ಐತಿಹಾಸಿಕ ನಗರ ಬೇಲೂರಿಗೆ ಬಂದ್ ಬಿಸಿ
ಕ.ಪ್ರ.ವಾರ್ತೆ ಬೇಲೂರು ಜ. 24
ಮಂದಗತಿಯಲ್ಲಿ ನಡೆಯುತ್ತಿರುವ ಏತ ನೀರಾವರಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಬೇಕು ಎಂದು ಒತ್ತಾಯಿಸಿ ಯಗಚಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಸೇರಿದಂತೆ ನಾನಾ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಬೇಲೂರು ಹಾಗೂ 5 ಹೋಬಳಿಗಳ ಬಂದ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಜಿಲ್ಲಾಧಿಕಾರಿ ಹಾಗೂ ಶಾಸಕರು ಕಳೆದ 5 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಜಾಗಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಾಲನೆ ನೀಡಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಕಚೇರಿಗಳಿಗೆ ಬೀಗ: ಬರಗಾಲದಿಂದ ತತ್ತರಿಸುತ್ತಿರುವ ಹಳೆಬೀಡು, ಮಾದೀಹಳ್ಳಿ ಹಾಗೂ ಜಾವಗಲ್ ಹೋಬಳಿಗೆ ಯಗಚಿ ಜಲಾಶಯದಿಂದ ನೀರಿನ ಸೌಲಭ್ಯ ಕಲ್ಪಿಸಲು ಆರಂಭಿಸಿರುವ ಏತ ನೀರಾವರಿ ಕಾಮಗಾರಿ ವಿಳಂಬವನ್ನು ಖಂಡಿಸಿ ಕರೆ ನೀಡಿದ್ದ ಬಂದ್ಗೆ ತಾಲೂಕಿನ ಹಳೆಬೀಡು, ಹಗರೆ, ಮಾದಿಹಳ್ಳಿ, ಅಡಗೂರು ಹಾಗೂ ಬೇಲೂರು ಬಂದ್ಗೆ ಸಾರ್ವಜನಿಕರು, ವ್ಯಾಪಾರಸ್ಥರು ಸ್ಪಂದಿಸಿದ್ದಾರೆ. ಮಧ್ಯವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಶಾಲಾ ಕಾಲೇಜುಗಳಿಗೆ ಬಂದ್ನಿಂದ ವಿನಾಯತಿ ನೀಡಲಾಗಿತ್ತು. ಆದರೆ ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್ ಬಾಗಿಲನ್ನು ರೈತ ಸಂಘದ ಮುಖಂಡರು ಬಲವಂತಾಗಿ ಮುಚ್ಚಿಸಿದರು.
ದೊಡ್ಡ ದುರಂತ: ಬಂದ್ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ರೈತಸಂಘದ ಹಿರಿಯ ಮುಖಂಡ ಅರೇಹಳ್ಳಿ ರಾಜೂಗೌಡ ಮಾತನಾಡಿ, ನಮ್ಮ ನೀರನ್ನು ನಾವು ಪಡೆಯಲು ಇರುವ ಕೆಲಸ ಕಾರ್ಯ ಬಿಟ್ಟು ಕಳೆದ 5 ದಿನದಿಂದ ಬಿಸಲಲ್ಲಿ ಬೇಯುತ್ತಿರುವುದು ಇಂದಿನ ರಾಜಕೀಯದ ಕೆಟ್ಟ ವ್ಯವಸ್ಥೆಗೆ ಸಾಕ್ಷಿಯಾಗಿದೆ. ನ್ಯಾಯ ಸಮ್ಮತವಾದ ಬೇಡಿಕೆಯ ಈಡೇರಿಕೆಗೆ ಜಿಲ್ಲಾಧಿಕಾರಿ ತಾಲೂಕು ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿರುವುದು ಹಾಗೂ ರೈತರು ಅವರು ಬರಲೇಬೇಕು ಎಂದು ಧರಣಿ ನಡೆಸುತ್ತಿರುವುದು ನಿಜವಾಗಿಯೂ ಪ್ರಜಾಪ್ರಭುತ್ವದ ದೊಡ್ಡ ದುರಂತವಾಗಿದೆ ಎಂದು ಖಂಡಿಸಿದರು.
ನಾವು ನಮ್ಮ ಮನೆಗೆ ಡಿ.ಸಿ. ಅವರನ್ನು ಕರೆಯುತ್ತಿಲ್ಲ. ಅಲ್ಲದೆ ಯಗಚಿ ಏತ ನೀರಾವರಿ ಕಾಮಗಾರಿ ಪೂರ್ಣ ಗೊಳ್ಳಲು ಕಂದಾಯ, ವಿದ್ಯುತ್, ಅರಣ್ಯ, ಸಣ್ಣ ನೀರಾವರಿ ಇಲಾಖೆ ಅವಶ್ಯಕವಾಗಿದೆ. ಇವು ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವುದರಿಂದ ನೇರವಾಗಿ ಅವರ ಬಳಿ ಸಮಸ್ಯೆ ನಿವೇದನೆ ಮಾಡಬಹುದು ಎಂಬ ಒತ್ತಾಸೆ ರೈತರದ್ದು ಎಂದರು.
