ಹಾಸನ

ಕೇಂದ್ರದ ಆರ್ಥಿಕ ನೀತಿಗೆ ಧಿಕ್ಕಾರ... ಧಿಕ್ಕಾರ

Published On :

ಕ.ಪ್ರ.ವಾರ್ತೆ    ಹಾಸನ    ಜ. 23
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಅಡುಗೆ ಅನಿಲ, ಆಟೋಗಳಿಗೆ ವಿತರಿಸುವ ಅನಿಲ ಸೇರಿದಂತೆ ಆನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ ನಡೆಸಿ ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯದ ಧರಣಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಗದಾಪ್ರಹಾರ: ಕೇಂದ್ರ ಸರ್ಕಾರ ಹಲವು ಬಾರಿ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿದ್ದರೂ, ಈಗ ಮತ್ತೊಮ್ಮೆ ಬೆಲೆ ಏರಿಕೆ ಮಾಡುವ ಮೂಲಕ, ಬಡ ಮತ್ತು ಮಧ್ಯಮ ವರ್ಗದವರ ಬದುಕನ್ನು ಕಷ್ಟಕರವಾಗಿಸಿದೆ. ಕೇಂದ್ರ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿ ಹಾಗೂ ನಿರಂತರವಾಗಿ ಏರಿಸಿದ ಡೀಸೆಲ್ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ದಿನನಿತ್ಯದ ವಸ್ತುಗಳ ಬೆಲೆಗಳೂ ಏರಿಕೆಯಾಗಿವೆ. ಮತ್ತೊಮ್ಮೆ ಅನಿಲ ಬೆಲೆ ಏರಿಸಿ, ಕೇಂದ್ರ ಸರ್ಕಾರ ಮಧ್ಯಮ ವರ್ಗದವರ ಮೇಲೆ ಮಾಡಿದ ಮತ್ತೊಂದು ಗದಾಪ್ರಹಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪಮೌಲ್ಯ: ಕೇಂದ್ರದ ಯುಪಿಎ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿಗಳಿಂದಾಗಿ ಡಾಲರ್ ಬೆಲೆಯ ಎದುರು ರೂಪಾಯಿ ಮೌಲ್ಯ ಅಪಮೌಲ್ಯಕ್ಕೀಡಾಗಿದೆ. ಇದರಿಂದ ತೈಲ ಬೆಲೆಗಳು ಏರಿಕೆಯಾಗಿದೆ ಎಂಬ ಸಬೂಬನ್ನು ಹೇಳುವ ಕೇಂದ್ರದ ಯುಪಿಎ ಸರ್ಕಾರದ ರೂಪಾಯಿ ಮೌಲ್ಯ ಕುಸಿತದ ತಡೆಗೆ ಅಗತ್ಯವಾದ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಮಾತ್ರ ಯುಪಿಎ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.   
ಆಟೋ ಚಾಲಕರಿಗೆ ಸಂಕಷ್ಟ: ದೇಶದಲ್ಲಿ ಅನೇಕ ಕುಟಂಬಗಳು ಆಟೋಗಳನ್ನು ಓಡಿಸಿ ತಮ್ಮ ಕುಟುಂಬವನ್ನು ನಿರ್ವಹಿಸುತ್ತಿವೆ. ಪ್ರಸ್ತುತ ಕೇಂದ್ರ ಸರ್ಕಾರ ಈ ಆಟೋಗಳಿಗೆ ಬಳಸುವ ಅನಿಲ ಬೆಲೆಯನ್ನು ಏರಿಸಿದೆ. ಇದರಿಂದ ಈ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಈಗಾಗಲೇ ಆಟೋಗಳ ಮೂಲ ಬೆಲೆ, ಬಿಡಿಭಾಗಗಳ ಬೆಲೆಗಳಿಂದ ತತ್ತರಿಸಿ ಹೋಗಿದ್ದ ಈ ಆಟೋದವರು ಈಗ ಅನಿಲ ಬೆಲೆ ಏರಿಕೆ ಮಾಡಿರುವುದರಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಶೀಲ ಅಣ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎ. ಭಾಗ್ಯಲಕ್ಷ್ಮಿ, ರತ್ನ ಪ್ರಕಾಶ್, ಅನ್ನಪೂರ್ಣ, ಶೋಭಾ, ಸುವರ್ಣ, ನೇತ್ರಾವತಿ, ವೆಂಕಟಲಕ್ಷ್ಮೀ, ಸಾವಿತ್ರಿ, ನಾಗಮ್ಮ, ಸುಂದರಮ್ಮ, ಜಿಲ್ಲಾಧ್ಯಕ್ಷ ರೇಣುಕುಮಾರ್, ಪಿಕ್ಚರ್ ಪ್ಯಾಲೇಸ್ ಗುರೂಜಿ, ಎನ್.ಡಿ. ಪ್ರಸಾದ್, ನಾಗೇಶ್ ಹಾಗೂ ಇತರರು ಇದ್ದರು.


