ಹಾಸನ

ಷೇರುದಾರರಿಗೆ ಸಕ್ಕರೆ ವಿತರಣೆಗೆ ನಿರ್ಧಾರ

Published On :

ಚನ್ನರಾಯಪಟ್ಟಣ: ತಾಲೂಕಿನ ಶ್ರೀನಿವಾಸಪುರ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಚಾಮುಂಡೇಶ್ವರಿ ಶುಗರ್ಸ್ಗೆ ಗುತ್ತಿಗೆ ನೀಡಿದ್ದು, ಗುತ್ತಿಗೆ ಹಣದಿಂದ ಬಂದ ಲಾಭಾಂಶವನ್ನು ಷೇರುದಾರರಿಗೆ ಡಿವಿಡೆಂಡ್ ರೂಪದಲ್ಲಿ 25 ಕಿಲೋ ಸಕ್ಕರೆಯನ್ನು ವಿತರಿಸಲು ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಚಾಮುಂಡೇಶ್ವರಿ ಶುಗರ್ಸ್ಗೆ ಗುತ್ತಿಗೆ ನೀಡಿ 7ವರ್ಷಗಳು ಕಳೆದಿದ್ದು, ಗುತ್ತಿಗೆ ಪಡೆದ ಕಂಪನಿ ಕಾರ್ಖಾನೆಗೆ ನೀಡಿದ ಗುತ್ತಿಗೆ ಹಣದಲ್ಲಿ ಕಾರ್ಖಾನೆಯ ಮೇಲಿದ್ದ ಸಾಲವನ್ನು ತೀರುವಳಿ ಮಾಡಿ, ರು. 18 ಕೋಟಿ ಹಣ ಉಳಿಕೆಯಾಗಿದ್ದು, ಅದನ್ನು ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಮಾಡಲಾಗಿದೆಯಲ್ಲದೇ, ಲಾಭದ ಹಣದಲ್ಲಿ 25 ಕಿಲೋ ಎಸ್. 30 ಮಾದರಿಯ ಸಕ್ಕರೆ ವಿತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.  
ಜಿಲ್ಲೆ ಸೇರಿದಂತೆ, ಮಂಡ್ಯ, ಕೊಡಗು, ತುಮಕೂರು ಜಿಲ್ಲೆಗಳ ರೈತರು ಸೇರಿದಂತೆ ಕಾರ್ಖಾನೆಗೆ 24506 ಮಂದಿ ಷೇರುದಾರರಿದ್ದು, ಎಲ್ಲರಿಗೂ ಪ್ರತಿ 25 ಕಿಲೋ ಸಕ್ಕರೆ ವಿತರಣೆ ಮಾಡಲು ಟೆಂಡರ್ ಕರೆದಿದ್ದು, ಇದಕ್ಕಾಗಿ ರು. 1.76 ಕೋಟಿ ವೆಚ್ಚ ತಗುಲಲಿದ್ದು, 6125 ಕ್ವಿಂಟಾಲ್ ಸಕ್ಕರೆ ನೀಡುವ ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.  ಕಾರ್ಖಾನೆ 1996ರಲ್ಲಿ ಲಾಭ ಗಳಿಸಿದ ಹಿನ್ನೆಲೆಯಲ್ಲಿ ಅಂದು ಪ್ರತಿ ಷೇರುದಾರರಿಗೆ 10ಕಿಲೋ ಸಕ್ಕರೆ ಮತ್ತು ಕೈಚೀಲವನ್ನು ನೀಡಲಾಗಿತ್ತು. ಅದಾದ ನಂತರ, ಕಾರಣಾಂತರದಿಂದ ಕಾರ್ಖಾನೆ ಲಾಭ ಗಳಿಸಲು ಸಾಧ್ಯವಾಗದ ಕಾರಣ ರೈತರಿಗೆ ಡಿವಿಡೆಂಡ್ ನೀಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಶಾಸಕರ ಭರವಸೆ: ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ ಕಾರ್ಖಾನೆಯ ಪ್ರಾರಂಭದಲ್ಲಿ ತೆಗೆದುಕೊಂಡಿದ್ದ ಸಂಪರ್ಕ  ಸಾಲದ ಅಸಲನ್ನು ಸರ್ಕಾರಕ್ಕೆ ತೀರುವಳಿ ಮಾಡಿದ್ದು, ಅಸಲಿಗೆ ವಿಧಿಸಿರುವ 10ಕೋಟಿ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಬೇಕೆಂದು ಕೋರಲಾಗಿದೆ. ಈ ಬಗ್ಗೆ ಸಕ್ಕರೆ ಸಚಿವರ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಕಾರ್ಖಾನೆಯ ಸುತ್ತಮುತ್ತಲಿನ ರೈತರು ತಾವು ಹೆಚ್ಚು ಕಬ್ಬು ಬೆಳೆದರೆ ಅದನ್ನು ಸಾಗಿಸಲು ಕಾರ್ಖಾನೆಗೆ ಅವಕಾಶ ಸಿಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿರುವುದರಿಂದ ಗುತ್ತಿಗೆ ಪಡೆದ ಚಾಮುಂಡೇಶ್ವರಿ ಕಂಪನಿಯವರ ಜತೆ ಚರ್ಚೆ ನಡೆಸಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಕಾರ್ಖಾನೆಯ ಕಬ್ಬು ಅರೆಯುವಿಕೆ ವಿಸ್ತರಣೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ, ಉಪಾಧ್ಯಕ್ಷ ಶಿವಣ್ಣ, ನಿರ್ದೇಶಕ ವೆಂಕಟೇಶ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.