ಅರಸೀಕೆರೆಗೆ 'ಹೇಮಾವತಿ' ಬರೋದ್ಯಾವಾಗ?
ಅರಸೀಕೆರೆ: ಕಲುಷಿತ ಪ್ಲೋರೈಡ್ ಮಿಶ್ರಿತ ನೀರನ್ನು ಕುಡಿದು ಅನೇಕ ರೋಗಗಳಿಗೆ ತುತ್ತಾಗುತ್ತಿರುವ ಅರಸೀಕೆರೆ ಪಟ್ಟಣದ ಜನರಿಗೆ ಹೇಮಾವತಿ ನದಿ ಹರಿಯುವುದು ಮತ್ತಷ್ಟು ವಿಳಂಬವಾಗಲಿದೆ. ಇದರಿಂದ ನಾಗರಿಕರು ದಿನದ 24 ಗಂಟೆ ಹೇಮಾವತಿ ಮೂಲದ ಶುದ್ಧ ಕುಡಿಯುವ ನೀರು ಕುಡಿಯಲು ಇನ್ನು ಕೆಲವು ತಿಂಗಳು ಕಾಯುವುದು ಅನಿವಾರ್ಯವಾಗಿದೆ.
ರೈತರಿಂದಲೇ ತಕರಾರು: ಹೇಮಾವತಿ ನದಿಯ ಕುಡಿಯುವ ನೀರಿನ ಸರಬರಾಜು ಯೋಜನೆಯ ಎರಡು ವರ್ಷಗಳ ಕಾಲ ಅವಧಿ ಪೂರ್ಣಗೊಂಡಿದ್ದು, ಇದೇ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಪಟ್ಟಣದ ಜನತೆ ಪರಿಶುದ್ದ ನೀರು ಕುಡಿಯಲು ನೀಡಬೇಕಾಗಿತ್ತು. ಆದರೆ, ಕಾಮಗಾರಿಗಳ ಅನುಷ್ಠಾನದ ವಿಳಂಬ ನೀತಿಯಿಂದ ಹಾಗೂ ಪೈಪ್ಲೈನ್ ಹಾಕಿರುವ ಹಾದಿಯಲ್ಲಿ ರೈತರು ತಮ್ಮ ಜಮೀನಿನ ಒಳಗೆ ಹೋಗದಂತೆ ತಕರಾರು ತೆಗೆದಿದ್ದು,ಅದನ್ನು ಪರಿಹರಿಸಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಕಷ್ಟವಾಗುತ್ತಿದೆ.
ಪರಿಣಾಮ, ಪಟ್ಟಣದ ಜನತೆ ಪರಿಶುದ್ದವಾದ ನೀರಿಗಾಗಿ ಇನ್ನೂ ಹಲವಾರು ತಿಂಗಳುಗಳ ಕಾಲ ಜಾತಕಪಕ್ಷಿಗಳಂತೆ ನಿರೀಕ್ಷೆಯಲ್ಲಿ ಇರಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಜಿ ಶಾಸಕ ಕೆ.ಪಿ. ಪ್ರಭುಕುಮಾರ್ ತಮಗೆ ಆಪ್ತರಾಗಿದ್ದ ಅಂದಿನ ಹಣಕಾಸು ಸಚಿವ ರಾಜಶೇಖರಮೂರ್ತಿಯವರ ಮನವೊಲಿಸಿ ಹೇಮಾವತಿ ಮೂಲದ ತಿಪಟೂರು ತಾಲ್ಲೂಕು ಈಚನೂರು ಕೆರೆಯಿಂದ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವ ನೀರು ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದು ಮಾಜಿ ಜಿ.ಎಸ್. ಪರಮೇಶ್ವರಪ್ಪ ಅವರ ಅವಧಿಯಲ್ಲಿ ಅನುಷ್ಠಾನಕ್ಕೆ ಬಂತು. ಆದರೆ, ತಿಪಟೂರು ಮತ್ತು ಅರಸೀಕೆರೆ ಸಂಯುಕ್ತ ಯೋಜನೆಯಾಗಿದ್ದರಿಂದ ಸಮರ್ಪಕವಾಗಿ ನೀರು ಪಡೆಯಲು ಸಾಧ್ಯವಾಗಲಿಲ್ಲ. ಪೈಪ್ಲೈನ್ ಇರುವ ಜಾಗದ ಸುತ್ತಮುತ್ತಲ ಗ್ರಾಮಸ್ಥರು ಪೈಪ್ ಅನ್ನು ಹೊಡೆದು ನೀರು ಪಡೆಯುತ್ತಿದ್ದಾರೆ. ಇದರಿಂದ ಪಟ್ಟಣದ ನಾಗರಿಕರಿಗೆ ಈ ಯೋಜನೆಯಿಂದ ಅನುಕೂಲವಾಗಲಿಲ್ಲ.
