ಒಕ್ಕೂಟ ಖರೀದಿಸುವ ಹಾಲಿಗೆ 1ಹೆಚ್ಚಳ
ಕ.ಪ್ರ.ವಾರ್ತೆ , ಹಾಸನ , ಜ. 16
ಹಾಸನ ಹಾಲು ಒಕ್ಕೂಟವು ಫೆಬ್ರವರಿಯಿಂದ ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು 1 ರು. ಹೆಚ್ಚಳ ಮಾಡಲು ನಿರ್ಧರಿಸಿದ್ದು, ಇದು ಹಾಸನ, ಚಿಕ್ಕಮಗಳೂರು ಮತ್ತು ಮಡಿಕೇರಿ ಜಿಲ್ಲೆಗಳ ರೈತ ಮಹಿಳೆಯರಿಗೆ ಅನುಕೂಲವಾಗಲಿದೆ. ಪ್ರಸ್ತುತ ರೈತರಿಂದ 1 ಕೆಜಿ ಹಾಲನ್ನು ರು. 23.31ಗಳಿಗೆ ಖರೀದಿಸುತ್ತಿದ್ದು, ಫೆಬ್ರವರಿಯಿಂದ ರು. 24. 31ಗೆ ಹೆಚ್ಚಳವಾಗಲಿದೆ.
ಇದರಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯಕವಾಗಲಿದ್ದು, ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳಲ್ಲಿ 468 ಹಾಲು ಉತ್ಪಾದಕರ ಮಹಿಳಾ ಸಂಘಗಳನ್ನು ಆರಂಭಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ಮಾಜಿ ಸಚಿವ ಎಚ್.ಡಿ. ರೇವಣ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿತ್ಯ 5.30 ಲಕ್ಷ ಲೀಟರ್ ಹಾಲು: ಹಾಲು ಉತ್ಪಾದಕರಿಗೆ ಅತಿ ಹೆಚ್ಚಿನ ದರವನ್ನು ನೀಡುವ ರಾಜ್ಯ ಒಕ್ಕೂಟಗಳಲ್ಲಿ ಹಾಸನ 2ನೇ ಸ್ಥಾನದಲ್ಲಿ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ಶೀತಲೀಕರಣ ಘಟಕ ಮತ್ತು ಪ್ಯಾಕೇಜ್ ಘಟಕವನ್ನು ಮತ್ತು ಮಡಿಕೇರಿ ಜಿಲ್ಲೆ ಕೂಡಿಗೆಯಲ್ಲಿ 50 ರಿಂದ 70 ಸಾವಿರ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣೆ ಮತ್ತು ಪ್ಯಾಕೇಜ್ ಘಟಕವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಆರಂಭಿಸಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಗೆ ಬರುವ ಮೂರು ಜಿಲ್ಲೆಗಳಲ್ಲಿ 75 ಸಾವಿರ ಕುಟುಂಬಗಳು ಪ್ರತಿನಿತ್ಯ 5.30 ಲಕ್ಷ ಲೀಟರ್ ಹಾಲು ಸರಬರಾಜು ಮಾಡುತ್ತಿವೆ ಎಂದು ಹೇಳಿದರು.
