ಕರ್ತವ್ಯ ಲೋಪ ಮುಚ್ಚಲು ಸೆಸ್ಕ್ ನೌಕರರಿಗೆ ದಂಡ!
ಕ.ಪ್ರ.ವಾರ್ತೆ , ಹೊಳೆನರಸೀಪುರ , ಜ.12
ಮೀಟರ್ ಅಳವಡಿಸದೇ ಇದ್ದರೂ ಇಲ್ಲಿನ ವಸತಿ ಗೃಹಗಳಿಗೆ ವಿದ್ಯುತ್ ಸಂಪರ್ಕ ನೀಡಿ, ಸೆಸ್ಕ್ ನೌಕರರಿಗೆ ದಂಡ ವಿಧಿಸಿರುವ ಪ್ರಕರಣ ಇಲ್ಲಿನ ವಿದ್ಯುತ್ ಇಲಾಖೆಯಲ್ಲಿ ನಡೆದಿದೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆ ಮಾತಿನಂತೆ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ನೌಕರರು ಸಾವಿರಾರು ರು. ದಂಡವನ್ನು ತೆತ್ತಿರುವ ಪ್ರಕರಣ ಬಯಲಿಗೆ ಬಂದಿದೆ.
ವರದಿ ಬಂದಿತ್ತು: ಎರಡು ತಿಂಗಳ ಹಿಂದೆ 'ಕನ್ನಡಪ್ರಭ' ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ನಿಗಮ ಕಚೇರಿ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಿದ್ದ ವಸತಿ ಗೃಹಗಳಿಗೆ ವಿದ್ಯುತ್ ಮೀಟರ್ ಅಳವಡಿಸದೇ ಇಲಾಖೆಯ ಸಿಬ್ಬಂದಿಗಳಿಗೆ ಮನೆಗಳನ್ನು ವಿತರಿಸಲಾಗಿತ್ತು. ಪರಿಣಾಮ ಸುಮಾರು ಆರು ತಿಂಗಳಿನಿಂದಲೂ ವಿದ್ಯುತ್ ಬಿಲ್ ಬಾರದೇ ನೇರವಾಗಿ ವಿದ್ಯುತ್ ಪಡೆಯುತ್ತಿರುವ ಕುರಿತಂತೆ ವರದಿ ಪ್ರಕಟಿಸಿತ್ತು.
ಬಲವಂತದ ದಂಡ: ಸುದ್ದಿ ಪ್ರಕಟಣೆ ನಂತರ ಇಲಾಖೆಯ ಅಧಿಕಾರಿ ನರಸಿಂಹಮೂರ್ತಿ ಅವರು, ಈ ಮೀಟರ್ ಇಲ್ಲದ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ಕೂಡಲೇ ಈ ಕುರಿತಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಆನಂತರ ಅಧಿಕಾರಿಗಳು ಹಾಗೂ ಗುತ್ತಿಗೆದಾರ ತಮ್ಮ ಕರ್ತವ್ಯ ಲೋಪವನ್ನು ಮುಚ್ಚಿಹಾಕಲು ಏಕಾಏಕಿ ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ಇಲಾಖೆಯ ಸಿಬ್ಬಂದಿ ಮೇಲೆ ಹೊರೆ ಹೊರೆಸಿ ಅವರಿಂದ ಬಲವಂತವಾಗಿ ಸಾವಿರಾರು ರು. ದಂಡ ವಸೂಲಿ ಮಾಡಿದ್ದಾರೆ.
ಇಲಾಖೆಯ ನೀತಿ ನಿಯಮಾವಳಿ ಪ್ರಕಾರ ಸರ್ಕಾರಿ ವಸತಿ ಸಂಕೀರ್ಣದ ಮನೆಗಳಿಗೆ ಮೀಟರ್ ಆಳವಡಿಕೆ ಮಾಡಿಸಿದ ನಂತರ, ಅವುಗಳನ್ನು ಸಿಬ್ಬಂದಿಗೆ ವಿತರಿಸಬೇಕಿತ್ತು.
ಆದರೆ ಅಧಿಕಾರಿಗಳು ವಸತಿ ಸಂಕೀರ್ಣವನ್ನು ತಮ್ಮ ವಶಕ್ಕೆ ಪಡೆಯುವ ಮುನ್ನ ಕಾನೂನು ಕ್ರಮಗಳನ್ನು ಪರಿಶೀಲಿಸಿ ಪಡೆಯಬೇಕಿತ್ತು. ಆದರೆ ಇದೀಗ ತಾವು ಮಾಡಿರುವ ತಪ್ಪಿಗೆ ಸಿಬ್ಬಂದಿ ಮೇಲೆ ಆರ್ಥಿಕ ಹೊರೆ ಹೊರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದಕ್ಕೆ ಅಧಿಕಾರಿಗಳೇ ಉತ್ತರಿಸಬೇಕಿದೆ. ಅಧಿಕಾರಿಗಳ ಈ ಕ್ರಮದಿಂದಾಗಿ ಸದರಿ ಮನೆಗಳಲ್ಲಿ ವಾಸವಿರುವ ಸಿಬ್ಬಂದಿ ಇದೀಗ ದಂಡ ತೆರಬೇಕಾಗಿ ಬಂದಿದೆ.
ಅಧಿಕಾರಿಗಳ ಬೇಜಾವ್ದಾರಿತನಕ್ಕೆ ಸಿಬ್ಬಂದಿಗಳ ಮೇಲೆ ಆರ್ಥಿಕ ಬರೆ ಎಳೆಯುವುದು ಸರಿಯೇ? ಇನ್ನಾದರೂ, ಈ ಕ್ರಮ ನಿಲ್ಲುವುದೇ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

