ಹಾಸನ

'ತೇಜಸ್ವಿ ಕೃತಿಗಳು ಚಿರಸ್ಥಾಯಿ'

Published On :

ಹಾಸನ: ಕನ್ನಡ ಸಾಹಿತ್ಯ ಲೋಕದಲ್ಲಿ ತೇಜಸ್ವಿ ಒಬ್ಬ ವಿಶಿಷ್ಟ ಲೇಖಕರಾಗಿದ್ದು, ರಂಜನೆ, ಬೋಧನೆಯೊಂದಿಗೆ ಅತ್ಮೋನ್ನತಿಯ ಹಾದಿಯನ್ನು ತೋರುವುದರಿಂದ ತೇಜಸ್ವಿಯವರ ಕೃತಿಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನಿಂತಿವೆ. ಎಂದು ಲೇಖಕ ಹಾಗೂ ಅಂಗ್ಲ ಭಾಷಾ ಉಪನ್ಯಾಸಕ ಗೊರೂರು ಶಿವೇಶ್ ತಿಳಿಸಿದರು.
ಕೇಂದ್ರ ಸರ್ಕಾರ, ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ ಹಾಗೂ ಫಿರ್ದೋಸ್ ಮಹಿಳಾ ಸಮಾಜ  ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಹಾಸನ ತಾಲೂಕು ಗೊರೂರಿನ ಎ.ಎನ್.ವಿ. ವರದರಾಜುಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ವಿಚಾರ ಸಂಕಿರಣದಲ್ಲಿ ತೇಜಸ್ವಿಯವರ ಕೃತಿಗಳನ್ನು ಕುರಿತಂತೆ ಉಪನ್ಯಾಸ ನೀಡಿದ ಅವರು, ಜೀವ ವಿಜ್ಞಾನ, ಪರಿಸರದ  ಕಥೆಗಳನ್ನು ಹಾಸ್ಯ ಮತ್ತು ಸರಳ ನಿರೂಪಣಾ ಶೈಲಿಯಿಂದಾಗಿ, ಗಂಭೀರ ವಸ್ತುವನ್ನು ರೋಚಕವಾಗಿ ಬರೆಯಬಲ್ಲ ಲೇಖಕರಾಗಿ ಶ್ರೇಷ್ಠತೆಯ ಜತೆಗೆ ಜನಪ್ರಿಯತೆಯನ್ನು ಗಳಿಸಿದ ಕತೆಗಾರ ತೇಜಸ್ವಿ ಎಂದು ಹೇಳಿದರು.
ಉತ್ತಮ ಕೃತಿಗಳು: ತೇಜಸ್ವಿಯವರ ಕರ್ವಾಲೋ ಕೃತಿಯು ಜೀವ ವಿಜ್ಞಾನಿ ಕರ್ವಾಲೋನ ಜ್ಞಾನದ ಜೊತೆಗೆ ಮಂದಣ್ಣನ ಅನುಭವವನ್ನು ಮೇಳೈಸಿ ಸಾಮಾನ್ಯನೊಬ್ಬನ ಅಸಾಮಾನ್ಯ ತಿಳಿವಳಿಕೆಯನ್ನು ಅನಾವರಣಗೊಳಿಸುವ ಕೃತಿ. ಅವರ ಕುಬಿ ಮತ್ತು ಇಯಾಲ ಜನತೆಯಲ್ಲಿ ಅಂತರ್ಗತವಾಗಿರುವ ನಂಬಿಕೆಗಳನ್ನು ತಿಳಿಸುತ್ತಲೇ ಜ್ಞಾನದ ಹೆಗಲ ಮೇಲೆ ಪಯಣಿಸುವ ಮೌಢ್ಯ ಮತ್ತು ನಂಬಿಕೆಗಳನ್ನು ವಿಶ್ಲೇಷಿಸುವ ಕೃತಿಯಾಗಿದೆ ಎಂದು  ಗೊರೂರು ಶಿವೇಶ್ ವಿಮರ್ಶಿಸಿದರು.
ಜಿಲ್ಲೆಗೆ ಕೀರ್ತಿ: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಹೆಚ್.ಎಲ್. ಜನಾರ್ಧನ್ ಮಾತನಾಡಿ, ನಮ್ಮ ಊರಿನ ರಸಿಕರು, ಅಮೆರಿಕಾದಲ್ಲಿ ಗೊರೂರು ಇವೇ ಮೊದಲಾದ ಕೃತಿಗಳಿಂದ ಗೊರೂರು ಗ್ರಾಮದ ಹೆಸರನ್ನು ಅಮೆರಿಕಾದವರೆಗೂ ಕೊಂಡೊಯ್ದ ಹಾಸ್ಯ ಸಾಹಿತಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸಮ್ಮೇಳನದ ಆಶಯ: ಹೇಮಾವತಿ ಅಣೆಕಟ್ಟೆಯಿಂದಾಗಿ ಗೊರೂರು ಒಂದು ಪ್ರವಾಸೋದ್ಯಮ ಕೆಂದ್ರವಾಗಿದೆ. ಡಾ. ಗೊರೂರರ ಪ್ರತಿಮೆಯನ್ನು