾಗಿರುವ ಕುಮಾರ ಮತ್ತು ಶೃತಿ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ತಪಾಸಣೆ ನಂತರ ಕುಮಾರನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಷ್ಟೆಲ್ಲಾ ರಾದ್ಧಾಂತ ನಡೆದು ಪೊಲೀಸ್ ಠಾಣೆ ಮೆಟ್ಟಲೇರಿದ್ದರೂ ಆರೋಪಿ, ಲಾರಿ ಚಾಲಕ ಕುಮಾರನ ತಂದೆ ರಂಗಸ್ವಾಮಿ ಅವರು ಕುಟುಂಬ ಇಲ್ಲಿಯವರೆಗೆ ಪೊಲೀಸ್ ಠಾಣೆಗೆ ಆಗಮಿಸದೆ ಇರುವುದು ಅಚ್ಚರಿಗೆ ಕಾರಣವಾಗಿದೆ.
ಮತ್ತೊಂದು ಮೂಲದ ಪ್ರಕಾರ, ಕುಮಾರ ಶೃತಿಯನ್ನು ಬಲವಂತದಿಂದ ಬೆದರಿಕೆ ಒಡ್ಡಿ ಆಕೆಯನ್ನು ಧರ್ಮಸ್ಥಳ ಮತ್ತು ತಿರುಪತಿಗೆ ಕರೆದೊಯ್ದು ಅಲ್ಲಿ ಆಕೆಯೊಂದಿಗೆ ಅನೈತಿಕವಾಗಿ ನಡೆದುಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಮಾಹಿತಿಯೂ ಇದೆ. ಇದರಲ್ಲಿ ಯಾವ ಮಾಹಿತಿ ಸರಿ ಎಂಬುದು ಪೊಲೀಸರ ತನಿಖೆಯಿಂದ ಮಾತ್ರ ಬಹಿರಂಗ ಆಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.