ಯಗಚಿಗಾಗಿ ಇಂದು ಬೇಲೂರು ಬಂದ್
ಕ.ಪ್ರ.ವಾರ್ತೆ ಬೇಲೂರು ಜ. 23
ಬಯಲು ಸೀಮೆಯ 3 ಹೋಬಳಿಗೆ ಯಗಚಿ ನೀರು ಕೊಡುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ 4 ದಿನಕ್ಕೆ ಕಾಲಿಟ್ಟಿದ್ದು ರೈತರ ಬೇಡಿಕೆಗಳು ಈಡೇರದ ಕಾರಣ ಶುಕ್ರವಾರ ಬೇಲೂರು ತಾಲೂಕು ಬಂದ್ಗೆ ಕರೆ ನೀಡಲಾಗಿದೆ.
ಹಳೆಬೀಡು ಮಾದೀಹಳ್ಳಿ ಜಾವಗಲ್ ಹೋಬಳಿಗೆ ನೀರುಣಿಸುವ ಏತ ನೀರಾವರಿಯ ಕಾಮಗಾರಿ ವಿಳಂಬವನ್ನು ಖಂಡಿಸಿ ನಡೆಸುತ್ತಿರುವ ಆಹೋರಾತ್ರಿ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು ಗುರುವಾರವೂ ಮುಂದುವರೆದಿದೆ. ಜಿಲ್ಲಾಧಿಕಾರಿ ಹಾಗೂ ಶಾಸಕರು ಪ್ರತಿಭಟನೆ ಸ್ಥಳಕ್ಕೆ ಬಾರದ ಕಾರಣ ಶುಕ್ರವಾರ ಹಳೆಬೀಡು, ಮಾದಿಹಳ್ಳಿ, ಜಾವಗಲ್, ಹಗರೆ ಹಾಗೂ ಬೇಲೂರಿನಲ್ಲಿ ಸಂಪೂರ್ಣ ಬಂದ್ ಆಚರಿಸುವಂತೆ ಯಗಚಿ ಹೋರಾಟ ಸಮಿತಿ ಹಾಗೂ ತಾಲೂಕು ರೈತ ಸಂಘ ಮತ್ತು ವಿವಿಧ ಪ್ರಗತಿಪರ ಸಂಘಟನೆ ಹಾಗೂ ತಾಲೂಕು ಬಿಜೆಪಿ ಘಟಕ ಕರೆ ನೀಡಿದೆ.
ಪ್ರತಿಭಟನಾ ಸ್ಥಳಕ್ಕೆ ಗುರುವಾರ ಉಪವಿಭಾಗಾಧಿಕಾರಿ ಮಧುಕೇಶ್ವರ್ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬರಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು. ಅಲ್ಲದೇ, ಜಿಲ್ಲಾಧಿಕಾರಿ ಜೊತೆ ಅರಣ್ಯ, ವಿದ್ಯುತ್, ಕಂದಾಯ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಬರಬೇಕು ಎಂದು ಪಟ್ಟುಹಿಡಿದರು.
ಮುಖಂಡರ ಎಚ್ಚರಿಕೆ: ಡಿ.ಸಿ. ವಿಧಾನಸಭೆ ಅಧಿವೇಶನಕ್ಕೆ ಕೆಲಸದ ನಿಮಿತ್ತ ತೆರಳಿದ್ದಾರೆ ಎಂಬ ಉಪವಿಭಾಧಿಕಾರಿ ಉತ್ತರಕ್ಕೆ ಕುಪಿತರಾದ ರೈತರು ನಿಮ್ಮ ಬಳಿ ನಮ್ಮ ಸಮಸ್ಯೆ ಹೇಳಿಕೊಂಡರೆ ಯಾವುದೇ ಪ್ರಯೋಜನವಿಲ್ಲ. ನಮ್ಮ ಸಮಸ್ಯೆ ಬಗ್ಗೆ ಡಿ.ಸಿ.ಗೆ ನೀವೇ ಮನವರಿಕೆ ಮಾಡಬೇಕು ಎಂದರಲ್ಲದೇ, ನಮ್ಮ ಮನವಿಗೆ ಶಾಸಕರು ಹಾಗೂ ಜಿಲ್ಲಾಧಿಕಾರಿ ಸ್ಪಂದಿಸದ ಹಿನ್ನೆಲೆಯಲ್ಲಿ ಬೇಲೂರು ತಾಲೂಕು ಬಂದ್ಗೆ ಕರೆ ನೀಡಿದ್ದು ಬಂದ್ ನಂತರ ಮತ್ತೆ ತಾಲೂಕು ಕಚೇರಿ ಮುಂಭಾಗ ಹೋರಾಟ ಮುಂದುವರೆಯಲಿದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಭಾವನೆಯೊಂದಿಗೆ ಚೆಲ್ಲಾಟ ಬೇಡ: