ಹಾಸನ

ಗಾಂಜಾ ಮಾರಾಟ; ಮೂವರ ಬಂಧನ

Published On :

ಸಕಲೇಶಪುರ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ನಾನಾ ಬಡಾವಣೆಗಳಲ್ಲಿ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ಬಳಕೆ ಮತ್ತು ಮಾರಾಟ ಹೆಚ್ಚಾಗಿದ್ದ ಕುರಿತ ದೂರುಗಳು ಹೆಚ್ಚಿದ್ದವು. ಈ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ಗುರುರಾಜ್ ಮಾರ್ಗದರ್ಶನದಲ್ಲಿ ಪಟ್ಟಣ ಠಾಣಾ ಪಿಎಸೈ ಜೀವನ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಕುಶಾಲ ನಗರ ಬಡಾವಣೆಯ ಬಿಸಿಎಂ ಹಾಸ್ಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಅರೇಹಳ್ಳಿಯ ಇಮ್ರಾನ್(ಮಲ್ಲೇಶ), ಕೃಷ್ಣ ಮತ್ತು ಕುಶಾಲನಗರ ಬಡಾವಣೆಯ ಇಮ್ರಾನ್ ಎಂಬವರನ್ನು ಬಂಧಿಸಿ ಎರಡು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ತಡೆಗೋಡೆಯ ಕಬ್ಬಿಣದ ಸರಳು ಕಳವು
ಸಕಲೇಶಪುರ: ಹೇಮಾವತಿ ನದಿಗೆ ನಿರ್ಮಿಸಲಾಗಿದ್ದ ತಡೆಗೋಡೆಯ ಕಬ್ಬಿಣದ ಸರಳುಗಳನ್ನು ಕೀಡಿಗೇಡಿಗಳು ಕದ್ದೊಯ್ಯದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ದೇವಸ್ಥಾನದ ಬೀದಿ ಹಾಗೂ ಆಜಾದ್ ರಸ್ತೆಗೆ ಮಳೆಗಾಲದಲ್ಲಿ ನದಿ ನೀರು ನುಗ್ಗುವುದನ್ನು ತಡೆಗಟ್ಟುವ ಉದ್ದೇಶದಿಂದ ನದಿಯ ಎರಡು ಬದಿಯಲ್ಲಿ ಸಾವಿರ ಮೀಟರ್ ಉದ್ದ, 10 ಅಡಿ ಎತ್ತರ ಹಾಗೂ ಒಂದು ಅಡಿ ದಪ್ಪದ ತಡೆಗೋಡೆಯನ್ನು ಎರಡು ವರ್ಷ ಹಿಂದೆ ನಿರ್ಮಿಸಲಾಗಿದೆ. ತಡೆಗೋಡೆ ಶಿಥಿಲಗೊಳ್ಳದಿರಲಿ ಎಂಬ ಕಾರಣಕ್ಕೆ 10 ಮೀಟರ್‌ಗೆ ಒಂದರಂತೆ ಕಬ್ಬಿಣದ ಸಲಾಕೆಗಳನ್ನು ಅಳವಡಿಸಲಾಗಿತ್ತು. ಆದರೆ ಈ ಕಬ್ಬಿಣದ ಸರಳನ್ನು ಕಿಡಿಗೇಡಿಗಳು ಕಿತ್ತೊಯ್ದಿರುವುದರಿಂದ ತಡೆಗೋಡೆ ಶಿಥಿಲಗೊಂಡಿದೆ. ಹೇಮಾವತಿ ನದಿಗೆ ಕಾಡಾನೆ ಬಂದಿದೆ ಎಂದು ನೋಡಲು ತೆರಳಿದ್ದ ಸಾರ್ವಜನಿಕರಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ
ಹಾಸನ: 2012-13ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಜ.18ರಿಂದ 20ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಕ್ರೀಡಾಕೂಟದಲ್ಲಿ ವಿಜೇತರಾದ ನೌಕರರು ಜ.17ರಂದು ಸಂಜೆ ಕಂಠೀರವ  ಕ್ರೀಡಾಂಗಣದಲ್ಲಿ  ಗುರುತಿನ ಚೀಟಿಯೊಂದಿಗೆ ವರದಿ ಮಾಡಲು ಕೋರಿದೆ. ಸ್ಪರ್ಧಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆ ಇದ್ದು, ಹಾಸಿಗೆ ಮತ್ತು ಹೊದಿಕೆಗಳನ್ನು ತೆಗೆದುಕೊಂಡು ಹೋಗಲು ತಿಳಿಸಿದೆ. ಯಾವುದೇ ರೀತಿಯ ಊಟೋಪಹಾರ ನೀಡಲಾಗುವುದಿಲ್ಲ. ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ ಇವರಿಂದ ಗುರುತಿನ ಚೀಟಿ ಪಡೆದುಕೊಂಡು ಹೋಗುವಂತೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.  
'ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಅಗತ್ಯ'
ಅರಕಲಗೂಡು: ಪತ್ರಿಕೋದ್ಯಮ ಮತ್ತು ದೂರದರ್ಶನ ವಾಹಿನಿಗಳು ಇಂದಿನ ಸ್ಪರ್ಧಾತ್ಮಕತೆಗೆ ಪೂರಕ ವಿಚಾರಗಳನ್ನು ನೀಡುತ್ತಿದ್ದು, ಯುವ ಜನಾಂಗ ಆಸಕ್ತಿಯಿಂದ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಾಲೂಕು ಖಜಾನೆ ಅಧಿಕಾರಿ ಓಂಕಾರಪ್ಪ ತಿಳಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಿಯುಸಿ ನಂತರ ಉದ್ಯೋಗ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸರಾಗವಾಗಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆಯಿಂದ ದೊರೆತರೆ, ಉಳಿದವು ಅಂಕ ಗಳಿಕೆಯಿಂದ ಸಿಗುತ್ತದೆ ಎಂದರು. ಜಿಲ್ಲಾ ಉದ್ಯೋಗಾಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಪ್ರತಿ ಹುದ್ದೆಗೂ ನೇರ ನೇಮಕಾತಿ ಇರುವ ಕಾರಣ ಅಂಕಗಳೇ ಅಯ್ಕೆಯ ಅಂತಿಮ ಮಾನದಂಡವಾಗಿದೆ. ಇದನ್ನು ಮನಗಂಡು ಅತ್ಯಧಿಕ ಅಂಕ ಗಳಿಸುವುದರೊಂದಿಗೆ ಸಾಮಾನ್ಯ ಜ್ಞಾನವಿರಬೇಕು. ಪಠ್ಯಪುಸ್ತಕಗಳನ್ನು ಅಭ್ಯಾಸ ಮಾಡಿದ ನಂತರ ದಿನಕ್ಕೆ ಕನಿಷ್ಠ ಒಂದು ಗಂಟೆ ಕಾಲ ಸಾಮಾನ್ಯ ಜ್ಞಾನ ತಿಳಿದುಕೊಳ್ಳಲು ಮೀಸಲಿಡಬೇಕೆಂದರು.
ಹಾಸನಾಂಬ ಐಟಿಐಗೆ ಬಹುಮಾನ
ಹಾಸನ: ಡಾನ್‌ಬೋಸ್ಕೊ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ಡಾನ್‌ಬೋಸ್ಕೋ ಹುಟ್ಟುಹಬ್ಬದ ಪ್ರಯುಕ್ತ ನಡೆದ ಡಾನ್‌ಬೋಸ್ಕೋ ವಾಲಿಬಾಲ್ ಕಪ್ ಪಂದ್ಯಾವಳಿಯಲ್ಲಿ ನಗರದ ಹಾಸನಾಂಬ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಕ್ರೀಡಾಕೂಟವನ್ನು ಸಿಎಂಎಸ್‌ಎಸ್‌ಎಸ್‌ನ ನಿರ್ದೇಶಕ ಸ್ವಾಮಿ ಫೆಲಿಕ್ಸ್ ತೋಮಸ್ ರೋಜಾರಿಯೋ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ನಿರ್ದೇಶಕ ಸ್ವಾಮಿಜಾನ್, ಪ್ರಾಂಶುಪಾಲ ಸ್ವಾಮಿ ಆರೋಗ್ಯರಾಜ್ ಇದ್ದರು.
