ಹಾಸನ

ಎತ್ತಿನಹೊಳೆಯಿಂದ ಜಿಲ್ಲೆಗೆ 3 ಟಿಎಂಸಿ ನೀರು

Published On :

ಕನ್ನಡಪ್ರಭ ವಾರ್ತೆ, ಹಾಸನ. ಜ 13
ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ 3 ಟಿಎಂಸಿ ನೀರನ್ನು ಒದಗಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ನೀಡಿದ್ದು, ನೀರು ಒದಗಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಬರಗಾಲದಿಂದ ತತ್ತರಿಸುತ್ತಿದ್ದು, ನಾಲ್ಕೈದು ವರ್ಷಗಳಿಗೊಮ್ಮೆ ಒಂದು ವರ್ಷ ಬರಗಾಲ, ಅಂತರ್ಜಲ ಕುಸಿತ, ತೆಂಗು ಒಣಗುವುದು, ಫ್ಲೋರೈಡ್ ನೀರಿನಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಅದಕ್ಕಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ನೀರು ಒದಗಿಸುವಂತಹ ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ನೀರನ್ನು ಒದಗಿಸುವ ಮೂಲಕ 24 ಟಿಎಂಸಿ ಯನ್ನು 28 ಟಿಎಂಸಿಗೆ ಏರಿಸುವಂತೆ ಒತ್ತಾಯಿಸಿರುವುದಾಗಿ ಹೇಳಿದರು.
ಆಡಳಿತಾತ್ಮಕ ಅನುಮೋದನೆ: ನೀರಾವರಿ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. 24 ಟಿಎಂಸಿ ನೀರನ್ನು ಒದಗಿಸುವ ಈ ಯೋಜನೆ ಆಲೂರು, ಸಾಲಗಾಮೆ, ಬೇಲೂರು, ಅರಸೀಕೆರೆ, ತಿಪಟೂರು, ಕೋಲಾರಕ್ಕೆ ಹೋಗಲಿದೆ. 24 ಟಿಎಂಸಿ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸುವ ರು. 8,323 ಕೋಟಿಗಳ ಯೋಜನೆಗೆ ಆಡಳಿತ ಅನುಮೋದನೆ ಸರ್ಕಾರ ನೀಡಿದೆ ಎಂದರು.
ಸೂಚನೆ: ಕರ್ನಾಟಕ ನೀರಾವರಿ ನಿಗಮದ ತಾಂತ್ರಿಕ ಉಪ ಸಮಿತಿಯು ತೀರುವಳಿ ನೀಡಿರುವ ರು. 3,269 ಕೋಟಿಗಳ ಮೊತ್ತದ ಮೊದಲನೇ ಹಂತದಲ್ಲಿನ 8 ಕಡೆ ಬ್ಯಾರೇಜ್ ನಿರ್ಮಾಣ ಹಾಗೂ ಪಂಪ್‌ಸೆಟ್‌ಗಳನ್ನು ಅಳವಡಿಸಿ ಹರವನಹಳ್ಳಿ ವಿತರಣಾ ಕೇಂದ್ರದವರೆಗಿನ ಏತ ಕಾಮಗಾರಿಗಳನ್ನು ಇಪಿಸಿ ಟರ್ನ್‌ಕೀ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಿದೆ. ಎರಡನೇ ಹಂತದ ಹರವನಹಳ್ಳಿ ವಿತರಣಾ ತೊಟ್ಟಿಯ ನಂತರದ ರೇಖಾ ಅಂದಾಜು ಮೊತ್ತ ರು. 5,054 ಕೋಟಿಗಳ ಕಾಮಗಾರಿಯ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ, ಪೂರ್ಣ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸರ್ಕಾರದ ಅನುಮೋದನೆ ಪಡೆದು ನಂತರ ಕೈಗೆತ್ತಿಕೊಳ್ಳಲು ಸೂಚಿಸಿದೆ.
ಒಪ್ಪಿಗೆ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಮೊದಲನೆ ಹಂತದ ಹರವನಹಳ್ಳಿ ವಿತರಣಾ ತೊಟ್ಟಿಯವರೆಗಿನ 5 ಪ್ಯಾಕೇಜ್‌ಗಳ ಏತ ಕಾಮಗಾರಿಗಳಿಗೆ ಒಟ್ಟು 239 ಹೆಕ್ಟೇರ್ ಭೂಮಿ ಅವಶ್ಯಕವಿದೆ. ಇದರಲ್ಲಿ ಅರಣ್ಯ ಪ್ರದೇಶದ ಭೂಮಿ ಸುಮಾರು 19.02 ಹೆಕ್ಟೇರ್ ಇದೆ. ಎರಡನೇ ಹಂತದ ಕಾಮಗಾರಿಗಳಿಗೆ ಸುಮಾರು 4900 ಹೆಕ್ಟೇರ್ ಭೂಮಿ ಅವಶ್ಯಕತೆ ಇದೆ ಎಂದ ಅವರು, ಯೋಜನೆಗೆ ಸಂಬಂಧಪಟ್ಟವರಿಗೆ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದರು.
