ಇಂದು ನಿಜಗುಣ ಅಂಬಿಗ ಚೌಡಯ್ಯ ಜಯಂತ್ಯುತ್ಸವ
ಹಾಸನ: ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜ.21 ರಂದು ಬೆಳಗ್ಗೆ 10-30 ಕ್ಕೆ ನಿಜಗುಣ ಅಂಬಿಗ ಚೌಡಯ್ಯ ಜಯಂತ್ಯುತ್ಸವ ನಡೆಯಲಿದೆ. ಸಾರ್ವಜನಿಕರು, ಸಮಾಜದ ಗಣ್ಯರು, ಸಂಘ ಸಂಸ್ಥೆಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಈ ಮೂಲಕ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.
ಬಿಸಿಯೂಟ ಕೊಠಡಿ ಶಂಕುಸ್ಥಾಪನೆ, ಚೆಕ್ ವಿತರಣೆ ಇಂದು
ಹೊಳೆನರಸೀಪುರ: ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜ.20ರಂದು ಬಿಸಿಯೂಟ ಕೊಠಡಿಗಳ ಶಂಕುಸ್ಥಾಪನೆ ಮತ್ತು 56 ಶಾಲೆಗಳಿಗೆ 2ನೇ ಕಂತಿನ ಹಣದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ತಮ್ಮಣ್ಣಗೌಡ ತಿಳಿಸಿದ್ದಾರೆ.
ಚಾಲಕರ ಅಪಘಾತ ಪರಿಹಾರ ಯೋಜನೆ
ಹಾಸನ: ಅಪಘಾತಗಳಿಂದ ಸಂಕಷ್ಟಕ್ಕೆ ಸಿಲುಕುವ ಖಾಸಗಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಲಾರಿ ಮತ್ತು ಬಸ್ ಚಾಲಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೆರವು ನೀಡಲು ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯನ್ನು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಸರ್ಕಾರ ಜಾರಿ ಮಾಡುತ್ತಿದೆ.
ಈ ಅಪಘಾತ ಪರಿಹಾರ ಯೋಜನೆಯು ರಾಜ್ಯದಲ್ಲಿ ಚಾಲನಾ ಪರವಾನಿಗೆ ಪಡೆದ ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಅನ್ವಯಿಸುತ್ತಿದೆ. ಚಾಲಕರು ಒಂದು ಬಾರಿ 25 ರು. ನೋಂದಣಿ ಶುಲ್ಕ ಪಾವತಿಸಬೇಕು. ಸಂಪೂರ್ಣ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ವಯಸ್ಸಿನ ಮಿತಿ 20 ರಿಂದ 70 ವರ್ಷ ಇದ್ದು ವಿಮಾ ಮೊತ್ತ ಗರಿಷ್ಠ 2 ಲಕ್ಷ ರು. ಲಭ್ಯವಿದೆ.
ಯೋಜನೆಯ ಸೌಲಭ್ಯ: ಮರಣ ಹೊಂದಿದಾಗ ನಾಮ ನಿರ್ದೇಶಕರಿಗೆ 2 ಲಕ್ಷ ರು. ಪರಿಹಾರ ನೀಡಲಾಗುವುದು. ಶಾಶ್ವತ ದುರ್ಬಲತೆಗೆ ಚಾಲಕರಿಗೆ 2 ಲಕ್ಷದವರೆಗೆ ಪರಿಹಾರ ಹಾಗೂ ತಾತ್ಕಾಲಿಕ ದುರ್ಬಲತೆಗೆ ಚಾಲಕನಿಗೆ 1 ಲಕ್ಷ ರು.ವರೆಗೆ ಆಸ್ಪತ್ರೆಯ ಒಳರೋಗಿ ಚಿಕಿತ್ಸಾ ವೆಚ್ಚ ಹಿಂಪಡೆಯುವ ಸೌಲಭ್ಯ ದೊರೆಯುತ್ತದೆ.
ನೋಂದಣಿಗೆ ದಾಖಲೆ: ಚಾಲ್ತಿಯಲ್ಲಿರುವ ವಾಣಿಜ್ಯ ವಾಹನ ಚಾಲನಾ ಪರವಾನಗಿಯ ಪ್ರತಿ, ವಿಳಾಸದ ದಾಖಲಾತಿಗಳು, ಪಾಸ್ಪೋರ್ಟ್ ಅಳತೆಯ ಒಂದು ಬಣ್ಣದ ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲನ್ನು ನೋಂದಣಿ ಸಂದರ್ಭದಲ್ಲಿ ಸಲ್ಲಿಸಬೇಕು.
ನೋಂದಣಿ ಸ್ಥಳ: ಕಾರ್ಮಿಕ ಅಧಿಕಾರಿಯವರ ಕಚೇರಿ, ಸುಪ್ರಜಾ ಅರಳೀಕಟ್ಟೆ ರಸ್ತೆ, ಶ್ರೀನಿವಾಸ ಕಲ್ಯಾಣ ಮಂಟಪದ ಹತ್ತಿರ, ಉತ್ತರ ಬಡಾವಣೆ, ಹಾಸನ-573201 ಇಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಲಾರಿ ಮತ್ತು ಬಸ್ ಚಾಲಕರು, ಮೇಲ್ಕಂಡ ದಾಖಲಾತಿಗಳನ್ನು ಸಲ್ಲಿಸಿ ನೋಂದಣಿ ಮಾಡಿಸಿಕೊಂಡು ಯೋಜನೆಯ ಸೌಲಭ್ಯಗಳನ್ನು ಪಡೆಯಬೇಕೆಂದು ಹಾಗೂ ಹಾಸನ ಜಿಲ್ಲೆಯ ಎಲ್ಲಾ ಖಾಸಗಿ ವಾಹನ ಚಾಲಕರ ಸಂಘದವರು ಸಹ ತಮ್ಮ ಸದಸ್ಯರುಗಳಿಗೆ ಸೂಕ್ತ ಅರಿವು ನೀಡಿ ಕಾರ್ಮಿಕ ಇಲಾಖೆಯೊಂದಿಗೆ ಸಹಕರಿಸುವಂತೆ ಕಾರ್ಮಿಕ ಅಧಿಕಾರಿ ಕೆ.ಎನ್.ಪ್ರಹಾದ ಅವರು ಮನವಿ ಮಾಡಿದ್ದಾರೆ.
ಮಾಹಿತಿಗಾಗಿ ತಾಲೂಕಿನಲ್ಲಿರುವ ವಾಹನ ಚಾಲಕರು ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಭೇಟಿ ಮಾಡಲು ಕೋರಿದ್ದಾರೆ.
ವಿದ್ಯುತ್ ಪರಿವರ್ತಕಕ್ಕೆ ಸಾರಿಗೆ ಬಸ್ ಡಿಕ್ಕಿ
ಸಕಲೇಶಪುರ: ಸ್ಟೇರಿಂಗ್ ಗ್ರಾಡ್ ತುಂಡಾಗಿ ವಿದ್ಯುತ್ ಪರಿವರ್ತಕಕ್ಕೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಬ್ಯಾಕರವಳ್ಳಿ ವೃತ್ತದಲ್ಲಿ ಶನಿವಾರ ನಡೆದಿದೆ. ಸಕಲೇಶಪುರದಿಂದ ಕಾಗಿನಹರೆಗೆ ಸಾಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ನ ಸ್ಟೇರಿಂಗ್ ಗ್ರಾಡ್ ತುಂಡಾದ ಪರಿಣಾಮ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಈ ಸಂದರ್ಭದಲ್ಲಿ ಬಸ್ನಲ್ಲಿ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ದ್ಯಾವಪ್ಪ ಪ್ರತಿಮೆ ನಿರ್ಮಾಣಕ್ಕೆ ಆಗ್ರಹ
ಹಾಸನ: ಹಿಂದುಳಿದ ವರ್ಗಗಳ ಮುಖಂಡ, ಸಾಮಾಜಿಕ, ಹೋರಾಟಗಾರ, ಮಡಿವಾಳ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ ದಿ. ಎಚ್.ಎನ್. ದ್ಯಾವಪ್ಪ ಪ್ರತಿಮೆ ನಿರ್ಮಿಸ ಬೇಕೆಂದು ಹಿಂದುಳಿದ ವರ್ಗಗಳ ಹೋರಾಟಗಾರ ಆರ್.ಮಂಜುನಾಥ್ ಆಗ್ರಹಿಸಿದ್ದಾರೆ. ದ್ಯಾವಪ್ಪ 50 ವರ್ಷಗಳಿಂದ ಸಾಮಾಜಿಕ ಕ್ಷೇತ್ರಗಳಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು. ಜಿಲ್ಲೆ ಅಭಿವೃದ್ಧಿಗೆ ಹೋರಾಡಿದ್ದಾರೆ. ಅಹಿಂದ ವರ್ಗದಿಂದ ಉದ್ಯೋಗ ಮೀಸಲಾತಿ ಮತ್ತು ರಾಜಕೀಯ ಮೀಸಲಾತಿಯಲ್ಲಿ ಬದಲಾವಣೆ ತರಲು ಶ್ರಮಿಸಿದವರು. ಸಂಘ ಸಂಸ್ಥೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿಸಿದ್ದರು ಎಂದು ತಿಳಿಸಿದ್ದಾರೆ. ಸಾಮಾಜಿಕ ಕಳಕಳಿಯ ಇಂತಹ ವ್ಯಕ್ತಿಯ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಅವರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