ನಿರಂತರ ಬೆಲೆ ಏರಿಕೆ ಖಂಡನೀಯ
ಬೆಲೆ ಏರಿಸುವುದನ್ನೇ ಚಾಳಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಬಡ ಮಧ್ಯಮ ವರ್ಗದ ಜೀವನವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಸಾಮಾನ್ಯ ಜನರು ಜೀವನ ನಡೆಸುವುದೇ ದುರ್ಲಭವಾಗಿದೆ. ಈ ಹಿಂದೆ ಸಬ್ಸಿಡಿ ಸಿಲಿಂಡರ್ಗಳನ್ನು 9ಕ್ಕೆ ಸೀಮಿತಗೊಳಿಸಿದ ಕಾರಣದಿಂದ ಮಧ್ಯಮವರ್ಗದ ಕುಟುಂಬ ನಿರ್ವಹಣೆ ದುಸ್ತರವಾಗಿತ್ತು. ಇದಲ್ಲದೇ, ಸಿಲಿಂಡರ್ ಸಂಪರ್ಕ ಪಡೆಯುವುದು, ಹೆಚ್ಚುವರಿ ಸಿಲಿಂಡರ್ಗಾಗಿ ಪರದಾಡುವುದು ಸಾಮಾನ್ಯ ಸಂಗತಿಯಗಿತ್ತು. ಆದರೆ ಇದಾವುದನ್ನು ತಲೆಕೆಡಿಸಿಕೊಳ್ಳದೇ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಗಳ ಏರಿಕೆಯ ಪ್ರಕ್ರಿಯೆಯನ್ನು ಮಾತ್ರ ನಿರಂತರ ಮಾಡುತ್ತಿರುವುದು ಖಂಡನೀಯ ಎಂದರು.



'ರಾಷ್ಟ್ರಪತಿ ಮಧ್ಯೆ ಪ್ರವೇಶಿಸಲಿ'
ದಿನೇ ದಿನೇ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ವಸ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಆಟೋಗಳ ಬಿಡಿ ಭಾಗಗಳ ದರಗಳು ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏಕಾಏಕಿ ಬಲು ಮುಖ್ಯವಾದ ಗ್ಯಾಸ್ನ ದರವನ್ನು ರು. 12ರಷ್ಟು ಏರಿಕೆ ಮಾಡಿರುವುದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಕೇಂದ್ರ ಸರ್ಕಾರ, ಏರಿಕೆಯಾಗಿರುವ ದರವನ್ನು ಇಳಿಸಬೇಕು.
ಈ ಹಿನ್ನೆಲೆಯಲ್ಲಿ, ರಾಷ್ಟ್ರಪತಿಯವರು ಮಧ್ಯ ಪ್ರವೇಶಿಸಿ ಸಾಮಾನ್ಯ ಜನರ ಸಂಕಷ್ಟದ ಪರಿಹಾರಕ್ಕೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರ ಅನಿಲ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳದಿದ್ದಲ್ಲಿ ಬಿಜೆಪಿ ಉಗ್ರವಾದ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.