ಒಂಟಿಸಲಗ ಸೆರೆ ಕಾರ್ಯಾಚರಣೆಗೆ ಗಜಪಡೆ ಆಗಮನ
ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ನರಹಂತಕ ಒಂಟಿಸಲಗವ ಹಿಡಿಯುವ ಕಾರ್ಯಾಚರಣೆ ಭಾನುವಾರ ಭರದ ಸಿದ್ಧತೆಗಳು ನಡೆದವು.
ಸಿಬ್ಬಂದಿಗೆ ಡೇರೆಗಳು: ನಾಗರಹೊಳೆ ಕ್ಯಾಂಪ್ನಿಂದ ಅರ್ಜುನ, ಅಭಿಮನ್ಯು ಆನೆಗಳು ಜಿಲ್ಲೆಯ ಗಡಿ ಭಾನುವಾರ ಮಧ್ಯಾಹ್ನ ತಲುಪಿದರೆ, ಕೊಡಗಿನ ಕೆ. ಗುಡಿ ಕ್ಯಾಂಪಿನಿಂದ ವಿಕ್ರಂ ಹಾಗೂ ಪ್ರಶಾಂತ ಆನೆಗಳು ಲಾರಿಯಲ್ಲಿ ತಾಲೂಕಿನ ಹರಿಹಳ್ಳಿ ಗ್ರಾಮಕ್ಕೆ ಸಂಜೆ ವೇಳೆ ಆಗಮಿಸಿದವು. ಆರ್ಎಫ್ಓ ದೇವರಾಜ್ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಆನೆಗಳನ್ನು ಸ್ವಾಗತಿಸಿದರು.
ಈಗಾಗಲೇ ಕ್ಯಾಂಪ್ನ ನಾಲ್ಕು ಕಡೆಗಳಲ್ಲಿ ಡೇರೆಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ ಮಾವುತರು, ಕಾವಾಡಿಗಳಿಗೆ ಎರಡು ಕಡೆ ಡೇರೆಗಳು ಮೀಸಲಾಗಿದ್ದರೆ, ಉಳಿದ ಡೇರೆಗಳಲ್ಲಿ ಇತರೆ ಸಿಬ್ಬಂದಿ ವರ್ಗಕ್ಕೆ ಮೀಸಲಿಡಲಾಗಿದೆ.
ಆಹಾರ ವ್ಯವಸ್ಥೆಯಿದೆ: ಪಕ್ಕದ ಮಾಗಡಿಹಳ್ಳಿ ಪಕ್ಕದಲ್ಲೇ ಇರುವ ಕಾಫಿ ತೋಟದ ಮನೆಯೊಂದನ್ನು ಬಾಡಿಗೆ ಪಡೆದು ವೈದ್ಯರು, ಅಧಿಕಾರಿಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಾಕಾನೆಗಳನ್ನು ಕಟ್ಟಿಹಾಕಲು ಪ್ರತ್ಯೇಕ ಸ್ಥಳ ಕಲ್ಪಿಸಲಾಗಿದ್ದು, ಅಲ್ಲಿ ಆನೆಗಳಿಗೆ ಬೇಕಾದ ಆಹಾರ ವ್ಯವಸ್ಥೆಯನ್ನು ಅರಣ್ಯಾಧಿಕಾರಿಗಳು ಕಲ್ಪಿಸಿದ್ದಾರೆ.
