ಮರೀಚಿಕೆಯಾಗುತ್ತಿರುವ ಬರ ಪರಿಹಾರ
ಹಾಸನ: ಜಿಲ್ಲೆಯ ಬೇಲೂರು ಮತ್ತು ಅರಕಲಗೂಡು ತಾಲೂಕುಗಳನ್ನು ಮಾತ್ರ ಬರ ಪಟ್ಟಿಗೆ ಮೂರು ತಿಂಗಳ ಹಿಂದೆ ಸೇರಿಸಿದ್ದ ರಾಜ್ಯ ಸರ್ಕಾರ ಈಗ ಇನ್ನೂ ನಾಲ್ಕು ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಮಳೆ ಇಲ್ಲದೇ ಬೆಳೆ ಕಳೆದುಕೊಂಡ ರೈತರು ಸೂಕ್ತ ಪರಿಹಾರ ಸಿಗುತ್ತದೆ ಎಂಬ ಆಶಾಭಾವನೆಯನ್ನು ಹೊಂದಿದ್ದರು. ಈಗ, ಪರಿಹಾರ ಸಿಗುವ ಸಂಭವ ಕಡಿಮೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳ ಅಧ್ಯಯನ ತಂಡ ನವೆಂಬರ್‌ನಲ್ಲೇ ಜಿಲ್ಲೆಗೆ ಆಗಮಿಸಿ, ಬರ ಪೀಡಿತ ಪ್ರದೇಶಗಳನ್ನು ವೀಕ್ಷಣೆ ಮಾಡಿಕೊಂಡು ಹೋಗಿದ್ದರು. ಇದುವರೆಗೆ ಎಷ್ಟು ಪ್ರಮಾಣದ ಬೆಳೆ ನಷ್ಟವಾಗಿದೆ. ಅದರ ಮೌಲ್ಯ ಎಷ್ಟು ಎಂಬಿತ್ಯಾದಿ ಅಂಶಗಳುಳ್ಳ ವರದಿಯನ್ನು ಸಮಿತಿ ಕೇಂದ್ರಕ್ಕೆ ನೀಡಿಲ್ಲ. ಕೇಂದ್ರಕ್ಕೆ ಕೂಡಲೇ ವರದಿ ನೀಡಿ ಪರಿಹಾರದ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವೂ ಒತ್ತಡ ಹಾಕುತ್ತಿಲ್ಲ.
ಪರಿಹಾರದ ಪ್ರಸ್ತಾಪವಿಲ್ಲ: ಏತನ್ಮಧ್ಯೆ, ಜಿಲ್ಲೆಯ ಕೃಷಿ ಇಲಾಖೆ ಈಗೇನು ರಾಜ್ಯ ಸರ್ಕಾರದಿಂದ ಘೋಷಿಸಿರುವ ಬರ ಪೀಡಿತ ತಾಲೂಕುಗಳಲ್ಲಿ ಮಳೆಯಿಲ್ಲದೇ ತೇವಾಂಶದ ಕೊರತೆಯಿಂದ 54,343 ಹೆಕ್ಟೇರ್ ಪ್ರದೇಶದಲ್ಲಿ ಇದ್ದ ರು. 135 ಕೋಟಿ ಮೌಲ್ಯದ ನಾನಾ ಬೆಳೆ ನಷ್ಟವಾಗಿದೆ ಎಂದು ವರದಿ ನೀಡಿದೆ. ಈ ಬಗ್ಗೆಯೂ ಯಾವುದೇ ಚಕಾರವಿಲ್ಲ. ಮತ್ತೊಂದು ಆತಂಕಕಾರಿ ಅಂಶವೆಂದರೆ, ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಸಮಸ್ಯೆ ಮತ್ತು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆಯೇ ಹೊರತು ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಬಗ್ಗೆ ಪ್ರಸ್ತಾಪ ಮಾಡಿಲ್ಲ.
ಬರ ಪೀಡಿತ ತಾಲೂಕುಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮತ್ತು ಗೋಶಾಲೆ ಆರಂಭ ಮಾಡಬೇಕಾಗಿರುವುದರಿಂದ ತುರ್ತಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಬೆಳೆ ನಷ್ಟವಾಗಿ ರೈತರು ಎರಡು ತಿಂಗಳಿಂದ ತೊಂದರೆ ಅನುಭವಿಸುತ್ತಿದ್ದರೂ ಬೆಳೆ ಪರಿಹಾರ ನೀಡಿಲ್ಲ. ಅಂದ ಮೇಲೆ ಗೋಶಾಲೆ ತೆರೆಯಲು ಸರ್ಕಾರ ಹಣ ನೀಡುತ್ತದೆಯೇ ಎಂದು ಪ್ರಶ್ನಿಸಲಾಗುತ್ತಿದೆ.
ಎಲ್ಲವೂ ಗೊಂದಲಮಯ: ಒಂದು ಕಡೆ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಕೇಂದ್ರ ತಂಡ ಇನ್ನೂ ವರದಿ ನೀಡಿಲ್ಲ. ಮತ್ತೊಂದು ಕಡೆ ಜಿಲ್ಲಾ ಕೃಷಿ ಇಲಾಖೆ ಬೆಳೆ ನಷ್ಟದ ಪ್ರಮಾಣವನ್ನು ತಿಳಿಸಿದೆ. ಅದಕ್ಕೂ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರ ಹೊರಡಿಸಿರುವ ಬರ ಪೀಡಿತ ತಾಲೂಕುಗಳಿಗೆ ಬೆಳೆ ಪರಿಹಾರ ನೀಡುವ ವಿಚಾರ ಪ್ರಸ್ತಾಪ ಮಾಡಿಲ್ಲ. ಹೀಗೆ ಜನರನ್ನು ಗೊಂದಲದಲ್ಲಿ ಇಟ್ಟು ವಂಚಿಸಲಾಗುತ್ತಿದೆ ಎಂದು ರೈತ ಮುಖಂಡ ಕಣಗಾಲು ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿಯಲ್ಲೇನಿದೆ?: ಕೃಷಿ ಇಲಾಖೆ ಸರ್ಕಾರಕ್ಕೆ ನೀಡಿರುವ ವರದಿ ಪ್ರಕಾರ, ಮಳೆ ಇಲ್ಲದ ಕಾರಣ ತೇವಾಂಶದ ಕೊರತೆ ಉಂಟಾಗಿ ಚನ್ನರಾಯಪಟ್ಟಣ ತಾಲೂಕಿನ 7010 ಹೆಕ್ಟೇರ್‌ನಲ್ಲಿ, ಅರಸೀಕೆರೆ ತಾಲೂಕು- 17, 768 ಹೆಕ್ಟೇರ್, ಬೇಲೂರು- 5625 ಹೆಕ್ಟೇರ್, ಹಾಸನ ತಾಲೂಕು 10,230 ಹೆಕ್ಟೇರ್, ಹೊಳೆನರಸೀಪುರ ತಾಲೂಕು- 4225 ಹೆಕ್ಟೇರ್ ಮತ್ತು ಅರಕಲಗೂಡು ತಾಲೂಕಿನ 9485 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ.
ಕೇಂದ್ರ, ರಾಜ್ಯಕ್ಕೆ ಮನವರಿಕೆ: ಕೇಂದ್ರ ಅಧ್ಯಯನ ತಂಡಕ್ಕೆ ಮತ್ತು ರಾಜ್ಯದ ಉನ್ನತಾಧಿಕಾರಿಗಳಿಗೆ ಜಿಲ್ಲೆಯಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಮಳೆ ಕಡಿಮೆ ಆಗಿದೆ. ಆದ್ದರಿಂದ ರು. 135 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವರಾಜು ಕನ್ನಡಪ್ರಭ ತಿಳಿಸಿದ್ದಾರೆ.
ಶಾಸಕರೂ ಅಸಮಾಧಾನ: ಬೇಲೂರು ತಾಲೂಕಿನ ಕಾಂಗ್ರೆಸ್ ಶಾಸಕ ವೈ.ಎನ್. ರುದ್ರೇಶ್ ಗೌಡರು, ತಮ್ಮ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿ 3 ತಿಂಗಳಾಯ್ತು. ಇನ್ನೂ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಶಾಸಕರ ನಿಧಿಗೆ ನೀಡಿದ್ದ ಹಣವನ್ನೆಲ್ಲಾ ಬೋರ್‌ವೆಲ್ ಕೊರೆಸಲು ವೆಚ್ಚ ಮಾಡಲಾಗಿದೆ. ಬೇರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಇಲ್ಲ.
ನನ್ನ 25 ವರ್ಷಗಳ ರಾಜಕಾರಣದಲ್ಲಿ ಬರ ಎಂದು ಘೋಷಣೆ ಮಾಡಿ 3 ತಿಂಗಳಾದ್ರೂ ಹಣ ಬಿಡುಗಡೆ ಮಾಡದೇ ಇರುವ ಸರ್ಕಾರವನ್ನು ನೋಡಿರಲಿಲ್ಲ. ಈಗ ನೋಡಬೇಕಾಗಿದೆ ಎಂದು ತುಂಬಿದ ಸಭೆಯಲ್ಲಿ ಉಸ್ತುವಾರಿ ಸಚಿವ ಡಾ.ಎಚ್.ಎಸ್. ಮಹಾದೇವಪ್ಪನವರ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಕೂಡಲೇ ರಾಜ್ಯ ಸರ್ಕಾರ, ಕೃಷಿ ಇಲಾಖೆ ನೀಡಿರುವ ವರದಿಯನ್ವಯ ಹಣ ಬಿಡುಗಡೆ ಮಾಡುವ ಮೂಲಕ ರೈತರ ಬಗ್ಗೆ ಇರುವ ಕಾಳಚಿಯನ್ನು ಪ್ರದರ್ಶಿಸಬೇಕಾಗಿದೆ.
-ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

