ಹಾಸನ

ಮುಂದುವರಿದ ರೈತರ ಅಹೋರಾತ್ರಿ ಧರಣಿ

Published On :

ಕ.ಪ್ರ.ವಾರ್ತೆ    ಬೇಲೂರು    ಜ. 21
ಹಳೆಬೀಡು ಮತ್ತು ಮಾದೀಹಳ್ಳಿ ಹೋಬಳಿ ಏತ ನೀರಾವರಿಯ ಕಾಮಗಾರಿ ವಿಳಂಬವನ್ನು ಖಂಡಿಸಿ  ನಡೆಸುತ್ತಿರುವ ಆಹೋರಾತ್ರಿ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು  ಮಂಗಳವಾರವೂ ಮುಂದುವರಿಯಿತು.
ದನ, ಎಮ್ಮೆ ಕಟ್ಟಿಹಾಕಿದರು: ತಾಲೂಕು ರೈತ ಸಂಘದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಯಗಚಿ ಶಾಶ್ವತ ನೀರಾವರಿ ಹೋರಾಟ ಸಮಿತಿ, ಹಳೆಬೀಡು ಮತ್ತು ಮಾದೀಹಳ್ಳಿ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಜಾವಗಲ್ ಹೋಬಳಿ ರೈತರಿಂದ ಯಗಚಿ ಏತನೀರಾವರಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಒತ್ತಾಯಿಸಿ ದನ, ಎಮ್ಮೆಯನ್ನು ತಂದು ತಾಲೂಕು ಕಚೇರಿ ಬಾಗಿಲು ಮುಂಭಾಗದಲ್ಲಿ ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಕಿಡಿ: ಯಗಚಿ ಹೋರಾಟ ಸಮಿತಿಯ ಅಧ್ಯಕ್ಷ ಗುರುಸ್ವಾಮಿಗೌಡ ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿ, ಹಳೆಬೀಡು ಮಾದೀಹಳ್ಳಿ ಹಾಗೂ ಜಾವಗಲ್ ಹೋಬಳಿಗೆ ನೀರು ಹರಿಸುವ ವಿಚಾರದಲ್ಲಿ ಶಾಸಕರು, ಯಗಚಿ ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದು ಸುಳ್ಳು ಆಶ್ವಾಸನೆ ನೀಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹೋರಾಟ ಹತ್ತಿಕ್ಕುವ ಕೆಲಸ: ಯಗಚಿ ನೀರು ಕೊಡುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ತಾಲೂಕಿನ ಶಾಸಕರು, ಪೊಲೀಸರು ಹಾಗೂ ಅಧಿಕಾರಿಗಳು ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರೈತರ ದನ ಎಮ್ಮೆಯನ್ನು ತಾಲೂಕು ಕಚೇರಿ ಮುಂಭಾಗ ಕಟ್ಟಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ತಹಸೀಲ್ದಾರ್ ದೌರ್ಜನ್ಯ ನಡೆಸಿ ದನ ಎಮ್ಮೆಯನ್ನು  ಓಡಿಸಲು ಮುಂದಾಗಿ ರೈತರ ಹಾಗೂ ದನಕರುಗಳ ನಡುವೆ ಇರುವ ಭಾವನಾತ್ಮಕ ಸಂಬಂಧಗಳ ನಡುವೆ ಚೆಲ್ಲಾಟವಾಡುತ್ತಿದ್ದು ರೈತರನ್ನು ಕೆಣಕಿದ ಯಾವುದೇ ಸರ್ಕಾರ ಮುಂದುವರೆದ ಉದಾಹರಣೆಯಿಲ್ಲ ಎಂದು ಎಚ್ಚರಿಕೆ ನೀಡಿದರು.
ಆಮೆಗತಿಯಲ್ಲಿ ಕಾಮಗಾರಿ: ಏತನೀರಾವರಿ ಕಾಮಗಾರಿ ತಾತ್ಕಾಲಿಕವಾಗಿ ನೀರು ಕೊಡುವ ಯೋಜನೆಯಾಗಿದ್ದು ಇದರಿಂದ ರೈತರಿಗೆ ಯಾವುದೇ ಉಪಯೋಗವಿಲ್ಲ. ಅದರ ಬದಲು ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿರುವ ರಣಗಟ್ಟ ಒಡ್ಡಿನಿಂದ ನೀರು ಹರಿಸಲು ಮುಂದಾದರೆ ಶಾಶ್ವತವಾಗಿ 62 ಕೆರೆಗಳಿಗೆ ನೀರುಣಿಸಬಹುದು. ಅಲ್ಲದೇ, ಮಾರ್ಚಿನಲ್ಲಿ ಏತ ನೀರಾವರಿ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ರೈತರು ದಡ್ಡರು ಎಂದು ಎಂಜನಿಯರ್ ಹಾಗೂ ಶಾಸಕರು ತಿಳಿದಿದ್ದಾರೆ. ಈಗ ನಡೆಯುತ್ತಿರುವ ಕಾಮಗಾರಿಯ ವೇಗವನ್ನು ನೋಡಿದರೆ ಕನಿಷ್ಟ 2 ವರ್ಷ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂದರು.
ಮೋಸ ಮಾಡಬೇಡಿ: ಪ್ರಗತಿಪರ ಸಂಘಟನೆ ಗೌರವಾಧ್ಯಕ್ಷ ಕೆ. ಸುದರ್ಶನ್ ಮಾತನಾಡಿ, 3 ಹೋಬಳಿಯಲ್ಲಿ ನೀರಿಲ್ಲದೆ ಜನತೆಯ ಬವಣೆ ಮುಗಿಲು ಮುಟ್ಟಿದೆ. ಕುಡಿಯುವ ನೀರಿಗೆ ಆಗ್ರಹಿಸಿ ನಡೆಸುತ್ತಿರುವ ಆಹೋರಾತ್ರಿ ಧರಣಿಗೆ ಆ ಭಾಗದ ಗ್ರಾ.ಪಂ, ತಾಲೂಕು ಪಂಚಾಯ್ತಿ  ಹಾಗೂ ಜಿಪಂ ಸದಸ್ಯರು ಬಾರದಿರುವ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ಜನಪ್ರತಿನಿಧಿಗಳು ಇಂತಹ ಸಂದರ್ಭದಲ್ಲಿ ನೈತಿಕ ಬೆಂಬಲ ನೀಡಬೇಕಿತ್ತು. ಅಲ್ಲದೇ, ಯಗಚಿ ಅಧಿಕಾರಿಗಳು ರೈತರಿಗೆ ನಿಖರವಾದ, ಸಮರ್ಪಕವಾದ ಹಾಗೂ ಸತ್ಯದ ಮಾಹಿತಿಯನ್ನು ನೀಡಬೇಕು. ಅದು ಬಿಟ್ಟು ಶಾಸಕರನ್ನು ಸರ್ಕಾರವನ್ನು ಓಲೈಸುವ ಪೊಳ್ಳು ಹೇಳಿಕೆಯನ್ನು ನೀಡಿ ಅಮಾಕ ರೈತರಿಗೆ ಮೋಸ ಮಾಡಬೇಡಿ ಎಂದರು.



