ಜಿಲ್ಲಾದ್ಯಂತ ಸಂಕ್ರಾಂತಿ ಸಡಗರ
ಹಾಸನ: ನಗರ ಹಾಗೂ ಜಿಲ್ಲಾದ್ಯಂತ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯನ್ನು ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಎಳ್ಳು ಬೆಲ್ಲವನ್ನು ಮಕ್ಕಳು, ಮಹಿಳೆಯರು ಪರಸ್ಪರ ಹಂಚಿ ಶುಭಾಶಯ ಕೋರಿದರು. ಕಳೆದು ಹೋದ ಘಳಿಗೆಯ ನೋವನ್ನು ಮರೆತು ಮುಂದಿನ ದಿನಗಳು ಸಿಹಿಯಾಗಿರಲಿ ಎಂಬ ಆಶಾಭಾವನೆಯನ್ನು ಸಾರುವ ಕಬ್ಬಿನ ಸಿಹಿಯನ್ನು ನೀಡಿ ಪರಸ್ಪರ ಸ್ನೇಹ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಸಂಕೇತವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.
ಸಂಕ್ರಾಂತಿ ಪ್ರಯುಕ್ತ ನಗರದ ನಾನಾ ದೇವಾಲಯಗಳಲ್ಲಿ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನಗರದ ಆದಿಚುಂಚನಗಿರಿ ಮಠದ ಬಳಿ ಇರುವ ಗಣಪತಿ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಗಣಪತಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಬೆಳಿಗ್ಗೆಯಿಂದಲೂ ನೂರಾರು ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ಕೃಪೆ ಬೇಡಿದರು.
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಲೇ ಇದ್ದರೂ, ಸಂಕ್ರಾಂತಿಯ ಸಂಭ್ರಮಕ್ಕೇನೂ ಕೊರತೆಯಿಲ್ಲ. ಮಕರ ಸಂಕ್ರಾಂತಿ ಅಂಗವಾಗಿ ಹಾಸನದ ಅಯ್ಯಪ್ಪಸ್ವಾಮಿ ಪೂಜೆ ವಿಶೇಷವಾಗಿ ನಡೆಯಿತು. ನಗರದ ಕೆಲ ಆಟೋ ನಿಲ್ದಾಣದಲ್ಲಿ ಅಯ್ಯಪ್ಪಸ್ವಾಮಿಯ ಮಂಟಪ ಸಿದ್ಧಪಡಿಸಿ ವಿಶೇಷ ದೀಪಾಲಂಕಾರ ಮಾಡಿ ಪೂಜಿಸಿದರು. ಭಕ್ತರಿಗಾಗಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಸುಗ್ಗಿಯ ಹಬ್ಬ ಸಂಕ್ರಾಂತಿಯನ್ನು ವಿಶೇಷವಾಗಿ ಎಲ್ಲ ಮನೆಗಳಲ್ಲಿ ಎಳ್ಳು-ಬೆಲ್ಲ ಕಬ್ಬಿನ ಜೊತೆಗೆ ಅವರೇಕಾಯನ್ನು ಕುಸುಕಿ ಪೂಜೆ ಮಾಡುವುದರ ಜೊತೆಗೆ ಬಂದ ಜನಕ್ಕೆ ಹಂಚಲಾಯಿತು. ಮಕ್ಕಳು ಸಿಹಿ ಜೊತೆಗೆ ಕುಸುಕಿದ ಅವರೇ ಕಾಯಿಯನ್ನು ಹಂಚಿ ಶುಭಾಶಯ ಹೇಳಿದರು.