ನಾಳೆ ನಗರಸಭೆಸಾಮಾನ್ಯ ಸಭೆ
ಹಾಸನ: ನಗರಸಭೆಯ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಅಧ್ಯಕ್ಷೆ ಎಚ್.ಎಚ್.ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ನಗರಸಭೆ ಸಾಮಾನ್ಯ ಸಭೆಯನ್ನು ಜ.16ರಂದು ಬೆಳಗ್ಗೆ 11ಕ್ಕೆ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪರಿಹಾರಧನ ವಿತರಣೆ
ಬೇಲೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಮೃತಪಟ್ಟ ರೈತನ ಪತ್ನಿಗೆ ಕೃಷಿ ಸಂಜೀವಿನಿ ಯೋಜನೆಯಡಿ 50 ಸಾವಿರ ಪರಿಹಾರಧನದ ಚೆಕ್ಕನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಈಶ್ವರಹಳ್ಳಿ ಲಕ್ಷ್ಮಣ್ ವಿತರಿಸಿದರು. ತಾಲೂಕಿನ ಹಳೇಬೀಡು ಹೋಬಳಿ ಕಲ್ಲುಶೆಟ್ಟಿಹಳ್ಳಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಕೆ.ಬಿ.ಮೋಹನ್ ಮೃತಪಟ್ಟಿದ್ದರು. ಅವರ ಪತ್ನಿ ರೂಪ ಅವರಿಗೆ ಪರಿಹಾರಧನ ವಿತರಿಸಲಾಯಿತು.  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾದ ರಂಗೇಗೌಡ, ಸಿ.ಎಚ್.ಮಹೇಶ್, ವೈ.ಸಿ.ಪಂಚಾಕ್ಷರಿ, ಕುಮಾರ್, ರಂಗನಾಥ್, ಬಿ.ಎಲ್.ಲಕ್ಷ್ಮಣ್, ಎನ್.ಇ.ಮಹೇಶ್, ಮೀನಾಕ್ಷಮ್ಮ, ನಾಗೇಶ್ ಮತ್ತಿತರರಿದ್ದರು.
ಗಮಕ ಹಬ್ಬ; ಗಣ್ಯರಿಗೆ ಸನ್ಮಾನ
ಹಾಸನ: ನಗರದ ಸಪ್ತಪದಿ ಸೌದಾಮಿ ಸಭಾಂಗಣದಲ್ಲಿ ಕರ್ನಾಟಕ ಹಾಗೂ ಜಿಲ್ಲಾ ಗಮಕ ಕಲಾ ಪರಿಷತ್, ಶ್ರೀ ಸೀತಾರಾಮಾಂಜನೇಯ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್, ಮೈಸೂರು ಬ್ಯಾಂಕ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಮಕ ಹಬ್ಬ, ಕವಿ ನಮನ ನಡೆಯಿತು. ಕವಿ, ಸಾಹಿತಿ ಪ್ರೊ. ವಿ.ನರಹರಿ, ಹರಿಹರ ಗಮಕಿ ಪದ್ಮಜಾ ಶೇಷಗಿರಿರಾವ್ ಹಾಗೂ ಗಮಕಿ ಬೆಂಗಳೂರಿನ ಸಿ.ವಿ.ಶ್ರೀಮತಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸೌಮ್ಯಶ್ರೀ ಆತ್ಮಾರಾಂ, ಹಂಸಾ ನಟರಾಜ್ ತಂಡ ಗಮಕ ನೃತ್ಯ ವೈಭವ ಕಾರ್ಯಕ್ರಮ ನಡೆಸಿಕೊಟ್ಟರು. ಗಮಕ ಗಾಯನವನ್ನು ಕೆ.ಎಲ್.ರಾಧಾ, ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯನ್ನು ಕಾವ್ಯ ನಿರ್ವಹಿಸಿದರು. ಮೈಸೂರಿನ ಕಾರ್ಪೋರೇಷನ್ ಬ್ಯಾಂಕ್ ಉಪ ಮಹಾಪ್ರಬಂಧಕ ಇ.ಎಸ್.ನಾಗರಾಜ್ ಉಡುಪ, ಶ್ರೀ ಸೀತಾರಾಮಾಂಜನೇಯ ಸೇವಾ ಸಮಿತಿ ಅಧ್ಯಕ್ಷ ಎನ್.ಎಸ್.ನಾಗರಾಜ್, ಬೆಂಗಳೂರಿನ ಗಮಕ ಕಲಾ ಪರಿಷತ್ ಅಧ್ಯಕ್ಷ ಕರ್ನಾಟಕ ಕಲಾಶ್ರೀ ಎಂ.ಆರ್.ಸತ್ಯನಾರಾಯಣ್, ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಗಣೇಶ್ ಉಡುಪ, ಕಾರ್ಯದರ್ಶಿ ರುಕ್ಮಿಣಿ ನಾಗೇಂದ್ರ, ಕೋಶಾಧಿಕಾರಿ ಕೆ.ವಿ.ವಸಂತಲಕ್ಷ್ಮಿ ಇದ್ದರು.
ಪೂರ್ವಭಾವಿ ಸಭೆ
ಅರಕಲಗೂಡು: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆಯನ್ನು ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆಸಲಾಯಿತು. ಶಾಸಕ ಎ.ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಉತ್ತಮ ರೀತಿಯಲ್ಲಿ ಗಣರಾಜ್ಯೋತ್ಸವ ಸಮಾರಂಭ ಆಯೋಜಿಸುವಂತೆಯೂ, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವಂತೆ ಶಾಸಕರು ಸೂಚಿಸಿದರು. ತಹಸೀಲ್ದಾರ್ ಜಗದೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.