1997ರ ಭೂಸ್ವಾಧೀನ ಖಂಡಿಸಿ 27ರಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾಸನ, ಜ. 24
ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದ 88 ಎಕರೆ ನೀರಾವರಿ ಜಮೀನನ್ನು ಆಶ್ರಯ ಯೋಜನೆಗೆಂದು 1997ರಲ್ಲಿ ಜೆಡಿಎಸ್ ಮುಖಂಡರು ಭೂಸ್ವಾಧೀನಗೊಳಿಸಿರುವುದನ್ನು ಖಂಡಿಸಿ ಜ. 27ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ವಕೀಲ ಮೋಹನ್ ಕುಮಾರ್ ತಿಳಿಸಿದ್ದಾರೆ.
ಶಾಸಕ ರೇವಣ್ಣರಿಂದ ಒತ್ತಡ: ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತರಿಂದ ನ್ಯಾಯಾಲಯದಲ್ಲಿ ತಡೆಯಾಜ್ಞೆ ಹಾಗೂ 1999ರಲ್ಲಿ ಹೊಳೆನರಸೀಪುರ ಪುರಸಭೆಯವರ ಠರಾವಿನಂತೆ ಈ ನೀರಾವರಿ ಭೂಮಿ ಆಶ್ರಯ ಯೋಜನೆಗೆ ಬೇಕಿಲ್ಲವೆಂದು ಹೇಳಿದ್ದರಿಂದ 2000ರಲ್ಲಿ ಕಾಂಗ್ರೆಸ್ ಸರ್ಕಾರ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಪರ ದಿವಂಗತ ಜಿಪಿಜಿ ಹಾಗೂ ಎಚ್.ಸಿ. ಶ್ರೀಕಂಠಯ್ಯನವರ ಸಹಕಾರದಿಂದ ಡಿ-ನೋಟಿಫೈ ಮಾಡಿಕೊಟ್ಟಿದ್ದರು.
ಈ ಡಿನೋಟಿಫಿಕೇಶನ್ಗೆ ಶಾಸಕ ಎಚ್.ಡಿ. ರೇವಣ್ಣ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು 2007ರವರೆಗೂ ಪ್ರಕರಣ ಜೀವಂತವಾಗಿಟ್ಟುಕೊಂಡು ಪುನಃ ರೇವಣ್ಣ ಮಂತ್ರಿಯಾಗಿದ್ದಾಗ ಸರ್ಕಾರದ ಮೇಲೆ ಒತ್ತಡ ತಂದು ಈ ಡಿನೋಟಿಫಿಕೇಷನ್ ವಾಪಸ್ ಪಡೆದು ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಕೆಗೆ ಚಾಲನೆ ಕೊಟ್ಟಿದ್ದರು.
ಅನ್ಯಾಯ: ಒಂದು ಎಕರೆಗೆ ಒಂದು ಕೋಟಿ ರು.ಗೂ ಮೇಲ್ಪಟ್ಟು ಬೆಲೆ ಬಾಳುವ ಜಮೀನಿಗೆ ಒಂದು ಎಕರೆಗೆ 59 ಸಾವಿರ ರು.ನಂತೆ ಬೆಲೆ ನಿಗದಿಪಡಿಸಿ ರೈತರಿಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ಮೋಸ: ರೈತರು ಮತ್ತೆ ಸರ್ಕಾರದ ಕ್ರಮದ ಬಗ್ಗೆ ನ್ಯಾಯಾಲಯದಲ್ಲಿ ಮೊರೆ, ನ್ಯಾಯಾಲಯದ ತೀರ್ಪಿನ ಅನ್ವಯ ಭೂಮಿಯ ಸ್ವಾಧೀನ ಯಾರ ಬಳಿ ಇದೆ ಅವರಿಗೆ ಖಾಯಂ ಮಾಡಲು ರೆವಿನ್ಯೂ ಕಮಿಷನರ್ ಅವರಿಗೆ ನ್ಯಾಯಾಲಯದ ಸೂಚನೆ ನೀಡಿತು. ಪುನಃ ರೆವಿನ್ಯೂ ಕಮಿಷನರ್ ಅವರ ಮೇಲೆ ರೇವಣ್ಣ ಹಾಗೂ ದೇವೇಗೌಡರು ಒತ್ತಡ ತಂದು ಭೂಮಿ ರೈತರ ಸ್ವಾಧೀನದಲ್ಲಿ ಇದ್ದರೂ ಸರ್ಕಾರದ ಸ್ವಾಧೀನದಲ್ಲಿ ಇದೆ ಎಂದು ತೀರ್ಪು ಮಾಡಿಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಸರ್ಕಾರದ ಗಮನ ಸೆಳೆಯಲು: ರೈತರು ಪುನಃ ನ್ಯಾಯಲಾಯದಲ್ಲಿ ರೆವಿನ್ಯೂ ಕಮಿಷನರ್ ಅವರ ಆದೇಶಕ್ಕೆ ತಡೆ ತಂದಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿದೆ. ಭೂಮಿ ಹಾಲಿ ರೈತರ ಸ್ವಾಧೀನದಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಪೂರ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಜಮೀನನ್ನು ಬಿಡಬೇಡಿ ಎಂದು ರೈತರಿಗೆ ಅಶ್ವಾಸನೆ ಕೊಟ್ಟಿದ್ದರು. ಆದ್ದರಿಂದ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಗಮನಕ್ಕೆ ತರಲು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ: ಕಳೆದ 18 ವರ್ಷಗಳಿಂದ 88 ಎಕರೆ ಜಮೀನಿನ ರೈತರು ಮಾರಾಟ ಮಾಡಲು, ಪರಬಾರೆ ಮಾಡಲು, ಮನೆಕಟ್ಟಲು ಸಾಧ್ಯವಾಗದೆ ಅನೇಕ ರೈತರು ಕೊರಗಿನಲ್ಲಿ ಅಸುನೀಗಿದ್ದಾರೆ. ಆದ್ದರಿಂದ ರೈತರಿಗೆ ನ್ಯಾಯ ದೊರೆಯಬೇಕು ಎಂದು ಉದ್ದೇಶದಿಂದ ಶಾಸಕ ಹಾಗೂ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಇತರೆ ರೈತರ ಸಂಘದ ರಾಜ್ಯ ಪದಾಧಿಕಾರಿಗಳ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
ರು. 10 ಕೋಟಿ ಟೆಂಡರ್: ಸೂರನಹಳ್ಳಿ ಬಳಿ 1.89 ಕಿಮೀ ಚತುಷ್ಪಥ ರಸ್ತೆ ಮಾಡುವುದಕ್ಕೆ 10 ಕೋಟಿರು.ಗಳ ಟೆಂಡರ್ ಕರೆಯಲಾಗಿದೆ. ಕೇವಲ ರು. 2 ಕೋಟಿಯಲ್ಲಿ ಆಗುವಂತೆ ಕಾಮಗಾರಿಗೆ ರು. 10 ಕೋಟಿ ಟೆಂಡರ್ ಅನ್ನು ಕರೆಯಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕೃಷ್ಣಪ್ಪ, ಗೋಪಾಲಕೃಷ್ಣ, ಶ್ರೀನಿವಾಸ್, ನರಸಿಂಹಯ್ಯ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