ಎಲ್ಲರಿಗೂ ಊಟ, ವಸತಿ ವ್ಯವಸ್ಥೆ: ಈಗಾಗಲೇ ಸಕಲ ಸಿದ್ಧತೆಗಳು ಸಂಪೂರ್ಣಗೊಂಡಿದ್ದು, ಕಾಡಾನೆಯನ್ನು ಹಿಡಿದರೆ ಅದಕ್ಕೆ ಕಟ್ಟಲು ಸೆಣಬಿನ ಹಗ್ಗವನ್ನು ಹೆಣೆದು, ಸೂಕ್ತ ರೀತಿಯಲ್ಲಿ ಇರಿಸಲಾಗಿದೆ. ಉಳಿದಂತೆ ಸರಪಳಿ, ಬೇಡಿ, ಹಗ್ಗಗಳನ್ನೂ ಇರಿಸಲಾಗಿದೆ. ಈಗ ಹಿಡಿಯಲು ಗುರುತಿಸಿರುವ ಬಲಿಷ್ಠ ಒಂಟಿ ಸಲಗವನ್ನು ಕೊಂಡೊಯ್ಯಲು ಗಟ್ಟಿಮುಟ್ಟಾದ 10 ಚಕ್ರದ ಲಾರಿ ಹಾಗೂ ಕಬ್ಬಿಣದ ಪಂಜರವನ್ನು ಲಾರಿಗೆ ಅಳವಡಿಸಲಾಗಿದೆ. ಆನೆ ಕಾರ್ಯಾಚರಣೆಗೆ ಬರುವ ಮಾವುತರು, ಕಾವಾಡಿಗರು, ಶಾರ್ಪ್ ಶೂಟರ್ಗಳು, ವೈದ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಅಧಿಕಾರಿ ವರ್ಗದವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಾಚರಣೆಗೆ ಸೂಕ್ತ ಸ್ಥಳ: ಕಾಡಾನೆಗಳು ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ 2 ತಂಡಗಳಲ್ಲಿದ್ದು, ಐದೂರು ಅರಣ್ಯ ಪ್ರದೇಶದಲ್ಲಿ ಒಂದು ತಂಡ, ಮಳಗಳಲೆ ಅರಣ್ಯ ಪ್ರದೇಶದಲ್ಲಿ ಮತ್ತೊಂದು ತಂಡ ಬೀಡುಬಿಟ್ಟಿವೆ. ಹಿಡಿಯಲು ಉದ್ದೇಶಿಸಿರುವ ಒಂಟಿ ಸಲಗ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲೇ ಪ್ರತ್ಯೇಕವಾಗಿ ಬೀಡುಬಿಟ್ಟಿದೆ. ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಶುಕ್ರವಾರ ಬೆಳಗ್ಗಿನಿಂದಲೂ ಅಹೋರಾತ್ರಿ ಆನೆಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈಗಿರುವ ಮಾಗಡಿಹಳ್ಳಿ ಕ್ಯಾಂಪ್ ದೊಡ್ಡಬೆಟ್ಟ, ರಂಗನಬೆಟ್ಟ, ಕೊಡಗಿನ ಉಂಬಳಿ ಬೆಟ್ಟ, ಕರಡಿಬೆಟ್ಟ ಹಾಗೂ ಸಕಲೇಶಪುರ ಗಡಿಯ ಕೆರೋಡಿ ಅರಣ್ಯ ಪ್ರದೇಶಕ್ಕೆ ಕೇಂದ್ರ ಸ್ಥಾನದಲ್ಲಿ ಇರುವುದರ ಜತೆಗೆ ಹೇಮಾವತಿ ಹಿನ್ನೀರಿನ ಪಕ್ಕದಲ್ಲೇ ನಿರ್ಮಿಸಿರುವುದು ಆನೆ ಹಿಡಿಯುವ ಕಾರ್ಯಾಚರಣೆಗೆ ಸೂಕ್ತ ಸ್ಥಳವಾಗಿದೆ.
ಕಾಡಾನೆಗಳನ್ನು ಹಿಡಿದ ನಂತರ ಸಾಗಿಸಲು ಹಾಗೂ ಈಗ ಬರುತ್ತಿರುವ ಸಾಕಾನೆಗಳನ್ನು ಲಾರಿಗಳಿಂದ ಇಳಿಸಲು ಹಾಗೂ ಪುನಃ ಹತ್ತಿಸಲು, ಲಾರಿ ನಿಲ್ಲಿಸಲು ಸಮತಟ್ಟಾದ ಪ್ರದೇಶವಾಗಿದೆ. ಸಾಕಾನೆಗಳನ್ನು ಕಟ್ಟಲು ನೆರಳಿರುವ ಮರಗಳು ಈ ಭಾಗದಲ್ಲಿ ಇರುವುದು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಕ್ತ ಸ್ಥಳವಾಗಿರುವುದಕ್ಕೆ ಮಾಗಡಿಹಳ್ಳಿಯಲ್ಲಿ ಕ್ಯಾಂಪ್ ನಿರ್ಮಿಸಲಾಗಿದೆ.
