ನುಡಿದಂತೆ ನಡೆದ ಕುವೆಂಪು: ರಾಜೇಶ್ವರಿ ತೇಜಸ್ವಿ
ಕ.ಪ್ರ.ವಾರ್ತೆ , ಹಾಸನ , ಜ. 14
ವಿಶ್ವಮಾನವ ಕುವೆಂಪು ಹಾಗೂ ತೇಜಸ್ವಿ ಅವರು ಜಾತಿ, ಮತ, ಧರ್ಮಗಳಿಗೆ ಕಟ್ಟು ಬೀಳದ ಕಾರಣ ಅವರು ಪ್ರಖ್ಯಾತಿ ಪಡೆದರು ಎಂದು ಸಾಹಿತಿ ರಾಜೇಶ್ವರಿ ತೇಜಸ್ವಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶ್ರೀಕುವೆಂಪು ಶಿಕ್ಷಣ ಸಂಸ್ಥೆ ವತಿಯಿಂದ ಮಂಗಳವಾರ ನಡೆದ ಕುವೆಂಪು ಜನ್ಮದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕುವೆಂಪು ಮತ್ತು ತೇಜಸ್ವಿ ಅವರು ಎಲ್ಲ ಧರ್ಮಾತೀತವಾಗಿ ನಡೆಯುವ ಮೂಲಕ ಸಮಾಜಕ್ಕೆ ವಿಶ್ವ ಮಾನವ ಸಂದೇಶ ಸಾರಿದರು ಎಂದರು. ಕುವೆಂಪು ಅವರನ್ನು ಬಿಟ್ಟು ತೇಜಸ್ವಿ ಅವರ ಬಗ್ಗೆ, ತೇಜಸ್ವಿ ಅವರನ್ನು ಬಿಟ್ಟು ಕುವೆಂಪು ಅವರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಅವರು ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾಗಿದೆ. ಕುವೆಂಪು ಅವರು ವಿಶ್ವ ಮಾನವ ಅಂತ ಹೇಳಿದರೆ ತೇಜಸ್ವಿ ವಿಶ್ವ ಸಮಾಜ ಅಂತ ಹೇಳುವ ಮೂಲಕ ಮಾನವನ ಜೊತೆಗೆ ಪರಿಸರ ಸಂರಕ್ಷಣೆ ಮಾಡಬೇಕು ಅಂತ ಪ್ರತಿಪಾದಿಸಿ ಬರೆದರು. ಇವರಿಬ್ಬರು ನುಡಿದಂತೆ ನಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದವರು. ಅವರ ತತ್ವಗಳನ್ನು ಯುವ ಪೀಳಿಗೆ ಅನುಸರಿಸಬೇಕು ಎಂದರು.
ತೇಜಸ್ವಿ ಮತ್ತು ನನ್ನ ವಿವಾಹವನ್ನು ಸರಳವಾಗಿ ನಿಶ್ಚಯ ಮಾಡುವ ಮೂಲಕ ಅನವಶ್ಯಕ ದುಂದುವೆಚ್ಚ ತಡೆದರು. ಜೀವನದಲ್ಲಿ ಸರಳ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುವಂತೆ ಉತ್ತೇಜನ ನೀಡಿದರು ಎಂದರು.
ಸಾಹಿತಿ ಪ್ರೊ. ಸೈಯದ್ ಶಹಬೂದ್ದಿನ್ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ರವೀಂದ್ರನಾಥ ಠಾಗೂರ್ ಹೇಗೋ ಅದೇ ರೀತಿ ನಮ್ಮಲ್ಲಿ ಕುವೆಂಪು ಅವರು. ಕುವೆಂಪು ಅವರ ಸಾಹಿತ್ಯ ಬೇರೆ ಭಾಷೆಗೆ ಹೋಗಬೇಕು. ಕುವೆಂಪು ಅವರ ಅನಿಕೇತನ ಸಂದೇಶ ಎಲ್ಲರಿಗೂ ನೀತಿಪಾಠವಾಗಬೇಕು ಎಂದರು. ಕುವೆಂಪು ಅವರ ಕುಟುಂಬ ಸಾಹಿತ್ಯ ಲೋಕಕ್ಕೆ ನೀಡಿರುವಂತಹ ಕೊಡುಗೆ ಅಪಾರ. ಬೇರೆ ಭಾಷೆಯ ಸಾಹಿತಿಗಳ ಕುಟುಂಬಗಳು ಈ ರೀತಿ ಇರೋದನ್ನು ನಾನು ನೋಡಿಲ್ಲ. ಅವರ ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಂಡರೆ ಅವರಿಗೆ ಶ್ರೇಷ್ಠ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದರು.
ಉಪನ್ಯಾಸಕ ಹಾಗೂ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಟಿ.ಎಂ.ಶಿವಶಂಕರಪ್ಪ ಮಾತನಾಡಿ, ಕುವೆಂಪು ಅವರ ಮನೆತನ ವಿಶ್ವವಿದ್ಯಾನಿಲಯವೊಂದು ಸಂಶೋಧನೆ ನಡೆಸುವಂಥ ಜ್ಞಾನದ ಸಂಪತ್ತನ್ನು ಹೊಂದಿತ್ತು. ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವಂತಹ ಕೊಡುಗೆ ಅಪಾರ ಎಂದರು.
ಕುವೆಂಪು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಈ. ಶಿವರಾಮೇಗೌಡ, ಬಿಳಿಯಮ್ಮ ಈರೇಗೌಡ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

