ಹಾಸನ

22 ನಕಲಿ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

Published On :

ಹೊಳೆನರಸೀಪುರ: ಸಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಸೋಮವಾರ ನಡೆಯುತ್ತಿದ್ದ  ಸಪ್ಲಿಮೆಂಟರಿ ಪರೀಕ್ಷೆಯಲ್ಲಿ, ಪರೀಕ್ಷೆ ಬರೆಯುತ್ತಿದ್ದ 22 ವಿದ್ಯಾರ್ಥಿಗಳ ಪೈಕಿ, 22 ವಿದ್ಯಾರ್ಥ್ಥಿಗಳೂ ಪಟ್ಟಣದ ಖಾಸಗಿ ಐಟಿಐ ಕಾಲೇಜಿಗೆ ಸೇರಿದ ನಕಲಿ ವಿದ್ಯಾರ್ಥಿಗಳು ಎಂಬುದನ್ನು ಪತ್ತೆ ಹಚ್ಚಿರುವ ಸ್ಥಳೀಯ ಪರೀಕ್ಷಾ ಮಂಡಳಿ ಅಧ್ಯಕ್ಷರು ಹಾಗೂ ಪರೀಕ್ಷಾ ಕೇಂದ್ರದ ಅಧೀಕ್ಷಕರ ದೂರಿನ ಮೇಲೆ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಅಷ್ಟೂ ವಿದ್ಯಾರ್ಥಿಗಳನ್ನೂ ವಶಕ್ಕೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಪಟ್ಟಣದ ನಾಗಲಾಪುರ ಬಳಿಯಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಸೋಮವಾರ  ಅನುತೀರ್ಣರಾದವರಿಗಾಗಿ ನಡೆಸಲಾಗುವ ಸಪ್ಲಿಮೆಂಟರಿ ಪರೀಕ್ಷೆಯ ಟ್ರೇಡ್ ಪ್ರಾಕ್ಟಿಕಲ್ ಪರೀಕ್ಷಾ ವಿಷಯವನ್ನು 22 ವಿದ್ಯಾರ್ಥಿಗಳು ಬರೆಯುತ್ತಿದ್ದರು.  ಪರೀಕ್ಷೆ ಆರಂಭಗೊಂಡ ನಂತರ ಕೊಠಡಿ ಮೇಲ್ವಿಚಾರಕರು ಪರೀಕ್ಷೆ ಬರೆಯುತ್ತಿದ್ದ ನಕಲಿ ವಿದ್ಯಾರ್ಥಿಯೊಬ್ಬನ ಮೇಲೆ ಅನುಮಾನಗೊಂಡು, ಪರೀಕ್ಷೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸ್ಥಳೀಯ ಪರೀಕ್ಷಾ ಮಂಡಳಿ ಅಧ್ಯಕ್ಷರಾದ ಸೈಯದ್ ಅಮಾನುಲ್ಲಾ ಹಾಗೂ ಪರೀಕ್ಷಾ ಕೇಂದ್ರದ ಅಧೀಕ್ಷಕರಾದ ಮಂಜುನಾಥ್ ಅವರಿಗೆ ದೂರು ನೀಡಿದ್ದಾರೆ.
ಎಲ್ಲರೂ ನಕಲಿ: ಕೂಡಲೇ ಪರೀಕ್ಷಾ ಕೊಠಡಿಗೆ ತೆರಳಿದ  ಪರೀಕ್ಷಾ ಕೇಂದ್ರದ ಅಧಿಕಾರಿಗಳು ವಿದ್ಯಾರ್ಥಿಯೊಬ್ಬನ ದಾಖಲಾತಿಗಳನ್ನು ಪರೀಕ್ಷಿಸುವ ಸಂದರ್ಭದಲ್ಲಿ ಆತ ನಕಲಿ ವಿದ್ಯಾರ್ಥಿಯೆಂಬುದು ಪತ್ತೆಯಾಗಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಇನ್ನುಳಿದ ವಿದ್ಯಾರ್ಥಿಗಳನ್ನೂ ಅನುಮಾನಗೊಂಡು ಪರೀಕ್ಷಿಸಲು ಮುಂದಾದಾಗ ಪರೀಕ್ಷೆ ಬರೆಯುತ್ತಿದ್ದ 22 ವಿದ್ಯಾರ್ಥಿಗಳಲ್ಲಿ ಅಷ್ಟೂ ವಿದ್ಯಾರ್ಥಿಗಳೂ ನಕಲಿ ವಿದ್ಯಾರ್ಥಿಗಳೆಂಬ ಅಘಾತಕಾರಿ ವಿಷಯ ಹೊರಬಿದ್ದಿದೆ.