ಉಗ್ರ ಹೋರಾಟದ ಎಚ್ಚರಿಕೆ: ಕೊಳವೆ ಬಾವಿ ಕೊರೆಯಲು ಹೋದರೆ 600 ಅಡಿ ಬಗೆದರೂ ನೀರು ಸಿಗುತ್ತಿಲ್ಲ. ನೀರು ಸಿಕ್ಕರೂ ಅದು ಫ್ಲೋರೈಡ್ ಯುಕ್ತವಾಗಿದೆ. ರೈತರು ಎಂದರೆ ಸರ್ಕಾರಕ್ಕೆ ಹಾಗೂ ತಾಲೂಕು ಆಡಳಿತಕ್ಕೆ ಆಟಿಕೆ ವಸ್ತುವಂತೆ ಕಾಣುತ್ತಿದ್ದು ನಮ್ಮ ಮನೆಯ ಆಸ್ತಿಗಾಗಿ ನಾವು ಇಲ್ಲಿ ಧರಣಿ ಕೂರುತ್ತಿಲ್ಲ. ಸರ್ಕಾರ ನಮ್ಮ ಮನವಿಗೆ ಮುಂದೆಯೂ ಸರ್ಕಾರ ಸ್ಪಂದಿಸದಿದ್ದಲ್ಲಿ ಮತ್ತೆ ಉಗ್ರವಾದ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳ ಆಗಮನಕ್ಕೆ ಆಕ್ಷೇಪ: ಕಂದಾಯ, ವಿದ್ಯುತ್, ಯಗಚಿ, ಅರಣ್ಯ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಏತ ನೀರಾವರಿ ಕಾಮಗಾರಿಯ ಬಗ್ಗೆ ವಿವರಣೆ ನೀಡಲು ಕಡತದೊಂದಿಗೆ ಆಗಮಿಸಿದ್ದರು. ಅಧಿಕಾರಿಗಳು ಬಂದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರೈತ ಮುಖಂಡರು, ನೀವು ಬರೇ ಕಡತದಲ್ಲಿ ಇರೋದನ್ನ ಹೇಳುತ್ತೀರ. ಕೆಲಸ ಏನಾಗಿದೆ ಎಂಬುದರ ಬಗ್ಗೆ ನಿಮಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ಕಿಡಿಕಾರಿದರು. ತಹಸೀಲ್ದಾರ್ ಜಗದೀಶ್ ಮಧ್ಯೆ ಪ್ರವೇಶಿಸಿ ಕಾಮಗಾರಿ ಪ್ರಗತಿ ಬಗ್ಗೆ ವಿವರಣೆ ನೀಡಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಮುಂದಾದಾಗ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿ ಬರುವ ವರೆಗೂ ಪ್ರತಿಭಟನೆ ನಿರಂತರವಾಗಿ ನಡೆಯುತ್ತದೆ ಎಂದರು.
ಮತ್ತೆ ಚಾಲನೆ: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದಿಂದ ಮೆರವಣಿಗೆ ಹೊರಟ ರೈತರು ಬಸವೇಶ್ವರ ವೃತ್ತದಿಂದ ನೆಗರೂ ನಗರ ಮಾರ್ಗವಾಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ನಂತರ ಧರಣಿ ಕುಳಿತರು. ಯಗಚಿ ಹೋರಾಟ ಸಮಿತಿ ಹಾಗೂ ರೈತ ಸಂಘದವರು ಕಳೆದ 5 ದಿನದಿಂದ ತಾಲೂಕು ಕಚೇರಿಯ ಆವರಣದಲ್ಲಿ ನಡೆಯುತ್ತಿರುವ ಮುಷ್ಕರಕ್ಕೆ ಮತ್ತೆ ಚಾಲನೆ ನೀಡಲಾಯಿತು. ಪ್ರತಿಭಟನಾ ಸ್ಥಳಕ್ಕೆ ಶಾಸಕರು ಹಾಗೂ ಜಿಲ್ಲಾಧಿಕಾರಿ ಬೇಟಿ ನೀಡದ ಹಿನ್ನೆಲೆಯಲ್ಲಿ ಮತ್ತೆ ಅನಿರ್ಧಿಷ್ಠಾವಧಿ ಮುಷ್ಕರವನ್ನು ಆರಂಭಿಸಲಾಯಿತು.
ರೈತ ಸಂಘದ ಮುಖಂಡರಾದ ಕೆ.ಪಿ ಕುಮಾರ್, ಪರಮೇಶ್, ಗುರುಸ್ವಾಮೇಗೌಡ್ರು, ಅಡಗೂರು ಪದ್ಮಪ್ರಭು, ಪುಟ್ಟೇಗೌಡ, ಭೋಗಮಲ್ಲೇಶ್, ಸ್ವಾಮಿಗೌಡ,ಕೆ ಬಸವೇಗೌಡ್ರು, ಜಾವಗಲ್ ಮಂಜುನಾಥ್ ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಕಾರ್ಯದರ್ಶಿ ಬೆಣ್ಣೂರು ಪೂರ್ಣೇಶ್ ಇತರರು ಇದ್ದರು.
ಬಿಗಿ ಬಂದೋಬಸ್ತ್
ವೃತ್ತನಿರೀಕ್ಷಕ ಗಣೇಶ್ ಹಾಗೂ ಸಬ್ ಇನ್ಸ್ಪೆಕ್ಟರ್ ಅಶ್ವಿನ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಬಿಹಿ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಕಳೆದ 5 ದಿನದಿಂದ ಯಾವುದೇ ಉದ್ವೇಗಕ್ಕೆ ಒಳಗಾಗದೆ, ರೈತರೊಂದಿಗೆ ಸೌಜನ್ಯದಿಂದ ವರ್ತಿಸುತ್ತಾ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

