'ಆಧಾರ್ ಏಜೆನ್ಸಿಗಳಿಂದ ಸುಲಿಗೆ'
ಕ.ಪ್ರ.ವಾರ್ತೆ , ರಾಮನಾಥಪುರ , ಜ. 11
ಇಲ್ಲಿಗೆ ಸಮೀಪದ ಬೆಮ್ಮತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಯಡಿಯೂರು ಗ್ರಾಮದಲ್ಲಿ ಆಧಾರ್ ಕಾರ್ಡ್ಗೆ ಅರ್ಜಿ ಸ್ವೀಕರಿಸುತ್ತಿದ್ದು, ಬರುವ ಪ್ರತಿಯೊಬ್ಬರಿಂದಲೂ ರು. 50 ವಸೂಲಿ ಮಾಡುತ್ತಿರುವುದಾಗಿ ಸ್ಥಳೀಯ ಪಂಚಾಯ್ತಿ ಸದಸ್ಯರಾದ ವೈ.ಎಸ್. ದಿವಾಕರ್ ಆರೋಪಿಸಿದ್ದಾರೆ.
ಬೆದರಿಕೆ: ಅರೆ ಮಲೆನಾಡು ಪ್ರದೇಶಕ್ಕೆ ಹೊಂದಿಕೊಂಡಂತಿರುವ ಈ ನಮ್ಮ ಯಡಿಯೂರು ಗ್ರಾಮಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಡಿಮೆ ಇದ್ದು, ಯಾವುದೇ ಕಚೇರಿಗಳಿಗೆ ದಿನನಿತ್ಯದ ಕೆಲಸ ಬಿಟ್ಟು ಸಾಕಷ್ಟು ದೂರ ಕ್ರಯಿಸಬೇಕಾಗಿದೆ. ಹಾಗಾಗಿ, ಈ ಗ್ರಾಮದಲ್ಲಿಯೇ ಆಧಾರ್ ಕಾರ್ಡ್ಗೆ ಅರ್ಜಿ ಸ್ವೀಕರಿಸಲು ಮನವಿ ಸಲ್ಲಿಸಿದ್ದರ ಮೇರೆಗೆ ಕೆಲವು ದಿನಗಳಿಂದ ಆಧಾರ್ ಕಾರ್ಡ್ ಏಜೆನ್ಸಿ ಪಡೆದಿರುವ ಹೆಗ್ಗಡಿಹಳ್ಳಿ ವಿನೋದ್ ಕುಮಾರ್ ಎಂಬಾತ ಇಲ್ಲಿನ ಗ್ರಾಮ ಮಂದಿರದಲ್ಲಿ ಆಧಾರ್ ಕಾರ್ಡ್ ಸ್ವೀಕರಿಸುತ್ತಿದ್ದು, ಇಲ್ಲಿಗೆ ಬರುವ ಪ್ರತಿಯೊಬ್ಬರಿಂದ ತಲಾ ರು. 50 ವಸೂಲು ಮಾಡಲಾಗುತ್ತಿದೆ. ಈ ಬಗ್ಗೆ ಯಾರಾದರೂ ಆಕ್ಷೇಪ ಎತ್ತಿದರೆ ಕೂಡಲೇ ಏಜೆನ್ಸಿಯವರು ಈ ಗ್ರಾಮದಿಂದ ಕಾಲು ಕೀಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದರು.
