ಮುಂದುವರಿದ ಕಾಡಾನೆಗಳ ಹಾವಳಿ
ಕ.ಪ್ರ.ವಾರ್ತೆ ಆಲೂರು ಜ. 28
ತಾಲೂಕಿನ ಕೆಂಚಮ್ಮನ ಹೊಸಕೋಟೆ ಹಾಗೂ ಕುಂದೂರು ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಕಳೆದ 3 ದಿನಗಳಿಂದ ಎಡಬಿಡದೆ ನಡೆಯುತ್ತಿದೆ.
ದೊಡ್ಡಬೆಟ್ಟ, ರಂಗನಬೆಟ್ಟ, ಕರಡಿಬೆಟ್ಟ ಸೇರಿದಂತೆ ಕೊಡಗಿನ ಉಂಬಳಿಬೆಟ್ಟ ಅರಣ್ಯ ಪ್ರದೇಶಗಳಲ್ಲಿ ಕಾಡಾನೆಗಳು ಪುನಃ ಗ್ರಾಮಗಳಿಗೆ ಹಾಗೂ ತೋಟ ಗದ್ದೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದು, ಈ ಭಾಗದ ಜನ ಭಯಭೀತರಾಗಿದ್ದಾರೆ. ಸೋಮವಾರ ರಾತ್ರಿ ಸುಳಗೋಡು, ಹೊನ್ನವಳ್ಳಿ, ಹೊಸಪುರ ಹಾಗೂ ಅಡಿಬೈಲು ಮುಂತಾದ ಗ್ರಾಮಗಳಲ್ಲಿ ಮೂರು ಗುಂಪಗಳಾಗಿ ಬೀಡು ಬಿಟ್ಟಿರುವ ಕಾಡಾನೆಗಳು ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ನಷ್ಟ ಮಾಡಿದ್ದು, ರಾತ್ರಿ ಈಡೀ ಗ್ರಾಮಗಳಲ್ಲಿ ಮೊಕ್ಕಾಂ ಹೂಡುವ ಆನೆಗಳ ಘೀಳಿನ ಸದ್ದಿಗೆ ಗ್ರಾಮಸ್ಥರು ಭಯಭೀತರಾಗಿದ್ದು, ಮನೆಯಿಂದ ಹೊರಬರಲಾರದೇ ಭೀತಿಯಲ್ಲಿರುವಂತಾಗಿದೆ.
ಅಪಾರ ಬೆಳೆ ನಾಶ: ಹೊನ್ನವಳ್ಳಿ ಗ್ರಾಮದ ಗಣೇಶ್, ರಜನಿ, ದೇವೇಗೌಡ, ತ್ಯಾಗ, ಚಂದ್ರಶೇಖರ್, ಸುಳುಗೋಡು ಗ್ರಾಮದ ಶಾಂತಮಲ್ಲಯ್ಯ, ಕಾಣಗೆರೆ ಗ್ರಾಮದ ನಂದಕುಮಾರ್, ಚಂದ್ರಣ್ಣ, ಕುಡಿದೆಲೆ ಗ್ರಾಮದ ಅನಿಲ್, ಅಡಿಬೈಲು ಗ್ರಾಮದ ಸುರೇಶ್ ಮುಂತಾದ ರೈತರು ಬೆಳೆದ ಅಪಾರ ಪ್ರಮಾಣದ ಕಾಫಿ, ಜೋಳ, ಬಾಳೆ, ಕಬ್ಬು, ಅಡಿಕೆ, ತೆಂಗು, ಸಪೋಟಾ, ಕಿತ್ತಳೆ ಸೇರಿದಂತೆ ಅಪಾರ ಪ್ರಮಾಣದ ಬೆಳೆಯನ್ನು ಆನೆಗಳು ಈವರೆಗೆ ನಾಶಗೊಳಿಸಿವೆ.
