ಕಚೇರಿ ಯಡವಟ್; ಶಿಕ್ಷಕರ ವೇತನ ಕಟ್
ದಯಾಶಂಕರ ಮೈಲಿ
ಕ.ಪ್ರ.ವಾರ್ತೆ ಹಾಸನ ಜ. 20
ಒಬ್ಬ ವ್ಯಕ್ತಿ ಒಂದು ಸಣ್ಣ ತಪ್ಪು ಮಾಡಿದ್ದರಿಂದ ನೂರಕ್ಕೂ ಹೆಚ್ಚು ಶಿಕ್ಷಕರು ಎರಡು ತಿಂಗಳಿನಿಂದ ವೇತನವಿಲ್ಲದೇ ಪರದಾಟ ಬೇಕಾದ ದುಸ್ಥಿತಿ ಹಾಸನ ದಲ್ಲಿ ಉಂಟಾಗಿದೆ. ಪರಿಣಾಮ ಸಂಬಳವನ್ನೇ ನಂಬಿ ಜೀವನದ ಬಂಡಿಯನ್ನು ದೂಡುವ ಬಡ ಮೇಷ್ಟ್ರುಗಳು ಎಂದಿನಂತೆ ಕುಟುಂಬ ನಿರ್ವಹಣೆ ಮಾಡಲಾಗದೇ ತೀವ್ರ ತೊಂದರೆಗೆ ಸಿಲುಕಿದ್ದಾರೆ.
ಜೀವನ ನಿರ್ವಹಣೆ ಕಷ್ಟ: ಹಾಗಾಗಿ ಹಣಕಾಸು ಇಲಾಖೆ ವೇತನವನ್ನು ತಡೆ ಹಿಡಿದಿದೆ. ಹೀಗೆ ಯಾರೋ ಮಾಡಿದ ತಪ್ಪಿಗಾಗಿ ಹಾಸನ ತಾಲೂಕಿನ 16 ಅನುದಾನಿತ ಪ್ರಾಥಮಿಕ ಶಾಲೆಗಳ 105 ಶಿಕ್ಷಕರು ಪಗಾರ ಪಡೆಯದೇ ಪರದಾಡುತ್ತಿದ್ದು, ಮನೆ ಬಾಡಿಗೆ ಕಟ್ಟಲು, ಮಕ್ಕಳ ಫೀಜು ಕಟ್ಟಲು ಕಷ್ಟವಾಗಿ ಪಡಬಾರದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಹಣಕಾಸು ಇಲಾಖೆ ಉನ್ನತಾಧಿಕಾರಿಗಳನ್ನು ಹಲವಾರು ಬಾರಿ ಭೇಟಿ ಶಿಕ್ಷಕರು, ಗುಮಾಸ್ತ ಮಾಡಿದ ತಪ್ಪಿಂದ ವೇತನಕ್ಕೆ ತಡೆಯೊಡ್ಡಲಾಗಿದೆ. ಅದನ್ನು ಸರಿಪಡಿಸಿ ಕೂಡಲೇ ವೇತನದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಪ್ರಯೋಜನವಾಗಿಲ್ಲ: ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಡಿಡಿಪಿಐ ಅಥವಾ ಹಾಸನ ತಾಲೂಕಿನ ಬಿಇಓ ಅವರ ಬಳಿ ಹೋದರೂ ವೇತನ ಸಿಕ್ಕಿಲ್ಲ.
ಸರ್ಕಾರದ ಅನುದಾನಕ್ಕೆ ಒಳಪಟ್ಟು 5 ರಿಂದ 6 ವರ್ಷಗಳಾದ ಪ್ರಾಥಮಿಕ ಶಾಲೆಗಳನ್ನು ಯೋಜನೇತರ (ನಾನ್ ಪ್ಲಾನಿಂಗ್ ) ಅನುದಾನದ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅದರಂತೆ ಯೋಜನೇತರ ವೆಚ್ಚದಲ್ಲಿ ಸರ್ಕಾರ ಅನುದಾನವನ್ನು ಜಿಲ್ಲಾ ಪಂಚಾಯ್ತಿಗೆ ಬಿಡುಗಡೆ ಮಾಡಬೇಕು. ನಂತರ ಬಿಇಓ ಮೂಲಕ ಶಿಕ್ಷಕರಿಗೆ ವೇತನ ಬಟವಾಡೆ ಮಾಡಲಾಗುತ್ತದೆ.
