ಜನರ ಶಿಕ್ಷಣ, ಆರೋಗ್ಯಕ್ಕಾಗಿ ಶ್ರಮಿಸಿದ ಶ್ರೀ
ಕ.ಪ್ರ.ವಾರ್ತೆ , ಅರಸೀಕೆರೆ , ಜ 14
ದೇಶ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಎಲ್ಲರೂ ಶಿಕ್ಷಿತರಾಗಬೇಕೆಂದು ಗ್ರಾಮಾಂತರ ಪ್ರದೇಶದ ಮಕ್ಕಳಿಗೂ ಉನ್ನತ ಶಿಕ್ಷಣ ದೊರಕುವಂತೆ ಮಾಡಿದವರು ಬಾಲಗಂಗಾಧರನಾಥ ಸ್ವಾಮೀಜಿ. ಅನ್ನದಾಸೋಹ, ಜ್ಞಾನದಾಸೋಹ, ಆರೋಗ್ಯಮೇಳಗಳ ಮೂಲಕ ಜನರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿದ ಅವರು ಇಂದಿಗೆ ನಮ್ಮನ್ನಗಲಿದ್ದು, ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ರಾಮಯ್ಯ ಎಜುಕೇಷನ್ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ಅನಂತ್ಕುಮಾರ್ ವಿಷಾದಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಯ 1ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡಿದ್ದ ಶ್ರೀಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದರು.
ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರು ಎಂದು ಬಣ್ಣಿಸಿದರು.
ಕರವೇ ತಾಲೂಕು ಅಧ್ಯಕ್ಷ ಹೇಮಂತ ಕುಮಾರ್ ಮಾತನಾಡಿ, ಒಮ್ಮೆ ಸ್ವಾಮೀಜಿ ಭಕ್ತರ ಮನೆಗೆ ಹೋದಾಗ ತಂದೆ ತಾಯಿಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ಕಣ್ಣಾರೆ ಕಂಡ ಶ್ರೀಗಳು ವಯೋವೃದ್ಧ, ಅನಾಥ ರೋಗಿಗಳ ಸೇವೆ ಮಾಡಿದರೆ ಪರಮಾತ್ಮನ ಸೇವೆ ಮಾಡಿದಂತೆ ಎಂದು ಬಡಜನರ ಆರೋಗ್ಯಕ್ಕಾಗಿ ಆಸ್ಪತ್ರೆ ಸ್ಥಾಪಿಸುವ ತೀರ್ಮಾನ ಕೈಗೊಂಡರು. ಇದರ ಪರಿಣಾಮ ಬೃಹದಾಕಾರವಾದ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಆರಂಭವಾಗಿ ಆರೋಗ್ಯ ಸೇವೆ ನೀಡುವತ್ತ ದಾಪುಗಾಲು ಇಟ್ಟಿವೆ. ಈ ರೀತಿ ಸ್ವಾಮೀಜಿಯವರ ಒಂದೊಂದು ಆಲೋಚನೆಯೂ ನಾಡಿನ ಜನರನ್ನು ಸಂರಕ್ಷಿಸುವುದೇ ಆಗಿದೆ ಎಂದರು.
ಪುರಸಭಾಧ್ಯಕ್ಷ ಮೋಹನ್ಕುಮಾರ್ ಮಾತನಾಡಿ, ದೀನದಲಿತರು, ಅಸಹಾಯಕರು, ವಯೋವೃದ್ಧರು, ಕಡುಬಡವರ ಆರೋಗ್ಯ ರಕ್ಷಣೆಗೆ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಯವರ ಸೇವೆ ಅಪಾರ. ಜ್ಞಾನದಾಸೋಹದ ಮೂಲಕ ಜನರನ್ನು ಸನ್ಮಾರ್ಗದಲ್ಲಿ ಕೊಂಡೊಯ್ದ ಇಂತಹ ದೈವ ಪುರುಷರು ಮತ್ತೊಮ್ಮೆ ಈ ನಾಡಿನಲ್ಲಿ ಹುಟ್ಟಲಿ ಎಂದರು.
ಆರ್ಎಸ್ಎಸ್ ಮೈಸೂರು ವಿಭಾಗದ ಪ್ರಚಾರಕ ಸತ್ಯನಾರಾಯಣ, ಮಾಜಿ ಶಾಸಕ ಎ.ಎಸ್.ಬಸವರಾಜ್, ಜೆಡಿಎಸ್ ಮುಖಂಡ ಗಿರೀಶ್, ಕರವೇ ನಗರಾಧ್ಯಕ್ಷ ಕಿರಣ್ಕುಮಾರ್, ಹಾಗೂ ಒಕ್ಕಲಿಗ ಮುಖಂಡರು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