ಗೌಡರ ಶ್ರಮ ಅಪಾರ: ಇದರಿಂದ ಸತತ ಬರಗಾಲ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿತದಿಂದ ಪಟ್ಟಣದ ಜನತೆಗೆ ಶಾಪವಾಗಿದ್ದ ಕುಡಿಯುವ ನೀರಿನ ಪ್ಲೋರೈಡ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ಅಪಾರ ಶ್ರಮದಿಂದಾಗಿ ರು. 121 ಕೋಟಿ ಗಳ ವೆಚ್ಚದ ಶುದ್ಧ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ತಂದಿತು.
ಈ ಯೋಜನೆ ಹೇಮಾವತಿ ಮೂಲದಿಂದ ಚನ್ನರಾಯಪಟ್ಟಣ ತಾಲೂಕಿನ ಘನ್ನಿಘಡದ ಕಾಲುವೆ ಮೂಲಕ ಕಗ್ಗಲಿ ಕಾವಲು ಅರಣ್ಯ ಪ್ರದೇಶದ ಮಾರ್ಗವಾಗಿ ತಾಲೂಕಿನ ಗಂಡಸಿ ಹ್ಯಾಂಡ್ಪೋಸ್ಟ್ನ ಹಳೇ ಸಂತೆ ಮೈದಾನದಲ್ಲಿ ಹತ್ತಿರದ ಬೃಹತ್ ಪ್ರಮಾಣದ ಟ್ಯಾಂಕ್ಗೆ ಬಂದು ಸೇರಲಿದ್ದು, ಅಲ್ಲಿನ ಜಲಶುದ್ಧೀಕರಣ ಘಟಕದಲ್ಲಿ ಕೊಳವೆಗಳ ಮಾರ್ಗದಲ್ಲಿ ಹರಿದು ಬಂದ ಕಲುಷಿತ ನೀರನ್ನು ಪರಿಶುದ್ಧಗೊಳಿಸಿ ಪುನಃ ಅಲ್ಲಿಂದ ಹೇಮೆಯ ಶುದ್ಧೀಕರಿಸಿದ ನೀರನ್ನು ಕೊಳವೆ ಮಾರ್ಗಗಳ ಮೂಲಕ ಪಟ್ಟಣದ ಜೇನುಕಲ್ ನಗರದ ಗುಡ್ಡದ ಬಳಿಯ ಟ್ಯಾಂಕ್ನಲ್ಲಿ ಸಂಗ್ರಹಣೆ ಮಾಡಿ, ಪಟ್ಟಣದ ಪ್ರತಿಯೊಂದು ವಾರ್ಡ್ಗಳ ಮನೆ ಮನೆಗಳಿಗೂ ಸಂಪರ್ಕ ಕಲ್ಪಿಸುವ ಮೂಲಕ ಪ್ರತಿನಿತ್ಯದ 24 ಗಂಟೆಗಳ ಕಾಲವು ಪರಿಶುದ್ಧವಾದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತದೆ.