8-10 ಕೋಟಿ ಪಾವತಿ: 1995ರಲ್ಲಿ ಒಕ್ಕೂಟದ ವಾರ್ಷಿಕ ವಹಿವಾಟು ರು. 21.01 ಕೋಟಿ ಇತ್ತು. ಈಗ ಅದು 500 ಕೋಟಿ ಮೀರಿದೆ. ಉತ್ತರ ಭಾರತದ ರಾಜ್ಯಗಳು, ಈಶಾನ್ಯ ರಾಜ್ಯಗಳು ಮತ್ತು ಸೇನಾ ಪಡೆಗಳಿಗೆ ಹಾಲು ಸರಬರಾಜು ಮಾಡುವ ಯತ್ನಿಸಲಾಗುತ್ತಿದ್ದು, ಆಂಧ್ರ ಪ್ರದೇಶ ಮತ್ತು ಕೇರಳ ರಾಜ್ಯಗಳ ಹಾಲು ಮಹಾ ಮಂಡಲಗಳಿಗೆ ಹಾಸನ ಒಕ್ಕೂಟದಿಂದ ವರ್ಷವಿಡೀ ಹಾಲು ಸರಬರಾಜು ಮಾಡಲಾಗುತ್ತಿದೆ. ಪ್ರತಿ ವಾರ ಹಾಲು ಉತ್ಪಾದಕರಿಗೆ ರು. 8ರಿಂದ 10 ಕೋಟಿ ಪಾವತಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ರು. 4 ಕೋಟಿ ನಿವ್ವಳ ಲಾಭ: 1995-96 ರಿಂದ ಸತತವಾಗಿ ಲಾಭ ಗಳಿಸುತ್ತಿರುವ ಒಕ್ಕೂಟವು 2013-14 ನೇ ಸಾಲಿನಲ್ಲಿ ವಾರ್ಷಿಕ ವಹಿವಾಟು ರು. 600 ಕೋಟಿಗೆ ಏರಿಕೆಯಾಗಲಿದ್ದು, 3 ರಿಂದ ರು. 4 ಕೋಟಿ ನಿವ್ವಳ ಲಾಭ ಗಳಿಸುವ ಸಾಧ್ಯತೆ ಇದೆ. ಹಾಸನ ಒಕ್ಕೂಟದ ಪಶು ಆಹಾರ ಬೇಡಿಕೆ ಮಾಹೆಯಾನ 5 ಸಾವಿರ ಟನ್ಗಳಷ್ಟಿದ್ದು, 4100 ಟನ್ ಪೂರೈಕೆ ಆಗುತ್ತಿದೆ. ಹೆಚ್ಚುವರಿಯಾಗಿ 800 ರಿಂದ 900 ಟನ್ ಅಗತ್ಯತೆ ಇದೆ ಎಂದು ಹೇಳಿದರು.
ಶೀತಲೀಕರಣ ಕೇಂದ್ರ: ಹೊಳೆನರಸೀಪುರದಲ್ಲಿ 2.84 ಕೋಟಿ ವೆಚ್ಚದಲ್ಲಿ ಆರಂಭಿಸಿರುವ ದಿನವಹಿ 20 ಸಾವಿರ ಲೀಟರ್ನಿಂದ 1 ಲಕ್ಷ ಲೀಟರ್ ಸಾಮರ್ಥ್ಯಕ್ಕೆ ವಿಸ್ತರಿಸುವ ಕಾಮಗಾರಿ ಪೂರ್ಣಗೊಳ್ಳಲಿದ್ದು, ಪ್ರತಿ ದಿನ 1 ಲಕ್ಷ ಲೀಟರ್ ಸಾಮರ್ಥ್ಯದ ಶೀತಲೀಕರಣವನ್ನು ಕೇಂದ್ರವನ್ನು ರು. 8 ಕೋಟಿ ಗಳಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿದಿನ 1.2 ಲಕ್ಷ ಲೀಟರ್ ಸಾಮರ್ಥ್ಯದಿಂದ ರು. 3 ಲಕ್ಷ ಲೀಟರ್ ಸಾಮರ್ಥ್ಯಕ್ಕೆ ಹೆಚ್ಚಿಸುವ ಡೈರಿ ವಿಸ್ತರಣೆ, ನೂತನ ಪ್ಯಾಕಿಂಗ್ ಘಟಕ, ಬೆಣ್ಣೆ ಶೈತ್ಯಾಗಾರ ಹಾಗೂ ಹಾಲು ಉತ್ಪನ್ನಗಳ ಘಟಕಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಅದಕ್ಕಾಗಿ ರು. 22.50 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಹಾಲು ಉತ್ಪಾದಕ ಸಂಘಗಳ ಮಟ್ಟದಲ್ಲಿ ಡೈರಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಶುದ್ಧ ಹಾಲು ಸಂಗ್ರಹಣೆಗೆ ಒತ್ತು ನೀಡಲು 19 ಬಲ್ಕಿ ಮಿಲ್ಕ್ ಕೂಲರ್ಗಳನ್ನು ಅಳವಡಿಸಿ, ಯಶಸ್ಸಿಯಾಗಿ ನಿರ್ವಹಿಸಲಾಗುತ್ತಿದೆ ರಾಷ್ಟ್ರೀಯ ಡೈರಿ ಯೋಜನೆಯಡಿ ಹಾಲು ಉತ್ಪಾದನೆ ಮತ್ತು ಶುದ್ಧ ಹಾಲು ಉತ್ಪಾದನೆಗೆ 8.75 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.