ಕ್ಯಾಂಪ್ ಸ್ಥಳದ ಬಗ್ಗೆ ಅಸಮಾಧಾನ: ಗುರುವಾರ ಕಾಡಾನೆ ದಾಳಿಗೆ ತುತ್ತಾಗಿ ಮಹಿಳೆ ಮೃತಪಟ್ಟ ಸಂದರ್ಭದಲ್ಲಿ ರೊಚ್ಚಿಗೆದ್ದಿದ್ದ ಗ್ರಾಮಸ್ಥರು ನಾಗಾವರ, ಮಾದಿಹಳ್ಳಿ ಬಳಿ ಒಂದು ಕ್ಯಾಂಪ್ ಹಾಗೂ ಮಾಗಡಿಹಳ್ಳಿ ಬಳಿ ಮತ್ತೊಂದು ಕ್ಯಾಂಪ್ ನಿರ್ಮಿಸುವಂತೆ ಒತ್ತಾಯಿಸಿದ್ದರು. ಎರಡೂ ಕಡೆ ಕ್ಯಾಂಪ್ ಮಾಡಿದರೆ ತಮ್ಮ ತಾಲೂಕಿನ ಹಾಗೂ ಕೊಡಗಿನ ಉಂಬಳಿ ಬೆಟ್ಟ ಅರಣ್ಯ ಪ್ರದೇಶಗಳಲ್ಲಿ ಆನೆಗಳನ್ನು ಹಿಡಿದರೆ ಈ ಎರಡೂ ಕ್ಯಾಂಪ್ಗಳ ಸನಿಹದಲ್ಲಿ ಇರುತ್ತವೆ. ಸಕಲೇಶಪುರ ತಾಲೂಕಿನಲ್ಲಿ ಇರುವ ಆನೆಗಳನ್ನು ಹಿಡಿಯುವ ಸಂದರ್ಭದಲ್ಲಿ ಬೇಕಾದರೆ ಆ ಭಾಗದಲ್ಲೇ ಕ್ಯಾಂಪ್ ನಿರ್ಮಿಸುವುದು ಸೂಕ್ತವಾಗುತ್ತದೆ.
ಏಕೆಂದರೆ ಸಕಲೇಶಪುರದಲ್ಲಿ ಕಳೆದ ಬಾರಿ ಆನೆ ಹಿಡಿದ ಸಂದರ್ಭದಲ್ಲಿ ಸಾಕಾನೆಗಳನ್ನು ಮಾಗಡಿಹಳ್ಳಿ ಕ್ಯಾಂಪ್ನಿಂದ ಪ್ರತಿದಿನ ಲಾರಿಗಳಲ್ಲಿ ಸಾಗಿಸುವುದು, ಪುನಃ ಕ್ಯಾಂಪ್ಗೆ ತಂದುಬಿಡುವುದು ಅರಣ್ಯ ಇಲಾಖೆಗೆ ಅತ್ಯಂತ ಕಷ್ಟವಾದ ಕೆಲಸವಾಗಿತ್ತು. ಅಷ್ಟೇ ಅಲ್ಲದೆ ಕೆರೋಡಿ ಬಳಿ ಆನೆ ಹಿಡಿದಾಗ ಆ ಆನೆಯನ್ನು ಸಾಗಿಸಲು ಸೂಕ್ತ ಸ್ಥಳಕ್ಕೆ ತರುವ ಸಂದರ್ಭದಲ್ಲಿ ಆನೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನು ಜಖಂಗೊಳಿಸಿ ಅಕ್ಕಪಕ್ಕದಲ್ಲೇ ನಿಂತಿದ್ದ ಹತ್ತಾರು ಕಾರು, ಬೈಕ್ಗಳೂ ಸಹ ಆನೆ ದಾಳಿಗೆ ಈಡಾಗುವ ಸಂಭವದಿಂದ ಪಾರಾಗಿದ್ದವು. ಅಲ್ಲದೆ ಕುತೂಹಲದಿಂದ ವೀಕ್ಷಿಸಲು ಬಂದಿದ್ದ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸ್ ಹಾಗೂ ಅರಣ್ಯ ಇಲಾಖೆ ಹರಸಾಹಸಪಡಬೇಕಾಗಿತ್ತು.
