ಹಾಸನ

ಲಕ್ಷ್ಮೀಪುರ ಬಡಾವಣೆಗೆ ಕಲುಷಿತ ನೀರು: ಆಕ್ರೋಶ

Published On :

ಅರಸೀಕೆರೆ: ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿನ ಎಚ್.ಎಂ.ಎಸ್ ರಸ್ತೆಯಲ್ಲಿನ ಅನೇಕ ಮನೆಗಳಿಗೆ ಭಾನುವಾರ ಬೆಳಗ್ಗೆ ಕಲುಷಿತ ನೀರು ಪೂರೈಕೆಯಾದ ವಿಷಯ ತಿಳಿದು ಭೇಟಿ ನೀಡಿದ ಪುರಸಭಾಧ್ಯಕ್ಷ ಮೋಹನ್ ಕುಮಾರ್ ತಕ್ಷಣ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಂಡರು. ಅಲ್ಲದೇ,ಕಲುಷಿತ ನೀರನ್ನು ಯಾರು ಬಳಸದಂತೆ ಮನವಿ ಮಾಡಿದರು.
ಇತ್ತೀಚಿಗೆ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ನಡೆಯುತ್ತಿರುವ ಹೊಸದಾಗಿ ಕುಡಿಯುವ ನೀರಿನ ಪೈಪ್‌ಲೈನ್ ಮಾರ್ಗದ ಜೋಡಣೆ, ಮತ್ತು ಹೊಸದಾದ ಒಳಚರಂಡಿ ವ್ಯವಸ್ಥೆಯ ಪೈಪ್‌ಲೈನ್‌ಗಳ ಜೋಡಣೆ ಕಾಮಗಾರಿಗಳು ನಡೆಯುತ್ತಿದೆ. ಈ ಹೊಸ ಕಾಮಗಾರಿ ಮಾಡುವ ವೇಳೆಯಲ್ಲಿ ಕುಡಿಯುವ ನೀರಿನ ಸರಬರಾಜಿನ ಹಳೆಯ ಪೈಪುಗಳು ತುಂಡಾಗಿ ಹಾಳಾಗುತ್ತಿರುವುದರಿಂದ ಇಂತಹ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಗುತ್ತಿಗೆದಾರರು ಹೆಚ್ಚಿನ ಆಸಕ್ತಿ ವಹಿಸಿ ಹಾಳಾದ ಪೈಪುಗಳ ಜೋಡಣೆ ಮಾಡದ ಕಾರಣ ಕುಡಿಯುವ ನೀರು ಕಲುಷಿತಗೊಂಡು ಮನೆಗಳಿಗೆ ಬರುತ್ತಿರುವುದು ಸರ್ವೇ ಸಾಮಾನ್ಯ ಸಂಗತಿ ಎಂಬತಾಗಿದೆ.
ಅಸಮಾಧಾನ: ಇಂತಹ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರತಿನಿತ್ಯ ಸಾರ್ವಜನಿಕರು ಒಂದಲ್ಲಾ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ ಎಂದು ಇಲ್ಲಿನ ನಾಗರಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷರ ಭೇಟಿ: ಪುರಸಭೆಯ ಸಿಬ್ಬಂದಿ ವರ್ಗ ಶನಿವಾರ ಮಧ್ಯಾಹ್ನ ಆದಿಚುಂಚನಗಿರಿ ಶಾಲೆಯ ಸಮೀಪ ನಡೆಸಿದ ಕಾಮಗಾರಿ ಕಾರಣ ಇಲ್ಲಿನ ಎಚ್.ಎಂ.ಎಸ್. ರಸ್ತೆಯ ಎರಡು ಬದಿಗಳ 12 ಮತ್ತು 13ನೇ ವಾರ್ಡ್‌ಗಳ ಮನೆಗಳಿಗೆ ಮಣ್ಣು ಮಿಶ್ರಿತ ಕಲುಷಿತ ನೀರು ಪೂರೈಕೆಯಾಗಿದ್ದನ್ನು ಕಂಡು ಗಾಬರಿಗೊಂಡ ನಗರ ಬಿ.ಜೆ.ಪಿ. ಅಧ್ಯಕ್ಷ ಕೆ.ವಿ. ಹಿರಣ್ಣಯ್ಯ ಅವರು ಪುರಸಭಾ ಅಧ್ಯಕ್ಷರಾದ ಮೋಹನ್ ಕುಮಾರ್ ಮತ್ತು ಸುದ್ದಿಮಾದ್ಯಮಗಳ ಗಮನಕ್ಕೆ ತಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷರು ಪೈಪ್‌ಲೈನ್ ಹಾಳಾದ ಜಾಗವನ್ನು ಪರಿಶೀಲಿಸಿದರು.   
ಈ ಜಾಗದಲ್ಲಿ ಒಳಚರಂಡಿ ಪೈಪ್‌ಲೈನ್ ಹಾದುಹೋಗಿರುವ ಕಾರಣ ಇಂದು ಪೂರೈಕೆಯಾದ ನೀರನ್ನು ಯಾರು ಕೂಡ ಬಳಸದೇ ಇದ್ದು, ನಾಳೆಯ ದಿನ ಹೊಸದಾಗಿ ಬರುವ ನೀರನ್ನು ಪರಿಶೀಲಿಸಿ ಬಳಸಬೇಕೆಂದು ಮನವಿ ಮಾಡಿದರು. ತಕ್ಷಣ ಪುರಸಭಾ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಪೈಪ್‌ಲೈನ್ ರಿಪೇರಿ ಕಾರ್ಯವನ್ನು ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಕೆ.ವಿ. ಹಿರಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್ ಹಾಗೂ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಆರ್.ಅನಂತಕುಮಾರ್ ಹಾಗೂ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.