ಹಾಲಿನ ಪುಡಿ ಸರಬರಾಜು: ಹಾಲು ಉತ್ಪಾದಕರ ಸಂಘಗಳ ಮೂಲಕ ಯಶಸ್ವಿನಿ ವಿಮಾ ಯೋಜನೆ, ಜನಶ್ರೀ ವಿಮಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕಡಿಮೆ ವೆಚ್ಚದಲ್ಲಿ ರೈತ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ಹೊಂದಲು ಸಹಾಯ ಮಾಡಲಾಗುತ್ತಿದೆ. ಕ್ಷೀರ ಭಾಗ್ಯ ಯೋಜನೆಯಡಿ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಪ್ರತಿ ತಿಂಗಳು 400 ರಿಂದ 500 ಟನ್ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ಹೊರ ರಾಜ್ಯಗಳಿಗೆ ಮಾರಾಟ: ಒಕ್ಕೂಟದ ಹೆಚ್ಚುವರಿ ಹಾಲನ್ನು ಮಾರಾಟ ಮಾಡುವ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ 2 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಉತ್ಪಾದನೆಗೆ ರು. 31.50 ಕೋಟಿ ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರೋಪಕರಣ ಅಳವಡಿಸುತ್ತಿದ್ದು, ಅದರ ಕಾಮಗಾರಿ ಆರಂಭವಾಗಿದೆ. ಯಾವುದೇ ಶೈತ್ಯೀಕರಣದ ಅವಶ್ಯಕತೆ ಇಲ್ಲದ ಯುಎಚ್ಟಿ ಹಾಲನ್ನು ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರ, ಮೇಘಾಲಯ, ಜಮ್ಮು ಕಾಶ್ಮೀರ ರಾಜ್ಯಗಳಿಗೆ ಮಾರಾಟ ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹೊನ್ನಾವಳ್ಳಿ ಸತೀಶ್ ಇದ್ದರು.
'ಬಂಡೆ ವಿಚಾರದಲ್ಲಿ ಸರಿಯಾಗಿ ವರ್ತಿಸಿಲ್ಲ'
ಹಾಸನ: ಗುಲ್ಬರ್ಗಾ ಬಡಾವಣೆ ಠಾಣೆ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಬಂಡೆ ಅವರು ಗುಂಡೇಟಿನಿಂದ ಮೃತಪಟ್ಟ ಪ್ರಕರಣದಲ್ಲಿ ರಾಜ್ಯ ಗೃಹ ಸಚಿವರು ನಡೆದುಕೊಂಡು ರೀತಿ ಅನಾಗರಿಕವಾಗಿತ್ತು ಎಂದು ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜಘಾತುಕ ವ್ಯಕ್ತಿ ಹಾರಿಸಿದ ಗುಂಡೇಟಿನಿಂದ ಇಹಲೋಕ ತ್ಯಜಿಸಿದ ಬಂಡೆ ಅವರು ಮೃತಪಟ್ಟ ಕೂಡಲೇ ಹಣ ಮತ್ತು ನಿವೇಶನ ಘೋಷಣೆ ಮಾಡುವ ಮೂಲಕ ವೀರ ಪೊಲೀಸ್ ಅಧಿಕಾರಿಯನ್ನು ಹಣದಲ್ಲಿ ಅಳೆದಿದ್ದು ಸರಿಯಲ್ಲ. ಬಂಡೆ ಅವರು ಚಿಕಿತ್ಸೆ ಪಡೆಯುತ್ತಿದ್ದ ಹೈದರಾಬಾದ್ ಆಸ್ಪತ್ರೆಗೆ ಗೃಹ ಸಚಿವರು ನೆಪಕ್ಕೆ ಭೇಟಿ ನೀಡಿ ಬಂದರೇ ಹೊರತು ಹೆಚ್ಚುವರಿ ಚಿಕಿತ್ಸೆ ನೀಡುವ ಬಗ್ಗೆ ಗಮನಹರಿಸಲಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.
ಶೌರ್ಯ ಪ್ರಶಸ್ತಿ ನೀಡಲಿ: ಕೇಂದ್ರ ಸರ್ಕಾರ ನೀಡುವ ಶೌರ್ಯ ಪ್ರಶಸ್ತಿಯನ್ನು ಬಂಡೆ ಅವರಿಗೆ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