ಸುಗ್ಗಿಯ ಕಾಲದಲ್ಲಿ ಬರುವ ಸಂಕ್ರಾಂತಿ ಎಂದರೆ ರೈತರಿಗೆ ಎಲ್ಲಿಲ್ಲದ ಹರ್ಷ. ಏಕೆಂದರೆ ರೈತರು ಬೆಳೆದ ಫಸಲು ಈ ಹಬ್ಬದಲ್ಲಿ ಫಲ ಕೊಡುತ್ತವೆ. ಅವರೇಕಾಯಿ ಸೇರಿದಂತೆ ಹಸಿ ಫಲವನ್ನು ಬೇಯಿಸಿ ದೇವರ ಮುಂದೆ ಎಡೆ ಇಟ್ಟು ವಿಶೇಷ ಪೂಜೆ ಮಾಡಿ ಗ್ರಾಮೀಣ ಜನ ಎಲ್ಲರಿಗೂ ಒಳಿತಾಗಲೆಂದು ಪ್ರಾರ್ಥಿಸಿದರು. ಬೆಳೆದ ಬೆಳೆಯನ್ನು ಒಕ್ಕಣೆ ರೂಪದಲ್ಲಿ ಹಾಕಿರುವ ಕಣಕ್ಕೂ ಪೂಜೆ ಸಲ್ಲಿಸಿದರು.
ಸಕಲೇಶಪುರ, ಬೇಲೂರು, ಹೊಳೆನರಸೀಪುರ, ಅರಸೀಕೆರೆ, ಅರಕಲಗೂಡು, ಆಲೂರು ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲೂ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮಗಳಲ್ಲಿ ರೈತರು, ತಮ್ಮೊಡನೆ ಬಾಳ್ವೆ ನಡೆಸುವ ಜಾನುವಾರಿಗೆ ಸ್ನಾನ ಮಾಡಿಸಿ ಬಣ್ಣಗಳಿಂದ ಸಿಂಗರಿಸಿ, ಪೂಜೆ ಸಲ್ಲಿಸಿದರು. ಕೆಲವು ಕಡೆಗಳಲ್ಲಿ ದನಕರುಗಳಿಗೆ ಕಿಚ್ಚು ಹಾಯಿಸಲಾಯಿತು.
ಮುಸ್ಲಿಂ ಬಾಂಧವರಿಗೆ ಎಳ್ಳುಬೆಲ್ಲ ಬೀರಿ ಹಬ್ಬ ಆಚರಣೆ
ಹಾಸನ: ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಹೇಮಾವತಿ ಪ್ರತಿಮೆ ಬಳಿ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಧರ್ಮಭೇದ ಮರೆತು ಮುಸ್ಲಿಂ ಬಾಂಧವರಿಗೆ ಎಳ್ಳುಬೆಲ್ಲ ಬೀರುವ ಮೂಲಕ ನಾವೆಲ್ಲ ಒಂದೇ ಎಂದು ಸಾರಿದ್ದಾರೆ.
ನಾವೆಲ್ಲಾ ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಶಾಂತಿ ಸೌಹಾರ್ದತೆ ಕಾಪಾಡುವಂತೆ ಸಲಹೆ ನೀಡಿದ ಕಾರ್ಯಕರ್ತರು, ಒಟ್ಟಾಗಿ ಕೆಲಸ ಮಾಡಿ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಲು ಮುಂದಾಗುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾವಲು ಪಡೆ ಕಾರ್ಯಕರ್ತರು ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಚ್.ಕೆ.ಮಹೇಶ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ನಗರಸಭೆ ಮಾಜಿ ಅಧ್ಯಕ್ಷ ಸಯ್ಯಾದ್ ಅಕ್ಬರ್, ಪತ್ರಕರ್ತ ರವಿನಾಕಲಗೂಡು, ಅಸ್ಲಾಂ, ಅನ್ವರ್, ಅಂತೋಣಿ, ವಿಷ್ಣುಸೇನೆ ಜಿಲ್ಲಾಧ್ಯಕ್ಷ ಬಿ.ಎನ್.ಮಹಂತೇಶ್, ಸಮಾಜ ಸೇವಾಕ ವಿಜಯಕುಮಾರ್, ಅಂದಾನಿಗೌಡ, ಪ್ಯಾರೀಜಾನ್, ಕಾವಲು ಪಡೆಯ ಜಿಲ್ಲಾಧ್ಯಕ್ಷ ನವೀನ್ಕುಮಾರ್, ಸಂಘಟನಾ ಕಾರ್ಯದರ್ಶಿ ಸಯ್ಯದ್ ಏಜಾಜ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಸಾದ್, ತಾಲೂಕು ಕಾರ್ಯದರ್ಶಿ ಪ್ರಕಾಶ್, ಸದಸ್ಯ ರಮೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

