ಪ್ರತಿ ಕೆಜಿ ಹಾಲಿಗೆ ರು. 26.31
ಕ.ಪ್ರ.ವಾರ್ತೆ ಹಾಸನ ಜ. 27
ರಾಜ್ಯದಲ್ಲೇ ಹೆಚ್ಚಿನ ಬೆಲೆ ನೀಡಿ ರೈತರಿಂದ ಹಾಲನ್ನು ಹಾಸನ ಹಾಲು ಒಕ್ಕೂಟ ಖರೀದಿಸುತ್ತಿದೆ. ರಾಜ್ಯಾದ್ಯಂತ ಇರುವ ಇತರೇ 13 ಒಕ್ಕೂಟಗಳ ದರವನ್ನು ಹೋಲಿಸಿದರೆ ಹಾಸನ ಒಕ್ಕೂಟ ರೈತರು ನೀಡುವ ಹಾಲಿಗೆ ಹೆಚ್ಚಿನ ಬೆಲೆ ನೀಡಿ ನೀಡುತ್ತಿದೆ.
ಹೀಗಾಗಿ ಹಾಸನ ಹಾಲು ಒಕ್ಕೂಟ ರಾಜ್ಯದಲ್ಲೇ ಹೆಚ್ಚು ದರ ನೀಡಿ ರೈತರಿಂದ ಹಾನ್ನು ಖರೀದಿಸುವ ಒಕ್ಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಒಕ್ಕೂಟದ ವ್ಯಾಪ್ತಿಗೆ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು ಒಳ ಪಡುತ್ತವೆ.
ಲಾಭ ಸಂಪೂರ್ಣ ಹಂಚಿಕೆ: ಹಾಲು ಉತ್ಪಾದಕರಿಗೆ ಹಾಸನ ಒಕ್ಕೂಟ ನೀಡುವ ದರ ಮತ್ತು ಪ್ರೋತ್ಸಾಹ ಧನ ಸೇರಿದಂತೆ ರೈತರಿಗೆ ರು. 30 ಲಭ್ಯವಾಗುತ್ತಿದೆ. ಇದೇ ಸಂದರ್ಭದಲ್ಲಿ 2013-14 ನೇ ಸಾಲಿನಲ್ಲಿ ಒಕ್ಕೂಟಕ್ಕೆ ಬಂದ ರು. 14 ಕೋಟಿ ಲಾಭದ ಹಣವನ್ನು ಸಂಪೂರ್ಣವಾಗಿ ರೈತರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್.ಡಿ. ರೇವಣ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿಗೆ ಹಾಸನದ ಹಾಲು: ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರು ಬಳಿ, ಕೊಡಗು ಜಿಲ್ಲೆಯ ಕೂಡಿಗೆ ಹತ್ತಿರ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಗೀಜಿಹಳ್ಳಿ, ಚನ್ನರಾಯಪಟ್ಟಣ ಮತ್ತು ಹಾಸನದಲ್ಲಿ ಲಕ್ಷಾಂತರ ಕೆಜಿ ಹಾಲು ಶೀಥಲೀಕರಣ ಗೊಳಿಸುವ ಸಾಮರ್ಥ್ಯವುಳ್ಳ ಘಟಕಗಳನ್ನು ಆರಂಭಿಸಲಾಗುತ್ತಿದ್ದು, ಅದಕ್ಕಾಗಿ ಸುಮಾರು ರು. 32 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ವಿವರಿಸಿದರು.
ಹಾಸನ ಒಕ್ಕೂಟದಿಂದ ಪ್ರತಿದಿನ 75 ಸಾವಿರ ಕೆಜಿ ಹಾಲನ್ನು ಮಂಗಳೂರು ಡೈರಿಗೆ ನೀಡಲಾಗುತ್ತಿದೆ. ತಮ್ಮಿಂದ ಪ್ರತಿ ಕೆಜಿಗೆ ರು. 25ನಂತೆ ಖರೀದಿಸಿ, ಅಲ್ಲಿ ರು. 32 ಮಾರಾಟ ಮಾಡಲಾಗುತ್ತದೆ. ಹಾಗೇ ಹೆಚ್ಚು ದಿನಗಳವರೆಗೆ ಇಡಬಹುದಾದ ಹಾಲನ್ನು ಭಾರತದ ಇತರೇ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ರೇವಣ್ಣ ತಿಳಿಸಿದರು.