ಮತ್ತೆ ದಾಳಿ: ಕಳೆದ ಮೂರು ದಿನಗಳಿಂದ 28ಕ್ಕೂ ಹೆಚ್ಚು ಆನೆಗಳ ಹಿಂಡು ಪ್ರತ್ಯೇಕವಾಗಿ ಈ ಗ್ರಾಮಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ದಾಳಿ ನಡೆಸುತ್ತಿವೆ. ಈ ಸುತ್ತಮುತ್ತಲ ಪ್ರದೇಶದಲ್ಲಿ ಭತ್ತದ ಬೆಳೆಯ ಕುಯ್ಲು, ಸಂಪೂರ್ಣವಾಗಿ ಮುಗಿದಿದ್ದು, ಗ್ರಾಮಸ್ಥರು ಕಾಡಾನೆ ದಾಳಿಯಿಂದ ಅಳಿದುಳಿದ ಭತ್ತವನ್ನು ತಮ್ಮ ಗ್ರಾಮಗಳಲ್ಲಿ ಇರುವ ಕಣದಲ್ಲಿ ಸಂಗ್ರಹಿಸಿಟ್ಟಿದ್ದು, ಭತ್ತದ ರುಚಿ ಕಂಡಿರುವ ಆನೆಗಳು ನಿರ್ಭೀತಿಯಿಂದ ಗ್ರಾಮಗಳೊಳಗೆ ನುಗ್ಗಿ ಒಕ್ಕಣ ಮಾಡಿರುವ ಭತ್ತವನ್ನು ತಿಂದು ತೇಗುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಸ್ಥರು ತಮ್ಮ ಭತ್ತವನ್ನು ರಕ್ಷಿಸಲು ಸೋಲಾರ್ ತಂತಿ ಬೇಲಿಗಳನ್ನು ಹಾಕಿರುವುದರಿಂದಾಗಿ ಸೋಲಾರ್ ಬೇಲಿಗಳನ್ನು ಉಪಾಯದಿಂದ ಮುರಿಯಲು ಆಗದ ಕೆಲವು ಆನೆಗಳು ಇತರ ಬೆಳೆಗಳತ್ತ ಮುಖಮಾಡಿವೆ.
ಇಷ್ಟದ ಬೆಳೆಗಳತ್ತ ಮುಖ: ಆನೆಗಳಿಗೆ ಇಷ್ಟವಾದ ಜೋಳ, ಬಾಳೆ, ಸಪೋಟ ಸೇರಿದಂತೆ ಸಿಹಿಯಾದ ಇತರೆ ಬೆಳೆಗಳತ್ತ ಇವು ಆಕರ್ಷಿತವಾಗುತ್ತಿದ್ದು, ಇದರಿಂದ ರೈತರು ಕಂಗೆಟ್ಟಿದ್ದಾರೆ. ಕಳೆದ 6 ತಿಂಗಳಿಂದ ಪ್ರತಿದಿನ ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದ ಗದ್ದೆಗಳತ್ತ ಮುಖ ಮಾಡಿ ಅಲ್ಲಿಯ ಪಕ್ಕದ ಕಾಡುಗಳಲ್ಲಿ ಬೀಡು ಬಿಡುತ್ತಿದ್ದವು. ಆದರೆ ಭತ್ತದ ಕುಯ್ಲು ಮುಗಿದಿರುವುದರಿಂದ ವಿಧಿ ಇಲ್ಲದೆ ಆಹಾರಕ್ಕಾಗಿ ಆನೆಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇತರ ಬೆಳೆಗಳತ್ತ ಆಕರ್ಷಿತವಾಗುತ್ತಿವೆ.
ರಸ್ತೆಗೆ: ಅಷ್ಟೇ ಅಲ್ಲದೆ, ಈ ಭಾಗದಲ್ಲಿ ಇರುವ ಮಕ್ನಾ ಸೇರಿದಂತೆ ನಾಲ್ಕು ಒಂಟಿ ಸಲಗಳು ದೊಡ್ಡಬೆಟ್ಟ, ಕರಡಿಬೆಟ್ಟ, ಉಂಬಳಿಬೆಟ್ಟ, ರಂಗನಬೆಟ್ಟೆ ಸೇರಿದಂತೆ ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಇರುವ ಗ್ರಾಮಗಳಲ್ಲಿ ರಾತ್ರಿ ಅಲ್ಲದೆ ಹಗಲು ಸಹ ಕಾಣ ಸಿಗುತ್ತಿದ್ದು, ಹಣವಂತ ಕಾಫಿ ಬೆಳೆಗಾರರು, ತಮ್ಮ ತೋಟಗಳಿಗೆ ಸೋಲಾರ್ ಬೇಲಿ ಹಾಕಿರುವುದರಿಂದಾಗಿ ಇವು ಜನ ಓಡಾಡುವ ರಸ್ತೆಗಳಲ್ಲಿಯೇ ಸಂಚರಿಸುತ್ತಿರುವುದು ಈ ಭಾಗದ ಜನರ ಭಯವನ್ನು ಇಮ್ಮಡಿಗೊಳಿಸಿದೆ.
