ಹಾಸನ

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ , ಹಾಸನ , ಜ.10
ಅಂಗನವಾಡಿ ಕೇಂದ್ರಗಳ ಖಾಸಗೀಕರಣ ವಿರೋಧಿಸಿ ಮತ್ತು ರು. 10 ಸಾವಿರ ಕನಿಷ್ಠ ಕೂಲಿ ನೀಡಬೇಕೆಂದು ಎಂಬುದು ಸೇರಿದಂತೆ ನಾನಾ ಬೇಡಿಕೆಗಳಿಗೆ ಆಗ್ರಹಿಸಿ  ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ  ಬೃಹತ್ ಪ್ರತಿಭಟನೆ ನಡೆಸಿದರು.
ವಾಗ್ವಾದ: ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು  ನಗರದ ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಇದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ  ವ್ಯತ್ಯಯವಾಯಿತು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ಇದರ ಪರಿಣಾಮ ವಾಹನಗಳ ಸಂಚಾರ ತೀವ್ರವಾಗಿ ಅಸ್ತವ್ಯಸ್ತವಾಯಿತು. ಆಗ ಪೊಲೀಸರು, ರಸ್ತೆಯಲ್ಲಿ ಧರಣಿ ನಡೆಸದೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸಬೇಕು ಎಂದು ಪ್ರತಿಭಟನಾಕಾರರಿಗೆ ಹೇಳಿದರು.
ಮನವಿ: ಇದನ್ನು ಒಪ್ಪದ ಸಿಪಿಎಂ ಮತ್ತು ಸಿಐಟಿಯು ಮುಖಂಡರು, ಡಿಸಿ ಕಚೇರಿ ಆವರಣದಲ್ಲಿ ಮೈಕ್‌ನಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಇಲ್ಲಿ ಧರಣಿ ನಡೆಸಲಾಗುತ್ತಿದೆ ಎಂದು ಹೇಳಿದರು. ಆಗ ಕೆಲ ಸಮಯ ಕಾರ್ಮಿಕ ಮುಖಂಡರಾದ ಧರ್ಮೇಶ್, ನವೀನ್ ಕುಮಾರ್ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು. ಭಾಷಣದ ನಂತರ ರಸ್ತೆ ತಡೆ ನಿಲ್ಲಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಅಂಗನವಾಡಿ ಕೇಂದ್ರದ ಮುಖ್ಯ ಉದ್ದೇಶವಾದ ಅಪೌಷ್ಠಿಕತೆ ಹೋಗಲಾಡಿಸುವುದಕ್ಕೆ ಸಂಬಂಧಿಸಿದ ಎಲ್ಲಾ ತರಹದ  ಕೆಲಸಗಳನ್ನು ಅಂಗನವಾಡಿ ಕೇಂದ್ರದಿಂದ ದೂರ ಮಾಡಲಾಗುತ್ತಿದೆ.
ಸಮುದಾಯದ ಜನರನ್ನು ಪಾಲ್ಗೊಳಿಸುವ ಹೆಸರಿನಲ್ಲಿ ಅಂಗನವಾಡಿ ಕೇಂದ್ರದ ಯಜಮಾನಿಕೆ, ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ಮತ್ತು ಶ್ರೀಮಂತ ಹಿತಾಸಕ್ತಿಗಳಿಗೆ ನೀಡುವ,  ಶೇ. 10ರಷ್ಟು ಪ್ರಾಜೆಕ್ಟ್‌ಗಳನ್ನು ಖಾಸಗಿಯವರಿಗೆ ನೀಡುವುದನ್ನು ನಿಲ್ಲಿಸಿ,   ಪಂಚಾಯತ್ ಸಂಸ್ಥೆಗಳಿಗೆ ವಹಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್, ನವೀನ್ ಕುಮಾರ್, ಕಾರ್ಯದರ್ಶಿ ಅರವಿಂದ, ಉಪಾಧ್ಯಕ್ಷ  ಜಿ.ಪಿ. ಸತ್ಯನಾರಾಯಣ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಇಂದ್ರಮ್ಮ, ಖಜಾಂಚಿ ವಿ. ಲತಾ, ಪ್ರಧಾನ ಕಾರ್ಯದರ್ಶಿ ವೈ.ಆರ್. ಮಂಜಮ್ಮ ನೇತೃತ್ವ ವಹಿಸಿದ್ದರು.
