ಕಳಚಿ ಬಿದ್ದ ಧ್ವಜ: ಸಭೆಯಲ್ಲಿ ಗೊಂದಲ, ಅಸಮಾಧಾನ
ಹೊಳೆನರಸೀಪುರ: ಗಣರಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಇಲ್ಲಿನ ತಾಲೂಕು ಆಡಳಿತದ ವತಿಯಿಂದ ಹಾರಿಸಲಾಗಿದ್ದ ರಾಷ್ಟ್ರಧ್ವಜವು ಮಧ್ಯಾಹ್ನದ ವೇಳೆಗೆ ಧ್ವಜಸ್ತಂಭದಿಂದ ಕಳಚಿ ಅನಾಥವಾಗಿ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೋಮವಾರ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಪೊಲೀಸ್, ಎಬಿವಿಪಿ ಹಾಗೂ ಕರವೇ ಕಾರ್ಯಕರ್ತರ ನಡುವೆ ನಡೆದ ಸಭೆಯಲ್ಲಿ ಸೂಕ್ತ ಉತ್ತರ ದೊರಕದ ಕಾರಣದಿಂದಾಗಿ ಸಭೆಯು ಗೊಂದಲ ಹಾಗೂ ಅಸಮಾಧಾನದ ನಡುವೆ ಮುಕ್ತಾಯ ಕಂಡಿತು.
ರಾಷ್ಟ್ರಧ್ವಜಕ್ಕೆ ಅಪಮಾನವಾಗಿರುವ ಕುರಿತಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಲಾದ ಸಭೆಯಲ್ಲಿ ಪ್ರಕರಣಕ್ಕೆ ಹೊಣೆ ಯಾರು ಎಂಬ ಎಬಿವಿಪಿ ಹಾಗೂ ಕರವೇ ಸಂಘಟನೆಗಳ ಪ್ರಶ್ನೆಗೆ ಸೂಕ್ತ ಉತ್ತರ ಬರಲಿಲ್ಲ.
ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಪ್ಪ ಅವರು ಪ್ರಕರಣದ ತನಿಖೆಗೆ ಕಾಲಾವಕಾಶ ಕೋರಿದ ಕಾರಣದಿಂದಾಗಿ, ಸಭೆಯಲ್ಲಿದ್ದ ಸಂಘಟನೆಗಳ ಪದಾಧಿಕಾರಿಗಳು ಪ್ರಕರಣದ ತನಿಖೆಯ ನೆಪದಲ್ಲಿ ಕಾಲಾವಕಾಶ ಕೋರುತ್ತಿರುವುದು ಪ್ರಕರಣವನ್ನು ಮುಚ್ಚಿ ಹಾಕಲು ನಡೆಸಿರುವ ಪ್ರಯತ್ನ ಎಂದು ದೂರಿದರು.
ಪ್ರತಿಭಟನೆ: ಧ್ವಜವು ಅನಾಥವಾಗಿ ಕೆಳಗೆ ಬಿದ್ದಿರುವ ವಿಷಯ ತಿಳಿದ ಕೂಡಲೇ ಎಬಿವಿಪಿ ಹಾಗೂ ಕರವೇ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದರು. ಬಹು ಸಮಯವಾದರೂ ಸಂಬಂಧಿಸಿದ ಇಲಾಖೆಗಳ ಯಾರೊಬ್ಬರೂ ಸ್ಥಳಕ್ಕೆ ಬಾರದ್ದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಹಾಗೂ ಕಂದಾಯ ಇಲಾಖೆಯವರು ಸ್ಥಳಕ್ಕೆ ಬಂದು, ಬಿದ್ದಿದ್ದ ರಾಷ್ಟ್ರಧ್ವಜವನ್ನು ಮತ್ತೆ ಧ್ವಜಕಂಬಕ್ಕೆ ಏರಿಸಿದ್ದರು.
ಪೊಲೀಸರಿಗೆ ದೂರು: ಆದರೆ, ರಾಷ್ಟ್ರಧ್ವಜವನ್ನು ನಿರ್ಲಕ್ಷಿಸಿ ಅಪಮಾನ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಕೂಡಲೇ ತಪ್ಪಿತಸ್ಥರ ವಿರದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದ ಪ್ರತಿಭಟನಾಕಾರರ ಮನವಿಗೆ, ಎಬಿವಿಪಿ, ಕರವೇ ವತಿಯಿಂದ ಅಲ್ಲದೇ ತಹಸೀಲ್ದಾರ್ ಆರ್.ಬಿ. ಶಿವಶಂಕರಪ್ಪ ಅವರು ಕೂಡ ಕೂಡಲೇ ಪ್ರಕರಣದ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಖುದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು.
ಫಲಪ್ರದವಾಗದ ಸಭೆ: ರಾಷ್ಟ್ರಧ್ವಜಕ್ಕೆ ಅಪಮಾನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಸಕಾರಾತ್ಮಕ ಉತ್ತರ ದೊರೆಯದೆ, ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಿ ಕ್ರಮಕೈಗೊಳ್ಳದ ಧೋರಣೆಯನ್ನು ಖಂಡಿಸಿದ ಎಬಿವಿಪಿ ಹಾಗೂ ಕರವೇ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆಗೆ ಮುಂದಾದರು.
ಕೂಡಲೇ ತಹಸೀಲ್ದಾರ್ ಶಿವಶಂಕರಪ್ಪ ಅವರು, ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಪ್ಪ ಹಾಗೂ ಅಪರಾಧ ವಿಭಾಗದ ಎಸ್ಸೈ ಸವಿ ಅವರನ್ನು ತಾಲೂಕು ಕಚೇರಿಗೆ ಕರೆಸಿ ಸಂಘಟನೆಗಳ ಪದಾಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಲಾಯಿತು. ಆದರೆ, ಸಭೆ ಫಲಪ್ರದವಾಗಲಿಲ್ಲ.
ನಾಲ್ಕು ದಿನಗಳ ಗಡುವು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ದಿನಗಳ ಗಡುವು ಕೇಳಿದ್ದು, ಅಷ್ಟರಲ್ಲಿ ತಪ್ಪಿತಸ್ಥರ ಹೆಸರನ್ನು ಬಹಿರಂಗಪಡಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, ಎಬಿವಿಪಿ ಸಂಘಟನೆ ಹಾಗೂ ಕರವೇ ಸಂಘಟನೆಯ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಬಿವಿಪಿಯ ಜಿಲ್ಲಾ ಸಂಚಾಲಕ ಅಮಿತ್, ಯೋಗಾನರಸಿಂಹ, ಕರವೇ ತಾಲೂಕು ಅಧ್ಯಕ್ಷ ಕೆರಗೋಡು ಮಹೇಶ್ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