ಶಿವಪುರ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ, ಕಳೆದ ನಾಲ್ಕು ದಿನದಿಂದ ರೈತರು ತಮ್ಮ ಕೆಲಸ ಕಾರ್ಯ ಬಿಟ್ಟು ಇಲ್ಲಿ ಧರಣಿ ಕೂತಿದ್ದಾರೆ. ಸೌಜನ್ಯಕ್ಕಾದರೂ ಜಿಲ್ಲಾಧಿಕಾರಿ ಹಾಗೂ ಶಾಸಕರು ಒಮ್ಮೆ ಬಂದು ಮಾತನಾಡಿಸಿದ್ದರೆ ನಿಜವಾಗಿ ಇವರಿಗೆ ರೈತರ ಮೇಲೆ ಕಾಳಜಿ ಇದೆ ಎನ್ನಬಹುದಾಗಿತ್ತು. ರೈತರು ಆತ್ನಹತ್ಯೆಗೆ ಪ್ರಯತ್ನಿಸಿದಾಗ ಮಾತ್ರ ಸರ್ಕಾರ ಎಚ್ಚೆತ್ತು ಕೊಳ್ಳುತ್ತದೆ ಎಂಬುದಕ್ಕೆ ಬೆಳಗಾವಿ ಅಧಿವೇಶನದಲ್ಲಿ ರೈತನ ಆತ್ಮಹತ್ಯೆ ಸಾಕ್ಷಿಯಾಗಿದ್ದು, ರೈತರ ಭಾವನೆಯೊಂದಿಗೆ ಚೆಲ್ಲಾಟವಾಡಬೇಡಿ ಎಂದರು.
ಹೆಚ್ಚಿನ ಹೋರಾಟ: ರೈತಸಂಘದ ಮುಖಂಡ ರಾಜೇಗೌಡ ಮಾತನಾಡಿ, ಹಳೆಬೀಡು ಮಾದೀಹಳ್ಳಿ ಹಾಗೂ ಜಾವಗಲ್ ಹೋಬಳಿಗೆ ನೀರು ಹರಿಸುವ ವಿಚಾರದಲ್ಲಿ ಶಾಸಕರು, ಯಗಚಿ ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದು ಸುಳ್ಳು ಆಶ್ವಾಸನೆ ನೀಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಯಗಚಿ ನೀರು ಕೊಡುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ತಾಲೂಕಿನ ಶಾಸಕರು ಹಾಗೂ ಜಿಲ್ಲಾಧಿಕಾರಿ ಬರಬೇಕು ಎಂದು ಕಳೆದ 4 ದಿನದಿಂದ ಒತ್ತಾಯ ಮಾಡುತ್ತಿದ್ದರೂ ಯಾರೂ ಇತ್ತ ಸುಳಿದಿಲ್ಲ. ರೈತರು ಅಂದರೆ ಇವರಿಗೆ ಅಷ್ಟು ಕೇವಲವಾದರೆ, ರೈತ ಮುನಿದು ಅನ್ನ ಬೆಳೆಯುವುದನ್ನು ಬಿಟ್ಟರೆ ಆಗ ಇವರಿಗೆ ಬೆಲೆ ತಿಳಿಯುತ್ತದೆ. ರೈತರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸವನ್ನು ಶಾಸಕರು ಹಾಗೂ ಜಿಲ್ಲಾಧಿಕಾರಿ ಮಾಡುತ್ತಿದ್ದು ಬಂದ್ನ ನಂತರ ಇನ್ನೂ ಹೆಚ್ಚಿನ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಕೋಳಗುಂದ ಮಠದ ಜಯ ಚಂದ್ರಶೇಖರ ಸ್ವಾಮೀಜಿ, ಅರಸೀಕೆರೆ ಮಾಡುಗೊಂಡವಹಳ್ಳಿ ಮುಕಂದೂರು ಮಠದ ಬಸವಲಿಂಗ ಶಿವಯೋಗಿ, ಕುಮಾರ್, ಪರಮೇಶ್, ಅಡಗೂರು ಪದ್ಮಪ್ರಭು, ಪುಟ್ಟೇಗೌಡ, ಭೋಗಮಲ್ಲೇಶ್, ಸ್ವಾಮಿಗೌಡ,ಕೆ ಸುದರ್ಶನ್, ಬಸವೇಗೌಡ್ರು, ಜಾವಗಲಲ್ಮುಂಜುನಾಥ್ ಶೆಟ್ಟಿ, ವಿಎಸ್ ಎನ್ ಅಧ್ಯಕ್ಷ ರಮೇಶ್, ತಾಲೂಕು ಪತ್ರಕರ್ತರ ಸಂಘದ ಎನ್ ಅನಂತು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