ಶಿಕ್ಷಕರ ಅಳಲು: ಸರ್ಕಾರ ಹೊಸದಾಗಿ ಹೊರಡಿಸಿದ ಆದೇಶದನ್ವಯ ಪರಿಷ್ಕೃತ ವೇತನದ ವಿವರವನ್ನು ಹಣಕಾಸು ಇಲಾಖೆಗೆ ಸರಿಯಾಗಿ ಕಳುಹಿಸಿ ಕೊಡದೇ ಇರುವುದು ಸಂಬಂಧಿಸಿದ ಇಲಾಖೆಯ ತಪ್ಪು. ಈ ತಪ್ಪಿಗೆ ನಾವೇಕೆ ಹೊಣೆಯಾಗಬೇಕು, ನಾವೇಕೆ ಕಷ್ಟ ಅನುಭವಿಸಬೇಕು ? ಕೆಲ ಶಿಕ್ಷಕರು ಪ್ರತಿನಿತ್ಯ ಬಸ್ ಚಾರ್ಚ್ಗೂ ದುಡ್ಡಿಲ್ಲದೇ ಪರದಾಟಬೇಕಾಗಿದೆ. ಕೆಲವರು ಖಾಸಗಿಯವರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜನವರಿ ಸಂಬಳ ಬರುವುದು ಗ್ಯಾರಂಟಿ ಇಲ್ಲ ಎಂದು ಕೆಲ ಶಿಕ್ಷಕರು ಅಳಲನ್ನು ತೋಡಿಕೊಳ್ಳುತ್ತಾರೆ.
ಈ ಸಮಸ್ಯೆ ಬಗ್ಗೆ ಹಾಸನ ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ವಿ. ಗಂಗಾಧರ್ ಮಾತನಾಡಿ, 'ನವೆಂಬರ್ನಿಂದ ಸಂಬಳ ಇಲ್ಲ. ಡಿಡಿಪಿಐ ಕಚೇರಿಯಿಂದ ಪರಿಷ್ಕೃತ ವೇತನದಂತೆ ಶಿಕ್ಷಕರ ವೇತನದ ವರದಿಯನ್ನು ಕಳುಹಿಸಿಲ್ಲ. ಆದ್ದರಿಂದ ಸಂಬಳ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಅದು ಸರಿಯಾಗಿ ಗೊತ್ತಿಲ್ಲ. ಅದೇನೆ ಇರಲಿ.. ನಮಗೆ ನವೆಂಬರರ್ನಿಂದ ಬಾರದ ವೇತನವನ್ನು ಕೂಡಲೇ ಕೊಡಬೇಕು ಮತ್ತು ಜನವರಿ ಸಂಬಳವನ್ನು ಸರಿಯಾದ ವೇಳೆಗೆ ನೀಡಬೇಕು. ಅಧಿಕಾರಿಗಳು ಕೊಡಿಸುವ ಭರವಸೆ ನೀಡಿದ್ದಾರೆ' ಎಂದರು.
ಈ ಬಗ್ಗೆ ಮಾತನಾಡಿದ ಹಾಸನ ಬಿಇಓ ರವಿಕುಮಾರ್, 'ಡಿಡಿಪಿಐ ಕಚೇರಿ ಮಾಡಿದ ಎಡವಟ್ಟಿನಿಂದ ವೇತನ ಬರುವುದು ವಿಳಂಬವಾಗಿದೆ ಎಂಬ ಬಗ್ಗೆ ನಾನೇನು ಹೇಳುವುದಿಲ್ಲ. ಆದರೆ ಹಣಕಾಸು ಇಲಾಖೆ ಮತ್ತು ಜಿಲ್ಲಾ ಪಂಚಾಯ್ತಿಗೆ ಪತ್ರ ಬರೆದಿದ್ದು, ಸದ್ಯದಲ್ಲೇ ವೇತನ ದೊರೆಯಲಿದೆ' ಎಂದರು.
