ಹಾಸನ

'ವರ್ತಕರ ಸಂಘ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು'

Published On :

ಬೇಲೂರು: ಸಾಮಾಜಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ವರ್ತಕರ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ನಾನಾ ಸಂಘಟನೆಗಳು ಹಮ್ಮಿಕೊಳ್ಳುವ ಪ್ರತಿಭಟನೆ, ಮುಷ್ಕರ ಹಾಗೂ ಬಂದ್ ಕಾರ್ಯಕ್ರಮಗಳಿಗೆ ವರ್ತಕ ಸಮುದಾಯವು ಸಹಕರಿಸುವುದಿಲ್ಲ ಎಂದು ತಾಲೂಕು ವರ್ತಕರ ಸಂಘ ಸ್ಪಷ್ಟಪಡಿಸಿದೆ.
ಮುಂಬರುವ ದಿನಗಳಲ್ಲಿ ತಾಲೂಕು ವ್ಯಾಪ್ತಿಯಲ್ಲಿನ ಪ್ರಗತಿ ಪರ- ಜನಪರ ಸಂಘಟನೆಣೆಗಳು ಮುಷ್ಕರ, ಪ್ರತಿಭಟನೆ ಹಾಗೂ ಮುಖ್ಯವಾಗಿ ಬಂದ್ ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ವರ್ತಕರ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಾಧಕ- ಬಾಧಕಗಳನ್ನು  ವಿಮರ್ಶಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಕಾರ್ಯದರ್ಶಿ ಮನವಿ ಮಾಡಿದ್ದಾರೆ.
ಹೋರಾಟದ ಸಂದರ್ಭದಲ್ಲಿ ಮಾಡಲಾಗುವ ಬಂದ್ ಹಾಗೂ ಮತ್ತಿತರ ಕೆಲ ಸಂದರ್ಭದಲ್ಲಿ  ಹೆಚ್ಚು- ಹೆಚ್ಚಾಗಿ ತೊಂದರೆಗೊಳಗಾಗುತ್ತಿರುವುದು ವರ್ತಕ ಸಮೂಹವಾಗಿದೆ. ಅಲ್ಲದೇ ಬಂದ್ ಕಾರ್ಯಕ್ರಮವು ಯಶಸ್ವಿಗೊಳ್ಳಲು ವರ್ತಕ ಸಮುದಾಯದ ಬೆಂಬಲವೂ ಅಗತ್ಯ-ಅನಿವಾರ್ಯ ಎಂದು ಹೇಳಿದ್ದಾರೆ.
ಮಾರಾಟಕ್ಕೆ ತಡೆ: ಸರಿಯಾದ ಕ್ರಮವಲ್ಲ
ಹಾಸನ: ನವಭಾರತ್ ಫರ್ಟಿಲೈಸರ್ಸ್ ಕಂಪನಿಯ ಪ್ರಮುಖ ಉತ್ಪನ್ನವಾದ ಪ್ರೆಸ್ಮಡ್ ಗೊಬ್ಬರದ ಬಗ್ಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಮಾಡಿರುವ ಆರೋಪಗಳು ಹಾಗೂ ಮಾರಾಟಕ್ಕೆ ತಡೆಯಾಜ್ಞೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ನವಭಾರತ್  ಫರ್ಟಿಲೈಸರ್ಸ್ ತಾಂತ್ರಿಕ ವಿಭಾಗದ ಮುಖ್ಯಸ್ಥ ರವೀಂದ್ರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚ್ಛ ನ್ಯಾಯಾಲಯವು ಸಾವಯವ ಪರಿಕರಗಳ ಬಗ್ಗೆ ಇಲಾಖೆಗಳಲ್ಲಿ ಗೊಂದಲಗಳಿರುವುದರಿಂದ ಅವುಗಳ ಬಗ್ಗೆ ಯಾವುದೇ ಕ್ರಮಕೈಗೊಳ್ಳದಂತೆ ಕೃಷಿ ಇಲಾಖೆಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ ನಮ್ಮ ಉತ್ಪನ್ನವಾದ ವಿಜಯಾ ಗ್ರೋಮಿನ್ ರಸಗೊಬ್ಬರ ನಿಯಂತ್ರಣಾ ಕಾಯ್ದೆಯಡಿಯಲ್ಲಿ ಬಾರದ ಕಾರಣ ಕೃಷಿ ಇಲಾಖೆ ಅಧಿಕಾರಿಗಳಿಗೆ ಇದರ ಬಗ್ಗೆ ಕ್ರಮಕೈಗೊಳ್ಳುವ ಅಧಿಕಾರವಿಲ್ಲ. ಜೊತೆಗೆ ಪ್ರೆಸ್ಮಡ್ ಕಾಂಪೋಸ್ಟ್ಗೆ ಸಂಬಂಧಿಸಿದಂತೆ ನಿರ್ದಿಷ್ಟತೆಗಳು ಕೇಂದ್ರ ಸರ್ಕಾರದ ಪುನರ್ ಪರಿಶೀಲನೆಯಲ್ಲಿರುವುದರಿಂದ ಈಗಿರುವಂತೆಯೇ ಯಥಾ ಸ್ಥಿತಿಯನ್ನು ಕಾಯ್ದು ಕೊಳ್ಳುವಂತೆ ಕೇಂದ್ರ ಸರ್ಕಾರ ತಿಳಿಸಿದೆ.
ವಿಜಯಾ ಗ್ರೋಮಿನ್ನಂತಹ ಪ್ರೆಸ್ ಮಡ್ ಆಧಾರಿತ ಗೊಬ್ಬರ ಮಾರಾಟ ಮಾಡುವುದನ್ನು ತಡೆದಲ್ಲಿ ರೈತರಿಗೆ ಸಕಾಲದಲ್ಲಿ ಸಾವಯವ ಗೊಬ್ಬರ ದೊರಕದೇ ಪುನಃ ರಾಸಾಯನಿಕ ಗೊಬ್ಬರದ ಮೇಲೆ ಅವಲಂಬಿಸುವಂತೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ನವಭಾರತ್ ಫರ್ಟಿಲೈಸರ್ಸ್ನ ರಾಘವರಾವ್, ಬಿ.ಎನ್.ಮಹೇಶ್, ಶಿವರಾಜ್ ಇತರರು ಇದ್ದರು.
ಪರಿಶೋಧಕರ ಆಯ್ಕೆ
ಹಾಸನ: ಸಹಕಾರ ಸಂಘಗಳು 2013-14ನೇ ಸಾಲಿನ ಲೆಕ್ಕಪರಿಶೋಧನೆಯನ್ನು ನಿರ್ವಹಿಸಿಕೊಳ್ಳಲು ಸೆಪ್ಟೆಂಬರ್ನಲ್ಲಿ ನಡೆಸುವ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ನಿರ್ವಹಿಸುವ ಅರ್ಹ ಲೆಕ್ಕಪರಿಶೋಧಕರ ಪಟ್ಟಿಯಿಂದ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಈ ಸಂಬಂಧ ಸಹಕಾರ ಸಂಘಗಳು ಸಾಮಾನ್ಯ ಮಹಾಸಭೆಯಲ್ಲಿ ಆಯ್ಕೆ ಮಾಡಿಕೊಂಡ ಲೆಕ್ಕಪರಿಶೋಧಕರ ಆಯ್ಕೆ ಮಾಹಿತಿಯನ್ನು, ಆಯ್ಕೆ ಮಾಡಿಕೊಂಡ 7 ದಿನಗಳ ಒಳಗಾಗಿ ಸಂಬಂಧಿಸಿದ ಲೆಕ್ಕಪರಿಶೋಧಕರಿಗೆ ಹಾಗೂ ಈ ಇಲಾಖೆಗೆ ಸಲ್ಲಿಸಬೇಕಾಗಿದೆ.
ಈ ಮಾಹಿತಿಯನ್ನು ಇಲ್ಲಿಯವರೆಗೆ ಸಲ್ಲಿಸದೇ ಇರುವ ಸಹಕಾರ ಸಂಘಗಳು ಈ ಮಾಹಿತಿಯನ್ನು ಕೂಡಲೇ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರು, ಗುರು ಚಿತ್ರಮಂದಿರ ಸಮೀಪ, ಬಿ.ಎಂ. ರಸ್ತೆ, ಹಾಸನ-573201 ಇಲ್ಲಿಗೆ ಸಲ್ಲಿಸಲು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.