ಬೇಡಿಕೆಗಳು
1.  ಸರ್ಕಾರ ಐಸಿಡಿಎಸ್ ಮಿಷನ್ ಪ್ರಕ್ರಿಯೆಯನ್ನು ತಕ್ಷಣ ಕೈಬಿಡಬೇಕು. ಐಸಿಡಿಎಸ್ ಅನ್ನು ಎನ್‌ಜಿಓಗಳು, ಕಾರ್ಪೋರೇಟ್ ಹೌಸ್‌ಗಳು, ಸ್ವಸಹಾಯ ಗುಂಪುಗಳು ಇತ್ಯಾದಿ ಸಂಸ್ಥೆಗಳಿಗೆ ವಹಿಸಬಾರದು ಮತ್ತು ಯಾವುದೇ ಸ್ವರೂಪದಲ್ಲಿಯೂ ಖಾಸಗೀಕರಣ  ಮಾಡಬಾರದು. ಐಸಿಡಿಎಸ್ ಅನ್ನು ಕ್ರಮಬದ್ಧಗೊಳಿಸಿ, ಅದನ್ನೊಂದು ಇಲಾಖೆಯನ್ನಾಗಿ ಉಳಿಸಬೇಕು.
2.  ರಾಜ್ಯದ 12 ಜಿಲ್ಲೆಗಳಲ್ಲಿ ಈ ತಕ್ಷಣ ಬಂದ ಅಪಾಯಕಾರಿ ಶಿಫಾರಸ್ಸುಗಳನ್ನು  ವಾಪಸ್ ಪಡೆಯಬೇಕು. ಆ ಎಲ್ಲಾ ಕೆಲಸಗಳನ್ನು ಈಗಿರುವ ಅಂಗನವಾಡಿ  ನೌಕರರಿಗೆ ಕೊಟ್ಟು  ಕೆಲಸ ಖಾಯಂ ಮಾಡಬೇಕು. ಈಗಿರುವ ಅಂಗನವಾಡಿ  ಕಾರ್ಯಕರ್ತೆಯರ ಕೆಲಸವನ್ನು ಬೇರೆಯವರಿಗೆ ವರ್ಗಾಯಿಸಬಾರದು.
3.  ಅಂಗನವಾಡಿ ಕೇಂದ್ರದ ಕೆಲಸದ ಅವಧಿ ಹೆಚ್ಚಿರುವುದರಿಂದ ಮತ್ತು 45ನೇ ಐಎಲ್‌ಸಿ(ಭಾರತೀಯ ಕಾರ್ಮಿಕ ಸಮ್ಮೇಳನ) ಶಿಫಾರಸ್ಸಿನಂತೆ, ಬೆಲೆ ಏರಿಕೆಗೆ ತಕ್ಕಹಾಗೆ 15 ಸಾವಿರ ಕಾರ್ಯಕರ್ತೆಯರಿಗೆ 10 ಸಾವಿರ, ಸಹಾಯಕರಿಗೆ ಕನಿಷ್ಟ ಕೂಲಿ ಕೊಡಬೇಕು.
4.  ಎಲ್ಲಾ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ, ಕಾಯಂ ಶಿಶು ವಿಹಾರಗಳನ್ನಾಗಿಸಬೇಕು. ಶಾಲಾ ಪೂರ್ವ ಶಿಕ್ಷಣವನ್ನು ನೋಡಲ್ ಕೇಂದ್ರಗಳನ್ನಾಗಿಸಬೇಕು.
