ಖಾಸಗಿ ಕಪಿಮುಷ್ಟಿಯಲ್ಲಿ ಶಿಕ್ಷಣ ಕ್ಷೇತ್ರ: ರೇವಣ್ಣ
ಹೊಳೆನರಸೀಪುರ: ರಾಷ್ಟ್ರವು ಗಣತಂತ್ರ ವ್ಯವಸ್ಥೆಯನ್ನು ರೂಪಿಸಿಕೊಂಡು 65 ವರ್ಷಗಳಾದರೂ ಖಾಸಗಿಯವರ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಶಿಕ್ಷಣ ಕ್ಷೇತ್ರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರ ತರುವಲ್ಲಿ ವಿಫಲವಾಗಿವೆ ಎಂದು ಶಾಸಕ ಎಚ್.ಡಿ.ರೇವಣ್ಣ ವಿಷಾದಿಸಿದರು.
ಪಟ್ಟಣದ ಬಯಲು ರಂಗಮಂದಿರ ಮೈದಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 65ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಉಳ್ಳವರಿಗಷ್ಟೇ ಶಿಕ್ಷಣ ಎನ್ನುವಂತಹ ವಾತಾವರಣ ನಿರ್ಮೂಲನೆಗೊಳಿಸಲು ಸರ್ಕಾರಗಳು ಮುಂದಾಗಬೇಕಿದೆ. ರಾಜ್ಯದಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ, ಕುಸಿಯುತ್ತಿರುವ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಉಳಿಸುವತ್ತ ಹೆಚ್ಚಿನ ಗಮನವನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇಂದಿಗೂ ಗ್ರಾಮೀಣ ಭಾಗಗಳಿಗೆ ಶುದ್ಧವಾದ ಕುಡಿಯುವ ನೀರು, ಸುಗಮ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲದಿರುವುದನ್ನು ಮನಗಂಡು ಈ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಲಿ ಎಂದರು.
ರಾಷ್ಟ್ರಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ ಮಾತನಾಡಿ, ಇಡೀ ವಿಶ್ವವೇ ಭಾರತ ಒಂದು ಬಲಿಷ್ಠ ರಾಷ್ಟ್ರ ಎಂಬುದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರುವ ಈ ದಿನಗಳ ಹಿಂದೆ, ಭಾರತೀಯ ಇತಿಹಾಸಕ್ಕೆ 5 ಸಾವಿರ ವರ್ಷಗಳ ಐತಿಹಾಸಿಕ ಪರಂಪರೆಯಿದೆ. ದೇಶದಲ್ಲಿನ ಆರ್ಥಿಕ, ಸಾಮಾಜಿಕ ಬುನಾದಿಯನ್ನು ಭದ್ರವಾಗಿಸಿಕೊಂಡು, ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನು, ಬಹುಮುಖ ಸಂಸ್ಕೃತಿಯನ್ನು ರಕ್ಷಿಸಿಕೊಂಡಿರುವ ಭಾರತ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವ ರಾಷ್ಟ್ರವಾಗಿ ಬೆಳೆಯುವಲ್ಲಿ ಹಲವಾರು ಮಹನೀಯರುಗಳ ಶ್ರಮ, ಹೋರಾಟದ ಫಲವಿದೆ ಎಂದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಧವರ್ರಾಜ್ ಪ್ರಧಾನ ಭಾಷಣ ಮಾಡಿದರು. ಪೊಲೀಸ್, ಗೃಹರಕ್ಷಕದಳ, ಎನ್ಸಿಸಿ ಹಾಗೂ ನಾನಾ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಹಾಗೂ ಕವಾಯಿತು ಪ್ರದರ್ಶನ ನಡೆಯಿತು. ಈ ಬಾರಿ ಗ್ರೀನ್ವುಡ್ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ಪಿರಮಿಡ್ ಪ್ರದರ್ಶನ ಗಮನಸೆಳೆಯಿತು.
ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ ಕೆ.ಎಲ್.ದಿವಾಕರ್, ಪಡುವಲಹಿಪ್ಪೆಯ ವೆಂಕಟೇಶ್- ಕೃಷಿ, ಜಿ.ಎಲ್.ಕೇಶವಮೂರ್ತಿ-ಸಮಾಜ ಸೇವೆ ಹಾಗೂ ಕಾವ್ಯಶ್ರೀಕೃಷ್ಣ ಅವರಿಗೆ ಕಥಾಕೀರ್ತನ ಸೇವೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಪಂ ಸದಸ್ಯ ಎಚ್.ಎನ್.ದೇವೇಗೌಡ, ತಾಪಂ ಅಧ್ಯಕ್ಷೆ ಪುಷ್ಪಾ ಗೌಡೇಗೌಡ, ಉಪಾಧ್ಯಕ್ಷ ನಂಜುಂಡಪ್ಪ, ಪುರಸಭಾಧ್ಯಕ್ಷೆ ಎಚ್.ಆರ್.ಕಲಾವತಿ, ಎಎಸ್ಪಿ ವಿನಾಯಕ ಪಾಟೀಲ್, ವೃತ್ತ ನಿರೀಕ್ಷಕ ಕೃಷ್ಣಪ್ಪ, ತಾಪಂ ಇಒ ತಮ್ಮಣ್ಣೇಗೌಡ, ತಾ.ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷ ಪುಟ್ಟಸೋಮಪ್ಪ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಜನಪದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಾ.ರಾ.ಸುಬ್ಬರಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ ಮತ್ತು ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