ಗೊರೂರಿನಲ್ಲಿ ಪ್ರತಿಸ್ಥಾಪಿಸುವ ದಿಶೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಯತ್ನಗಳನ್ನು ನಡೆಸಿರುವುದಾಗಿ ತಿಳಿಸಿ, ತಮ್ಮ ಅಧಿಕಾರ ಅವಧಿಯಲ್ಲಿ ಗೊರೂರಿನಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಸುವ ಆಶಯ ಹೊಂದಿರುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಗೊರೂರು ಅನಂತರಾಜು ವಿದ್ಯಾರ್ಥಿಗಳಲ್ಲಿ, ಜನಸಾಮಾನ್ಯರಲ್ಲಿ ಸಾಹಿತ್ಯ ಕೃತಿಗಳನ್ನು ಓದುವ ಅಭಿರುಚಿ ವೃದ್ಧಿಗೊಳಿಸುವ ದಿಶೆಯಲ್ಲಿ   ಸಾಹಿತ್ಯ ವಿಚಾರ ಸಂಕಿರಣವನ್ನು ಮತ್ತು ವಿದ್ಯಾರ್ಥಿಗಳಿಗೆ ಸಾಹಿತ್ಯಕ, ಸಾಂಸ್ಕೃತಿಕ ಸ್ಫರ್ಧೆಗಳನ್ನು ನ್ಯಾಷನಲ್ ಬುಕ್ ಟ್ರಸ್ಟ್ ವತಿಯಿಂದ ಸ್ಥಳೀಯ ಫಿರ್ದೋಸ್ ಮಹಿಳಾ ಸಮಾಜದ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ಸ್ಮಾರಕದ ಪ್ರಯತ್ನದಲ್ಲಿ: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬದುಕಿ ಬಾಳಿದ ಮನೆಯನ್ನು ಸ್ಮಾರಕವಾಗಿಸುವ ದಿಶೆಯಲ್ಲಿ ಕಳೆದ ಇಪ್ಪತ್ತೆರಡು ವರ್ಷಗಳಿಂದ ಪ್ರಯತ್ನಗಳು ಸಾಗಿದ್ದು ಅದು ಫಲಕಾರಿಯಾದಲ್ಲಿ ಹಿರಿಯ ಸಾಹಿತಿಗೆ ಸಲ್ಲಿಸಿದ ಗೌರವವಾಗುತ್ತದೆ ಮತ್ತು ಗೊರೂರಿಗೆ ಬರುವ ಸಾಹಿತ್ಯ ಪ್ರೇಮಿಗಳಿಗೆ ಭೇಟಿಯ ತಾಣವಾಗುತ್ತದೆ ಎಂದರು.
ಅರಿವಿನ ಮಟ್ಟ ಹೆಚ್ಚಲು ಸಹಕಾರಿ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ಚಂದ್ರಶೇಖರ್ ಮಾತನಾಡಿ, ಗೊರೂರಿನಲ್ಲಿ ನಡೆಯುವ ಯಾವುದೇ ಜ್ಞಾನಾರ್ಜನೆಯ ಸಾಹಿತ್ಯ ಕಾರ್ಯಕ್ರಮಗಳಿಗೆ ಕಾಲೇಜು ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿ ತೇಜಸ್ವಿ ಅವರ ಸಾಹಿತ್ಯ ವಿಚಾರ ಸಂಕಿರಣ ವಿದ್ಯಾರ್ಥಿಗಳ ಅರಿವಿನ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಶ್ರೀ ಯೋಗಾನರಸಿಂಹಸ್ವಾವು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ಜಿ. ರಾಮನಾಥ್ ಹಾಗೂ ಫಿರ್ದೋಸ್ ಮಹಿಳಾ ಸಮಾಜದ ಕಾರ್ಯದರ್ಶಿ ಶ್ರೀಮತಿ ನೂರಿಯವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕಟ್ಟಾಯ ಅಪ್ಪಣ್ಣ, ಶಾಂತ ಅತ್ನಿ, ಜಿ.ಎನ್. ಅನುಸೂಯ, ಪ್ರೀತಿ, ಗೊರೂರು ಅನಂತರಾಜು ಇತರರು ಕವನಗಳನ್ನು ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.