5.  ಸರ್ಕಾರೇತರ ಸಂಘಟನೆಗಳ ಪಾಲುದಾರಿಕೆಯ ಹೆಸರಿನಲ್ಲಿ ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಮಾಡಬಾರದು. ಈಗಾಗಲೇ ರಾಜ್ಯದ 4 ಜಿಲ್ಲೆಗಳಲ್ಲಿ  ವೇದಾಂತ ಫೌಂಡೇಷನ್ ಜೊತೆ ಮಾಡಿಕೊಂಡ ತಿಳಿವಳಿಕೆ ಒಪ್ಪಂದ ರದ್ದುಪಡಿಸಬೇಕು.  ಸಾದಿಲ್ವಾರು ಹಣ, ಪ್ರಭಾರಿ ಹುದ್ದೆಯ ಗೌರವಧನ ಹೆಚ್ಚಿಸಬೇಕು. ಮಕ್ಕಳ ಸಂಖ್ಯೆಗೆ  ಅಗತ್ಯವಿರುವಷ್ಟು ಗ್ಯಾಸ್ ಪೂರೈಸಬೇಕು. ಮಾರುಕಟ್ಟೆ ದರದಂತೆ ಹಣ ನೀಡಬೇಕು. ಅಂಗನವಾಡಿ ಕೇಂದ್ರಕ್ಕೆ ತಂದು ಕೊಡಬೇಕು.
6.  ಈಗ ಜಾರಿಯಲ್ಲಿ ಇರುವ ಎನ್‌ಪಿಎಸ್ ಪೆನ್ಷನ್ ಯೋಜನೆಯಲ್ಲಿ ಅಂಗನವಾಡಿ ನೌಕರರ ಗೌರವಧನದಲ್ಲಿ ಶೇ. 10ರಷ್ಟು ಹೆಚ್ಚು ಮಾಡಿ ಸರ್ಕಾರದಿಂದ ಶೇ. 10 ರಷ್ಟು ಹಣ ತೊಡಗಿಸಬೇಕು. ರು. 1.50 ಲಕ್ಷ ಪರಿಹಾರ ಕೊಡಬೇಕು. ನಿವೃತ್ತಿಯಾದ  ನೌಕರರ ಕುಟುಂಬದವರಿಗೆ ಕೆಲಸ ಕೊಡಬೇಕು.
7.  ಅಂಗನವಾಡಿ ಸಹಾಯಕಿಯರಾಗಿದ್ದು, ಸ್ಥಳೀಯ ಸಂಸ್ಥೆಗೆ ಜನಪ್ರತಿನಿಧಿಗಳಾಗಿ  ಆಯ್ಕೆಯಾದವರು ತಮ್ಮ ಜನಪ್ರತಿನಿಧಿ ಸ್ಥಾನಕ್ಕೆ ರಾಜೀನಾಮೆ ನೀಡಲು ಇಚ್ಛಿಸಿದ್ದಲ್ಲಿ  ತಮ್ಮ ಮೂಲ ಅಂಗನವಾಡಿ ಕೆಲಸ ಮಾಡಲು ಪುನಃ ಅವಕಾಶ ಮಾಡಿಕೊಡಬೇಕು. ಈಗಾಗಲೇ ನೀಡುತ್ತಿರುವ ಮರಣ ಪರಿಹಾರ ಮತ್ತು ಕಾಯಿಲೆಗಳಿಗೆ  ನೀಡುತ್ತಿರುವ ಹಣವನ್ನು ಕಾರ್ಯಕರ್ತೆ ಮತ್ತು ಸಹಾಯಕರಿಗೆ ಸಮನಾಗಿ ರು. 50 ಸಾವಿರಗೆ  ಹೆಚ್ಚಿಸಬೇಕು. ಈ ಸೌಲಭ್ಯ ಕೂಡಲೇ ಸಿಗುವ ರೀತಿ ಕ್ರಮ ವಹಿಸಬೇಕು.  ಸಹಾಯಕರಿಯರಿಗೆ ತರಬೇತಿ ಮತ್ತು ಮಾಸಿಕ ಸಭೆಗಳನ್ನು ನಡೆಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.