ಹಾಸನ

19ರಿಂದ ಪಲ್ಸ್ ಪೋಲಿಯೊ ಅಭಿಯಾನ

Published On :

ಕ.ಪ್ರ.ವಾರ್ತೆ , ಹಾಸನ , ಜ.10
ಪೋಲಿಯೊ ಲಸಿಕೆ ಆರೋಗ್ಯಯುತ ರಾಷ್ಟ್ರ ನಿರ್ಮಾಣದ ದೃಷ್ಟಿಯಿಂದ ಅತ್ಯಂತ ಮಹತ್ತರವಾದ ಪಲ್ಸ್ ಪೋಲಿಯೊ ಕಾರ್ಯಕ್ರಮ ಜ.19 ರಿಂದ 22ರವರೆಗೆ ಜಿಲ್ಲಾದ್ಯಂತ ನಡೆಯಲಿದ್ದು, 5 ವರ್ಷದೊಳಗಿನ 1,84, 367 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಯಶಸ್ಸಿಯಾಗಲು ಬೇಕಾದ ಕ್ರಮಗಳ ಬಗ್ಗೆ ಕೂಲಂಕೂಷ ಚರ್ಚಿಸಲಾಯಿತು.
ಸಲಹೆ: ಅಪರ ಹೆಚ್ಚುವರಿ ಡಿಸಿ ಡಾ. ಗೋಪಾಲಕೃಷ್ಣ ಮಾತನಾಡಿ, ಪೋಲಿಯೊ ಲಸಿಕೆ ಹಾಕವ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಕಳೆದ ಮುರು ವರ್ಷಗಳಿಂದ ಯಾವುದೇ ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲ. ಆದರೆ, ಮುಂದೆಂದೂ ಮರುಕಳಿಸದಂತೆ ಎಚ್ಚರ ವಹಿಸಲು ಪೋಲಿಯೊ ಲಸಿಕೆಯನ್ನು 5 ವರ್ಷದ ಮಕ್ಕಳೆಲ್ಲರಿಗೂ ತಪ್ಪದೇ ದೊರೆಯುವಂತೆ ವಿಶೇಷ ಪರಿಶ್ರಮ ವಹಿಸಬೇಕಿದೆ ಎಂದರು.
ಸೂಚನೆ: ಪೋಲಿಯೊ ಲಸಿಕಾ ಕಾರ್ಯಕ್ರಮದ ವೇಳೆ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಸರ್ಕಾರಿ ಇಲಾಖಾ ವಾಹನಗಳ ಜೊತೆಗೆ ಕಚೇರಿಗಳಿಗೆ ಹೊರಗುತ್ತಿಗೆಯಲ್ಲಿ ಪಡೆದಿರುವ ವಾಹನಗಳನ್ನು ಎಲ್ಲಾ 3 ದಿನಗಳ ಕಾಲ ಈ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.
ನಿರ್ದೇಶನ: ಆನೆ ಹಾವಳಿ ಇರುವ ಆಲೂರು ಮತ್ತು ಸಕಲೇಶಪುರ ತಾಲ್ಲೂಕುಗಳ ಅರಣ್ಯ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮದ ವೇಳೆ ಹೆಚ್ಚಿನ ಜಾಗೃತಿ ವಹಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೊದಲೇ ತಿಳಿಸಿ ಸೂಕ್ತ ವಾಹನಗಳಲ್ಲೇ ಸಂಚರಿಸಿ ಮಕ್ಕಳಿಗೆ ಪೋಲಿಯೊ ಹನಿ ಹಾಕಬೇಕು ಎಂದು ಅವರು ನಿರ್ದೇಶನ ನೀಡಿದರು.
ನಗರ ಪ್ರದೇಶಗಳಲ್ಲಿ ಒಟ್ಟು 4 ದಿವಸ, ಅಂದರೆ ಜ. 19ರಿಂದ 22ರವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1229 ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿದ್ದು, ಅವರೆಲ್ಲರೂ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಬೇಕು. ಅದೇ ರೀತಿ ಪೋಲಿಯೊ ಬೂತ್‌ಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ತೆರೆಯಬೇಕು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಕಡ್ಡಾಯವಾಗಿ ಹಾಜರಿದ್ದು ಕಾರ್ಯ ನಿರ್ವಹಿಸಬೇಕು.
ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಕರಪತ್ರಗಳು, ಭಿತ್ತಿ ಪತ್ರಗಳು ಮತ್ತು ಬ್ಯಾನರ್‌ಗಳನ್ನು ಪ್ರದರ್ಶಿಸಿರಬೇಕು ಹಾಗೂ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ವಿತರಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯ ಸಂಘ ಸಮುದಾಯದ ಮುಖ್ಯಸ್ಥರುಗಳನ್ನು ಮತ್ತು ತಾಯಂದಿರನ್ನು ಭೇಟಿ ಮಾಡಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವುದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ನಿರಂತರ ವಿದ್ಯುತ್‌ಗೆ ಸೂಚನೆ: ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಪಲ್ಸ್ ಪೋಲಿಯೊ ಬೂತ್‌ಗಳಿಗೆ ಗುರುತಿಸಿರುವ ಶಾಲೆಗಳ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಿ ನೆರವಾಗಬೇಕು. ಅಲ್ಲದೇ, ಜ.  19ರಿಂದ 22ರವರೆಗೆ ನಿರಂತರ ವಿದ್ಯುತ್ ಪೊರೈಸುವಂತೆ ನೋಡಿಕೊಳ್ಳಬೇಕೆಂದು ಚೆಸ್ಕಾಂ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ವಾರ್ತಾ ಇಲಾಖೆ ಮತ್ತು ಆಕಾಶವಾಣಿಗಳ ಮೂಲಕ ವ್ಯಾಪಕ ಪ್ರಚಾರ ನೀಡಬೇಕು ಇದೇ ರೀತಿ ರೆಡ್ ಕ್ರಾಸ್, ರೋಟರಿ, ಲಯನ್ಸ್ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳ ನೆರವನ್ನು ಪಡೆದು ಪೋಲಿಯೊ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಎಂದರು.
ಪ್ರಚಾರಕ್ಕೆ ಸೂಚನೆ: ಇಲಾಖೆಗಳು ರೇಲ್ವೆ ಪ್ಲಾಟ್‌ಫಾರಂ, ಬಸ್ ನಿಲ್ದಾಣದಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಸಿಕಾ ಕೆಂದ್ರಗಳನ್ನು ತೆರೆಯಲು ಅನುಕೂಲ ಮಾಡಿಕೊಡಬೇಕು. ಈ ಲಸಿಕಾ ಕೇಂದ್ರಗಳು ಕಾರ್ಯಕ್ರಮದ ದಿನಗಳಲ್ಲಿ ದಿನದ 24 ಗಂಟೆಯೂ ತೆರೆಯುವಂತೆ ವ್ಯವಸ್ಥೆ ಮಾಡಬೇಕು. ಎಲ್ಲಾ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣಗಳ ಟಿವಿಗಳಲ್ಲಿ ಕಾರ್ಯಕ್ರಮದ ಬಗ್ಗೆ ನಿರಂತರವಾಗಿ ಬಿತ್ತರಿಸುವಂತಿರಬೇಕು ಹಾಗೂ ಧ್ವನಿವರ್ಧಕಗಳ ಮೂಲಕ ಪ್ರಚಾರಮಾಡಬೇಕೆಂದು ಸೂಚಿಸಿದರು.