ಬೇರೆ ದಾರಿಯಿಲ್ಲ: ಈ ಗ್ರಾಮದ ಕೆಲವು ಮಂದಿ ಕೂಲಿ ಕೆಲಸಕ್ಕೆ ಪಕ್ಕದ ಕೊಡಗಿನ ಕಾಫಿ ತೋಟಕ್ಕೆ ಮೆಣಸು ಕುಯ್ಲಿಗೆಂದು ಪ್ರತಿನಿತ್ಯ ಹೋಗುತ್ತಿದ್ದು, ಈ ರೀತಿ ಸರಿಯಾಗಿ ರು. 50 ನೀಡದೆ ಹೋದಲ್ಲಿ ದಿನಗಟ್ಟಲೆ ಕಾಯಿಸುವುದರಿಂದ ಎಲ್ಲಿ ನಿತ್ಯದ ಕೂಲಿ ರು. 300 ಕೈತಪ್ಪಿ ಹೋಗುವುದೆಂಬ ದಿಗಿಲು ಹುಟ್ಟಿ ಬೇರೆ ದಾರಿ ಕಾಣದೆ ರು. 50 ತೆತ್ತು ಆಧಾರ್ ಕಾರ್ಡ್ ಮಾಡಿಸಬೇಕಾದ ದುಃಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ಅಸಮರ್ಥ: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಹೆಚ್.ಇ. ಜಗದೀಶ್ ಮಾತನಾಡಿ, ಈ ತಾಲ್ಲೂಕಿಗೆ ಇಬ್ಬರು ತಹಸೀಲ್ದಾರರು ಇದ್ದೂ ಸಹ ವಿಪರೀತವಾಗಿರುವ ಮರಳು ದಂಧೆ, ಕಲ್ಲು ಕೋರೆ ದಂಧೆ ನಡೆಯುತ್ತಿವೆ. ಇದರ ಜೊತೆಗೆ ಈ ರೀತಿ ಆಧಾರ್ ಕಾರ್ಡ್ಗೆ ನಾಗರಿಕರಿಂದ ಹಣ ಸುಲಿಗೆ ಮಾಡಲಾಗುತ್ತಿದ್ದರೂ ಅದನ್ನು ತಡೆಯಲು ಅಧಿಕಾರಿಗಳು ಅಸಮರ್ಥರಾಗಿದ್ದಾರೆ ಎಂದರು.
ಹೋರಾಟದ ಎಚ್ಚರಿಕೆ: ಕೂಡಲೇ ಸರ್ಕಾರ ಹಿರಿಯ ಅಧಿಕಾರಿಗಳು ಈಗಿನ ತಹಸೀಲ್ದಾರರನ್ನು ವರ್ಗಾಯಿಸಿ ದಕ್ಷ, ಪ್ರಾಮಾಣಿಕ ತಹಸೀಲ್ದಾರರನ್ನು ಈ ತಾಲೂಕಿಗೆ ನೇಮಿಸುವುದರ ಜತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಇಲ್ಲದೇ ಹೋದಲ್ಲಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರು ಭಾಸ್ಕರ್ ಮಾತನಾಡಿ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಈ ರೀತಿ ಆಧಾರ್ ಕಾರ್ಡ್ ಅರ್ಜಿಗೆ ಹೆಚ್ಚು ಹಣ ಸುಲಿಗೆ ಮಾಡುತ್ತಿರುವುದನ್ನು ಒಂದು ಬಂಡವಾಳವನ್ನಾಗಿಸಿರುವ ಏಜೆನ್ಸಿಗಳನ್ನು ತಾಲ್ಲೂಕಿನಾದ್ಯಂತ ಕಿತ್ತೊಗೆದು ಸರಿಯಾದ ಶಿಸ್ತು ಕ್ರಮ ಕೈಗೊಳ್ಳದೆ ಹೋದಲ್ಲಿ ತಾಲ್ಲೂಕಿನ ಅವ್ಯವಸ್ಥೆ ನಗೆಪಾಟಲಿಗೆ ದಾರಿಯಾಗುವುದು ಖಚಿತ. ಈ ವಿಚಾರವಾಗಿ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ, ಕರವೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಜಿಲ್ಲಾ ಅಧ್ಯಕ್ಷ ಜವರಯ್ಯ ಹಂಪಾಪುರ್ ಮಾತನಾಡಿ, ಕಳೆದ ತಿಂಗಳಿನಿಂದಲೂ ರಾಮನಾಥಪುರ, ಕೊಣನೂರು ಹಾಗೂ ಮಲ್ಲಿಪಟ್ಟಣ ಹೋಬಳಿಗಳಲ್ಲಿ ನಡೆಸುತ್ತಿರುವ ಆಧಾರ್ ಕಾರ್ಡ್ ಏಜೆನ್ಸಿಯವರ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿದ್ದು, ಈ ಬಗ್ಗೆ ತಾಲ್ಲೂಕು ಆಡಳಿತಾಧಿಕಾರಿಗಳು ಯಾವ ಕ್ರಮವನ್ನೂ ಕೈಗೊಳ್ಳದೆ ಇರುವುದು ಹಾಸ್ಯಾಸ್ಪದವಾಗಿ ಕಂಡುಬರುತ್ತದೆ. ಯಾರೇ ಹೋರಾಡಲಿ, ಊರೇ ಹಾಳಾಗಲಿ, ಎಮ್ಮೆ ನಿನಗೆ ನೀನೇ ಸಾಟಿ ಎನ್ನುವ ಮಹಿಷ ತತ್ವ ಅನುಸರಿಸುತ್ತಿರುವ ತಹಸೀಲ್ದಾರ್ ಅವರು ಇನ್ನಾದರೂ ಎಚ್ಚೆತ್ತುಕೊಂಡು ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಿ ದಕ್ಷ ಅಧಿಕಾರಿ ಎನಿಸಿಕೊಳ್ಳಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ದಸಂಸ (ಭೀಮವಾದ) ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ದುಡ್ಡು ತಗೊಂಡ್ರೆ ತಪ್ಪೇನು: ಏಜೆನ್ಸಿ
ಆಧಾರ್ ಕಾರ್ಡ್ ವಿವಾದದ ಬಗ್ಗೆ ಏಜೆನ್ಸಿ ಪಡೆದಿರುವ ವಿನೋದ್ ಕುಮಾರ್ ಮಾತನಾಡಿ, ಈ ರೀತಿ ಆಧಾರ್ ಕಾರ್ಡ್ಗೆ ರು. 50 ಸ್ವೀಕರಿಸುತ್ತಿರುವುದರಲ್ಲಿ ತಪ್ಪೇನೂ ಇಲ್ಲ. ಒಂದು ದಿನದ ಯುಪಿಎಸ್ ಬಾಡಿಗೆ ಹಾಗೂ ನಮ್ಮ ಖರ್ಚು ವೆಚ್ಚ ಸರ್ಕಾರ ನೀಡುವ ಹಣಕ್ಕೆ ಎಷ್ಟರಮಟ್ಟಿಗೂ ಅಲ್ಲ. ಈ ಬಗ್ಗೆ ತಹಸೀಲ್ದಾರ್ ಅವರೊಂದಿಗೆ ಎಲ್ಲಾ ಆಧಾರ್ ಕಾರ್ಡ್ ಏಜೆನ್ಸಿಯವರು ಮಾತನಾಡಿ, ಅನುಮತಿ ಪಡೆದಿರುವುದರಿಂದ ತೆಗೆದುಕೊಳ್ಳಲಾಗುತ್ತಿದೆ. ಹಾಗಾಗಿ ಬಸವಾಪಟ್ಟಣ, ಹಂಡ್ರಂಗಿ, ನೆಹರುನಗರ, ಇನ್ನಿತರೆ ಕಡೆಗಳಿಂದ ಆರೋಪ ಕಂಡುಬಂದರೂ ತಹಸೀಲ್ದಾರ್ ಅವರು ನಮ್ಮ ತಾಪತ್ರಯ ಮನಗಂಡು ಆಕ್ಷೇಪ ವ್ಯಕ್ತಪಡಿಸಿಲ್ಲ. ಆದ್ದರಿಂದ ನಾವು ಯಾರಿಗೂ ಅಂಜುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