ಮಾಸಾಂತ್ಯಕ್ಕೆ ಪೂರ್ಣಗೊಳ್ಳಬೇಕು: ಈ ಯೋಜನೆಯ ಕಾಮಗಾರಿಯ ಗುತ್ತಿಗೆಯನ್ನು ಹೈದರಾಬಾದ್ನ ಮೇಘ ಎಂಬ ಖಾಸಗಿ ಕಂಪನಿ ವಹಿಸಿಕೊಂಡಿದ್ದು, ಬೃಹತ್ ಪ್ರಮಾಣದ ಟ್ಯಾಂಕ್ಗಳ ನಿರ್ಮಾಣದ ಕಾಮಾಗಾರಿಗಳು, ಜಲಶುದ್ಧೀಕರಣ ಘಟಕದ ಕಾಮಾಗಾರಿ, ಹಾಗೂ ಪಟ್ಟಣದ ಜೇನುಕಲ್ ನಗರದಲ್ಲಿ ಟ್ಯಾಂಕ್ ನಿರ್ಮಾಣದ ಕಾಮಾಗಾರಿಗಳು ಅತ್ಯಂತ ಶೀರ್ಘವಾಗಿ ನಡೆಯಬೇಕಾಗಿದ್ದು, ಇದೇ ತಿಂಗಳ ಅಂತ್ಯದಲ್ಲಿ ಈ ಎಲ್ಲಾ ಕಾಮಾಗಾರಿಗಳು ಎರಡು ವರ್ಷದ ಕಾಲ ಅವಧಿಯಂತೆ ಸಂಪೂರ್ಣಗೊಳ್ಳಬೇಕಾಗಿದೆ.
ಆದರೆ, ಪಟ್ಟಣದಲ್ಲಿನ ಜೇನುಕಲ್ ನಗರದ ಗುಡ್ಡದ ಬಳಿಯಲ್ಲಿನ ಟ್ಯಾಂಕ್ ನಿರ್ಮಾಣ ಕಾಮಗಾರಿಯೂ ಸೇರಿದಂತೆ ಗಂಡಸಿ ಹ್ಯಾಂಡ್ಪೋಸ್ಟ್ ಬಳಿಯಲ್ಲಿನ ಜಲಶುದ್ಧೀಕರಣ ಘಟಕದ ಕಾಮಗಾರಿಗಳು ಶೇ. 60 ಭಾಗ ಮಾತ್ರ ಮುಗಿದಿದ್ದು, ಇನ್ನೂ ಶೇ .40 ಭಾಗದ ಕಾಮಗಾರಿಗಳು ನಡೆಯಬೇಕಾಗಿದೆ.
ಅಲ್ಲದೇ, ಅನೇಕ ಗ್ರಾಮಗಳ ಮಧ್ಯೆ ಹಾದುಹೋಗುವ ಪೈಪ್ಲೈನ್ಗಳ ಜೋಡಣೆಗೆ ಎದುರಾಗಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಕೊಳವೆಗಳ ಜೋಡಣೆ ಕಾರ್ಯಗಳು ತ್ವರಿತಗತಿಯಲ್ಲಿ ಸಾಗಬೇಕಾಗಿದೆ. ಡಿಸೆಂಬರ್ ತಿಂಗಳಲ್ಲಿ ಇಷ್ಟು ಕಾಮಗಾರಿಗಳು ಸಂಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸದ ಕಾರಣ ನೂತನ ವರ್ಷದಲ್ಲಿ ಪಟ್ಟಣದ ಜನತೆ ಪರಿಶುದ್ಧವಾದ ಹೇಮಾವತಿ ನದಿಯ ಮೂಲದ ಕುಡಿಯುವ ನೀರನ್ನು ಕಾಣಲು ಅಸಾಧ್ಯವಾಗಿದ್ದು, ಇನ್ನೂ ಹಲವಾರು ತಿಂಗಳು ಜಾತಕ ಪಕ್ಷಿಗಳಂತೆ ಕಾಯುವುದು ಅನಿವಾರ್ಯವಾಗಿದೆ.
-ಪಿ. ಶಾಂತಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