ಸುಳ್ಳು ಭರವಸೆ ನೀಡುವುದಿಲ್ಲ: ಸ್ಪಷ್ಟನೆ
ಪ್ರತಿಭಟನಾ ನಿರತರನ್ನುದ್ದೇಶಿಸಿ, ಯಗಚಿ ಕಾರ್ಯಪಾಲಕ ಎಂಜಿನಿಯರ್ ರಾಜಶೇಖರ್ ಮಾತನಾಡಿ, ಇನ್ನು 70 ದಿನದಲ್ಲಿ (ಮಾರ್ಚಿ ತಿಂಗಳಾಂತ್ಯದೊಳಗೆ) ಯಗಚಿ ಏತ ನೀರಾವರಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು. ಈಗಾಗಲೇ ತಾಂತ್ರಿಕ ಅಡಚಣೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಅದನ್ನು ಬಗೆಹರಿಸುವುದಾಗಿ ಅವರು ತಿಳಿಸಿದ್ದಾರೆ. ರೈತರಿಗೆ ಯಾವುದೇ ಕಾರಣಕ್ಕೂ ಸುಳ್ಳು ಭರವಸೆ ನೀಡುವುದಿಲ್ಲ ಎಂದು ಅವರು ತಿಳಿಸಿದರು.



ತಹಸೀಲ್ದಾರ್ ಸಿಡಿಮಿಡಿ
ಪ್ರತಿಭಟನೆಯ ಅಂಗವಾಗಿ, ರೈತರು ಬೆಳಗ್ಗೆ ಎಮ್ಮೆಯನ್ನು ತಾಲೂಕು ಕಚೇರಿ ಪ್ರವೇಶ ದ್ವಾರದ ಬಳಿ ಕಟ್ಟಿ ಅಲ್ಲೇ ಮೇವನ್ನು ಹಾಕಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಕಚೇರಿ ಕೆಲಸಕ್ಕೆ ಆಗಮಿಸಿದ ತಹಸೀಲ್ದಾರ್ ಜಗದೀಶ್ ಮುಖ್ಯ ದ್ವಾರದ ಬಳಿ ಕಟ್ಟಿರುವ ಎಮ್ಮೆ ದನಗಳನ್ನು ನೋಡಿ ಸಿಡಿಮಿಡಿಗೊಂಡು, ಕಚೇರಿ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ತಾವೇ ಖುದ್ದಾಗಿ ಬಿಚ್ಚಲು ಮುಂದಾದರು. ಇದನ್ನು ಕಂಡ ರೈತರು ಕೂಡಲೇ ಪ್ರವೇಶ ದ್ವಾರದ ಬಳಿ ಆಗಮಿಸಿ ತಹಸೀಲ್ದಾರರನ್ನು ತರಾಟೆ ತೆಗೆದುಕೊಂಡು ದಿಕ್ಕಾರ ಕೂಗಿದರು. ರೈತ ಮುಖಂಡರು ಹಾಗೂ ತಹಸೀಲ್ದಾರ್ ನಡುವೆ ಮಾತಿಗೆ ಮಾತು ಬೆಳೆದು ನಂತರ ಪೊಲೀಸರ ಮಧ್ಯೆ ಪ್ರವೇಶದಿಂದ ವಾತಾವರಣ ತಿಳಿಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.