ಆದರೆ, ಈ ಬಗ್ಗೆ ಪರಿಸರವಾದಿ ಹೆಮ್ಮಿಗೆ ಮೋಹನ್ ಮಾತನಾಡಿ, ಈಗ ಕ್ಯಾಂಪ್ ನಿರ್ಮಿಸಿರುವ ಸ್ಥಳ, ಯಸಳೂರು, ಕೊಡಗಿನ ಉಂಬಳಿ ಬೆಟ್ಟ ಅರಣ್ಯ ಪ್ರದೇಶ, ತಾಲೂಕಿನ ದೊಡ್ಡಬೆಟ್ಟ, ರಂಗನಬೆಟ್ಟ, ಕರಡಿಬೆಟ್ಟ ಅರಣ್ಯ ಪ್ರದೇಶಗಳಿಗೆ ಕೇಂದ್ರ ಸ್ಥಳವಾಗಿದೆ. ಅಧಿಕಾರಿಗಳು ಕಳೆದ ಬಾರಿ ನಿರ್ಮಿಸಿದ್ದ ಮಾಗಡಿಹಳ್ಳಿ ಕ್ಯಾಂಪಿಗೆ ಮಾವುತರು, ಕಾವಾಡಿಗಳು ಹಾಗೂ ಸಾಕಾನೆಗಳು ಈಗಾಗಲೇ ಹೊಂದಿಕೊಂಡಿರುವುದರಿಂದಾಗಿ ಹಾಗೂ ವಿಶಾಲವಾದ ಬಯಲು ಪ್ರದೇಶ, ಹಿನ್ನೀರಿನ ವ್ಯವಸ್ಥೆ ಇರುವುದರಿಂದಾಗಿ ಈ ಸ್ಥಳದಲ್ಲಿ ಕ್ಯಾಂಪ್ ನಿರ್ಮಿಸಿರುವುದೇ ಸೂಕ್ತ ಎಂದರು.
ಆನೆ ಹಿಡಿಯಲು ಬೇಕಾದರೂ ನಾವು ಸಿದ್ಧರಿದ್ದೇವೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಈಗ ಮೊದಲ ಹಂತವಾಗಿ ಒಂದು ಆನೆಯನ್ನು ಹಿಡಿಯಲಷ್ಟೇ ಅನುಮತಿ ದೊರೆತಿದೆ. ಎಲ್ಲಾ ಆನೆಗಳನ್ನು ಹಿಡಿಯಲು ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರ ಆದೇಶದ ಪ್ರತಿಯನ್ನು ಹಿರಿಯ ಅರಣ್ಯಾಧಿಕಾರಿಗಳಿಗೆ ಫ್ಯಾಕ್ಸ್ ಮಾಡಿದ್ದಾರೆ ಎಂಬುದು ಸಾರ್ವಜನಿಕ ಚರ್ಚಿತವಾಗುತ್ತಿದರೂ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
- ಆರ್ಎಫ್ಓ ದೇವರಾಜ್
ಈ ಆನೆಗಳಿಂದ ಸಲಗ ಹಿಡಿಯಲು ಸಾಧ್ಯವಿಲ್ಲ
ಕಾರಗೋಡು ಗ್ರಾಮ ಪಂಚಾಯ್ತಿ ಸದಸ್ಯೆ ಕಾವೇರಿ ನಂದಕುಮಾರ್ ಮಾತನಾಡಿ, ಒಂಟಿ ಸಲಗದೊಂದಿಗೆ ಹೋರಾಡಿ ಅದನ್ನು ಹಿಡಿಯಬೇಕೆಂದರೆ ಅಭಿಮನ್ಯು ರೀತಿಯ 10 ಆನೆಗಳು ಬೇಕು. ಈಗ ಬರುತ್ತಿರುವ 5 ಆನೆಗಳಿಂದ ಗುರುತಿಸಿರುವ ಬಲಿಷ್ಠ ಕಾಡಾನೆ ಹಿಡಿಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.
-ಎಚ್.ವಿ.ರಾಘವೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