ಬಲ ಇಲ್ಲದವರ ಶೋಷಣೆ ಇದು: ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇದೆ. ಆದರೆ ಸಂಘಟನೆ ಮಾಡಿಕೊಂಡು ಹೋರಾಟ ಮಾಡುವ ಶಕ್ತಿ ಅದಕ್ಕಿಲ್ಲ. ಈ ಕಾರಣಕ್ಕಾಗಿ ನಮ್ಮ ಕಷ್ಟಗಳಿಗೆ ಸರ್ಕಾರವಿರಲಿ. ಹತ್ತಿರದ ಅಧಿಕಾರಗಳು ಸ್ಪಂದಿಸುತ್ತಿಲ್ಲ. ಸಂಬಳ ಬಂದ್ರೆ ಜೀವನ. ಇಲ್ಲದಿದ್ದರೇ ಇಲ್ಲ. ಹತ್ತಾರು ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿದ್ದೇವೆ. ಅನುದಾನಕ್ಕೆ ಒಳಪಟ್ಟ ನಂತರವಾದರೂ ನೆಮ್ಮದಿಯಿಂದ ಇರೋಣ ಅಂದ್ರೆ ಆಗುತ್ತಿಲ್ಲ. ಹೋರಾಟ ಮಾಡುವ ಶಕ್ತಿ ಅಷ್ಟೇನು ಇಲ್ಲದ ಕಾರಣ ಶೋಷಣೆ ಮಾಡಲಾಗುತ್ತಿದೆ ಎಂದು ಹೆಸರನ್ನು ಹೇಳಲು ಬಯಸದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು
ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ.
ಶಿಕ್ಷಕರಿಗೆ ಆಗಿರುವ ತೊಂದರೆ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಸರ್ಕಾರ ಕೂಡಲೇ ವೇತನದ ಅನುದಾನ ಬಿಡುಗಡೆ ಮಾಡಿ ಬಡ ಮೇಷ್ಟ್ರುಗಳ ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ.
ಏನಿದು ಸಮಸ್ಯೆ
ಹಾಸನ ತಾಲೂಕಿನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು 2013 ನವೆಂಬರ್ನಿಂದ ಸಂಬಳ ಪಡೆದಿಲ್ಲ. ಇದಕ್ಕೆ ಕಾರಣ, ಇತ್ತೀಚೆಗೆ ಸರ್ಕಾರ ಅನುದಾನಿತ ಶಾಲೆಗಳ ವೇತನ ಶ್ರೇಣಿಯನ್ನು ಪರಿಷ್ಕರಣೆ ಮಾಡಿತು. ಆದರ ಪ್ರಕಾರ ಶಿಕ್ಷಕರ ಹಿರಿಯತನವನ್ನೇ ಅಧರಿಸಿ ವೇತನ ನಿಗದಿ ಪಡಿಸಿ ಹಣಕಾಸು ಇಲಾಖೆಗೆ ಕಳುಹಿಸಿ ಕೊಡಬೇಕಿತ್ತು. ಈ ಕಾರ್ಯವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಗುಮಾಸ್ತರು ಸರಿಯಾಗಿ ನಿರ್ವಹಿಸಿಲ್ಲ.
ಡಿಡಿಪಿಐ ಏನಂತಾರೆ?
ನೋಡ್ರೀ. ವೇತನ ದೊರೆಯದಿರುವುದಕ್ಕೆ ಕಾರಣ ನನಗೆ ಗೊತ್ತಿಲ್ಲ. ಡೈರೆಕ್ಟ್ ಬಿಇಓಗೆ ಹಣ ಬಿಡುಗಡೆ ಆಗುತ್ತೆ. ಅದ್ಯಾರೋ ಬಿಇಓ ಇದ್ದಾರೆ ಅವರನ್ನು ಕೇಳಿ. ನನಗೊತ್ತಿಲ್ಲ.
ಟಿ ಜಿ.ಆರ್. ಬಸವರಾಜು, ಡಿಡಿಪಿಐ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