ಸರ್ಕಾರ ನಿರ್ಧರಿಸಬೇಕು: ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ಆಡಳಿತಾತ್ಮಕ ವೆಚ್ಚ ಶೇ. 7ಕ್ಕಿಂತ ಹೆಚ್ಚಿರುವುದಕ್ಕೆ ನಾನು ಹೊಣೆಯಲ್ಲ. ಸಹಕಾರಿ ಕಾಯ್ದೆ ಪ್ರಕಾರ ಶೇ. 2.5 ಮೀರುವಂತಿಲ್ಲ. ಆ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಬೇಕು. ಕೆಎಂಎಫ್ ಆಶ್ರಯದಲ್ಲಿ ನಡೆಯುವ ಪಶು ಆಹಾರ ಘಟಕಗಳು ಉತ್ಪಾದಿಸುವ ಪಶು ಆಹಾರಗಳ ಬೆಲೆ ಗಗನಕ್ಕೆ ಏರಿವೆ. ಪಶು ಆಹಾರಕ್ಕೆ ಉತ್ಪಾದನೆ ಪ್ರಮುಖವಾಗಿ ಬೇಕಾಗುವ ಮೆಕ್ಕೆಜೋಳದ ಬೆಲೆ ತಗ್ಗಿದೆ. ಆದರೂ ಪಶು ಆಹಾರಗಳ ಬೆಲೆ ಹೆಚ್ಚಿವೆ ಎಂಬ ಬಗ್ಗೆ ಕೆಎಂಎಫ್ ಅಧ್ಯಕ್ಷರೇ ಉತ್ತರಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಬೇಕು.
ಆಗ್ರಹ: ಕೆಲ ಒಕ್ಕೂಟಗಳಲ್ಲಿ ಮೆಕ್ಕೆಜೋಳವನ್ನು ಹೆಚ್ಚಿನ ಬೆಲೆ ಖರೀದಿಸುವ ಮೂಲಕ ವಂಚನೆ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ತನಿಖೆಯಾಗಲಿ ಎಂದು ರೇವಣ್ಣ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇದ್ದರು.
ದರ ಮತ್ತು ಪ್ರೋತ್ಸಾಹ ಧನ ಸೇರಿದಂತೆ ರೈತರಿಗೆ ರು. 30 ಲಭ್ಯವಾಗುತ್ತಿದೆ. ಇದೇ ಸಂದರ್ಭದಲ್ಲಿ 2013-14 ನೇ ಸಾಲಿನಲ್ಲಿ ಒಕ್ಕೂಟಕ್ಕೆ ಬಂದ ರು. 14 ಕೋಟಿ ಲಾಭದ ಹಣವನ್ನು ಸಂಪೂರ್ಣವಾಗಿ ರೈತರಿಗೆ ನೀಡಲು ನಿರ್ಧರಿಸಲಾಗಿದೆ.
ಟಿ ಎಚ್.ಡಿ. ರೇವಣ್ಣ
ಸುಧಾರಣೆಯ ಆಡಳಿತ
ಈಗಾಗಲೇ ರು. 10.50 ಕೋಟಿ ಲಾಭದ ಹಣವನ್ನು ರೈತರಿಗೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದು, ಉಳಿದ ರು. 3.50 ಕೋಟಿಗಳನ್ನು ಸಹಕಾರಿ ನಿಯಮಗಳ ಪ್ರಕಾರ ಡಿವೆಡೆಂಡ್ ರೂಪದಲ್ಲಿ ನೀಡಲಾಗುವುದು. ಹಾಲು ಉತ್ಪಾದನೆ ಉತ್ತೇಜನ ನೀಡಲು ಖರೀದಿ ದರವನ್ನು ಹೆಚ್ಚಿಸಲಾಗಿದೆ. ತಮ್ಮ ಒಕ್ಕೂಟದ ನಿರ್ದೇಶಕರಾಗಲಿ, ಅಧಿಕಾರಿಗಳಾಗಲಿ ಯಾರೂ ವಿದೇಶ ಪ್ರವಾಸ ಹೋಗುವುದಿಲ್ಲ. ಆಡಳಿತಾತ್ಮಕ ವೆಚ್ಚವನ್ನು ತಗ್ಗಿಸಲಾಗಿದೆ. ಹಾಲು ಉತ್ಪಾದನೆ ಮತ್ತು ಹಾಲು ಉತ್ಪನ್ನಗಳ ಮಾರಾಟವನ್ನು ಉತ್ತಮ ಪಡಿಸಲಾಗಿದೆ ಹಾಗೂ ಉತ್ತಮ ಆಡಳಿತ ನಿರ್ವಹಣೆಯಿಂದ ಒಕ್ಕೂಟ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