ಅಷ್ಟೂ ವಿದ್ಯಾರ್ಥಿಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗಿ ಇಂದು ಪರೀಕ್ಷೆ ಬರೆಯುತ್ತಿದ್ದ 22 ವಿದ್ಯಾರ್ಥಿಗಳೆಲ್ಲರೂ ಪಟ್ಟಣದ ಗಂಗೋತ್ರಿ ಐಟಿಐ ಎಂಬ ಖಾಸಗಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ನಕಲಿ ವಿದ್ಯಾರ್ಥಿಗಳೆಂಬ ಅಂಶವನ್ನು ಪರೀಕ್ಷಾ ಕೇಂದ್ರದಲ್ಲಿದ್ದ ಅಷ್ಟೂ ನಕಲಿ ವಿದ್ಯಾರ್ಥಿಗಳು ಖುದ್ದಾಗಿ ಒಪ್ಪಿಕೊಂಡಿದ್ದಾರೆ ಎಂಬುದನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳು ದೃಢಪಡಿಸಿದ್ದಾರೆ.
ತಪ್ಪೊಪ್ಪಿಗೆ ಪತ್ರ: ಪರೀಕ್ಷಾ ಕೇಂದ್ರದೊಳಗಿದ್ದ 22 ವಿದ್ಯಾರ್ಥಿಗಳ ಸಹಿ, ಫೋಟೋ, ಇನ್ನಿತರ ಮಾಹಿತಿಗಳನ್ನು ಕೇಳಿದ ಸಂದರ್ಭದಲ್ಲಿ ನಕಲಿ ವಿದ್ಯಾರ್ಥಿಗಳೆಲ್ಲರೂ ಸಿಕ್ಕಿಬಿದ್ದಿದ್ದು, ಈ ಸಂದರ್ಭದಲ್ಲಿ ಖಾಸಗಿ ಐಟಿಐ ಕಾಲೇಜಿನವರ ಮಾತಿನಂತೆ ತಾವುಗಳು ಬೇರೊಬ್ಬರ ಪರವಾಗಿ ಪರೀಕ್ಷೆಯನ್ನು ಬರೆಯಲು ಬಂದಿದ್ದು, ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ತಮ್ಮನ್ನು ಕ್ಷಮಿಸಿ ಎಂಬುದಾಗಿ ತಪ್ಪೊಪ್ಪಿಗೆ ಪತ್ರವನ್ನೂ ಪರೀಕ್ಷೆ ಬರೆಯಲು ಬಂದಿದ್ದ 16 ವಿದ್ಯಾರ್ಥಿಗಳು ಹಾಗೂ 6 ವಿದ್ಯಾರ್ಥಿನಿಯರು  ಪರೀಕ್ಷಾ ಕೇಂದ್ರದಲ್ಲಿನ ಮೇಲಧಿಕಾರಿಗಳಿಗೆ ಬರೆದುಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಇಲ್ಲಿನ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿ ಗ್ರಾಮಾಂತರ ಠಾಣೆ ಎಸ್ಸೈ ಮಂಜುನಾಥ್ ಅವರು ಪರೀಕ್ಷೆ ಬರೆಯುತ್ತಿದ್ದ 22ನಕಲಿ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.