ಆರೋಪ: ಬಯಲು ಸೀಮೆಗಳಿಗೆ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಕೈಗೊಂಡಿದೆ. ಆದರೆ ನೀರಾವರಿ ತಜ್ಞ, ಮಣ್ಣಿನ ಮಗ ಎನಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನೀರಾವರಿ ಬಗ್ಗೆ ಚಕಾರ ಎತ್ತಿಲ್ಲ. ನೀರಾವರಿಗೆ ಇಚ್ಛಾಶಕ್ತಿ ತೋರಿಲ್ಲ ಎಂದು ಆರೋಪಿಸಿದ ಅವರು, ಈ ಯೋಜನೆಯನ್ನು ಹಿಂದಿನಿಂದಲೂ ಅವೈಜ್ಞಾನಿಕ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ಗಮನ ಹರಿಸಿಲ್ಲ: ಜಿಲ್ಲೆಗೆ ನೀರಾವರಿ ಆವಶ್ಯಕತೆ ಇದ್ದರೂ ಸಹ ಮಾಜಿ ಪ್ರಧಾನಿ ಈ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ದೇವೇಗೌಡರು ತೆಂಗಿನ ಮರಗಳನ್ನು ತಬ್ಬಿಕೊಂಡು ಕಣ್ಣೀರು ಇಡುತ್ತಿದ್ದಾರೆ. ಆದರೆ ನೀರಾವರಿ ಬಗ್ಗೆ ಗಮನ ಹರಿಸಲಿಲ್ಲ.
 ಹಿಂದೆಯೆ ನೀರಾವರಿ ಯೋಜನೆಯ ಬಗ್ಗೆ ಗಮನ ಹರಿಸಿದ್ದರೆ ನೀರಿನ ಸಮಸ್ಯೆ ಬಗೆಹರಿಯುತ್ತಿತ್ತು ಎಂದ ಅವರು, ಹಿಂದೆ ಈ ಯೋಜನೆಯು ಆಲೂರು, ದುದ್ದ, ಗಂಡಸಿ, ಅರಸೀಕೆರೆ, ಚನ್ನರಾಯಪಟ್ಟಣದ ದಂಡಿಗನಹಳ್ಳಿ ಮೂಲಕ ಹಾದು ಹೋಗುತ್ತಿತ್ತು. ಅದನ್ನು ಎಕನಾಮಿಕ್ ವೇಯಬಿಲಿಟಿ ಆಧಾರದ ಮೇಲೆ ಕೋಲಾರಕ್ಕೆ ಹೋಗುವಂತೆ ಆಗಿದೆ ಎಂದರು.
ದೇವೇಗೌಡರು ಕೇವಲ ಕುಟುಂಬ ರಾಜಕಾರಣ, ಅಧಿಕಾರ ಹಂಚಿಕೆ ಮಾಡಿ ಕೇವಲ ಕಾಲ ಹರಣ ಮಾಡಿದ್ದಾರೆ. ಬೇಲೂರು ಮಾರ್ಗಕ್ಕೆ ಜೆಡಿಎಸ್ ಬದಲಿಸಿದ್ದಾರೆ ಎಂದು ಕಿಡಿಕಾರಿದ ಅವರು, ಗಂಡಸಿಗೆ ನೀರು ಒದಗಿಸಬಾರದು ಎಂಬ ದೃಷ್ಟಿಯಿಂದ ಬದಲಿಸಿದ್ದಾರೆ. ಹಿಂದಿನಿಂದಲೂ ದೇವೇಗೌಡರು ಎತ್ತಿನಹೊಳೆ ಯೋಜನೆಯನ್ನು ಅವೈಜ್ಞಾನಿಕವಾಗಿದೆ ಅಂತ ಹೇಳಿಕೊಂಡು ಬಂದಿದ್ದಾರೆ. ಪುಟ್ಟಸ್ವಾಮಿ ಗೌಡರ ಕಾಚೇನಹಳ್ಳಿ ಏತನೀರಾವರಿ ಕೈಗೊಂಡಾಗ ಅದಕ್ಕೂ ಅಡ್ಡಿಪಡಿಸಿದರು ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ ಹಾಗೂ ಇತರರು ಇದ್ದರು.
ನೀರಾವರಿ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. 24 ಟಿಎಂಸಿ ನೀರನ್ನು ಒದಗಿಸುವ ಈ ಯೋಜನೆ ಆಲೂರು, ಸಾಲಗಾಮೆ, ಬೇಲೂರು, ಅರಸೀಕೆರೆ, ತಿಪಟೂರು, ಕೋಲಾರಕ್ಕೆ ಹೋಗಲಿದೆ. 24 ಟಿಎಂಸಿ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸುವ ರು. 8,323 ಕೋಟಿಗಳ ಯೋಜನೆಗೆ ಆಡಳಿತ ಅನುಮೋದನೆ ಸರ್ಕಾರ ನೀಡಿದೆ
-  ಬಿ. ಶಿವರಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
4 ವರ್ಷಗಳಲ್ಲಿ ಪೂರ್ಣ ನಿರೀಕ್ಷೆ
ಎರಡನೇ ಹಂತದ ಯೋಜನಾ ವರದಿ ತಯಾರಾಗಿದ್ದು, ಸರ್ಕಾರದ ಆದೇಶದಂತೆ ಯೋಜನೆಯ ಮೊದಲನೇ ಹಂತದ ಹರವನಹಳ್ಳಿ ವಿತರಣಾ ತೊಟ್ಟಿಯವರೆಗಿನ ರು. 2,669 ಕೋಟಿ ಮೊತ್ತದ ಏತ ಕಾಮಗಾರಿಗಳನ್ನು ಟರ್ನ್ ಕೀ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಸೂಕ್ತವಾಗಿ 5 ಪ್ಯಾಕೇಜ್‌ಗಳನ್ನು ವಿಂಗಡಿಸಿ, ನಿಗಮದ ನಿರ್ದೇಶಕರ ಮಂಡಳಿಯಿಂದ ಅನುಮೋದನೆ ಪಡೆದು ಯೋಜನೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.