ಹಾಸನ

ತಾಪಂ ಉಪಾಧ್ಯಕ್ಷರಾಗಿ ಕೃಷ್ಣಪ್ಪ ಆಯ್ಕೆ

Published On :

ಹೊಳೆನರಸೀಪುರ: ಇಲ್ಲಿನ ತಾಲೂಕು ಪಂಚಾಯ್ತಿ ಉಪಾಧ್ಯಕ್ಷರಾಗಿದ್ದ ಎಚ್.ಬಿ. ನಂಜುಂಡಪ್ಪ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆಯು ನಡೆದು ನಿರೀಕ್ಷೆಯಂತೆ ಮಳಲಿ ತಾಲೂಕು ಪಂಚಾಯ್ತಿ  ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಹಿರಿಯ ಸದಸ್ಯ ಡಿ. ಕೃಷ್ಣಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ದಿಢೀರ್ ಬೆಳವಣಿಗೆ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಕೇವಲ ಐದು ತಿಂಗಳ ಕಾಲ ಇಲ್ಲಿನ ತಾಲೂಕು ಪಂಚಾಯ್ತಿಗೆ ಅಧ್ಯಕ್ಷರಾಗಿದ್ದ ಪುಷ್ಪಾಗೌಡೇಗೌಡ ಹಾಗೂ ಉಪಾಧ್ಯಕ್ಷರಾಗಿದ್ದ ಎಚ್.ಬಿ. ನಂಜುಂಡಪ್ಪ ಅವರು ತಮ್ಮ ನಾಯಕರ ನಿರ್ದೇಶನದಂತೆ ತಮ್ಮ ಸ್ಥಾನಗಳಿಗೆ ಜ. 17 ಮತ್ತು ಡಿ. 27ರಂದು ರಾಜಿನಾಮೆಯನ್ನು ಸಲ್ಲಿಸಿದ್ದ ಕಾರಣದಿಂದಾಗಿ, ಇವರಿಂದ ತೆರವಾಗಿದ್ದ ಸ್ಥಾನದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮೊದಲು ರಾಜಿನಾಮೆಯನ್ನು ಸಲ್ಲಿಸಿದ್ದ ಕಾರಣದಿಂದಾಗಿ, ಸೊಮವಾರ ಚುನಾವಣೆ ನಿಗದಿಯಾಗಿತ್ತು.
ಅವಿರೋಧ ಆಯ್ಕೆ: 15 ಸದಸ್ಯ ಬಲದ ಇಲ್ಲಿನ ತಾ.ಪಂ.ನಲ್ಲಿ ಒಬ್ಬ ಕಾಂಗ್ರೆಸ್ ಸದಸ್ಯೆಯನ್ನು ಹೊರತುಪಡಿಸಿ, ಇನ್ನುಳಿದ 14 ಸದಸ್ಯರೂ ಜೆಡಿಎಸ್‌ನವರೇ ಆಗಿದ್ದು, ಇವರುಗಳಲ್ಲಿ ಈಗಾಗಲೇ ಎನ್.ಆರ್. ಅನಂತಕುಮಾರ್, ಕೆ.ಎಂ. ಚಂದ್ರಮತಿ, ಪುಷ್ಪಾಗೌಡೇಗೌಡ ಅವರು  ಅಧ್ಯಕ್ಷರಾಗಿಯೂ, ಪಿ.ಸಿ. ಶಶಿಕಲ, ಹುಚ್ಚೇಗೌಡ, ಎಚ್.ಬಿ.ನಂಜುಂಡಪ್ಪ ಅವರುಗಳು ಉಪಾಧ್ಯಕ್ಷರಾಗಿ ಕ್ರಮವಾಗಿ 20, 10 ಮತ್ತು 5ತಿಂಗಳುಗಳ ಕಾಲ ಅಧಿಕಾರ ನಡೆಸಿದ್ದರು. ಇನ್ನುಳಿದಿರುವ 2 ವರ್ಷಗಳ ಅವಧಿಗೆ ಈಗ ಹಾಲಿ ಇದ್ದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಬದಲಾಯಿಸಿ, ಮೊದಲಿಗೆ ಉಪಾಧ್ಯಕ್ಷರಾಗಿ ಹಿರಿಯ ಸದಸ್ಯ ಡಿ. ಕೃಷ್ಣಪ್ಪ ಅವರನ್ನು ನೂತನ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರ ಚುನಾವಣೆ ಮುಂದಕ್ಕೆ: ತಾಲೂಕು ಪಂಚಾಯ್ತಿ ಅಧ್ಯಕ್ಷೆ ಕೆ.ಎಂ. ಪುಷ್ಪಾಗೌಡೇಗೌಡ ಅವರೂ ಕೂಡ ಜ.17ರಂದು ತಮ್ಮ ಸ್ಥಾನಕ್ಕೆ ತಮ್ಮ ಜೆಡಿಎಸ್ ನಾಯಕರ ಮೌಖಿಕ ನಿರ್ದೇಶನದಂತೆ ರಾಜಿನಾಮೆ ಸಲ್ಲಿಸಿದ್ದು, ಇವರ ರಾಜಿನಾಮೆ ಇನ್ನೂ ಅಂಗೀಕಾರವಾಗದ ಕಾರಣದಿಂದಾಗಿ ಅಧ್ಯಕ್ಷೆ ಸ್ಥಾನದ ಚುನಾವಣೆಗೆ ಇನ್ನಷ್ಟೇ ದಿನಾಂಕ ನಿಗದಿಗೊಳ್ಳಬೇಕಿದೆ. ಉಪಾಧ್ಯಕ್ಷರ ಸ್ಥಾನಕ್ಕೆ ಈ ಮೊದಲೇ ನಿರ್ಧರಿಸಿದ್ದ ಮಾದರಿಯಲ್ಲಿ ಯಾರೊಬ್ಬರೂ ನಾಮಪತ್ರವನ್ನು ಸಲ್ಲಿಸದ ಕಾರಣದಿಂದಾಗಿ ಕೇವಲ ಡಿ. ಕೃಷ್ಣಪ್ಪ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಕಾರಣದಿಂದಾಗಿ ಅಂತಿಮವಾಗಿ ಡಿ. ಕೃಷ್ಣಪ್ಪ ಅವರ ಆಯ್ಕೆಯನ್ನು ಸಭೆಯಲ್ಲಿ ಘೋಷಿಸಲಾಯಿತು.
ಇಲ್ಲಿನ ತಾ.ಪಂ.ಗೆ ಇನ್ನುಳಿದಿರುವ ಅವಧಿಗೆ ಮತ್ತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿಯು ನಿಗದಿಗೊಳ್ಳಲಿದ್ದು, ನೂತನ ಮೀಸಲಾತಿಯ ಅನ್ವಯ ಇನ್ನೂ ಕೆಲವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗುವ ಭಾಗ್ಯ ಲಭಿಸಲಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರನ್ನು ಸದಸ್ಯರಾದ ಹುಚ್ಚೇಗೌಡ, ನಿರ್ಗಮಿತ ಉಪಾಧ್ಯಕ್ಷ ಎಚ್.ಬಿ. ನಂಜುಂಡಪ್ಪ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಎನ್.ಆರ್. ಅನಂತಕುಮಾರ್, ಪಿ.ಸಿ. ಶಶಿಕಲ, ಕುಸುಮ, ಭಾಗ್ಯವತಿ, ಗೀತಮ್ಮ, ಭಾಗ್ಯಮ್ಮ, ಸಿ.ಆರ್. ಮಂಜುನಾಥ್ ಇತರರು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.