ಇದಕ್ಕೆ ಉದಾರಣೆ ಎಂಬಂತೆ, 15 ದಿನಗಳ ಹಿಂದಷ್ಟೇ ಪುರಭೈರವನಹಳ್ಳಿಯಲ್ಲಿ ಸರೋಜಮ್ಮ ಎಂಬ ಮಹಿಳೆಯನ್ನು ಬೆಳಗಿನ ಹೊತ್ತಿನಲ್ಲಿ ಬಲಿ ತೆಗೆದುಕೊಂಡು ಕಾಡಾನೆ ಅದಾದ ಸ್ವಲ್ಪ ದಿನಗಳಲ್ಲಿ ಅಡಿಬೈಲು ಸುತ್ತಮುತ್ತ ಜೀಪನ್ನು ಜಖಂ ಗೊಳಿಸಿ ಮನೆಯ ಪಕ್ಕದ ಕಣದಲ್ಲಿ ಸಂಗ್ರಹಿಸಿದ್ದ ಭತ್ತ ತಿನ್ನಲು ಬಂದು ಅವರ ಮನೆಯ ಸೂರನ್ನೇ ಕೆಡವಿ ಆತಂಕ ಉಂಟು ಮಾಡಿತ್ತು.
ವಾರದ ಹಿಂದೆ ಆನೆ ಹಿಡಿದ ಅಧಿಕಾರಿಗಳು, ಆನಂತರ ರಾತ್ರೋರಾತ್ರಿ ಎಲ್ಲಾ ಸಾಕಾನೆಗಳು ಸೇರಿದಂತೆ ಮಾವುತರು, ಕಾವಾಡಿಗರು, ವೈದ್ಯರು, ಗುರಿಕಾರರು ಹಾಗೂ ಸಿಬ್ಬಂದಿ ವರ್ಗದೊಂದಿಗೆ ಕ್ಯಾಂಪ್ ಖಾಲಿ ಮಾಡಿದ್ದರು.
ಆನೆ ಹಿಡಿದ ದಿನ, ಕಾಡಾನೆಯೊಂದಿಗೆ ಮೂರು ಸಾಕಾನೆಗಳು ಮತ್ತಿಗೋಡು ಅರಣ್ಯಕ್ಕೆ ಹೋಗಿದ್ದವು. ಆದರೆ, ಅವು ಪುನಃ ವಾಪಸ್ ಆಗಲಿಲ್ಲ. ಕಾರ್ಯಾಚರಣೆ ಸಂದರ್ಭದಲ್ಲಿ ತಿವಿತಕ್ಕೊಳಗಾಗಿ ಗಾಯಗೊಂಡಿದ್ದ ಮತ್ತೊಂದು ಆನೆಯನ್ನು ಚಿಕಿತ್ಸೆಗಾಗಿ ಕೊಡಗಿಗೆ ಸಾಗಿಸಿದರೆ ಇನ್ನೊಂದು ಆನೆಯನ್ನು ಕೊಡಗಿನ ಕಟ್ಟೇಪುರ ಅರಣ್ಯಪ್ರದೇಶದಲ್ಲಿ ಕ್ರಾಲ್ ನಿರ್ಮಿಸುವ ನೆಪ ಒಡ್ಡಿ ಕಳುಹಿಸಲಾಗಿದೆ. ಉಳಿದ ಒಂದು ಆನೆಯನ್ನೂ ಸಹ ಕ್ಯಾಂಪ್ನಿಂದ ಬೇರೆಡೆ ಕಳುಹಿಸಲಾಗಿದೆ. ಈ ಸಂಬಂಧವಾಗಿ ಸ್ಪಷ್ಟನೆ ಕೇಳಲು ಡಿಎಫ್ಓ ಅಪ್ಪುರಾವ್ ಅವರನ್ನು ಸಂಪರ್ಕಿಸಿದರೂ, ಅವರಿಂದ ಉತ್ತರ ದೊರೆಯುತ್ತಿಲ್ಲ.
ಮತ್ತೊಂದು ಅಚ್ಚರಿಯ ವಿಷಯವೆಂದರೆ, ಯಾವುದೇ ಕಾರಣಕ್ಕೂ ಮಾಗಡಿಹಳ್ಳಿ ಕ್ಯಾಂಪ್ ತೆರವುಗೊಳಿಸದೆ ಎಲ್ಲಾ ಆನೆಗಳನ್ನು ಹಂತ ಹಂತವಾಗಿ ಹಿಡಿಯುವ ಭರವಸೆ ನೀಡಿದ್ದ ಇಲಾಖೆಯು ಕ್ಯಾಂಪ್ ಖಾಲಿ ಮಾಡಿದರೂ ಸಹ ಸುತ್ತಮುತ್ತಲ ಗ್ರಾಮಸ್ಥರು ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಏಕೆ ಹೀಗೆ ಮೌನವಾಗಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಎಚ್.ವಿ. ರಾಘವೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

