ದಲಿತರ ಮೇಲೆ ದೌರ್ಜನ್ಯ; ದಸಂಸ ಮುಖಂಡರ ಭೇಟಿ
ಹಾಸನ: ದಲಿತರ ಮೇಲೆ ಬಹಿಷ್ಕಾರ ನಡೆದಿರುವ ಅರಕಲಗೂಡು ತಾಲೂಕು ರಾಮನಾಥಪುರ ಹೋಬಳಿಯ ಬಸವನಹಳ್ಳಿ ಗ್ರಾಮಕ್ಕೆ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರು ಭೇಟಿ ನೀಡಿ ದಲಿತರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥ, ದಲಿತ ಮುಖಂಡ ರಮೇಶ್ ಮಾತನಾಡಿ, ಮೋರಿಗೆ ಡಕ್ ಹಾಕುವ ವಿಷಯದಲ್ಲಿ ಗ್ರಾಪಂ ಸದಸ್ಯ ಹಾಗೂ ಗುತ್ತಿಗೆದಾರನ ನಡುವೆ ಆರಂಭವಾದ ಸಣ್ಣ ಜಗಳ ದಲಿತರಿಗೆ ಬಹಿಷ್ಕಾರ ಹಾಕುವವರೆಗೆ ಮುಂದುವರೆದಿದೆ. ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ ಎರಚುವ ಮೂಲಕ ಸವರ್ಣೀಯರು ದಲಿತರ ಮೇಲಿನ ಸಿಟ್ಟನ್ನು ತೀರಿಸಿಕೊಂಡಿದ್ದಾರೆ ಎಂದರು.
ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ಪ್ರಾರಂಭವಾಗಿ ಹಣದ ಕೊರತೆಯಿಂದ ನಿಂತಿದೆ. ಸಮುದಾಯ ಭನವದ ಪಕ್ಕದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದು ಸಮುದಾಯ ಭವನಕ್ಕೆ ಸೇರಿದ ಜಾಗವನ್ನು ಅತಿಕ್ರಮಿಸಿಕೊಳ್ಳಲು ಮುಂದಾಗಿರುವುದು ತಪ್ಪು. ಈಗಿರುವ ಹಳೆ ಬೇಲಿಯ ಜಾಗದಲ್ಲೇ ಕಾಂಪೌಂಡ್ ನಿರ್ಮಿಸಬೇಕು. ಗ್ರಾಮದಲ್ಲೆ ಕೆಲ ಸವರ್ಣೀಯರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಘಟನೆ ನಂತರ ಯಾವ ಜನಪ್ರತಿನಿಧಿಗಳೂ ಬಂದಿಲ್ಲ. ಇಲ್ಲಿನ ಅಂಗಡಿಗಳಲ್ಲಿ ದಲಿತರಿಗೆ ಸಾಮಾನು ನಿರಾಕರಿಸಲಾಗುತ್ತಿದೆ. ಅಕ್ಕಿ ಬಿಡಿಸಲು ಬಿಡುತ್ತಿಲ್ಲ. ಹಾಗೊಂದು ವೇಳೆ ಬಿಡಿಸಿಕೊಟ್ಟರೆ 10 ಸಾವಿರ ದಂಡ ಹಾಕುವಂತೆ ಸವರ್ಣೀಯರೇ ತೀರ್ಮಾನ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.
ಹೆಣ್ಣುಮಕ್ಕಳು ಕೆರೆ ಹತ್ತಿರ ಬಟ್ಟೆ ತೊಳೆಯಲು ಹೋದರೆ ಹೀಯಾಳಿಸುತ್ತಾರೆ. ದಲಿತರನ್ನು ಕೂಲಿಗೆ ಕರೆಯುತ್ತಿಲ್ಲ. ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ. ದಲಿತರಿಗೆ ಮನೆ ಕಟ್ಟಿಕೊಳ್ಳಲು ಜಾಗವೇ ಇಲ್ಲವಾಗಿದ್ದು ಒಂದೊಂದು ಮನೆಯಲ್ಲಿ ಎರಡು ಕುಟುಂಬಗಳು ವಾಸವಾಗಿವೆ ಎಂದು ಹತ್ತಾರು ಸಮಸ್ಯೆಗಳನ್ನು ಮುಖಂಡರ ಮುಂದೆ ತೆರೆದಿಟ್ಟರು.
ಅಂಬೇಡ್ಕರ್ಗೆ ಅಪಮಾನ ಮಾಡಿರುವ ಘಟನೆಗೆ ಸಂಬಂಧಿಸಿದಂತೆ 7 ಜನರ ಮೇಲೆ ದೂರು ನೀಡಲಾಗಿದ್ದು ಯಾರನ್ನೂ ಬಂದಿಸಿಲ್ಲ. ಘಟನೆಯಲ್ಲಿ ದಲಿತರದ್ದು ಯಾವುದೇ ತಪ್ಪಿಲ್ಲ. ತಕ್ಷಣವೇ ಅವಮಾನ ಮಾಡಿದವರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಮುಖಂಡ ಬಿ.ಪಿ.ಜಯರಾಂ, ಸವರ್ಣೀಯರೊಂದಿಗೆ ದ್ವೇಷ ಸಾಧಿಸದೆ ಶಾಂತಿ ಸಹಬಾಳ್ವೆಯಿಂದ ಒಗ್ಗೂಡಿ ಹೋಗಬೇಕೆಂದು ತಿಳಿಸಿದರು.
ಕೃಷ್ಣದಾಸ್ ಮಾತನಾಡಿ, ಗ್ರಾಮದ ದಲಿತರ ಸಮಸ್ಯೆಗಳನ್ನು ನಿವಾರಿಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲು ಮನವಿ ಮಾಡುವ ಭರವಸೆ ನೀಡಿದರು.
ದಸಂಸ ಮುಖಂಡ ಎಚ್.ಕೆ.ಸಂದೇಶ್, ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಕೆ.ಈರಪ್ಪ, ಕೃಷ್ಣ ಕುಮಾರ್, ಶಂಕರ್ರಾಜು, ಆರ್ಪಿಐ ಸತೀಶ್, ಶಿವರಾಂ, ಪ್ರಕಾಶ್ ಹಾಗೂ ಇತರೆ ದಲಿತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ರಮೇಶ್, ಮಂಜು, ತಮ್ಮಯ್ಯ, ಚಿಕ್ಕಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

