ಹಾಸನ

ಹಬ್ಬಗಳು ಬಾಂಧವ್ಯ ಬೆಸೆಯಬೇಕು

Published On :

ಅರಸೀಕೆರೆ: ಸ್ನೇಹ, ಸೌಹಾರ್ಧದ ಮೂಲಕ ಹಬ್ಬ ಹರಿದಿನಗಳ ಆಚರಣೆ, ಸಮಾಜಗಳ ನಡುವೆ ಬಾಂಧವ್ಯ ಬೆಸೆಯಬೇಕೇ ಹೊರತು ವಿನಾಕಾರಣ ದ್ವೇಷಕ್ಕೆ ಕಾರಣವಾಗಬಾರದು ಎಂದು ಡಿ.ವೈ.ಎಸ್.ಪಿ. ಮಂಜುನಾಥ್ ತಿಳಿಸಿದರು.
ಪಟ್ಟಣದ ಡಿ.ವೈ.ಎಸ್.ಪಿ. ಕಚೇರಿಯಲ್ಲಿ ಮಕರ ಸಂಕ್ರಾಂತಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಭಾನುವಾರ ಏರ್ಪಡಿಸಲಾಗಿದ್ದ ಶಾಂತಿಸಭೆಯನ್ನು ಉದ್ದೇಶಿಸಿ ಮಾತನಾಡಿ, ಯಾವುದೇ ಧರ್ಮಗಳ ಹಬ್ಬದ ಆಚರಣೆ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವ ಉದ್ದೇಶ ಹೊಂದಿರಬೇಕು. ಇದನ್ನು ಅರಿತು ಎರಡೂ ಧರ್ಮೀಯರೂ ಸಂಕ್ರಾಂತಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಸಂತೋಷದಿಂದ ಆಚರಿಸಬೇಕು ಎಂದರು.
ಎಚ್ಚರಿಕೆ: ಹಬ್ಬದ ಆಚರಣೆ ಹೆಸರಿನಲ್ಲಿ ಯಾವುದೇ ಬಂಟಿಂಗ್ಸ್, ಬ್ಯಾನರ್, ಧ್ವಜ ಕಟ್ಟುವ ನೆಪದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕದಡಲು ಯಾರಾದರೂ ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಿದರು.
ಮನವಿ: ಪುರಸಭಾ ಮಾಜಿ ಉಪಾಧ್ಯಕ್ಷ ಅಬ್ದುಲ್ ಜಮೀಲ್ ಮಾತನಾಡಿ, ದಾನ ಧರ್ಮದ ಪ್ರತೀಕವಾದ ಈದ್‌ಮಿಲಾದ್ ಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಣೆ ಮಾಡಲು ಸಿದ್ಧತೆ ನಡೆಸಿದ್ದು ಮಧ್ಯಾಹ್ನ 3ಕ್ಕೆ ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಲಿದ್ದಾರೆ.
ಸಂಜೆ 5ಕ್ಕೆ ಜಾಮೀಯ ಮಸೀದಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ. ಇದಕ್ಕೆ ಹಿಂದೂ ಸಮಾಜ ಬಾಂಧವರು ಮತ್ತು ಪೊಲೀಸ್ ಇಲಾಖೆ ಸಹಕರಿಸುವಂತೆ ಮನವಿ ಮಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್ ಮಾತನಾಡಿ, ಮಕರ ಸಂಕ್ರಾಂತಿ ಹಾಗೂ ಈದ್ ಮಿಲಾದ್ ಹಬ್ಬಗಳ ಈ ಬಾರಿ ಒಟ್ಟಾಗಿ ಬಂದಿದೆಯೋ ಹಾಗೆಯೇ ಹಿಂದೂ-ಮುಸ್ಲಿಂ ಬಾಂಧವರು ಹಬ್ಬವನ್ನು ಒಟ್ಟಾಗಿ, ಸಂತಸದಿಂದ ಹಬ್ಬಗಳನ್ನು ಆಚರಿಸಬೇಕೆಂದು ಹೇಳಿದರು.
ಸಭೆಯಲ್ಲಿ ನಗರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಲೋಕೇಶ್, ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ್ ಹಾಗೂ ಹಿಂದೂ- ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.  
ಬೇಕಾಬಿಟ್ಟಿ ಸಭೆ: ಅಸಮಾಧಾನ
ಶಾಂತಿಸಭೆಗೆ ಹಿಂದೂ- ಮುಸ್ಲಿಂ ಸಮಾಜದ ಮುಖಂಡರನ್ನು ಮತ್ತು ಪತ್ರಕರ್ತರನ್ನು ಆಹ್ವಾನಿಸದೇ ಕೇವಲ ನೆಪಮಾತ್ರಕ್ಕೆ ತಮಗೆ ಬೇಕಾದವರನ್ನು ಕರೆದು ಬೇಕಾಬಿಟ್ಟಿ ಶಾಂತಿಸಭೆ ನಡೆಸಲಾಗುತ್ತಿದೆ ಎಂದು ಎರಡೂ ಸಮಾಜದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಂತಿಸಭೆಗಳು ಕೇವಲ ಸರ್ಕಾರಿ ದಾಖಲೆ ತೋರಿಸಲು ನೆಪಮಾತ್ರಕ್ಕೆ ಮಾಡದೆ ಎರಡೂ ಸಮಾಜದ  ನಡುವೆ ಬಾಂಧವ್ಯ ಬೆಳೆಸುವಂತಹ ಕಾರ್ಯ ಆಗಬೇಕು. ಈ ರೀತಿ ಮುಖಂಡರುಗಳು ಹಾಗೂ ಪತ್ರಕರ್ತರನ್ನು  ಹೊರಗಿಟ್ಟು ಶಾಂತಸಭೆ ಮಾಡುವುದು ಎಷ್ಟರ  ಮಟ್ಟಿಗೆ ಸರಿ ಎಂಬುದನ್ನು ಇಲಾಖೆಯ ಮುಖ್ಯಸ್ಥರು ಉತ್ತರಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.