1,84, 367 ಮಕ್ಕಳು
ಆರ್‌ಸಿಎಚ್ ಅಧಿಕಾರಿ ಡಾ. ಜನಾರ್ಧನ್ ಅವರು ಸಭೆಗೆ ಮಾಹಿತಿ ನೀಡಿ, ಜಿಲ್ಲೆಯ ಪಲ್ಸ್ ಪೋಲಿಯೋ ಕಾರ್ಯಕ್ರಮದನ್ವಯ ಜಿಲ್ಲೆಯಲ್ಲಿ 18,00,326 ಜನಸಂಖ್ಯೆ ಇದ್ದು  4,09,378 ಮನೆಗಳಿವೆ. ಇದರಲ್ಲಿ 5 ವರ್ಷದೊಳಗಿನ 1,84,367 ಮಕ್ಕಳಿದ್ದಾರೆ. 872 ಬೂತ್ಗ್‌ಳನ್ನು ತೆರೆಯಲಾಗಿದ್ದು 15 ಟ್ರಾನ್ಸಿಟ್ ತಂಡಗಳು, 9 ಸಂಚಾರಿ ತಂಡಗಳು, 3,536 ಲಸಿಕೆ ಹಾಕುವ ಸಹಾಯಕರು, 175 ಮಂದಿ ಮೇಲ್ವಿಚಾರಕರು ಮತ್ತು 59 ಯೋಜನಾ ತಂಡಗಳನ್ನು ರಚಿಸಲಾಗಿದೆ ಎಂದರು.
ಈ ಬಾರಿಯೂ ಎಚ್ಚರ: ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ ಮಾತನಾಡಿ,  ಜಿಲ್ಲೆಯಲ್ಲಿ ಕಳೆದ ಬಾರಿಯೂ ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ ಶೇಕಡ 98.55ರಷ್ಟು ಸಾಧನೆಯಾಗಿದೆ. ಈ ಬಾರಿಯೂ ಯಾವುದೇ ಅರ್ಹ ಮಕ್ಕಳು ಲಸಿಕಾ ಕಾರ್ಯಕ್ರಮದಿಂದ ದೂರ ಉಳಿಯದಂತೆ ಎಚ್ಚರ ವಹಿಸಲಾಗುವುದು ಎಂದರು. ವಿಶ್ವ ಆರೋಗ್ಯ ಸಂಸ್ಥೆಯ ಯೋಜನಾ ಕಾರ್ಯಗಳ ಪ್ರತಿನಿಧಿ ಡಾ.ನಾಗರಾಜ್, ನಾನಾ ತಾಲೂಕುಗಳ ತಹಸೀಲ್ದಾರರು, ತಾಲ್ಲೂಕು ವೈದ್ಯಾಧಿಕಾರಿಗಳು, ನಾನಾ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕರ್ತೆಯರ ನಿರಾಕರಣೆ
ಕ.ಪ್ರ.ವಾರ್ತೆ , ಬೇಲೂರು , ಜ. 10
ಕೆಲ ಅಂಗನವಾಡಿ ಕಾರ್ಯಕರ್ತೆಯರು ರಾಷ್ಟ್ರೀಯ ಕಾರ್ಯಕ್ರಮವಾದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಂಧ್ಯಾ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಪಲ್ಸ್ ಪೋಲಿಯೊ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೂರು ವರ್ಷದಿಂದ ದೇಶದಲ್ಲಿ ಪೊಲಿಯೋ ಪ್ರಕರಣಗಳ ಇಲ್ಲವಾಗಿದೆ. ಈ ದಿಸೆಯಲ್ಲಿ ಈ ಭಾರಿ ನಡೆಯುವ ಪಲ್ಸ್ ಪೋಲಿಯೊ ದಿನ ಕೆಸಗೋಡು ಗ್ರಾಮ ಪಂಚಾಯ್ತಿ  ವ್ಯಾಪ್ತಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸುವ ಬಗ್ಗೆ ಶಿಶು ಅಭಿವೃದ್ಧಿ ಅಧಿಕಾರಿ ಸೂಚನೆ ನೀಡಬೇಕು ಎಂದರು.
ತಾಲೂಕಿನಲ್ಲಿ 94 ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಇನ್ನು ಹಲವು ಭಾಗದಲ್ಲಿ ಸದ್ಯ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಮತ್ತು ಸಂಘಟನೆಗಳ ಸಹಕಾರ ಅಗತ್ಯವಾಗಿದೆ ಎಂದರು.
ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಸರಳ ಮಾತನಾಡಿ, ರಾಷ್ಟ್ರೀಯ ಕಾರ್ಯಕ್ರಮವಾದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡುವುದಾಗಿ  ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಜಗದೀಶ್, ಜಿಲ್ಲಾ ಪಂಚಾಯ್ತಿ  ಸದಸ್ಯರು,  ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಮ್ಮ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.