ಸಂಭ್ರಮ, ವಿಜೃಂಭಣೆಯಿಂದ ಈದ್ ಆಚರಣೆ
ಅರಸೀಕೆರೆ: ಪಟ್ಟಣದ ಮುಸ್ಲಿಂ ಬಾಂಧವರು ಈದ್ಮಿಲಾದ್ ದಿನವಾದ ಮಂಗಳವಾರ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಮಹಮ್ಮದ್ ಪೈಗಂಬರ್ ಜನ್ಮದಿನವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಸೋಮವಾರ ಸಂಜೆಯೇ ಸಮಾಜದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಮಸೀದಿ ರಸ್ತೆ, ರೀಡಿಂಗ್ ರೂಂ ರಸ್ತೆ, ಸಂತೆಪೇಟೆ, ಗಣಪತಿ ಪೆಂಡಾಲ್ ರಸ್ತೆ, ಬಿ.ಎಚ್.ರಸ್ತೆಗಳನ್ನು ಅಲಂಕೃತಗೊಳಿಸಿದ್ದರು. ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳನ್ನು ಹಸಿರು ತೋರಣ ಹಾಗೂ ಧ್ವಜಗಳಿಂದ ನವವಧುವಿನಂತೆ ಶೃಂಗರಿಸಿದ್ದರಲ್ಲದೆ ಟಿಪ್ಪುಸುಲ್ತಾನ್ ಭಾವಚಿತ್ರದ ಫ್ಲೆಕ್ಸ್ಗಳನ್ನು ರಸ್ತೆಯುದ್ದಕ್ಕೂ ಹಾಕಲಾಗಿತ್ತು.
ಮುಸ್ಲಿಂ ಯುವಕರು ಬೃಹತ್ ಬೈಕ್ ರ್ಯಾಲಿ ನಡೆಸುವ ಮೂಲಕ ಗಮನ ಸೆಳೆದರು. ನಂತರ ಬಚ್ಪೆ ಫರೂಖ್ ಸಂಘದ ವತಿಯಿಂದ ಮದರಸದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಜಮಾತ್ ಗುರುಗಳಾದ ಹಜರತ್ ಮಹಮದ್ ನಜ್ಹೀಮ್ರಜ್ಹ ಅವರು ಪೈಗಂಬರರ ಸಂದೇಶವನ್ನು ವಿವರಿಸಿದರು. ಸಂಘದ ಕಾರ್ಯದರ್ಶಿ ನಿಜಾಮುದ್ದೀನ್ ಮಾತನಾಡಿ, ಮಹಮ್ಮದ್ ಪೈಗಂಬರ್ ಅವರು ತಂದೆ ತೀರಿಕೊಂಡ ನಂತರ ತಾಯಿಯ ಆಶ್ರಯದಲ್ಲಿ ಬೆಳೆದರು. ಜೀವನದಲ್ಲಿ ಸತ್ಯ, ಧರ್ಮ ಹಾಗೂ ದೇವರಲ್ಲಿ ನಂಬಿಕೆಯನ್ನು ಇಟ್ಟಿದ್ದ ಅವರು 40ನೇ ವಯಸ್ಸಿನಲ್ಲಿ ಪಟ್ಟಕ್ಕೆ ಬಂದುದಲ್ಲದೆ ಧರ್ಮ ಬೋಧನೆಗೆ ಅರ್ಹರಾದರು. ಸಮಾಜದಲ್ಲಿದ್ದ ಕೆಟ್ಟ ಪದ್ಧತಿಗಳನ್ನು ದೂರ ಮಾಡಿದರಲ್ಲದೆ ಉತ್ತಮ ಮಾರ್ಗದರ್ಶನ ನೀಡಿದರು ಎಂದರು. ವೇದಿಕೆಯಲ್ಲಿ ಮದರಸದ ಗುರುಗಳಾದ ಅಬ್ದುಲ್ ಖಾದರ್, ಅಧ್ಯಕ್ಷ ಮಹಮದ್ ಯಾಸಿನ್ ಉಪಸ್ಥಿತರಿದ್ದರು. ಸಭೆಯ ನಂತರ ಸಂಘದ ಪದಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳು, ಪಟ್ಟಣದ ಎಲ್ಲ ನರ್ಸಿಂಗ್ ಹೋಂಗಳ ರೋಗಿಗಳಿಗೆ ಹಾಗೂ ಖೈದಿಗಳಿಗೆ ಹಣ್ಣು ಹಂಚಿದರು. ಪಟ್ಟಣದ ಪ್ರಾರ್ಥನಾ ಮಂದಿರದ ಆವರಣದಲ್ಲಿ ಸಾರ್ವಜನಿಕರಿಗಾಗಿ ಪಟ್ಟಣದ ತರಕಾರಿ ವರ್ತಕರ ಸಂಘದಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಂತೆಪೇಟೆಯಲ್ಲಿ ಕೂಡ ಭೋಜನ ವ್ಯವಸ್ಥೆ ನಡೆಸಲಾಯಿತು. ಸಂಜೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪಟ್ಟಣದ ಎಲ್ಲ ಮುಸ್ಲಿಂ ಬಾಂಧವರು ಜಮಾತ್ ಗುರುಗಳೊಂದಿಗೆ ಈದ್ಗಾ ಮೈದಾನಕ್ಕೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಣೆ
ಕ.ಪ್ರ.ವಾರ್ತೆ , ಹಾಸನ , ಜ 14
ಮುಸ್ಲಿಂ ಬಾಂಧವರು ಮಂಗಳವಾರ ಈದ್ಮಿಲಾದ್ನ್ನು ಶ್ರದ್ಧೆ, ಭಕ್ತಿಯಿಂದ ನಗರದಲ್ಲಿ ಆಚರಿಸಿದರು.
ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ನಗರದ ಹಳೆ ಮಟನ್ ಮಾರುಕಟ್ಟೆಯಿಂದ ಮೆರವಣಿಗೆ ಪ್ರಾರಂಭಿಸಿ ಆಜಾದ್ ರಸ್ತೆ, ಹೊಸ ಲೈನ್ ರೋಡ್, ಎನ್.ಆರ್.ವೃತ್ತ, ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಸಾಗಿ ಬಂತು. ಮೆರವಣಿಗೆಯಲ್ಲಿ ಪೈಗಂಬರ್ ಸಂದೇಶವನ್ನು ಜನತೆಗೆ ಸಾರಿದರು. ಜೊತೆಗೆ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ನಗರದಾದ್ಯಂತ ಆಟೋಗಳಲ್ಲಿ ಪೈಗಂಬರರ ಸಂದೇಶ ಸಾರಲಾಯಿತು. ನಂತರ ಪ್ರಾರ್ಥನೆ ಸಲ್ಲಿಸಲಾಯಿತು.
ರೋಗಿಗಳಿಗೆ ಹಾಲು, ಹಣ್ಣು ವಿತರಣೆ
ಬೇಲೂರು: ಶಾಂತಿ- ಸೌಹಾರ್ದತೆ, ಐಕ್ಯತೆಯ ಸಂಕೇತವಾಗಿ ಈದ್ ಮಿಲಾದ್ ಹಬ್ಬ ಆಚರಣೆಯನ್ನು ಮಾಡುತ್ತಿದ್ದು ಈ ಶುಭ ಸಂದರ್ಭದಲ್ಲಿ ರೋಗಿಗಳು ಬೇಗ ಗುಣಮುಖರಾಗಿ ಮನೆಗೆ ಹಿಂತಿರುಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಹಾಲು ಹಣ್ಣು ಬಿಸ್ಕತ್ತನ್ನು ವಿತರಿಸಲಾಗುತ್ತಿದೆ ಎಂದು ನವ್ಜವಾನ್ ಮಿಲಾದ್ ಯುವಕ ಸಂಘದ ಗೌರವಾಧ್ಯಕ್ಷ ಸೈಯದ್ ತೌಫಿಕ್ ಹೇಳಿದರು.
ಪವಿತ್ರ ಖುರಾನ್ನಲ್ಲಿ ಮುಖ್ಯವಾಗಿ ಶಾಂತಿ ಮತ್ತು ಐಕ್ಯತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪ್ರತಿ ವರ್ಷ ಮಹಾನ್ ದಾರ್ಶನಿಕ ಗುರು ಮಹಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹಾಲು ಹಣ್ಣು ವಿತರಿಸುವುದರ ಜೊತೆಗೆ ಅನಾಥಾಶ್ರಮಕ್ಕೆ, ಕಡು ಬಡವರಿಗೆ ದವಸ ಧಾನ್ಯವನ್ನು ವಿತರಿಸಲಾಗುತ್ತದೆ ಎಂದರು. ಸಂಘದ ಅಧ್ಯಕ್ಷ ಪರ್ವೀಜ್, ತೌಫಿಕ್ ಅಹಮದ್ ಇತರರು ಇದ್ದರು.
ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ
ಸಕಲೇಶಪುರ: ತಾಲೂಕಿನಾದ್ಯಂತ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಮಂಗಳವಾರ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಪಟ್ಟಣದ ನಾನಾ ಮಸೀದಿಗಳಿಗೆ ಮೆರವಣಿಗೆಯಲ್ಲಿ ತೆರಳಿದ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಸೀದಿಗಳಲ್ಲಿ ಚಿಣ್ಣರು ಹಾಡು, ದಫ್, ಪ್ರವಚನ ಕಾರ್ಯಕ್ರಮಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

